ಕೋಲಾರ: ಭಕ್ತರು ನೀಡುವ ಕಾಣಿಕೆ ಮೂಲಕ ಶಾಲೆ ನಿರ್ಮಿಸಿದ ದೇವಾಲಯದ ಟ್ರಸ್ಟ್; ಇಲ್ಲಿದೆ ವಿವರ
ಇತ್ತೀಚೆಗೆ ದೇವಾಲಯಗಳ ಆದಾಯದ್ದೇ ದೊಡ್ಡ ಚರ್ಚೆ ನಡೆಯುತ್ತಿತ್ತು, ಹಣವನ್ನು ಹೇಗೆ ಬಳಕೆ ಮಾಡಬೇಕು, ಎಲ್ಲಿ ಬಳಕೆ ಮಾಡಬೇಕು ಎನ್ನುವ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿತ್ತು. ಇಂಥಹ ಸಂದರ್ಭದಲ್ಲಿ ಇಲ್ಲೊಂದು ದೇವಾಲಯದ ಟ್ರಸ್ಟ್ ಸದ್ದಿಲ್ಲದೆ, ತನ್ನ ಭಕ್ತರು ನೀಡುವ ಕಾಣಿಕೆಯನ್ನು ತನ್ನ ಭಕ್ತರಿಗೆ ಸಮಾಜಮುಖಿ ಕಾರ್ಯಗಳನ್ನ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.
ಕೋಲಾರ, ಮಾ.13: ಜಿಲ್ಲೆಯ ಮಾಲೂರು ಪಟ್ಟಣದ ಕುಂಬಾರಪಾಳ್ಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಆದರೆ, ಈ ಸರ್ಕಾರಿ ಶಾಲೆಯ ನಿರ್ಮಾಣಕ್ಕೆ ಮಾಲೂರು(Malur) ಮಾರಿಕಾಂಬ ದೇವಿಯ ಶಕ್ತಿಯೇ ಕಾರಣವಾಗಿದೆ. ಹೌದು, ಮಾಲೂರು ಜನರ ಭಕ್ತಿಯ ಕೇಂದ್ರ ಹಾಗೂ ಆರಾಧ್ಯ ದೈವ ಅಂದರೆ ಅದು ಮಾಲೂರು ಮಾರಿಕಾಂಬ ದೇವರು. ಇಲ್ಲಿನ ಜನರು ತಮಗೆ ಕಷ್ಟ ಬಂದಾಗ ಮೊದಲು ಬರುವುದೇ ಈ ಮಾರಿಕಾಂಬ ದೇವಾಲಯಕ್ಕೆ, ಅದೂ ಅಲ್ಲದೆ ಈ ದೇವಾಲಯಕ್ಕೆ ಅರ್ಚಕರು ಇಲ್ಲ, ಬಾಗಿಲುಗಳು ಇಲ್ಲ. ದಿನದ 24 ಗಂಟೆ ಮಾರಿಕಾಂಬ ದೇವಿಗೆ ಭಕ್ತರಿಂದ ಪೂಜೆ ನಡೆಯುತ್ತಲೇ ಇರುತ್ತದೆ.
ಕಾಣಿಕೆ ಹಣವನ್ನ ಸಮಾಜಮುಖಿ ಕಾರ್ಯಗಳಿಗೆ ಬಳಕೆ
ಈ ದೇವಾಲಯವನ್ನು ಶ್ರೀ ಕ್ಷೇತ್ರ ಮಾರಿಕಾಂಬ ಟ್ರಸ್ಟ್ ಮೂಲಕ ನಿರ್ವಹಣೆ ಮಾಡುತ್ತದೆ. ದೇವಾಲಯಕ್ಕೆ ಬರುವ ಭಕ್ತರು, ದೇವರಿಗೆ ನೀಡುವ ಕಾಣಿಕೆ ಹಣವನ್ನು ಇಲ್ಲಿನ ಟ್ರಸ್ಟ್, ಭಕ್ತರಿಗಾಗಿಯೇ ವಿನಿಯೋಗಿಸುತ್ತಿದೆ. ಹಲವು ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಗಳಿಗಾಗಿಯೇ ಬಳಕೆ ಮಾಡುತ್ತಿದೆ. ಈ ಮೊದಲು ಆಸ್ಪತ್ರೆಯಲ್ಲಿ ಐಸಿಯು ವಾರ್ಡ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರು, ನಿತ್ಯ ಅನ್ನ ದಾಸೋಹ, ಹೀಗೆ ಹತ್ತು ಹಲವು ಜನರಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ.
ಹೈಟೆಕ್ ಶಾಲೆಯನ್ನಾಗಿ ನಿರ್ಮಾಣ
ಇಂಥಹ ದೇವಾಲಯ ಟ್ರಸ್ಟ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಅವನತಿ ಹಾದಿಯಲ್ಲಿದ್ದ ಮಾಲೂರು ಪಟ್ಟಣದ ಕುಂಬಾರಪಾಳ್ಯದ ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿ ನಿರ್ಮಾಣ ಮಾಡಿಕೊಟ್ಟಿದೆ. ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಚೆನ್ನಾಗಿತ್ತು. ಆದರೆ, ಶಾಲೆಯ ಕಟ್ಟಡ ಮಾತ್ರ ಶಿಥಿಲಾವಸ್ಥೆಗೆ ತಲುಪಿತ್ತು. ಈ ವೇಳೆ ಅಲ್ಲಿನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಯರು ಹಾಗೂ ಅಲ್ಲಿನ ಸಿಬ್ಬಂದಿಗಳು ಮಾಲೂರು ಮಾರಿಕಾಂಬ ದೇವಾಲಯ ಟ್ರಸ್ಟ್ಗೆ ಒಂದು ಪತ್ರ ಬರೆದು ಸರ್ಕಾರಿ ಶಾಲೆಯನ್ನು ದೇವಾಲಯದ ಟ್ರಸ್ಟ್ ಮೂಲಕ ರಿಪೇರಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆದ್ರೆ, ಮಾರಿಕಾಂಬ ದೇವಾಲಯದ ಟ್ರಸ್ಟ್ನ ಸದಸ್ಯರು ಶಾಲೆಯನ್ನು ರಿಪೇರಿ ಮಾಡೋದೇಕೆ ಹೊಸ ಸುಸರ್ಜಿತವಾದ ಶಾಲೆಯನ್ನೇ ನಿರ್ಮಾಣ ಮಾಡಿಕೊಡೋಣ ಎಂದು ನಿರ್ಧರಿಸಿ ಕೇವಲ ಒಂದು ವರ್ಷದ ಅವಧಿಯಲ್ಲಿ ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಸುಸರ್ಜಿತವಾದ ಹೈಟೆಕ್ ಶಾಲೆಯನ್ನೇ ನಿರ್ಮಾಣ ಮಾಡಿಕೊಟ್ಟಿದೆ.
ಈ ಮೂಲಕ ಮಾಲೂರಿನ ಜನರ ಆರಾಧ್ಯ ದೈವ ತಾಯಿ ಮಾರಿಕಾಂಬ ದೇವಿಯ ಶಕ್ತಿ ಹಾಗೂ ಪವಾಡದಿಂದ ಭಕ್ತರಿಗೆ ಒಳಿತಾದಾಗ ದೇವರಿಗೆ ಅರ್ಪಿಸುವ ಕಾಣಿಕೆಯನ್ನು ಆ ತಾಯಿಯ ಭಕ್ತರಿಗೆ ಅರ್ಪಿಸುವ ಮೂಲಕ ಮಾಲೂರು ಮಾರಿಕಾಂಬ ಟ್ರಸ್ಟ್ ವಿಭಿನ್ನ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಜನರ ಸೇವೆಗೆ ವಿನಿಯೋಗಿಸುತ್ತಿದ್ದಾರೆ. ಭಕ್ತರಿಂದ ಬಂದ ಹಣವನ್ನು ಭಕ್ತರಿಗೆ ವಿವಿಧ ಜನಪರ ಕಾರ್ಯಗಳ ಮೂಲಕ ವಿನಿಯೋಗಿಸಲಾಗುತ್ತಿದೆ ಎಂದು ಟ್ರಸ್ಟ್ನವರು ಹೇಳುತ್ತಿದ್ದಾರೆ. ಒಟ್ಟಾರೆ ಮಾಲೂರು ಮಾರಿಕಾಂಬ ದೇವಿಯ ಶಕ್ತಿ ಹಾಗೂ ಪವಾಡಗಳಿಂದ ದೇವಾಲಯಕ್ಕೆ ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿ ಕಾಣಿಕೆ ರೂಪದಲ್ಲಿ ಬರುವ ಹಣ, ಆ ತಾಯಿಯ ಭಕ್ತರಿಗೆ ವಿನಿಯೋಗವಾಗುವ ಮೂಲಕ ಭಕ್ತರಿಂದ ಬಂದಿದ್ದು, ಭಕ್ತರಿಗೆ ಎನ್ನುವಂತೆ ಹಲವು ಸಮಾಜಮುಖಿ ಕಾರ್ಯಗಳಿಗೆ ದೇವಾಲಯದ ಟ್ರಸ್ಟ್ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ