Kolar News: ಸರ್ಕಾರ ನಡೆಯುತ್ತಿಲ್ಲ ಎಂದ ಮಾಧುಸ್ವಾಮಿ ರಾಜೀನಾಮೆ ಕೊಡಲಿ; ಸಚಿವ ಮುನಿರತ್ನ ತಿರುಗೇಟು

ಇಂಥ ಹೇಳಿಕೆಗಳು ಮಾಧುಸ್ವಾಮಿ ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ಸಚಿವ ಸಂಪುಟದ ಎಲ್ಲ ನಿರ್ಧಾರಗಳಲ್ಲೂ ಅವರು ಭಾಗವಹಿಸುತ್ತಾರೆ ಎಂದು ಸಚಿವ ಮುನಿರತ್ನ ಹೇಳಿದರು.

Kolar News: ಸರ್ಕಾರ ನಡೆಯುತ್ತಿಲ್ಲ ಎಂದ ಮಾಧುಸ್ವಾಮಿ ರಾಜೀನಾಮೆ ಕೊಡಲಿ; ಸಚಿವ ಮುನಿರತ್ನ ತಿರುಗೇಟು
ಸಚಿವ ಮುನಿರತ್ನ ಮತ್ತು ಮಾಧುಸ್ವಾಮಿ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 15, 2022 | 1:05 PM

ಕೋಲಾರ: ಸರ್ಕಾರ ನಡೆಯುತ್ತಿಲ್ಲ, 8 ತಿಂಗಳು ಕಾಲ ಹಾಕಿದರೆ ಸಾಕೆಂಬ ಕಾರಣಕ್ಕೆ ಎಲ್ಲವನ್ನೂ ಮ್ಯಾನೇಜ್ ಮಾಡ್ತಿದ್ದೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಮಾಧುಸ್ವಾಮಿ (JC Madhuswamy) ಮೊದಲು ರಾಜೀನಾಮೆ ಕೊಡಲಿ ಎಂದು ತೋಟಗಾರಿಕೆ ಸಚಿವ ಮುನಿರತ್ನ (Muniratna) ಬೇಸರ ಹೊರಹಾಕಿದರು. ನಗರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದ ನಂತರ ಮಾತನಾಡಿದ ಅವರು, ಇಂಥ ಹೇಳಿಕೆಗಳು ಮಾಧುಸ್ವಾಮಿ ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ಸಚಿವ ಸಂಪುಟದ ಎಲ್ಲ ನಿರ್ಧಾರಗಳಲ್ಲೂ ಅವರು ಭಾಗವಹಿಸುತ್ತಾರೆ. ಹೀಗಾಗಿ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಅವರು ಸಹ ಪಾಲುದಾರರಾಗಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು ಎಂದು ತಿರುಗೇಟು ನೀಡಿದರು.

ಕೋಲಾರ ನಗರದ ವಿವಾದಿತ ಕ್ಲಾಕ್ ಟವರ್ ಮೇಲೆ ಜಿಲ್ಲಾಡಳಿತದಿಂದ ಇದೇ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಲಾಯಿತು. ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಧ್ವಜಾರೋಹಣ ನೆರವೇರಿಸಿದರು. ಕೆಲ ದಿನಗಳ ಹಿಂದಷ್ಟೇ ಕ್ಲಾಕ್​ಟವರ್​ನಲ್ಲಿ ಧ್ವಜಾರೋಹಣ ವಿಚಾರವು ವಿವಾದವಾಗಿತ್ತು. ಕೋಲಾರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧ್ವಜಾರೋಹಣ ನಡೆಯಿತು. ವಿವಾದ ಇತ್ಯರ್ಥವಾದ ನಂತರ ಮೊದಲ ಬಾರಿಗೆ ಧ್ವಜಾರೋಹಣ ನಡೆಯಿತು. ಧ್ವಜಾರೋಹಣ ಹಿನ್ನೆಲೆ ಕ್ಲಾಕ್ ಟವರ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಕೋಲಾರದಲ್ಲಿ ದೇಶದಲ್ಲೇ ಅತಿದೊಡ್ಡ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಯಿತು. ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ರಾಷ್ಟ್ರಧ್ವಜಕ್ಕೆ ಸೇನಾ ಹೆಲಿಕಾಪ್ಟರ್​ನಿಂದ ಪುಷ್ಪಾರ್ಚನೆ ಮಾಡಲಾಯಿತು. 1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಯಿತು. 204 ಅಡಿ ಉದ್ದ 630 ಅಡಿ ಅಗಲದ ಬೃಹತ್ ತ್ರಿವರ್ಣ ಧ್ವಜಕ್ಕಾಗಿ 13 ಸಾವಿರ ಮೀಟರ್ ಬಟ್ಟೆ ಬಳಕೆಯಾಗಿದೆ. 7 ದಿನಗಳಲ್ಲಿ 25 ಜನರು ಧ್ವಜ ರೂಪಿಸಲು ಶ್ರಮಿಸಿದ್ದಾರೆ. ಕೋಲಾರ ಸಂಸದ ಮುನಿಸ್ವಾಮಿ ಅವರ ನೇತೃತ್ವದಲ್ಲಿ ಸಿದ್ಧವಾಗಿರುವ ಈ ಧ್ವಜವು ಎಲ್ಲರ ಗಮನ ಸೆಳೆಯಿತು. ಜನರು ಶಿಳ್ಳೆ, ಚಪ್ಪಾಳೆಯೊಂದಿಗೆ ಜಯ ಘೋಷಣೆ ಮಾಡಿದರು.

ಸರ್ಕಾರದ ನಡೆ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಅಸಮಾಧಾನ: ಆಡಿಯೋ ವೈರಲ್

ಈ ಸರ್ಕಾರ ನಡೆಯುತ್ತಿಲ್ಲ ಕಣಪ್ಪ, ಏಳೆಂಟು ತಿಂಗಳು ಇದೆ ಅಂತ ಮ್ಯಾನೇಜ್​​ ಮಾಡುತ್ತಿದ್ದೇವೆ ಎಂದು ಸರ್ಕಾರದ ನಡೆ ಕುರಿತು ಕಾನೂನು ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾದ ಅವರ ಆಡಿಯೋ ವೈರಲ್ ಆಗಿದೆ. ಸೊಸೈಟಿಗಳಲ್ಲಿ ಹಣ ವಸೂಲಿ ಬಗ್ಗೆ ಸಚಿವರಿಗೆ ಸಾಮಾಜಿಕ ಹೋರಾಟಗಾರ ಕರೆ ಮಾಡಿದ್ದು, ಈ ವೇಳೆ ಸರ್ಕಾರದ ನಡೆ ಬಗ್ಗೆ ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗುತ್ತಿದೆ. ಈ ವೇಳೆ ರೈತರ ಸಮಸ್ಯೆ ಬಗೆಹರಿಸಲಾಗುವುದಿಲ್ಲ. ಸಹಕಾರ ಸಚಿವರ ಗಮನಕ್ಕೆ ತಂದರೂ ಅವರು ಏನು ಕ್ರಮ ಕೈಗೊಂಡಿಲ್ಲ ಏನು ಮಾಡೋಣ ಎಂದು ಮಾಧುಸ್ವಾಮಿ ಹೇಳಿದ್ದು, ಈ ಸರ್ಕಾರ ಏನೂ ನಡೆಯುತ್ತಿಲ್ಲ, ಏಳೆಂಟು ತಿಂಗಳಿದೆ ಎಂದು ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಸರ್ಕಾರದ ಬಗ್ಗೆ ಮಾಧುಸ್ವಾಮಿ ಮಾತಾಡಿದ್ದಾರೆನ್ನಲಾದ ಆಡಿಯೋ ವೈರಲ್ ಆಗುತ್ತಿದೆ.

Published On - 1:05 pm, Mon, 15 August 22