ಪ್ರೀತಿ ಕೊಂದ ಕೊಲೆಗಾತಿಗೆ ಜೀವಾವಧಿ ಶಿಕ್ಷೆ; ಮಗನ ಸಾವಿಗೆ ನ್ಯಾಯ ಸಿಗಲಿ ಎಂದು ಐದು ವರ್ಷ ಅಲೆದ ತಾಯಿಗೆ ಸಿಕ್ಕ ಜಯ!

| Updated By: preethi shettigar

Updated on: Aug 31, 2021 | 7:53 AM

ಪೊಲೀಸರು ಪ್ರಕರಣದ ಚಾರ್ಜ್​ಶೀಟ್​ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಂತರ ವಾಸಗಿ ಸತತವಾಗಿ ಐದು ವರ್ಷಗಳ ಕಾಲ ನಿರಂತರವಾಗಿ ತನ್ನ ಮಗನ ಸಾವಿನ ನ್ಯಾಯಾಲಯಕ್ಕೆ ಅಲೆದಾಡಿದ್ದಾಳೆ. ಒಂದೇ ಒಂದು ದಿನವೂ ನ್ಯಾಯಾಲಯಕ್ಕೆ ಗೈರಾಗದೇ ಸಾಕ್ಷಿಗಳನ್ನು ಸಾಬೀತು ಪಡಿಸುವಲ್ಲಿ ಯಾಶಸ್ವಿಯಾಗಿದ್ದಾಳೆ.

ಪ್ರೀತಿ ಕೊಂದ ಕೊಲೆಗಾತಿಗೆ ಜೀವಾವಧಿ ಶಿಕ್ಷೆ; ಮಗನ ಸಾವಿಗೆ ನ್ಯಾಯ ಸಿಗಲಿ ಎಂದು ಐದು ವರ್ಷ ಅಲೆದ ತಾಯಿಗೆ ಸಿಕ್ಕ ಜಯ!
ಸಂತೋಷ್ ಹಾಗೂ ಅಶ್ವಿನಿ
Follow us on

ಕೋಲಾರ: ಪ್ರೀತಿಸಿ ಮದುವೆಯಾದವಳು ಪ್ರೀತಿಸಿದವನನ್ನೇ ಕುತ್ತಿಗೆ ಹಿಸುಕಿಕೊಂದ ಕಥೆ ಇದು. ಮುತ್ತು ಕೊಟ್ಟವಳು ಕೊಂದರೂ ತುತ್ತು ಕೊಟ್ಟವಳು ತನ್ನ ಮಗನ ಸಾವಿನ ನ್ಯಾಯಕ್ಕಾಗಿ ಹೋರಾಟ ಮಾಡಿದ ನಿಜ ಸಂಗತಿ. ಹೌದು ತನ್ನ ಮಗನನ್ನು ಕಳೆದುಕೊಂಡ ತಾಯಿ ನ್ಯಾಯಕ್ಕಾಗಿ ಐದು ವರ್ಷಗಳ ಕಾಲ ಶಬರಿಯಂತೆ ಅಲೆದಾಡಿದ್ದು, ಇಂದು ನ್ಯಾಯ ಪಡೆದಿದ್ದಾಳೆ. ಹೆಂಡತಿಯೇ ಏಕೆ ಗಂಡನನ್ನು ಕೊಂದಳು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಸೂಸೈಡ್ ಕೇಸ್, ಕೊಲೆ ಕೇಸ್ ಆಗಿ ಬದಲಾಗಿದ್ದು ಹೇಗೆ!
ಮಾರ್ಚ್ 6, 2016 ಕೋಲಾರ ಜಿಲ್ಲೆ ಕೆಜಿಎಫ್​ನ ರಾಬರ್ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ, ಗೌತಮ್ ನಗರದ ನಿವಾಸಿ ಸೋಮನಾಥ್ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರೊಂದು ಬರುತ್ತದೆ. ಅದರಂತೆ ಆತ ಆತ್ಮಹತ್ಯೆಗೆ ಶರಣಾಗಿ ನೇಣುಬಿಗಿದ ಸ್ಥಿತಿಯಲ್ಲಿದ್ದ. ಆತನ ಹೆಂಡತಿ ಹಾಗೂ ಅವರಿದ್ದ ಬಾಡಿಗೆ ಮನೆಯ ಮಾಲೀಕರು ಸೇರಿ ಆಸ್ಪತ್ರೆಗೆ ತಂದರಾದರು ಆತ ಆಸ್ಪತ್ರೆಗೆ ಬರುವ ಮೊದಲೇ ಕೊನೆಯುಸಿರೆಳೆದಿರುತ್ತಾನೆ. ಹೀಗಾಗಿ ಕೆಜಿಎಫ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಈತನ ಪೋಸ್ಟ್ ಮಾರ್ಟಮ್ ಮಾಡಿ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ರಾಬರ್ಸನ್‌ಪೇಟೆ ಪೊಲೀಸರು ನಿರ್ಧರಿಸಿಬಿಡುತ್ತಾರೆ. ಅದಕ್ಕೆ ಪೂರಕವಾಗಿ ವೈದ್ಯರೂ ಕೂಡ ನೇಣುಬಿಗಿದುಕೊಂಡು ಮೃತಪಟ್ಟಿರುವುದಾಗಿ ಹೇಳಿರುತ್ತಾರೆ. ಪರಿಣಾಮ ರಾಬರ್ಟಸನ್ ಪೇಟೆ ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಕೇಸ್ ಕ್ಲೋಸ್ ಮಾಡಿಬಿಡುತ್ತಾರೆ.

ಪ್ರೀತಿಸಿ ಮದುವೆಯಾದವಳನ್ನೇ, ಪ್ರಿಯಕರನ ಜೊತೆ ಸೇರಿ ಕೊಲೆ:
ಮೃತ ಸೋಮನಾಥ್‌ ಕಳೆದ ಹಲವು ವರ್ಷಗಳ ಹಿಂದೆ ಅಶ್ವಿನಿ ಎಂಬಾಕೆಯನ್ನು ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಂಡಿದ್ದ. ಇದಾದ ನಂತರ ಅವರಿಗೆ ಒಂದು ಹೆಣ್ಣು ಮಗು ಕೂಡ ಇರುತ್ತದೆ. ಉಳಿದಂತೆ ಈತನ ಕುಟುಂಬದಲ್ಲಿ ಈತನ ತಾಯಿ ವಾಸಗಿ, ಪತ್ನಿ ಅಶ್ವಿನಿ ಹಾಗೂ ಸೋಮನಾಥ್ ಅಣ್ಣ ಸಂದಿಲ್ಕುಮಾರ್, ಒಬ್ಬ ತಮ್ಮ ಇರುತ್ತಾರೆ. ಹೀಗಿರುವಾಗ 2015 ಸೆಪ್ಟೆಂಬರ್ 10 ರಂದು ಅಣ್ಣ ಸಂದಿಪ್​ ಕುಮಾರ್ ಹೃದಯಾಘಾತದಿಂದ ಮೃತ ಪಟ್ಟಿರುತ್ತಾರೆ. ಹೀಗಾಗಿ ಮನೆಯವರೆಲ್ಲಾ ಶೋಕದ ವಾತಾವರಣದಲ್ಲಿರುತ್ತಾರೆ.

ಇತ್ತ ತಮ್ಮ ಸೋಮನಾಥ್ ಕೂಡ ಅಣ್ಣನ ಅಕಾಲಿಕ ಸಾವಿನ ಕುರಿತು ತಾಯಿ ಹಾಗೂ ಹೆಂಡತಿ ಬಳಿ ಹೇಳಿಕೊಂಡು ಕಣ್ಣೀರಿಟ್ಟಿರುತ್ತಾನೆ. ಜೊತೆಗೆ ಅಣ್ಣನ ಸಾವಿನಿಂದ ಸಾಕಷ್ಟು ಮನನೊಂದು ಹೋಗಿರುತ್ತಾನೆ. ಕೆಜಿಎಫ್​ನ ಮುತ್ತೂಟ್ ಪೈನಾನ್ಸ್​​ನಲ್ಲಿ ಕೆಲಸ ಮಾಡಿಕೊಂಡೇ ರಾತ್ರಿ ವೇಳೆ ಆಟೋ ಓಡಿಸುತ್ತಿದ್ದ ಸೋಮನಾಥ್ ಇಡೀ ಸಂಸಾರದ ಜವಾಬ್ದಾರಿ ಹೊತ್ತಿರುತ್ತಾನೆ. ಇಷ್ಟಾದರೂ, ತನ್ನ ಅಣ್ಣನ ಅಕಾಲಿಕ ಸಾವು ಸೋಮನಾಥ್​ನನ್ನು ಸಾಕಷ್ಟು ಬಾದಿಸಿರುತ್ತದೆ.

ಹೀಗಿರುವಾಗಲೇ ಅಂದು ಮಾರ್ಚ್ 6, 2016 ರಂದು ಅಂದರೆ ಶಿವರಾತ್ರಿ ಹಬ್ಬದ ಹಿಂದಿನ ದಿನ ಸೋಮನಾಫ್​ಗೆ ಆರೋಗ್ಯ ಸರಿ ಇರುವುದಿಲ್ಲ. ಹಬ್ಬದ ದಿನದಂದು ತಾಯಿ ಮನೆಗೆ ಬಂದಿದ್ದ ಸೋಮನಾಥ್ ಮತ್ತೆ ಗಣೇಶಪುರಂನಲ್ಲಿನ ತನ್ನ ಮನೆಗೆ ಹೋಗಿದ್ದ, ಜೊತೆಗೆ ರಾತ್ರಿ ಹಬ್ಬದ ಪ್ರಯುಕ್ತ ಜಾಗರಣೆ ಹೊರಗೆ ಎಲ್ಲೂ ಹೋಗಬೇಡ ಅಂಥ ತಾಯಿ ವಾಸಗಿ ಕೂಡಾ ಮಗನಿಗೆ ಪೊನ್ ಮಾಡಿ ಹೇಳಿದ್ದರು. ಇದಾದ ಮೇಲೆ ಊಟ ಮಾಡಿ ಮಲಗಿದರು. ಹೀಗಿರುವಾಗಲೇ ತಾಯಿ ವಾಸಗಿಗೆ ಮದ್ಯರಾತ್ರಿ 12 ಗಂಟೆ ಸುಮಾರಿಗೆ ತನ್ನ ಸೊಸೆ ಅಶ್ವಿನಿ ಪೋನ್ ಮಾಡಿ ನಿಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಳು. ಇದರಿಂದ ಗಾಬರಿಯಾದ ತಾಯಿ ವಾಸಗಿ ಎದ್ದು ಬಿದ್ದೂ ಅವನ ಮನೆಯ ಕಡೆಗೆ ಹೊರಟಿರುತ್ತಾರೆ.

ಆ ವೇಳೆಗೆ ಮತ್ತೆ ಕರೆ ಮಾಡಿದ ಸೊಸೆ ನಿಮ್ಮ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದಾಗಿ ಹೇಳಿರುತ್ತಾಳೆ. ಅದಕ್ಕಾಗಿ ಸರ್ಕಾರಿ ಆಸ್ಪತ್ರೆ ಬಳಿಯಲ್ಲೇ ಕಾದು ನಿಂತಿದ್ದ ತಾಯಿಗೆ ಅದೇನೋ ಒಂದು ರೀತಿಯ ಆತಂಕ ಶುರುವಾಗಿತ್ತು. ಕೆಲ ಹೊತ್ತಿನಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಶವದಂತಿದ್ದ ಮಗ ಸೋಮನಾಥ್​ನನ್ನು ಕರೆದುಕೊಂಡು ಬಂದ ಅಶ್ವಿನಿ ಆಸ್ಪತ್ರೆಗೆ ದಾಖಲಿಸುತ್ತಾಳೆ. ಆದರೆ ವೈದ್ಯರು ಸೋಮನಾಥ್ ಪ್ರಾಣ ಹೋಗಿ ಬಹಳ ಹೊತ್ತಾಗಿದೆ ಎಂದಿದ್ದರು. ಇದನ್ನ ಕೇಳಿದ ವಾಸಗಿಗೆ ದಿಕ್ಕೇ ತೋಚದಂತಾಗಿ ಹೋಗಿತ್ತು. ಏಕೆಂದರೆ ಕೇವಲ ಆರು ತಿಂಗಳ ಹಿಂದಷ್ಟೇ ತನ್ನ ಹಿರಿಯ ಮಗನನ್ನು ಕಳೆದುಕೊಂಡಿದ್ದ ಆಕೆಗೆ ಮತ್ತೆ ಇಂಥಾದೊಂದು ಘಟನೆ ಧಿಗ್ಬಬ್ರಮೆ ಉಂಟುಮಾಡಿತ್ತು.

ಮುಂಜಾನೆ ಹೊತ್ತಿಗೆ ವಿಷಯ ತಿಳಿದ ಸಂಬಂಧಿಕರು ಎಲ್ಲರೂ ಬಂದು ಸೋಮನಾಥ್​ನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ರು, ಇದಾದ ಮೂರನೇ ದಿನದ ಕಾರ್ಯಗಳಿಗಾಗಿ ಮನೆಗೆ ಹೋದ ತಾಯಿಗೆ ಒಂದು ಅನುಮಾನ ಕಾಡಿತ್ತು. ಏಕೆಂದರೆ ತನ್ನ ಮಗ ನೇಣುಹಾಕಿ ಕೊಂಡಿದ್ದ ಕೊಠಡಿಯನ್ನು ನೋಡಲು ಅಶ್ವಿನಿ ಹಾಗೂ ಅವಳ ತಂದೆ ಬಿಡದೆ, ರೂಂ ನಲ್ಲಿದ್ದ ಪ್ಯಾನ್ ಹಾಗೂ ಹಾಸಿಗೆಯನ್ನು ಯಾರೋ ಬಿಕ್ಷುಕರಿಗೆ ಕೊಟ್ಟು ಕಳುಹಿಸಿದ್ದರು. ಜೊತೆಗೆ ಪ್ಯಾನ್ ನೋಡಿದ ವಾಸಗಿಗೆ ಅನುಮಾನ ಕಾಡತೊಡಗಿತ್ತು. ಇದ್ದ ಪ್ಯಾನ್ ಇದ್ದಹಾಗೆ ಇದೆ. ಇದರಲ್ಲಿ ಹೇಗೆ ನೇಣು ಹಾಕಿಕೊಂಡು ಸಾಯಲು ಸಾಧ್ಯ ಎಂಬ ಅನುಮಾನ ಕಾಡಿತ್ತಾದರೂ, ವಾಸಗಿ ಇದ್ದ ಪರಿಸ್ಥಿತಿಯಲ್ಲಿ ಏನು ಮಾಡಲಾಗದೆ ಕಾರ್ಯ ಮುಗಿಸಿ ಮನೆಗೆ ಹೋಗಿದ್ದರು. ಸೋಮನಾಥ್ ಆತ್ಮಹತ್ಯೆ ಮಾಡಿಕೊಂಡಿರುವುದು ತನ್ನ ಅಣ್ಣ ನೆನಪಿನಲ್ಲಿ ಎಂದೇ ತಾಯಿ ಅಂದುಕೊಂಡಿದ್ದರು.

ಮಗನ ಸಾವಿನ ಬಗ್ಗೆ ಅನುಮಾನಗೊಂಡ ತಾಯಿ!
ನಾಲ್ಕೈದು ತಿಂಗಳು ಕಳೆದ ನಂತರ ಇದ್ದಕ್ಕಿದಂತೆ ಸುದ್ದಿಯೊಂದು ಸೋಮನಾಥನ ತಾಯಿಗೆ ಬರಸಿಡಿಲಿನಂತೆ ಬಂದು ಎರಗಿತ್ತು. ಅದೇನೆಂದರೆ, ನಿಮ್ಮ ಸೊಸೆ ಅಶ್ವಿನಿ ಬೇರೆ ಯಾರದ್ದೋ ಜೊತೆಯಲ್ಲಿ ತಿರುಗಾಡುತ್ತಿದ್ದಾಳೆ ಎನ್ನುವುದು. ಇದನ್ನು ಕೇಳಿ ಆಘಾತಗೊಂಡ ವಾಸಗಿ ಅದನ್ನು ಸರಿಯಾಗಿ ತಿಳಿಯಲು ಒಂದು ದಿನ ತನ್ನ ಮೊಮ್ಮಗು ಹೋಗುವ ಶಾಲೆಯ ಬಳಿ ನಿಂತು ಶಾಲೆ ಬಿಡುವ ವೇಳೆಗೆ ಹೋಗಿ ನೋಡಿದ್ದಾರೆ. ಮೃತ ಸೋಮನಾಥ್ ಸ್ನೇಹಿತ ಸಂತೋಷ್ ಎಂಬಾತನ ಜೊತೆಗೆ ಅಶ್ವಿನಿ ಕೈ ಕೈ ಹಿಡಿದು ಓಡಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು. ಆದರೂ ಇದನ್ನು ಅಪಾರ್ಥ ಮಾಡಿಕೊಳ್ಳದ ವಾಸಗಿ ಬೇಸರದಿಂದಲೇ ಮನೆಗೆ ವಾಪಸ್ಸಾಗಿದ್ದಳು.

ಅಶ್ವಿನಿ ಹಾಗೂ ಸಂತೋಷ್ ಜೊತೆಯಲ್ಲಿ ತೆಗೆಸಿಕೊಂಡಿದ್ದ ಸೆಲ್ಫಿ ಪೋಟೋ ನೋಡಿದ ಮೇಲೆ ಸೋಮನಾಥ್ ತಾಯಿ ವಾಸಗಿಗೆ ಇದ್ದ ಕೆಲವೊಂದು ಅನುಮಾನಗಳು ದೃಢವಾಗುತ್ತದೆ. ತನ್ನ ಮಗ ಸೋಮನಾಥ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಾಗಿ ಇದೊಂದು ವ್ಯವಸ್ಥಿತಿ ಕೊಲೆ. ಅದಕ್ಕಾಗಿ ವಾಸಗಿ ಆಗಸ್ಟ್ 2 ರಂದು ಕೆಜಿಎಫ್ ಎಸ್​ಪಿ ಕಚೇರಿಗೆ ತೆರಳಿ ನಡೆದ ವಿಷಯವನ್ನೆಲ್ಲಾ ವಿವರಿಸಿ,ಈ ಪ್ರಕರಣದ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಇವರ ದೂರನ್ನು ಸ್ವೀಕರಿಸಿದ ರಾಬರ್ಟ್ಸನ್ ಪೇಟೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಅದರಂತೆ ಸಂತೋಷನನ್ನು ಕರೆದುಕೊಂಡು ತನಿಖೆ ಮಾಡಿದಾಗ ಇದೊಂದು ಆತ್ಮಹತ್ಯೆ ಅಲ್ಲ ಕೊಲೆ ಎನ್ನುವುದು ಹೊರಬಿದ್ದಿತ್ತು.

ಸೋಮನಾಥನನ್ನು ಕೊಲೆ ಮಾಡಿ ಮುಗಿಸಿ, ಅಣ್ಣನ ನೆನಪಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬದಲಾಗಿ ಆತನಿಗೆ ದೆವ್ವವೂ ಕೂಡು ಹಿಡಿದಿತ್ತು ಹೀಗಾಗಿ ಸೋಮನಾಥ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಲ್ಲರನ್ನು ನಂಬಿಸಿದ್ದಾರೆ. ಆದರೆ ಇದು ಹೆಚ್ಚು ದಿನ ಉಳಿಯಲಿಲ್ಲ ಬದಲಾಗಿ ಇವರಿಬ್ಬರ ಸಂಬಂಧ ಕೆಲವೇ ದಿನಗಳಲ್ಲಿ ಹೊರಬಿದ್ದಿತ್ತು. ಅಷ್ಟೇ ಅಲ್ಲ ಪ್ರೀತಿ ಪ್ರೇಮದ ಗುಂಗಿನಲ್ಲಿ ಮಾಡಿದ ಅನಾಚಾರಗಳು ಅನ್ಯಾಯಗಳು ಅವರದೇ ಕೈಯಿಂದ ಹೊರಬಿದ್ದಿತ್ತು, ಅವರು ತೆಗೆದುಕೊಂಡ ಸೆಲ್ಫಿ ಪೋಟೋಗಳೇ ಪ್ರಕರಣ ಬಯಲಾಗಲು ಸಾಕ್ಷಿಗಳಾಗಿ ನಿಂತವು.

ಐದು ವರ್ಷಗಳ ಕಾಲ ನ್ಯಾಯಕ್ಕಾಗಿ ಅಲೆದಾಡಿದ ತಾಯಿಗೆ ಸಿಕ್ಕಿತ್ತು ನ್ಯಾಯ!
ಪೊಲೀಸರು ಪ್ರಕರಣದ ಚಾರ್ಜ್​ಶೀಟ್​ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಂತರ ವಾಸಗಿ ಸತತವಾಗಿ ಐದು ವರ್ಷಗಳ ಕಾಲ ನಿರಂತರವಾಗಿ ತನ್ನ ಮಗನ ಸಾವಿನ ನ್ಯಾಯಾಲಯಕ್ಕೆ ಅಲೆದಾಡಿದ್ದಾಳೆ. ಒಂದೇ ಒಂದು ದಿನವೂ ನ್ಯಾಯಾಲಯಕ್ಕೆ ಗೈರಾಗದೇ ಸಾಕ್ಷಿಗಳನ್ನು ಸಾಬೀತು ಪಡಿಸುವಲ್ಲಿ ಯಾಶಸ್ವಿಯಾಗಿದ್ದಾಳೆ. ಹೀಗೆ ಐದು ವರ್ಷಗಳ ಕಾಲ ಪ್ರಕರಣ ವಿಚಾರಣೆ ನಡೆಸಿದ ಕೋಲಾರದ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯ ಸೋಮನಾಥನನ್ನು ಕೊಂದಿದ್ದ ಅಶ್ವಿನಿ ಹಾಗೂ ಸಂತೋಷ್​ಗೆ ಜೀವಾವದಿ ಶಿಕ್ಷೆ ವಿಧಿಸಿದೆ.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ:
ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ, ಜಿಲ್ಲಾ ನ್ಯಾಯಾಲಯದ ತೀರ್ಪು

ಶಿವಮೊಗ್ಗ: ಪ್ರೇಯಸಿಯನ್ನು ಕೊಂದ ಕೊಲೆಗಾರನ ಸಾವು; ಏಳು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ