ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿದಂತಾಗಿದೆ. ಹೌದು ಸಿದ್ದರಾಮಯ್ಯ (Siddaramaiah) ಅವರು ಮುಂದಿನ 2023 ವಿಧಾನಸಭಾ ಚುನಾವಣೆಯಲ್ಲಿ (2023 Assembly Elections) ಕೋಲಾರ ವಿಧಾನಸಭಾ ಕ್ಷೇತ್ರದಿಂದ (Kolar) ಸ್ಪರ್ಧಿಸೋದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಅನ್ನೋದು ಸಿದ್ದರಾಮಯ್ಯನವರ ಆಪ್ತ ಮೂಲಗಳಿಂದ ಖಚಿತವಾಗಿದ್ದು, ಅಧಿಕೃತ ಘೋಷಣೆ ಹೊರಬೀಳಬೇಕಿದೆ. (ವರದಿ – ರಾಜೇಂದ್ರ ಸಿಂಹ, ಟಿವಿ 9, ಕೋಲಾರ)
ಸಿದ್ದರಾಮಯ್ಯನವರಿಗೆ ರಾಜಕೀಯ ಜೀವನ ಹೇಗಿತ್ತು, ಮೈಸೂರು ಜಿಲ್ಲೆ ಬಿಟ್ಟಿದ್ದೇಕೆ..!
ಮೈಸೂರು ಜಿಲ್ಲೆಯಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಮಾಜಿ ಸಿ.ಎಂ. ಸಿದ್ದರಾಮಯ್ಯನವರು, 1983 ರಲ್ಲಿ ಮೊದಲು ಭಾರತೀಯ ಲೋಕದಳ ಪಕ್ಷದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೊದಲ ಗೆಲುವು ದಾಖಲಿಸಿದರು. ನಂತರ ಇವರು ಜನತಾ ಪಕ್ಷಕ್ಕೆ ಸೇರ್ಪಡೆಯಾದ ನಂತರ ಸಿದ್ದರಾಮಯ್ಯ ಅವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದ ಕಡೆ ಪ್ರವಾಸ ಮಾಡಿದ್ದರು. ನಂತರ 1985 ರಲ್ಲಿ ಸಿದ್ದರಾಮಯ್ಯ ಅವರು ಜನತಾಪಕ್ಷದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡನೇ ಗೆಲುವು ದಾಖಲಿಸಿದರು. ನಂತರ ಪಶುಸಂಗೋಪನಾ ಸಚಿವರಾಗಿ ಆಯ್ಕೆಯಾದರು.
ಆನಂತರ 1989 ರಲ್ಲಿ ಸೋಲನ್ನ ಕಂಡ ಸಿದ್ದರಾಮಯ್ಯನವರು ಜನತಾ ಪಕ್ಷ ವಿಭಜನೆಯಾದಾಗ 1992 ರಲ್ಲಿ ದೇವೇಗೌಡರು ಜನತಾ ದಳ ಸೇರಿದಾಗ ಸಿದ್ದರಾಮಯ್ಯನವರು ಕೂಡಾ ಜನತಾ ದಳ ಸೇರಿ ಕಾರ್ಯದರ್ಶಿಯಾದರು. ನಂತರ 1994ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಜನತಾ ದಳದಿಂದ ಗೆದ್ದು ಸರ್ಕಾರ ರಚನೆಯಾದಾಗ ಸಿದ್ದರಾಮಯ್ಯನವರು ಹಣಕಾಸು ಸಚಿವರಾದರು.
ಇದಾದ ನಂತರ ಸಿದ್ದರಾಮಯ್ಯನವರು 1999ರ ಹೊತ್ತಿಗೆ ಜನತಾದಳ ಎರಡು ಭಾಗವಾದಾಗ ದೇವೇಗೌಡರು ಕಟ್ಟಿದ ಜಾತ್ಯಾತೀತ ಜನತಾದಳದಲ್ಲಿ ಪಕ್ಷದ ಅಧ್ಯಕ್ಷರಾದರು. ನಂತರ 1999 ರಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಕಂಡ ಸಿದ್ದರಾಮಯ್ಯನವರು 2004 ರಲ್ಲಿ ತಮ್ಮ ವರ್ಚಸ್ಸು ಹಾಗೂ ತಮ್ಮ ಶಕ್ತಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾದರು. ಆದರೆ ಅತಂತ್ರ ವಿಧಾನಸಭೆ ರಚನೆಯಾದಾಗ ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚನೆಯಾದಾಗ 2 ಬಾರಿ ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದರು. ಆದರೆ ಪಕ್ಷದಲ್ಲಿನ ಅಸಮಧಾನದ ಪರಿಣಾಮ ಜಾತ್ಯಾತೀತ ಜನತಾದಳವನ್ನು ತೊರೆದ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷ ಸೇರಿಕೊಂಡು 2006ರ ಉಪಚುನಾವಣೆ ಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ದಾಖಲಿಸಿದರು.
ನಂತರ 2008ರ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ನಂತರ 2013 ರಲ್ಲೂ ವರುಣ ಕ್ಷೇತ್ರದಿಂದಲೇ ಸ್ವರ್ಧಿಸಿ ಗೆದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಾವಧಿ ಸರ್ಕಾರ ಮಾಡುತ್ತಾರೆ. ಹೀಗೆ ತಮ್ಮ ಇಡಿ ರಾಜಕೀಯ ಜೀವನವನ್ನು ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದರೆ, ಮೈಸೂರಿನಲ್ಲೇ ಕಳೆದ ಸಿದ್ದರಾಮಯ್ಯ ಕಳೆದ 2018 ರ ಚುನಾವಣೆಯಲ್ಲಿ ತಮ್ಮ ಎರಡನೇ ಮಗ, ಡಾ. ಯತೀಂದ್ರ ಸಿದ್ದರಾಮಯ್ಯಗೆ ವರುಣ ಕ್ಷೇತ್ರ ಬಿಟ್ಟುಕೊಟ್ಟು, ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ವರ್ಧೆ ಮಾಡಿದರು.
ಆದರೆ ಅಲ್ಲಿ ಸಿದ್ದರಾಮಯ್ಯನವರಿಗೆ ಗೆಲುವು ಅನುಮಾನ ಎನಿಸಿದಾಗ ಬದಾಮಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುತ್ತಾರೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರ ಸಿದ್ದರಾಮಯ್ಯರನ್ನು ಸೋಲಿಸುತ್ತಾರೆ. ಆದರೆ ಬದಾಮಿ ಕ್ಷೇತ್ರದ ಮತದಾರರು ಸಿದ್ದರಾಮಯ್ಯರನ್ನು ಗೆಲ್ಲಿಸುತ್ತಾರೆ. ಸದ್ಯ ಈಗ 2023ರ ವಿಧಾನಸಭಾ ಚುನಾವಣೆಯಲ್ಲಿ ಸದ್ಯ ಸಿದ್ದರಾಮಯ್ಯನವರಿಗೆ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸೋದು ಅನ್ನೋ ಯಕ್ಷಪ್ರಶ್ನೆ ಎದುರಾದಾಗ ಹಲವಾರು ಕ್ಷೇತ್ರಗಳ ಆಯ್ಕೆ ಇತ್ತಾದರೂ ಬೆಂಗಳೂರಿಗೆ ಹತ್ತಿರವಿರುವ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ವರ್ಧಿಸೋದಕ್ಕೆ ಒಪ್ಪಿಕೊಂಡಿದ್ದಾರೆ ಅನ್ನೋದು ಸಿದ್ದು ಆಪ್ತ ಮೂಲಗಳು ಖಚಿತ ಧ್ವನಿಯಲ್ಲಿ ಹೇಳಿವೆ. ಆದರೆ ಕಾಲವೇ ಇದನ್ನ ದೃಢಪಡಿಸಬೇಕು. ಏಕೆಂದರೆ 2022 ವಿಧಾನಸಭೆ ಸಮೀಪದಲ್ಲಿಯೇ ಇದೆಯಾದರೂ ರಾಜಕೀಯವಾಗಿ ಅದಿನ್ನೂ ಬಹುದೂರವಿದೆ!
ಹಾಗಾದರೆ, ಕೋಲಾರದಲ್ಲಿ ಸ್ಪರ್ಧಿಸೋಕ್ಕೆ ಪ್ರಮುಖ ಕಾರಣಗಳು ಏನು..!
ರಾಜ್ಯದ 224 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಸಿದ್ದರಾಮಯ್ಯನವರಿಗೆ ಹಲವು ಕ್ಷೇತ್ರಗಳಿಂದ ಸ್ಪರ್ಧಿಸೋದಕ್ಕೆ ಆಹ್ವಾನ ಬಂದಿದೆ. ಅದರಲ್ಲಿ ಕೋಲಾರ ಕ್ಷೇತ್ರವನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳೋದಕ್ಕೆ ಪ್ರಮುಖ ಕಾರಣಗಳನ್ನು ನೋಡೋದಾದರೆ.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಅವರ ಮುಂದಿರುವ ಸವಾಲುಗಳೇನು..!
ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಎಷ್ಟು ಅನುಕೂಲವೋ ಅಷ್ಟೇ ಅನಾನುಕೂಲಕರ ವಾತಾವರಣ ಕೂಡಾ ಇಲ್ಲಿದೆ. ಹಾಗಾಗಿ ಸಿದ್ದರಾಮಯ್ಯ ಅವರ ಮುಂದಿರುವ ಸವಾಲುಗಳೇನು ಎಂದು ನೋಡೋದಾದ್ರೆ.
ಹೀಗೆ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿದರೆ ಎಷ್ಟು ಅನುಕೂಲವೋ ಅಷ್ಟೇ ಅನಾನುಕೂಲವೂ ಇದೆ. ಇದೆಲ್ಲದರ ನಡುವೆ ಸಿದ್ದರಾಮಯ್ಯ ಅವರ 40 ವರ್ಷದ ರಾಜಕೀಯ ಜೀವನದಲ್ಲಿ ಹಲವು ಸೋಲು ಗೆಲುವಿನ ಲೆಕ್ಕ ಇದೆ. ತಮ್ಮದೇ ಆದ ತಂತ್ರಗಾರಿಕೆ ಇದೆ, ಈ ಎಲ್ಲ ಪ್ಲಸ್-ಮೈನಸ್ಗಳನ್ನು ಹೊಂದಿರುವ ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆಯು ಸದ್ಯಕ್ಕೆ ರಾಜಕೀಯದಲ್ಲಿ ವಿಶ್ವ ಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ದಾಯಾದಿ ಎದುರಾಳಿಗಳಂತೆ ಭಾರತ ಮತ್ತು ಪಾಕಿಸ್ತಾನ ಸೆಣೆಸಾಡುವಾಗ ಇರುವ ರೋಚಕತೆ ಇಲ್ಲಿಯೂ ಇರುತ್ತದೆ ಎಂಬುದು ಸುಳ್ಳಲ್ಲ.