ಕೋಲಾರ: ವಿವಾದಕ್ಕೆ ಕಾರಣವಾಯ್ತು ಸರ್ಕಾರಿ ಶಾಲಾ ಕೊಠಡಿಯಲ್ಲಿ ಮಾಡಿದ ನಮಾಜ್​!

ಕೋಲಾರ: ವಿವಾದಕ್ಕೆ ಕಾರಣವಾಯ್ತು ಸರ್ಕಾರಿ ಶಾಲಾ ಕೊಠಡಿಯಲ್ಲಿ ಮಾಡಿದ ನಮಾಜ್​!
ಬಳೆನಂಜಪ್ಪ ಸರ್ಕಾರಿ ಶಾಲೆ

ಯಾವಾಗ ಸರ್ಕಾರಿ ಶಾಲೆಯೊಂದರಲ್ಲಿ ನಮಾಜ್​ ಮಾಡಲಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕ(ಡಿಡಿಪಿಐ) ರೇವಣಸಿದ್ದಪ್ಪ ಕೂಡಲೇ, ಮುಳಬಾಗಿಲು ಬಿಇಓ ಗಿರಿಜೇಶ್ವರಿ ಅವರಿಗೆ ಘಟನೆ ಸಂಬಂಧ ತನಿಖೆ ನಡೆಸಿ ಒಂದು ವರದಿ ಕೊಡುವಂತೆ ತಿಳಿಸಿದ್ದಾರೆ.

TV9kannada Web Team

| Edited By: preethi shettigar

Jan 24, 2022 | 6:59 PM

ಕೋಲಾರ: ಸರ್ಕಾರಿ ಶಾಲೆಯ (Government School) ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳು ನಮಾಜ್​ ಮಾಡಿರುವ ಘಟನೆಯೊಂದು ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಬಳೆನಂಜಪ್ಪ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶುಕ್ರವಾರ ಅಂದರೆ ಜನವರಿ 20 ರಂದು ಮಧ್ಯಾಹ್ನ ಬಳೆನಂಜಪ್ಪ ಸರ್ಕಾರಿ ಶಾಲೆಯಲ್ಲಿದ್ದ ಕೆಲವು ಮುಸ್ಲಿಂ ಜನಾಂಗಕ್ಕೆ ಸೇರಿದ ಮಕ್ಕಳು ಶಾಲೆಯ ಕೊಠಡಿಯೊಂದರಲ್ಲಿ ನಮಾಜ್(Namaz)​ ಮಾಡುತ್ತಿದ್ದಾಗ ಅದನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ (Mobile) ಸೆರೆಹಿಡಿದು, ಈ ವಿಡಿಯೋವನ್ನು​ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದೇ ವಿಡಿಯೋ ಮುಳಬಾಗಿಲು ನಗರದಲ್ಲಿ ಸಾಕಷ್ಟು ವಿವಾದಕ್ಕೂ ಕಾರಣವಾಯಿತು. ಶನಿವಾರ ಬೆಳಿಗ್ಗೆ ಹೊತ್ತಿಗೆ ಅದೇ ಬಳೆನಂಜಪ್ಪ ಶಾಲೆಯ ಬಳಿ ಹತ್ತಾರು ಜನ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಸ್ಥಳೀಯರು ಶಾಲೆಯಲ್ಲಿ ನಮಾಜ್​ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಮಾಜ್​ ಖಂಡಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಶನಿವಾರ (ಜನವಿರಿ 21) ಬೆಳಿಗ್ಗೆ ಹತ್ತಾರು ಜನ ಹಿಂದೂ ಸಂಘಟನೆ ಕಾರ್ಯಕರ್ತರು ಬಳೆನಂಜಪ್ಪ ಸರ್ಕಾರಿ ಶಾಲೆಗೆ ಭೇಟಿಕೊಟ್ಟು ಸರ್ವಧರ್ಮ ಸಮನ್ವಯ ಸಾರಬೇಕಿದ್ದ ಸ್ಥಳದಲ್ಲಿ ಈ ರೀತಿ ಪ್ರಾರ್ಥನೆ ಮಾಡಿರುವುದು ತಪ್ಪು ಎಂದು ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಉಮಾದೇವಿ ಅವರ ವಿರುದ್ದ ಘೋಷಣೆಗಳನ್ನು ಕೂಗಿದ್ದಾರೆ.

ಮುಖ್ಯ ಶಿಕ್ಷಕಿ ಅವರ ಕಚೇರಿಗೆ ಬಂದ ಹತ್ತಾರು ಕಾರ್ಯಕರ್ತರು ನಮಾಜ್​ ಮಾಡಲು ಅವಕಾಶ ಮಾಡಿಕೊಟ್ಟ ಮುಖ್ಯಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸ್ಥಳಕ್ಕೆ ಬಂದ ಡಿವೈಎಸ್​ಪಿ ಗಿರಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ ನಂತರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿ ಕಳಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಸರ್ಕಾರಿ ಶಾಲೆಯ ಕೊಠಡಿಯಲ್ಲಿ ನಮಾಜ್​ ಮಾಡುತ್ತಿದ್ದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ವಿವಾದ ಸೃಷ್ಟಿಯಾಯಿತು. ಈ ವಿಷಯವಾಗಿ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು. ವೈರಲ್​ ಆದ ವಿಡಿಯೋದಲ್ಲಿ ಬಳೆನಂಜಪ್ಪ ಸರ್ಕಾರಿ ಶಾಲೆ ಬೋರ್ಡ್​ ಹಾಗೂ ಅದೇ ಶಾಲೆಯ ಕೊಠಡಿಯೊಳಗೆ ಸುಮಾರು 15 ರಿಂದ 20 ಜನ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಕ್ಕಳು ನಮಾಜ್​ ಮಾಡುತ್ತಿದ್ದು, ನಂತರ ಅಲ್ಲಿದ್ದ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ನಮಾಜ್​ ಮಾಡುವುದಕ್ಕೆ ಯಾರು ಅನುಮತಿ ಕೊಟ್ಟಿದ್ದು ಎಂದು ಮಾತನಾಡಿಸಲಾಗಿದೆ. ಆಗ ಅಲ್ಲಿದ್ದ ಒಬ್ಬ ವಿದ್ಯಾರ್ಥಿ ನಮ್ಮ ಶಾಲೆಯ ಮುಖ್ಯಶಿಕ್ಷಕಿ ಉಮಾದೇವಿ ಅನುಮಾತಿ ನೀಡಿದ್ದಾರೆ ಎಂದು ಹೇಳಿರುವುದು ಇದೆ.

namaz

ಮಕ್ಕಳು ಶಾಲೆಯ ಕೊಠಡಿಯೊಂದರಲ್ಲಿ ನಮಾಜ್ ಮಾಡಿದ್ದಾರೆ

ನಮಾಜ್​ ಮಾಡಿದ ಪ್ರಕರಣ ಏನಾಯ್ತು?

ಯಾವಾಗ ಸರ್ಕಾರಿ ಶಾಲೆಯೊಂದರಲ್ಲಿ ನಮಾಜ್​ ಮಾಡಲಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕ(ಡಿಡಿಪಿಐ) ರೇವಣಸಿದ್ದಪ್ಪ ಕೂಡಲೇ, ಮುಳಬಾಗಿಲು ಬಿಇಓ ಗಿರಿಜೇಶ್ವರಿ ಅವರಿಗೆ ಘಟನೆ ಸಂಬಂಧ ತನಿಖೆ ನಡೆಸಿ ಒಂದು ವರದಿ ಕೊಡುವಂತೆ ತಿಳಿಸಿದ್ದಾರೆ. ನಂತರ ಬಿಇಓ ನೀಡಿದ ವರದಿ ಆಧಾರಿಸಿ ಸೋಮವಾರ ಡಿಡಿಪಿಐ ರೇವಣಸಿದ್ದಪ್ಪ ತಾವೇ ಖುದ್ದು ಮುಳಬಾಗಿಲು ಬಳೆನಂಜಪ್ಪ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಮುಖ್ಯ ಶಿಕ್ಷಕಿ ಹಾಗೂ ಅಲ್ಲಿ ನಮಾಜ್​ ಮಾಡಿದ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿ ಒಂದು ವರದಿ ಸಿದ್ದಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ನಂತರ ಅವರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಒಟ್ಟಾರೆ ಮಕ್ಕಳ ಮುನಸ್ಸು ನಿಷ್ಕಲ್ಮಶವಾದದ್ದು ಹೀಗಿರುವಾಗ ಆ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವಂತ ಯಾವುದೇ ಕೆಲಸ ಮಾಡಬಾರದು. ಅದರಲ್ಲೂ ಸರ್ಕಾರಿ ಶಾಲೆ ಎಂದರೆ ಎಲ್ಲಾ ಜಾತಿ, ಧರ್ಮ, ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಬರುತ್ತಾರೆ. ಇಂಥ ಪ್ರದೇಶದಲ್ಲಿ ಎಲ್ಲರೂ ಸಮಾನರಂತೆ, ಸಹಿಷ್ಣುತೆಯನ್ನು ಕಾಪಾಡಬೇಕಾಗುತ್ತದೆ. ಆದರೆ ಇಲ್ಲಿ ಒಂದು ವರ್ಗಕ್ಕೆ ಈ ರೀತಿಯ ಪ್ರಾರ್ಥನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಸದ್ಯ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮುಂದಿನ ಕ್ರಮಗಳ ಬಗ್ಗೆ ಕಾದು ನೋಡಬೇಕಿದೆ.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ: ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯುವ ಬದಲು ದತ್ತು ತೆಗೆದುಕೊಳ್ಳಿ: ವಿವಾದಕ್ಕೆ ಕಾರಣವಾದ ಬಾಂಗ್ಲಾ ಲೇಖಕಿ ತಸ್ಲೀಮಾ ಟ್ವೀಟ್​

ಮೇಕೆದಾಟು ಯೋಜನೆ ಸೇರಿದಂತೆ ಅಂತರರಾಜ್ಯ ಜಲವಿವಾದಗಳನ್ನು ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದಾರೆ ಮುಖ್ಯಮಂತ್ರಿ ಬೊಮ್ಮಾಯಿ

Follow us on

Related Stories

Most Read Stories

Click on your DTH Provider to Add TV9 Kannada