ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕುಸಿತ; ಎಷ್ಟು ಗೊತ್ತಾ?
ಕಳೆದ ಎರಡು ಮೂರು ತಿಂಗಳಿಂದ ಕೆಂಪುಸುಂದರಿ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇತ್ತು. ಇದೀಗ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಯಲ್ಲಿ ಇಳಿಕೆ ಕಂಡಿದೆ.
ಕೋಲಾರ, ಆಗಸ್ಟ್ 6: ಸತತವಾಗಿ ಏರುತ್ತಿದ್ದ ಟೊಮೆಟೊ ಬೆಲೆ ಇದೀಗ ಇಳಿಮುಖವಾಗಲು ಆರಂಭಿಸಿದೆ. ಕೋಲಾರ ಎಪಿಎಂಸಿ (Kolar APMC) ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಯಲ್ಲಿ (Tomato Price) ಕುಸಿತಗೊಂಡಿದ್ದು, 15 ಕೆಜಿ ಬಾಕ್ಸ್ ಟೊಮೆಟೊ ದರ 2,700 ರೂ.ನಿಂದ 1,500 ರೂಪಾಯಿಗೆ ಕುಸಿದಿದೆ. ಒಟ್ಟಾರೆಯಾಗಿ ಕಳೆದ ನಾಲ್ಕು ದಿನಗಳಲ್ಲಿ ಕೆಂಪು ಸುಂದರಿಯ ಬೆಲೆಯಲ್ಲಿ 1000 ರೂಪಾಯಿ ಕುಸಿತ ಕಂಡಿದೆ.
ಕಳೆದ ಎರಡು ಮೂರು ತಿಂಗಳಿನಿಂದ ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ನಿರಂತರ ಬೆಲೆ ಏರಿಕೆಯಿಂದಾಗಿ ಟೊಮೆಟೊಗೆ ಚಿನ್ನದ ಬೆಲೆ ಬಂದಿತ್ತು. ಹಲವೆಡೆ ಟೊಮೆಟೊ ಬೆಲೆ ಲೂಟಿ ಮಾಡಲಾಗಿದ್ದರೆ, ಇನ್ನೂ ಹಲವೆಡೆ ಕಳ್ಳತನ ಪ್ರಕರಣಗಳು ನಡೆದಿದ್ದವು. ಕಳ್ಳರಿಂದ ಟೊಮೆಟೊ ರಕ್ಷಣೆ ಮಾಡಲು ರೈತರು ರಾತ್ರಿ ಹೊತ್ತಲ್ಲೂ ಜಮೀನಿನಲ್ಲಿ ನಿಲ್ಲುತ್ತಿದ್ದರು, ತರಕಾರಿ ಮಾರುಕಟ್ಟೆಗಳಲ್ಲಿ ಸಿಟಿ ಟಿವಿ ಅಳವಡಿಸಿದ್ದರು. ಕೆಲವು ಅಂಗಡಿಗಳಲ್ಲಿ ಬೌನ್ಸರ್ಗಳನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ಚಿಕ್ಕೋಡಿ: ಲೀಸ್ ಪಡೆದ ಹೊಲದಲ್ಲಿ ಟೊಮೆಟೊ ಬೆಳೆದು ಕೋಟ್ಯಾಧೀಶನಾದ ರೈತ
ಇಷ್ಟೊಂದು ದುಬಾರಿಯಾಗಿದ್ದ ಕೆಂಪು ಸುಂದರಿ ಟೊಮೆಟೊ ಬೆಲೆ ಕಳೆದ ನಾಲ್ಕು ದಿನಗಳಿಂದ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಇಳಿಕೆಯಾಗುತ್ತಿದೆ. ಇಂದು ಹದಿನೈದು ಕೆಜಿ ಬಾಕ್ಸ್ ಟೊಮೆಟೊ 1500-1700 ರೂಪಾಯಿಗೆ ಹರಾಜು ಆಗಿದೆ. ಈ ಹಿಂದೆ ಇದೇ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ 2700 ರೂ. ತನಕ ಏರಿತ್ತು. ಕೋಲಾರ ಎಪಿಎಂಸಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೈರೈಕೆ ಆಗುತ್ತಿರುವ ಕಾರಣ ಅದರ ಬೆಲೆಯಲ್ಲಿ ಗಣನೀಯ ಕುಸಿತ ಕಾಣಲು ಆರಂಭವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ