AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕೋಡಿ: ಲೀಸ್ ಪಡೆದ ಹೊಲದಲ್ಲಿ ಟೊಮೆಟೊ ಬೆಳೆದು ಕೋಟ್ಯಾಧೀಶನಾದ ರೈತ

ಬೆಳಗಾವಿಯಲ್ಲಿ ಲೀಸ್ ಮೇಲೆ ನಾಲ್ಕು ತಿಂಗಳ ಅವಧಿಗೆ 7 ಎಕರೆ ಜಮೀನು ಪಡೆದು ಟೊಮೆಟೊ ಬೆಳದ ರೈತ ಇಂದು ಕೋಟ್ಯಾಧಿಪತಿಯಾಗಿದ್ದಾರೆ.

ಚಿಕ್ಕೋಡಿ: ಲೀಸ್ ಪಡೆದ ಹೊಲದಲ್ಲಿ ಟೊಮೆಟೊ ಬೆಳೆದು ಕೋಟ್ಯಾಧೀಶನಾದ ರೈತ
ರೈತ ಸಾಗರ್ ಮಗದುಮ್
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಆಯೇಷಾ ಬಾನು

Updated on: Aug 06, 2023 | 1:35 PM

ಚಿಕ್ಕೋಡಿ, ಆ.06: ತರಕಾರಿ ಮಾರುಕಟ್ಟೆಯಲ್ಲಿ ಕೆಂಪುಸುಂದರಿ ಟೊಮೆಟೋದೇ(Tomato) ದರ್ಬಾರ್ ಆಗಿದೆ. ಕಳೆದ ಎರಡು ತಿಂಗಳಿಂದ ಟೊಮೆಟೊ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ರೆ ರೈತರ(Farmers) ಬಾಳು ಹಸನಾಗಿಸಿದೆ. ಇಲ್ಲೊಬ್ಬ ರೈತ ನಾಲ್ಕು ತಿಂಗಳಿಗೆ ಕೃಷಿಭೂಮಿ ಬಾಡಿಗೆ ಪಡೆದು ಕೋಟ್ಯಾಧಿಪತಿಯಾಗಿದ್ದಾನೆ. ಹೌದು ಅದೃಷ್ಟ ಅಂದ್ರೆ ಇದೆ. ಲೀಸ್ ಮೇಲೆ ನಾಲ್ಕು ತಿಂಗಳ ಅವಧಿಗೆ 7 ಎಕರೆ ಜಮೀನು ಪಡೆದು ಟೊಮೆಟೊ ಬೆಳದ ರೈತ ಇಂದು ಕೋಟ್ಯಾಧಿಪತಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನನದಿ ಗ್ರಾಮದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಶಿರೋಳ ತಾಲೂಕಿನ ಜಯಸಿಂಗಪುರ ಪಟ್ಟಣ ನಿವಾಸಿ ಸಾಗರ್ ಮಗದುಮ್ 7 ಎಕರೆ ಕೃಷಿ ಜಮೀನು ಬಾಡಿಗೆಗೆ ಪಡೆದಿದ್ದರು. ಎಕರೆಗೆ ತಲಾ 40 ಸಾವಿರ ರೂಪಾಯಿಯಂತೆ ಒಟ್ಟು 7 ಎಕರೆ ಜಮೀನನ್ನು ನಾಲ್ಕು ತಿಂಗಳ ಅವಧಿಗೆ 2 ಲಕ್ಷ 80 ಸಾವಿರ ರೂ. ಹಣ ನೀಡಿ ಬಾಡಿಗೆ ಪಡೆದಿದ್ದರು. ಹೀಗೆ ಬಾಡಿಗೆಗೆ ಪಡೆದ ಜಮೀನಿನಲ್ಲಿ ಟೊಮೆಟೊ ಸಸಿ ನಾಟಿ ಮಾಡಿದ್ರು. ಕೈಗೆ ಫಸಲು ಬಂದು ಕಟಾವು ಶುರು ಮಾಡುತ್ತಿದ್ದಂತೆ ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ. ಸಾಗರ್ ಮಗದುಮ್ ಅದೃಷ್ಟ ಖುಲಾಯಿಸಿದೆ. ದೆಹಲಿ ಮೂಲದ ತರಕಾರಿ ವ್ಯಾಪಾರಸ್ಥರು ಖುದ್ದು ಹೊಲಕ್ಕೆ ಆಗಮಿಸಿ ಟೊಮೆಟೊ ಖರೀದಿಸಲು ಶುರು ಮಾಡಿದ್ದಾರೆ. ಪರಿಣಾಮ ಐದು ಬಾರಿ ಕಟಾವು ಮಾಡಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. 7 ಎಕರೆಗೆ 20 ಲಕ್ಷ ಖರ್ಚು ಮಾಡಿದ್ದು ಈವರೆಗೂ 80 ಲಕ್ಷ ರೂಪಾಯಿ ಲಾಭ ಗಳಿಸಿ ಫುಲ್ ಖುಷ್ ಆಗಿದ್ದಾರೆ‌‌.

ನಾಲ್ಕೇ ನಾಲ್ಕು ತಿಂಗಳಲ್ಲಿ ಕೋಟ್ಯಾಧೀಶನಾದ ರೈತ

ನನದಿಯಲ್ಲಿ ಕೆಂಪು ಸುಂದರಿ ಬೆಳೆದು ಕೋಟಿ ರೂಪಾಯಿ ಸಂಪಾದನೆ ಮಾಡಿದ ರೈತ ಸಾಗರ್ ಮಗದುಮ್ ಕುಟುಂಬಸ್ಥರು ಕಳೆದ 30 ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಶಿರೋಳ ತಾಲೂಕಿನ ಜಯಸಿಂಗಪುರದಿಂದ ಬೆಳಗಾವಿಯ ಗಡಿಭಾಗಕ್ಕೆ ಆಗಮಿಸಿ ಜಮೀನನ್ನು ಬಾಡಿಗೆಗೆ ಪಡೆಯುತ್ತಾರೆ. ನಾಲ್ಕೂವರೆ ತಿಂಗಳು ಕಾಲ ಬಾಡಿಗೆಗೆ ಕೃಷಿ ಜಮೀನು ಪಡೆಯುವ ಇವರು ಟೊಮೆಟೊ ಬೆಳೆದು ಇಳುವರಿ ತೆಗೆದು ಹೊಲ ಹಸನು ಮಾಡಿ ತೆರಳುತ್ತಾರೆ. ರೈತ ಸಾಗರ್‌ ಮಗದುಮ್‌ಗೆ ಸೋದರ ಸಂಬಂಧಿ ಸಂತೋಷ್ ಚೌಗುಲೆ ಸಹ ಸಾಥ್ ನೀಡಿದ್ದಾರೆ. ಇನ್ನು ನಾಲ್ಕೈದು ಬಾರಿ ಕಟಾವು ಮಾಡಿ 40 ಲಕ್ಷ ಸಂಪಾದಿಸುವ ನಿರೀಕ್ಷೆಯಲ್ಲಿ ರೈತ ಸಾಗರ್ ಮಗದುಮ್ ಇದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಟೊಮೆಟೊ ಆಯ್ತು ಈಗ ದಾಳಿಂಬೆ ತೋಟಕ್ಕೆ ಕಳ್ಳರ ಕಾಟ

ರೈತರ ಜಮೀನಿಗೆ ಆಗಮಿಸಿ ಟೊಮ್ಯಾಟೊ ತಗೆದುಕೊಂಡು ಹೋಗುವ ದೆಹಲಿ ಮೂಲದ ವ್ಯಾಪಾರಸ್ಥರು ತಮ್ಮ ಕಾರ್ಮಿಕರನ್ನು ಕರೆದುಕೊಂಡು ಬಂದು ಹಸಿ, ಹಣ್ಣಾದ ಟೊಮೆಟೊ ಸೈಜ್ ಮೇಲೆ ಬೇರ್ಪಡಿಸಿ ಟ್ರೇಗಳಿಗೆ ತುಂಬಿಕೊಂಡು ಲಾರಿಗಳಲ್ಲಿ ದೆಹಲಿಗೆ ರವಾನೆ ಮಾಡುತ್ತಾರೆ. ಒಂದು ಬಾರಿ ಕಟಾವು ಮಾಡಿದ್ರೆ ಒಂದು ಟ್ರೇಯಲ್ಲಿ 25 ಕೆಜಿಯಷ್ಟು ಟೊಮೆಟೊ ಇರುವ ಸಾವಿರ ಟ್ರೇಗಳಷ್ಟು ಇಳುವರಿ ಬರುತ್ತಿದೆಯಂತೆ. ಕಳೆದ 30 ವರ್ಷಗಳಿಂದ ಟೊಮ್ಯಾಟೊ ಬೆಳೆಯುತ್ತಿದ್ದು ಟೊಮೆಟೊಗೆ ಇಷ್ಟೊಂದು ದರ ಎಂದೂ ಬಂದಿರಲಿಲ್ಲ. ಇದೇ ಮೊದಲ ಬಾರಿ ಟೊಮೆಟೊಗೆ ಇಷ್ಟೊಂದು ಡಿಮ್ಯಾಂಡ್ ಬಂದಿದ್ದು ಇನ್ನು ಐದು ಬಾರಿ ಕಟಾವು ಮಾಡಿ ಒಟ್ಟಾರೆ ಒಂದೂವರೆ ಕೋಟಿ ಲಾಭದ ನಿರೀಕ್ಷೆ ಇದೆ ಎಂದು ರೈತ ಸಂತಸ ಹಂಚಿಕೊಂಡರು.

ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೊ ದರ ಕಡಿಮೆಯಾಗಿದ್ದರೂ ಉತ್ತಮ ಲಾಭ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ನಾಲ್ಕು ತಿಂಗಳ ಅವಧಿಗೆ ಕೃಷಿ ಜಮೀನು ಬಾಡಿಗೆ ಪಡೆದು ಟೊಮೆಟೊ ಬೆಳೆದು ಕೋಟ್ಯಾಧೀಶನಾದ ರೈತ ಸಾಗರ್ ಮಗದುಮ್‌ನದ್ದು ಅದೃಷ್ಟವೇ ಸರಿ.

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ