ಕೋಲಾರ: ಆರತಕ್ಷತೆ ವೇಳೆ ಕುಸಿದುಬಿದ್ದ ಮದುಮಗಳ ಬ್ರೈನ್ ಡೆಡ್; ಅಂಗಾಂಗ ದಾನ ಮಾಡಿ ಸಾರ್ಥಕತೆ- ಘಟನೆ ನಡೆದದ್ದೇನು?

ಆಘಾತ ಬರಸಿಡಿಲಂತೆ ಬಂದೆರಗಿದರೂ ನೋವಿನಲ್ಲೂ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಚೈತ್ರಾ ಕುಟುಂಬ ತೆಗೆದುಕೊಂಡ ನಿರ್ಧಾರ ಇಡೀ ಸಮಾಜಕ್ಕೆ ಮಾದರಿ ಆಗಿದೆ. ಈ ಮೂಲಕ, ಸಂಕಷ್ಟದಲ್ಲಿರುವ ಹಲವರಿಗೆ ಮರುಜೀವ ಕೊಟ್ಟ ಚೈತ್ರಾ ನೆನಪು ಸದಾ ಹಸಿರಾಗಿರುತ್ತದೆ.

ಕೋಲಾರ: ಆರತಕ್ಷತೆ ವೇಳೆ ಕುಸಿದುಬಿದ್ದ ಮದುಮಗಳ ಬ್ರೈನ್ ಡೆಡ್; ಅಂಗಾಂಗ ದಾನ ಮಾಡಿ ಸಾರ್ಥಕತೆ- ಘಟನೆ ನಡೆದದ್ದೇನು?
ಕೋಲಾರ: ಆರತಕ್ಷತೆ ವೇಳೆ ಕುಸಿದುಬಿದ್ದ ಮದುಮಗಳು
Follow us
TV9 Web
| Updated By: ganapathi bhat

Updated on: Feb 12, 2022 | 7:00 PM

ಕೋಲಾರ: ಆಕೆ ತನ್ನ ಜೀವನದಲ್ಲಿ ನೂರಾರು ಕನಸುಗಳನ್ನು ಹೊತ್ತು ಹಸೆಮಣೆ ಏರಲು ಸಿದ್ದವಾಗಿದ್ದಳು. ಇಡೀ ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಆರತಕ್ಷತೆಯಲ್ಲಿ ನೂರಾರು ಜನರು ಮದುಮಗಳಿಗೆ ಶುಭ ಹಾರೈಸುತ್ತಿದ್ದರು. ಹೀಗಿರುವಾಗ ವಿಧಿಯಾಟವೇ ಬೇರೆ ಆಗಿತ್ತು. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಕೊಡಚೆರವು ಗ್ರಾಮದ ಕೃಷಿಕ ರಾಮಪ್ಪ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿರುವಾಗಲೇ ದುರ್ಘಟನೆಯೊಂದು ಸಂಭವಿಸಿದೆ. ಆರತಕ್ಷತೆಯ ವೇದಿಕೆಯ ಮೇಲೆಯೇ ವಧು ಕುಸಿದು ಬಿದ್ದಿದ್ದಾಳೆ.

ರಾಮಪ್ಪ ಮತ್ತು ಆಕ್ಕೆಮ್ಮ ಎಂಬುವರ ಏಕೈಕ ಪುತ್ರಿಯಾದ ಚೈತ್ರಾಳಿಗೆ ಮದುವೆ ನಿಶ್ಚಯವಾಗಿತ್ತು, ಎಂಎಸ್ಸಿ ಬಯೋಕೆಮಿಸ್ಟ್ರಿ ಮಾಡಿ ಕೈವಾರ ಬಳಿಯ ಬೈರವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಚೈತ್ರಾಗೆ ಹೊಸಕೋಟೆಯ ಯುವಕನೊಂದಿಗೆ ಫೆಬ್ರವರಿ-6 ಮತ್ತು 7 ರಂದು ಶ್ರೀನಿವಾಸಪುರದ ಮಾರುತಿ ಸಭಾ ಭವನದಲ್ಲಿ ಮದುವೆ ನಡೆಯುತ್ತಿತ್ತು. ಫೆಬ್ರವರಿ-6 ರಂದು ಸಂಜೆ 6 ಗಂಟೆಗೆ ಆರತಕ್ಷತೆಗೆ ಸಿದ್ದವಾಗಿ ವರನ ಜೊತೆ ಆಗಮಿಸಿದ ಚೈತ್ರಾ ರಾತ್ರಿ-9 ಗಂಟೆಯವರೆಗೂ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿದ್ದರು. ಆದರೆ 9 ಗಂಟೆ ಸುಮಾರಿಗೆ ದಿಢೀರನೇ ವೇದಿಕೆ ಮೇಲೆಯೇ ಚೈತ್ರಾ ಕುಸಿದುಬಿದ್ದಿದ್ದಾರೆ.

ಕೂಡಲೇ ಮದುವೆ ಕಾರ್ಯಕ್ರಮದಲ್ಲೇ ಇದ್ದ ವೈದ್ಯರು ಚೈತ್ರಾಳನ್ನು ಶ್ರೀನಿವಾಸಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದ್ದಾರೆ. ಅಲ್ಲಿಂದ ನೇರವಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆಗೆ ಬ್ರೈನ್​ ಸ್ಟ್ರೋಕ್​ ಆಗಿದೆ ಅನ್ನೋದು ತಿಳಿದುಬಂದಿದೆ. ನಂತರ ಸತತ ಐದು ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ (ಫೆಬ್ರವರಿ 12) ವೈದ್ಯರು ಚೈತ್ರಾಳ ಬ್ರೈನ್​ ಡೆಡ್​ ಎಂದು ತಿಳಿಸಿದ್ದಾರೆ.

ಫಲಿಸಲಿಲ್ಲ ಚಿಕಿತ್ಸೆ ಮುದುಡಿ ಹೋದ ಸಂಭ್ರಮ

ಬ್ರೈನ್​ ಡೆಡ್​ ಎಂದಾದಮೇಲೆ ಮತ್ತೆ ಚೈತ್ರಾ ಚಿಕಿತ್ಸೆಗೆ ಸ್ಪಂದಿಸದೆ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಾ ಹೋದ ಮೇಲೆ ಬಹುತೇಕ ಚೈತ್ರಾ ಬದುಕೋದು ಅನುಮಾನ ಎಂದಿದ್ದಾರೆ. ಅಷ್ಟೇ ಅಲ್ಲದೆ ಶೇಕಡಾ 70 ರಷ್ಟು ಜೀವ ಈಗಾಗಲೇ ಹೋಗಿದೆ ಹಾಗಾಗಿ ಚೈತ್ರಾ ಬದುಕೋದಿಲ್ಲ. ಅವಳನ್ನು ಸದಾ ನೆನಪಿನಲ್ಲಿಡುವಂತೆ ಕೆಲಸ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ.

ಅಂಗಾಗದಾನ ಮಾಡಿ ಸಾರ್ಥಕತೆ ಮೆರೆದು ಕುಟುಂಬಸ್ಥರು

ವೈದ್ಯರ ಸಲಹೆ ಮೇರೆಗೆ ಕುಟುಂಬಸ್ಥರು ಚೈತ್ರಾಳ ಅಂಗಾಗ ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ಹೃದಯ ಒಡೆದು ಹೋಗುವಷ್ಟು ದು:ಖ ಆವರಿಸಿದ್ದರೂ, ಸಮಾಧಾನ ಮಾಡಿಕೊಳ್ಳಲಾಗಷ್ಟು ನೋವಿನಲ್ಲೂ ಗಟ್ಟಿ ಮನಸ್ಸು ಮಾಡಿದ ಕುಟುಂಬಸ್ಥರು ಚೈತ್ರಾಳ ಕಣ್ಣು, ಹೃದಯ, ಮತ್ತು ಕಿಡ್ನಿಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಹೊಸ ಜೀವನಕ್ಕೆ ಕಾಲಿಟ್ಟು ಬದುಕಬೇಕಿದ್ದ ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ಕೊನೆ ಪಕ್ಷ ಮಗಳ ನೆನಪಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಂಗಾಗ ದಾನದಿಂದ ನಾಲ್ಕಾರು ಜನರ ಜೀವ ಉಳಿಯುತ್ತದೆ. ಅದರಿಂದ ನಮಗೂ ಕೊಂಚ ನೆಮ್ಮದಿ. ನಮ್ಮ ಮಗಳು ಸಾಯೋದಿಲ್ಲ ಇನ್ನೊಬರ ಜೀವ ಉಳಿಸಿ ಬದುಕುತ್ತಾಳೆ ಅನ್ನೋ ಮೂಲಕ ಅಂಗಾಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಈ ಕೃಷಿಕ ಕುಟುಂಬಸ್ಥರ ಅಂಗಾಗ ದಾನ ವಿಚಾರವನ್ನು ಆರೋಗ್ಯ ಸಚಿವ ಸುಧಾಕರ್​ ಕೂಡಾ ಟ್ವಿಟರ್​ನಲ್ಲಿ ಟ್ವೀಟ್​ ಮಾಡುವ ಮೂಲಕ ನೋವಿನಲ್ಲೂ ಮಾಡಿದ ಸಾರ್ಥಕ ಕೆಲಸವನ್ನು ಶ್ಲಾಘಿಸಿದ್ದಾರೆ. ಸಂಭ್ರಮದ ಮನೆ ಸೂತಕದ ಮನೆಯಾಗಿ ಇಡೀ ಕುಟುಂಬಕ್ಕೆ ಆಘಾತ ಬರಸಿಡಿಲಂತೆ ಬಂದೆರಗಿದರೂ ನೋವಿನಲ್ಲೂ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಚೈತ್ರಾ ಕುಟುಂಬ ತೆಗೆದುಕೊಂಡ ನಿರ್ಧಾರ ಇಡೀ ಸಮಾಜಕ್ಕೆ ಮಾದರಿ ಆಗಿದೆ. ಈ ಮೂಲಕ, ಸಂಕಷ್ಟದಲ್ಲಿರುವ ಹಲವರಿಗೆ ಮರುಜೀವ ಕೊಟ್ಟ ಚೈತ್ರಾ ನೆನಪು ಸದಾ ಹಸಿರಾಗಿರುತ್ತದೆ.

ವರದಿ: ರಾಜೇಂದ್ರ ಸಿಂಹ, ಕೋಲಾರ

ಇದನ್ನೂ ಓದಿ: ಕೋಲಾರ: ಸರ್ಕಾರಿ ಜಾಗ ಉಳಿಸಲು ಗ್ರಾಮಸ್ಥರ ಹೋರಾಟ; 33 ಎಕರೆ ಗೋಮಾಳ ಭೂಮಿ ಉಳಿಸಿಕೊಂಡ ಜನರು

ಇದನ್ನೂ ಓದಿ: Organ Donation: ರಿಸೆಪ್ಷನ್ ವೇಳೆ ಕುಸಿದು ಬಿದ್ದ ಮದುಮಗಳು, ಬ್ರೈನ್ ಡೆಡ್ – ಅಂಗಾಂಗ ದಾನ ಮಾಡಿದ ಕುಟುಂಬಸ್ಥರು