ಚಿಕನ್ ಅಂದ್ರೆ ಸಾಕಷ್ಟು ಜನರಿಗೆ ಅಚ್ಚು ಮೆಚ್ಚು, ಅದರಲ್ಲೂ ಚಿಕನ್ ಲೆಗ್ ಪೀಸ್ ಅಂದ್ರೆ ಎಲ್ಲಿಲ್ಲದ ಇಷ್ಟ ಕೂಡ. ಆದ್ರೆ ಚಿಕನ್ ಪ್ರಿಯರೇ ಇನ್ಮುಂದೆ ರೆಸ್ಟೋರೆಂಟ್ ಅಥವಾ ಹೋಟೆಲ್ ನಿಂದ ತಮ್ಮ ಅಚ್ಚು ಮೆಚ್ಚಿನ ಚಿಕನ್ ಖರೀದಿ ಮಾಡಿ ತಿನ್ನುವ ಮೊದಲು ಹುಷಾರಾಗಿರಬೇಕು ಯಾಕಂದ್ರೆ ನಿಮಗೆ ಚಿಕನ್ ಲೆಗ್ ಪೀಸ್ ಜೊತೆಗೆ ಹುಳುಗಳು ಫ್ರೀ ಸಿಗುತ್ತೆ ಹುಷಾರ್…
ಚಿಕನ್ ಲೆಗ್ ಪೀಸ್ ನಲ್ಲಿ ಹುಳು ತಿಂದವರು ಆಸ್ಪತ್ರೆ ಪಾಲು..!
ರೆಸ್ಟೋರೆಂಟ್ ಮಾಲೀಕರನ್ನ ತರಾಟೆ ತೆಗೆದುಕೊಂಡ ಸಾರ್ವಜನಿಕರು, ಮತ್ತೊಂದೆಡೆ ಹೋಟೆಲ್ ಬೀಗ ಮುದ್ರೆ ಹಾಕುತ್ತಿರುವ ನಗರಸಭೆ ಆಹಾರ ನಿರೀಕ್ಷಕರು ಹಾಗೂ ಅಧಿಕಾರಿಗಳು, ಚಿಕನ್ ಸೇವಿಸಿ ಆಸ್ಪತ್ರೆ ಪಾಲಾಗಿರುವ ಮಹಿಳೆ ಇದೆಲ್ಲಾ ಕಂಡು ಬಂದಿದ್ದು, ಕೋಲಾರದ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಖ್ರಾ ಹೋಟೆಲ್‌ನಲ್ಲಿ ನಿನ್ನೆ ಕೆಜಿಎಫ್ ನಗರದ ವಿನೋದ್ ಎಂಬುವವರು ಮನೆಗೆ ಚಿಕನ್ ಲೆಗ್‌ಪೀಸ್ ಪಾರ್ಸಲ್ ತೆಗೆದುಕೊಂಡು ಹೋಗಿದ್ದರು.
ಮನೆಯಲ್ಲಿ ಮಕ್ಕಳ ಸಮೇತ ಚಿಕನ್ ತಿಂದ್ದಾಗ ಲೆಗ್ ಪೀಸ್ ನಲ್ಲಿ ಹುಳ ಇರುವುದು ಪತ್ತೆಯಾಗಿದೆ. ಇದನ್ನ ತಿಂದ ಮಹಿಳೆ ವಿನೋದ್ ತಾಯಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ರಾತ್ರಿಯಿಂದ ವಾಂತಿ, ಬೇದಿ ಶುರುವಾಗಿದೆ, ಕೂಡಲೆ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ನಿನ್ನೆ ಪಾರ್ಸಲ್ ತೆಗೆದುಕೊಂಡು ಹೋಗಿ ಮನೆಯಲ್ಲಿ ಲೆಗ್ ಪೀಸ್ ತಿಂದ ವೇಳೆ ಅದರಲ್ಲಿ ಹುಳ ಪತ್ತೆಯಾಗಿತ್ತು. ತಿಂದ ಬಳಿಕ ಇಷ್ಟೆಲ್ಲಾ ಅನಾಹುತ ಸಂಭವಿಸಿದೆ.
ಹುಳುಬಿದ್ದಿದ್ದ ಚಿಕನ್ ಕೊಟ್ಟ ಹೋಟೆಲ್ನವರಿಗೆ ಗ್ರಹಚಾರ ಬಿಡಿಸಿದ ಸಾರ್ವಜನಿಕರು..!
ಇನ್ನು ಹಾಳಾದ ಹಾಗೂ ಸುರಕ್ಷಿತವಲ್ಲದ ಹುಳು ಬಿದ್ದಿದ್ದ ಚಿಕನ್ ಲೆಗ್ ಪೀಸ್ ನೀಡಿದ ಹಿನ್ನೆಲೆ ಇಖ್ರಾ ಹೋಟೆಲ್ ನವರಿಗೆ ಸ್ಥಳೀಯರು ಗ್ರಹಚಾರ ಬಿಡಿಸಿದ್ರು. ಕೂಡಲೆ ಕೆಜಿಎಫ್ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅದಕ್ಕೂ ಮುನ್ನ ಹೊಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಹೋಟೆಲ್‌ನಲ್ಲಿದ್ದ ಎಲ್ಲಾ ಚಿಕನ್ ಪೀಸ್ಗಳಲ್ಲಿಯೂ ಹುಳ ಪತ್ತೆಯಾಗಿದೆ. ಇನ್ನೂ ಗ್ರಾಹಕ ವಿನೋದ್ ಕೂಡಾ ಹೋಟೆಲ್ ಮಾಲೀಕರನ್ನ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು, ಹೋಟೆಲ್ ನಲ್ಲಿದ್ದ ಮತ್ತಷ್ಟು ಚಿಕನ್ ಪೀಸ್‌ನಲ್ಲೂ ಹುಳ ಪತ್ತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಖ್ರಾ ಹೋಟೆಲ್‌ಗೆ ಬೀಗ ಜಡಿದ ಅಧಿಕಾರಿಗಳು..!
ಕೆಲ ಯುವಕರು ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಹಿನ್ನೆಲೆ, ಸ್ಥಳಕ್ಕೆ ಆಗಮಿಸಿದ ನಗರಸಭೆ ಆಹಾರ ನಿರೀಕ್ಷಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳಪೆ ಹಾಗೂ ಗುಣಮಟ್ಟವಲ್ಲದ ಹುಳು ಬಿದ್ದ ಆಹಾರ ಇರುವುದು ಕಂಡು ಬಂದ ಹಿನ್ನೆಲೆ ಹೋಟೆಲ್‌ಗೆ ತಕ್ಷಣವೇ ಬೀಗ ಮುದ್ರೆಯನ್ನ ಹಾಕಿದ್ದಾರೆ. ಜೊತೆಗೆ ಕೆಜಿಎಫ್ ನಗರದಲ್ಲಿರುವ ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ.
ಒಟ್ಟಾರೆ ತಮಗಿಷ್ಟ ಎಂದು ಚಿಕನ್ ತಿನ್ನಬೇಕಾದ್ರೆ ಇನ್ಮುಂದೆ ಗುಣಮಟ್ಟ ಪರಿಶೀಲನೆ ಮಾಡಲೇಬೇಕು, ಯಾಮಾರಿ ಎಲ್ಲೆಂದರಲ್ಲಿ ಆಹಾರ ತಿನ್ನೋದಕ್ಕೆ ಹೋದರೆ ಆಹಾರದ ಜೊತೆಗೆ ಅನಾರೋಗ್ಯವನ್ನು ತೆಗೆದುಕೊಂಡು ಹುಳುಗಳನ್ನು ಫ್ರೀಯಾಗಿ ಬೋನಸ್ ಎಂದು ತಿನ್ನಬೇಕಾಗುತ್ತದೆ. ಆಹಾರ ಪ್ರಿಯರೆ ಇನ್ನುಮುಂದೆ ಎಲ್ಲೆಂದರಲ್ಲಿ ತಿನ್ನುವ ಮೊದಲು ಹುಷಾರು ಹುಷಾರು.
– ರಾಜೇಂದ್ರ ಸಿಂಹ
Also Read:
Sidlaghatta: ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿ ಅಂತಾ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ!
Also Read:
Published On - 6:07 pm, Fri, 1 July 22