ಕೊಪ್ಪಳ: ಗಂಗಾವತಿ ಅಭಿವೃದ್ಧಿಗೆ ಜಾರಿಯಾಗಿದ್ದ ನೂರಾರು ಕೋಟಿ ರೂಪಾಯಿ ಲೂಟಿ

| Updated By: ವಿವೇಕ ಬಿರಾದಾರ

Updated on: Feb 11, 2024 | 1:22 PM

ಗಂಗಾವತಿ ಪಟ್ಟಣ ಅಭಿವೃದ್ಧಿಗೆ ಅಮೃತ ಸಿಟಿ ಮತ್ತು ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ನೂರಾರು ಕೋಟಿ ಹಣ ಜಾರಿಯಾಗಿದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಕಳಪೆ ಕಾಮಾಗರಿ ಮಾಡಿ, ಕೋಟಿ ಕೋಟಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಹೀಗಾಗಿ ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮದ ಕುರಿತು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕೊಪ್ಪಳ: ಗಂಗಾವತಿ ಅಭಿವೃದ್ಧಿಗೆ ಜಾರಿಯಾಗಿದ್ದ ನೂರಾರು ಕೋಟಿ ರೂಪಾಯಿ ಲೂಟಿ
ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ
Follow us on

ಕೊಪ್ಪಳ, ಫೆಬ್ರವರಿ 11: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಭಿವೃದ್ದಿಗಾಗಿ ಪ್ರತಿವರ್ಷ ನೂರಾರು ಕೋಟಿ ಹಣವನ್ನು ಖರ್ಚು ಮಾಡುತ್ತದೆ. ಸರ್ಕಾರ ನೀಡಿರುವ ಹಣದಲ್ಲಿ ಸರಿಯಾಗಿ ಕಾಮಗಾರಿಗಳನ್ನು ಮಾಡಿದ್ದರೆ, ಅನೇಕ ನಗರಗಳು ಅಭಿವೃದ್ದಿಯಾಗುತ್ತಿದ್ದವು. ಗಂಗಾವತಿ (Gangavati) ಪಟ್ಟಣ ಅಭಿವೃದ್ಧಿಗೆ ಸರ್ಕಾರದಿಂದ ನೂರಾರು ಕೋಟಿ ಹಣ ಜಾರಿಯಾಗಿದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಕಳಪೆ ಕಾಮಾಗರಿ ಮಾಡಿ, ಕೋಟಿ ಕೋಟಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಹೀಗಾಗಿ ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮದ ಕುರಿತು ಲೋಕಾಯುಕ್ತ (Lokayukta) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಗಂಗಾವತಿ ಪಟ್ಟಣ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಪಟ್ಟಣದಲ್ಲಿ ಅಕ್ಕಿ ಮತ್ತು ಇನ್ನಿತರ ಕಾರ್ಖಾನೆಗಳು, ಐತಿಹಾಸಿಕ ಸ್ಥಳಗಳು ಇರುವುದರಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಪಟ್ಟಣಕ್ಕೆ ಬರುತ್ತಾರೆ. ಇದೆ ಕಾರಣಕ್ಕಾಗಿ, ಗಂಗಾವತಿ ಪಟ್ಟಣದ ಸಮಗ್ರ ಅಭಿವೃದ್ದಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಮೃತಸಿಟಿ ಮತ್ತು ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಲ್ಲಿ 2018 ರಿಂದ 2022 ರವರಗೆ ನೂರು ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದವು. ಈ ಹಣವನ್ನು ಸದ್ಬಳಕೆ ಮಾಡಿಕೊಂಡಿದ್ದರೆ ಗಂಗಾವತಿ ಪಟ್ಟಣ ಅಭಿವೃದ್ದಿಯಾಗಿ ಹೊಳೆಯುತ್ತಿತ್ತು. ಪಟ್ಟಣ ಸುಂದರ ಮತ್ತು ಸ್ವಚ್ಚ ನಗರವಾಗುತ್ತಿತ್ತು.

ಇದನ್ನೂ ಓದಿ: Lokayukta Raid: ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: 10 ಅಧಿಕಾರಿಗಳ ಬಳಿ ಏನೇನು ಸಿಕ್ಕಿದೆ? ಇಲ್ಲಿದೆ ವಿವರ

ಆದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿಕೊಂಡು ಸರಿಯಾಗಿ ಕೆಲಸ ಮಾಡದೆ, ಸರ್ಕಾರ ನೀಡಿದ್ದ ಹಣವನ್ನು ನುಂಗು ನೀರು ಕುಡದಿದ್ದಾರೆ. ಬಸ್ ನಿಲ್ದಾಣದ ಬಳಿ ಪುಟ್ ಪಾಥ್ ಮತ್ತು ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ ಅಂತ ಬಿಲ್ ತೋರಿಸಿದ್ದಾರೆ. ಆದರೆ ವಾಸ್ತವ್ಯದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣವೆ ಆಗಿಲ್ಲ. ಇನ್ನು ಅನೇಕ ಕಡೆ ಒಳಚರಂಡಿ ನಿರ್ಮಾಣ ಮಾಡಿದ್ದೇವೆ ಅಂತ ಹೇಳಿ ಕೋಟಿ ಕೋಟಿ ಹಣವನ್ನು ನುಂಗಿ ನೀರು ಕುಡದಿದ್ದಾರೆ. ಆದರೆ ವಾಸ್ತವ್ಯದಲ್ಲಿ ಕೆಲಸವೆ ಆಗಿಲ್ಲ. ಇನ್ನೂ ಅನೇಕ ಕಡೆ ಕಾಮಗಾರಿ ನಡೆದರು, ಸರಿಯಾಗಿ ಆಗಿಲ್ಲ. ಹೀಗಾಗಿ ಎರಡು ವರ್ಷದ ಹಿಂದೆಯೇ ಗಂಗಾವತಿ ಮೂಲದ ಫಕ್ಕೀರಪ್ಪ ಎಂಬುವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗಂಗಾವತಿಗೆ ಭೇಟಿ ನೀಡಿ, ಕಾಮಗಾರಿಗಳ ಸ್ಥಳಗಳನ್ನು ವೀಕ್ಷಿಸಿದರು.

ಕಳೆದ ಎರಡು ದಿನಗಳಿಂದ ಗಂಗಾವತಿಯಲ್ಲಿ ಬೀಡು ಬಿಟ್ಟಿರುವ ಬೆಂಗಳೂರಿನಿಂದ ಬಂದಿರುವ ಲೋಕಾಯುಕ್ತ ಅಧಿಕಾರಿಗಳು, ಎಲ್ಲಿ ಎಲ್ಲಿ ಯಾವೆಲ್ಲಾ ಕಾಮಾಗರಿಗಳು ನಡೆದಿವೆ ಎಂದು ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡದೆ ಇರುವುದು, ದುರ್ಗಮ್ಮ ಹಳ್ಳಕ್ಕೆ ತಡೆಗೋಡೆ ಪೂರ್ಣವಾಗಿ ನಿರ್ಮಿಸದೆ 10 ಕೋಟಿ ರೂ. ಬಿಲ್ ಸೃಷ್ಟಿಸಿರುವುದು ತಿಳಿದುಬಂದಿದೆ. ದುರ್ಗಮ್ಮ ದೇವಸ್ಥಾನದಲ್ಲಿ ಪಾರ್ಕಿಂಗ್ ಸ್ಥಳದ ಅಭಿವೃದ್ದಿಗೆ ಮೂರುವರೆ ಕೋಟಿ ರೂ. ಬಿಲ್ ತಯಾರಿಸಲಾಗಿದೆ. ಆದರೆ ಯಾವುದೆ ಕಾಮಗಾರಿ ನಡೆದಿಲ್ಲ. ಅನೇಕ ಕಡೆ ಕಳಪೆ ಕಾಮಗಾರಿ ಮತ್ತು ಕಾಮಗಾರಿಯನ್ನು ಮಾಡದೆ ಇರುವುದು ಬೆಳಕಿಗೆ ಬಂದಿದೆ.

ಈ ಅಕ್ರಮದಲ್ಲಿ ಬಾಗಿಯಾಗಿದ್ದ ಅನೇಕ ಅಧಿಕಾರಿಗಳ ಪೈಕಿ ಕೆಲವರು ವರ್ಗಾವಣೆಯಾಗಿದ್ದರೆ, ಇನ್ನು ಕೆಲವರು ನಿವೃತ್ತರಾಗಿದ್ದಾರೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸದ್ಯ ಗಂಗಾವತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ