ಮಕ್ಕಳಿಗೆ ಮೊಟ್ಟೆ ಕೊಟ್ಟು ಕಸಿದುಕೊಳ್ಳುವ ಅಂಗನವಾಡಿ ಕಾರ್ಯಕರ್ತರ ವಿಡಿಯೋ ವೈರಲ್; ಇಬ್ಬರು ಅಮಾನತು

| Updated By: ಆಯೇಷಾ ಬಾನು

Updated on: Aug 10, 2024 | 9:54 AM

ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಇಟ್ಟು ಫೋಟೋ ಕ್ಲಿಕ್ಕಿಸಿ ಬಳಿಕ ತಟ್ಟೆಯಿಂದ ಮೊಟ್ಟೆಯನ್ನು ತೆಗೆದುಕೊಳ್ಳುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯ ವಿಡಿಯೋ ವೈರಲ್ ಆಗಿದ್ದು ಇಬ್ಬರನ್ನೂ ಅಮಾನತು ಮಾಡಲಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕಾರ್ಯಕರ್ತೆ ಹಾಗೂ ಸಹಾಯಕಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಮಕ್ಕಳಿಗೆ ಮೊಟ್ಟೆ ಕೊಟ್ಟು ಕಸಿದುಕೊಳ್ಳುವ ಅಂಗನವಾಡಿ ಕಾರ್ಯಕರ್ತರ ವಿಡಿಯೋ ವೈರಲ್; ಇಬ್ಬರು ಅಮಾನತು
ಮಕ್ಕಳಿಗೆ ಮೊಟ್ಟೆ ಕೊಟ್ಟು ಕಸಿದುಕೊಳ್ಳುವ ಕಾರ್ಯಕರ್ತರ ವಿಡಿಯೋ ವೈರಲ್
Follow us on

ಕೊಪ್ಪಳ, ಆಗಸ್ಟ್​.10: ಅಂಗನವಾಡಿ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿ (Egg) ವಂಚನೆ ಆರೋಪ ಕೇಳಿ ಬಂದಿದ್ದು ಅಂಗನವಾಡಿ (Anganwadi) ಕಾರ್ಯಕರ್ತೆ ಲಕ್ಷ್ಮೀ, ಸಹಾಯಕಿ ಶೈನಜಾಬೇಗಂ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಸಿಬ್ಬಂದಿಯನ್ನು ಅಮಾನತು ಮಾಡಿ ಮಹಿಳಾ‌ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಮೊಟ್ಟೆಯಲ್ಲಿ ಗೋಲ್ಮಾಲ್ ನಡೆದಿದೆ. ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಲೆತಗ್ಗಿಸುವಂತ ಕೆಲಸ ಮಾಡಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿ ನಂತರ ಮೊಟ್ಟೆ ಕಸಿದುಕೊಳ್ಳುವ ವಿಡಿಯೋ ವೈರಲ್ ಆಗಿದೆ. ಮಕ್ಕಳು ಬಾಯಿಗೆ ಮೊಟ್ಟೆ‌ ಹಾಕಿಕೊಳ್ಳೊಕ್ಕೆ ಮುಂಚೆನೇ ಕಾರ್ಯಕರ್ತರು ಮರಳಿ ಮೊಟ್ಟೆ ಕಸಿದಿದ್ದಾರೆ. ಈ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಕರ್ತೆ, ಸಹಾಯಕಿಯನ್ನು ಅಮಾನತು ಮಾಡಲಾಗಿದೆ. ಇನ್ನು ಸ್ಥಳೀಯರು ಕೂಡ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:  ಬೆಂಗಳೂರು: ಮೆಡಿಕಲ್ ಎಮರ್ಜೆನ್ಸಿ ಫೋನ್ ಪೇ ಮಾಡ್ತೀನಿ ಎಂದು ಹಣ ಪಡೆದು ಮೋಸ, ವಿಡಿಯೋ​ ಹಂಚಿಕೊಂಡ ಮಾಲೀಕ

ಕೊಪ್ಪಳದ ಅಂಗನವಾಡಿಗಳಿಗೆ ನ್ಯಾಯಾಧೀಶರ ಭೇಟಿ

ಇನ್ನು ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿ ಅವ್ಯವಸ್ಥೆ ಮತ್ತು ಅಕ್ರಮ ಹೆಚ್ಚಾಗಿದ್ದು ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸಿ.ಚಂದ್ರಶೇಖರ ನೇತೃತ್ವದಲ್ಲಿ ನ್ಯಾಯಾಧೀಶರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಂಗನವಾಡಿ ಅಕ್ರಮ ಕಂಡು ಸ್ವತ ನ್ಯಾಯಾಧೀಶರು ಶಾಕ್ ಆಗಿದ್ದಾರೆ. ಕಳೆದ ಒಂದು ವಾರದಲ್ಲಿ 53 ಅಂಗನವಾಡಿಗಳಿಗೆ ನ್ಯಾಯಾಧೀಶರು ಭೇಟಿ ನೀಡಿದ್ದಾರೆ. ನ್ಯಾಯಾಧೀಶರ ಭೇಟಿ ಸಮಯದಲ್ಲಿ ಅನೇಕ ಅಕ್ರಮ, ಅವ್ಯವಸ್ಥೆ ಕಂಡುಬಂದಿದೆ. ಅನೇಕ ಅಂಗನವಾಡಿಗಳಲ್ಲಿ ಹಾಜರಾತಿ ತೋರಿಸಿದಷ್ಟು ಮಕ್ಕಳು ಇಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಸ್ವಚ್ಚತೆಯೇ ಮರೆಯಾಗಿದೆ. ಬಹಳಷ್ಟು ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ, ಇದ್ರೂ ಬಾಗಿಲುಗಳೇ ಇಲ್ಲ.

ಆಹಾರ ಸಾಮಾಗ್ರಿಗಳಲ್ಲಿ ನುಸಿ, ಹುಳುಗಳು ಇರೋದು ಪತ್ತೆಯಾಗಿದೆ. ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡ್ತಿರೋದು ಪತ್ತೆಯಾಗಿದೆ. ದಾಖಲಾತಿಗಳನ್ನು ಪೆನ್ಸಿಲ್ ನಲ್ಲಿ ಬರೆದು ಕಳ್ಳಾಟವಾಡಲಾಗುತ್ತಿದೆ. ನಂತರ ತಮಗೆ ತಾಳೆ ಆಗೋ ಹಾಗೆ ಪೆನ್ ನಲ್ಲಿ ಬರೆಯುತ್ತಿದ್ದಾರೆ. ನಮ್ಮ ಅಧಿಕಾರಿಗಳು ಹೇಳಿದ್ದರಿಂದಲೇ ಪೆನ್ಸಿಲ್ ನಲ್ಲಿ ಬರೆಯುತ್ತೇವೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಎಕ್ಲಪೈರಿ ಡೇಟ್ ಆಗಿರೋ ಆಹಾರ ಪೂರೈಕೆ ಮಾಡ್ತಿರೋದು ಕೂಡಾ ಪತ್ತೆಯಾಗಿದೆ. ಅಂಗನವಾಡಿಯಲ್ಲಿರಬೇಕಾದ ಫಸ್ಟ್ ಏಡ್ ಕಿಟ್ ಗಳು ಅಂಗನವಾಡಿ ಕಾರ್ಯಕರ್ತೆಯರ ಮನೆಯಲ್ಲಿರೋದು ಪತ್ತೆಯಾಗಿದೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಈ ಬಗ್ಗೆ ಮಾಹಿತಿ ನೀಡೋದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ