ಆರೋಪಿಗಳನ್ನು ಬಂಧಿಸಿದ್ರೆ ಮಾತ್ರ ಮನೆಗೆ ಬನ್ನಿ; ಗೃಹ ಸಚಿವ ಜಿ.ಪರಮೇಶ್ವರಗೆ ಪಿಎಸ್​ಐ ಪರಶುರಾಮ ಕುಟುಂಬ ಸೂಚನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 06, 2024 | 8:32 PM

ಯಾದಗಿರಿ ಪಿಎಸ್ಐ ಆಗಿದ್ದ ಪರಶುರಾಮ್ ಐದು ದಿನದ ಹಿಂದೆ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅದರಂತೆ ಪರಶುರಾಮ್ ಅವರ ಸ್ವಗ್ರಾಮವಾಗಿರುವ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಇಂದು ತಿಥಿ ಕಾರ್ಯ ನಡೆದಿದ್ದು, ವಿಧಿ-ವಿಧಾನಗಳನ್ನು ಪತ್ನಿ ನಡೆಸಿದ್ರೆ, ಇನ್ನೊಂದೆಡೆ ಹೆತ್ತ ತಾಯಿಯ ಕಣ್ಣಾಲೆಗಳು ಕೂಡ ತೇವುಗೊಂಡಿದ್ದವು.

ಆರೋಪಿಗಳನ್ನು ಬಂಧಿಸಿದ್ರೆ ಮಾತ್ರ ಮನೆಗೆ ಬನ್ನಿ; ಗೃಹ ಸಚಿವ ಜಿ.ಪರಮೇಶ್ವರಗೆ ಪಿಎಸ್​ಐ ಪರಶುರಾಮ ಕುಟುಂಬ ಸೂಚನೆ
ಗೃಹ ಸಚಿವ ಜಿ.ಪರಮೇಶ್ವರಗೆ ಮೃತ ಪರಶುರಾಮ ಕುಟುಂಬ ಸೂಚನೆ
Follow us on

ಕೊಪ್ಪಳ, ಆ.06: ಪಿಎಸ್ಐ ಪರಶುರಾಮ(PSI Parashurama)ಬಾರದ ಲೋಕಕ್ಕೆ ಹೋಗಿ ಐದು ದಿನವಾಯ್ತು. ಆದ್ರೆ, ಇಲ್ಲಿವರೆಗೆ ಆತನ ಸಾವು ಹೇಗಾಯ್ತು, ಯಾಕಾಯ್ತು ಎನ್ನುವ ಸತ್ಯ ಹೊರಬಂದಿಲ್ಲ. ಇನ್ನೊಂದೆಡೆ ಕುಟುಂಬದವರು ಕಣ್ಣೀರು ಸುರಿಸುತ್ತಲೇ ಇಂದು ಐದನೇ ದಿನದ ತಿಥಿ ಕಾರ್ಯವನ್ನು ಮಾಡಿದರು. ಇನ್ನು ನಾಳೆ(ಆ.07) ಮೃತ ಪರಶುರಾಮ್ ಸ್ವಗ್ರಾಮಕ್ಕೆ ಗೃಹ ಸಚಿವರು ಬರುತ್ತಿದ್ದಾರೆ. ಆದ್ರೆ, ಆರೋಪಿಗಳನ್ನು ಬಂಧಿಸದೇ ಗ್ರಾಮಕ್ಕೆ ಬರಬೇಡಿ ಎಂದು ಪರಶುರಾಮ್ ಕುಟುಂಬ ಮತ್ತು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಯಾದಗಿರಿ ಪಿಎಸ್ಐ ಆಗಿದ್ದ ಪರಶುರಾಮ್ ಐದು ದಿನದ ಹಿಂದೆ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಉಮ್ಮಳಿಸಿ ಬರುತ್ತಿರೋ ದುಖಃದ ನಡುವೆಯೇ ಪತಿಯ ಭಾವಚಿತ್ರಕ್ಕೆ ಕೈಮುಗಿದು, ಪರಶುರಾಮ್ ಅವರ ಸ್ವಗ್ರಾಮವಾಗಿರುವ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಇಂದು ತಿಥಿ ಕಾರ್ಯ ನಡೆದಿದ್ದು, ವಿಧಿ-ವಿಧಾನಗಳನ್ನು ಪತ್ನಿ ನಡೆಸಿದ್ರೆ, ಇನ್ನೊಂದೆಡೆ ಹೆತ್ತ ತಾಯಿಯ ಕಣ್ಣಾಲೆಗಳು ಕೂಡ ತೇವುಗೊಂಡಿದ್ದವು. ಇಡೀ ಕುಟುಂಬ ನೋವಲ್ಲಿಯೇ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಇದನ್ನೂ ಓದಿ:ಪಿಎಸ್ಐ ಪರಶುರಾಮ ಸಾವು ಪ್ರಕರಣ: ಶಾಸಕ ಸ್ಥಾನದಿಂದ ಚೆನ್ನಾರೆಡ್ಡಿಯನ್ನು ವಜಾಗೊಳಿಸುವಂತೆ ಸ್ಪೀಕರ್​ಗೆ ಪತ್ರ

ಇದೇ ಸಮಯದಲ್ಲಿ ಆಗಮಿಸಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ‘ತಿಥಿ ಕಾರ್ಯದಲ್ಲಿ ಭಾಗಿಯಾದರು. ನಂತರ ಕುಟುಂಬದವರನ್ನು ಭೇಟಿ ಮಾಡಿದ ಛಲವಾದಿ ನಾರಾಯಣಸ್ವಾಮಿ, ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಮೃತ ಪರಶುರಾಮ್ ಪತ್ನಿಗೆ, ತಮ್ಮ ಒಂದು ತಿಂಗಳ ವೇತನದ ಚೆಕ್​ನ್ನು ನೀಡಿದರು. ನಂತರ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ‘ಘಟನೆ ನಡೆದು ಐದು ದಿನವಾದರೂ ಇಲ್ಲಿವರೆಗೆ ಆರೋಪಿಗಳ ಬಂಧನವಾಗಿಲ್ಲ. ಎಐಸಿಸಿ ಅಧ್ಯಕ್ಷರು ಮತ್ತು ಸಿಎಂ ಯಾದಗಿರಿ ಶಾಸಕ ಮತ್ತು ಅವರ ಪುತ್ರನ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಆರೋಪಿಗಳ ಬಂಧನಕ್ಕೆ ಪರಶುರಾಮ ಕುಟುಂಬ ಆಗ್ರಹ

ಇನ್ನು ಪರಶುರಾಮ್ ಸಾವಿನ ಬಗ್ಗೆ ಸಿಐಡಿ ತನಿಖೆ ಆರಂಭಿಸಿದೆ. ಇದರ ನಡುವೆ ಪರಶುರಾಮ್ ಅವರ ದೇಹದ ವಿವಿಧ ಅಂಗಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಲಾಗಿದ್ದು, ಅದರ ವರದಿಗಾಗಿ ಸಿಐಡಿಯವರು ಕಾಯುತ್ತಿದ್ದಾರೆ. ಇನ್ನು ಘಟನೆ ನಡೆದು ಐದು ದಿನವಾದರೂ ಕೂಡ ಆರೋಪಿಗಳ ಬಂಧನವಾಗಿಲ್ಲ. ಇದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ ನಾಳೆ(ಆ.07) ಪರಶುರಾಮ್ ನಿವಾಸಕ್ಕೆ ಗೃಹ ಸಚಿವ ಜಿ ಪರಮೇಶ್ವರ ಭೇಟಿ ನೀಡಲು ಬರುತ್ತಿದ್ದಾರೆ. ಆದ್ರೆ, ಗೃಹ ಸಚಿವರು ಗ್ರಾಮಕ್ಕೆ ಬರುವ ಮೊದಲು ಆರೋಪಿಗಳನ್ನು ಬಂಧಿಸಬೇಕು. ಆರೋಪಿಗಳನ್ನು ಬಂಧಿಸದೇ ಬರುವುದು ಬೇಡ ಎಂದು ಕುಟುಂಬದವರು ಮತ್ತು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಒಂದಡೆ ಪರಶುರಾಮ್ ಸಾವಿನ ಬಗ್ಗೆ ಸಿಐಡಿ ತಂಡ ತನಿಖೆ ಆರಂಭಿಸಿದೆ. ಆದ್ರೆ, ಇನ್ನೊಂದೆಡೆ ಕುಟುಂಬದವರು ಮತ್ತು ಬಿಜೆಪಿ ನಾಯಕರು ನಿಸ್ಪಕ್ಷಪಾತವಾದ ತನಿಖೆಯಾಗಬೇಕಾದರೆ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ರಾಜಕೀಯ ತಿರುವು ಪಡೆದುಕೊಂಡಿರುವ ಈ ಪ್ರಕರಣ, ಮುಂದೆ ಯಾವ ಹಂತಕ್ಕೆ ಹೋಗುತ್ತದೆ ಎನ್ನುವುದು ಕಾಲವೇ ಉತ್ತರಿಸಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Tue, 6 August 24