ನನ್ನ ಹಿಂದೆ ಓಡಾಡಿದವರೆಲ್ಲಾ ಮಂತ್ರಿಯಾಗಿದ್ದಾರೆ, ಅವರಪ್ಪಂದಿರ ಜೊತೆ ಕೆಲಸ ಮಾಡಿದವ ನಾನು; ಬಸವರಾಜ ರಾಯರೆಡ್ಡಿ ಕಿಡಿ

ಅವರಪ್ಪಂದಿರ ಜೊತೆ ನಾನು ಕೆಲಸ‌ ಮಾಡಿದವನು. ಇವರು ನಮ್ಮ ಮುಂದೆ ಧಿಮಾಕು ತೋರಿಸಿಕೊಂಡು ಓಡಾಡುತ್ತಾರೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಕೆಲವು ಮಂದಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಹಿಂದೆ ಓಡಾಡಿದವರೆಲ್ಲಾ ಮಂತ್ರಿಯಾಗಿದ್ದಾರೆ, ಅವರಪ್ಪಂದಿರ ಜೊತೆ ಕೆಲಸ ಮಾಡಿದವ ನಾನು; ಬಸವರಾಜ ರಾಯರೆಡ್ಡಿ ಕಿಡಿ
ಬಸವರಾಜ ರಾಯರೆಡ್ಡಿ
Updated By: Ganapathi Sharma

Updated on: Aug 02, 2023 | 8:16 PM

ಕೊಪ್ಪಳ: ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಮತ್ತು ಆ ನಂತರ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಸುದ್ದಿಯಲ್ಲಿರುವ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ (Basvaraj Rayareddi) ಇದೀಗ ಮತ್ತೆ ಅಕ್ರೋಶ ಹೊರಹಾಕಿದ್ದಾರೆ. ಕೊಪ್ಪಳ (Koppal) ಜಿಲ್ಲೆ ಕುಕನೂರು ಪಟ್ಟಣದ ಜನಸಂರ್ಪಕ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ನೀವು ದುಃಖ ಪಡುವ ಅಗತ್ಯವಿಲ್ಲ. ಒಮ್ಮೊಮ್ಮೆ ಮಂತ್ರಿಯಾಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಹಣೆಬರಹ ಬೇಕು ಎಂದರು.

ನಮ್ಮ ಸಿದ್ದರಾಮಯ್ಯ ಅವರನ್ನು ನೋಡಿ, ಕಾಂಗ್ರೆಸ್​​ಗೆ ಬಂದು ಎರಡು ಬಾರಿ ಮುಖ್ಯಮಂತ್ರಿ ಆದರು. ಕಾಂಗ್ರೆಸ್​​ನ ಹಳೇ (ಮೂಲ) ಮಂದಿ ಈಗ ಏನು ಹೇಳುತ್ತಿರಬಹುದು? ಇವೆಲ್ಲಾ ಮನುಷ್ಯನ ಅದೃಷ್ಟ. ನಮ್ಮ ಹಿಂದೆ ಓಡಾಡಿದವರೆಲ್ಲ ಮಂತ್ರಿಯಾಗಿದ್ದಾರೆ. ಅವರಪ್ಪಂದಿರ ಜೊತೆ ನಾನು ಕೆಲಸ‌ ಮಾಡಿದವನು. ಇವರು ನಮ್ಮ ಮುಂದೆ ಧಿಮಾಕು ತೋರಿಸಿಕೊಂಡು ಓಡಾಡುತ್ತಾರೆ. ದೇವೆಗೌಡರ ಕ್ಯಾಬಿನೆಟ್​​​ನಲ್ಲಿ ನಾನು ಸಚಿವ ಆಗಿದ್ದೆ. ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲಲೂ ಹೆದರುತ್ತಿದ್ದರು. ಏನ್ ಮಾಡುವುದು, ಅವರ ಹಣೆಬರಹದಲ್ಲಿ ಬರೆದಿತ್ತು. ಪಾಪ ಎಲ್​ಕೆ ಅಡ್ವಾಣಿ ಅವರು ಬಿಜೆಪಿ ಕಟ್ಟಿಕಟ್ಟಿ ಹೈರಾಣಾದರು. ನರೇಂದ್ರ ಮೋದಿ ಬಂದು ಪ್ರಧಾನಿಯಾದರು ಎಂದು ರಾಯರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಕೊಪ್ಪಳ: ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲ ಎಂಬ ಹೇಳಿಕೆ ಬಗ್ಗೆ ಬಸವರಾಜ ರಾಯರೆಡ್ಡಿ ಹೇಳಿದ್ದೇನು?

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಮುಂದೆಯೂ ನನ್ನನ್ನು ಮಂತ್ರಿಯನ್ನಾಗಿ ಮಾಡುವುದು ಬೇಡ. ಸಚಿವ ಸ್ಥಾನ ಬೇಡ ಎಂಬುದಾಗಿ ಬೇಕಾದರೆ ಬರೆದು ಕೊಡುತ್ತೇನೆ ಎಂದು ಮಂಗಳವಾರವಷ್ಟೇ ರಾಯರೆಡ್ಡಿ ಕೊಪ್ಪಳದಲ್ಲಿ ಹೇಳಿದ್ದರು. ಮುಖ್ಯಮಂತ್ರಿಗಳು ನನಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲು ಸಿದ್ಧರಾಗಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಕೊಡುತ್ತೇನೆ ಎಂದು ಹೇಳಿದ್ದರು. ನಾನೇ ಬೇಡ ಎಂದು ಹೇಳಿದ್ದೆ ಎಂದು ಅವರು ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Wed, 2 August 23