ವಿಚ್ಛೇದನ ಪ್ರಕರಣ: ಜಡ್ಜ್​ ಸಲಹೆಯಂತೆ ಕೊಪ್ಪಳ ಗವಿಮಠಕ್ಕೆ ಭೇಟಿ ನೀಡಿದ ದಂಪತಿ, ಮುಂದೇನಾಯ್ತು?

| Updated By: ವಿವೇಕ ಬಿರಾದಾರ

Updated on: Sep 22, 2024 | 1:26 PM

ಗದಗ ಜಿಲ್ಲೆಯ ದಂಪತಿ ವಿಚ್ಛೇದನಕ್ಕಾಗಿ ಧಾರವಾಡ ಹೈಕೋರ್ಟ್ ​ಮೆಟ್ಟಿಲೇರಿದ್ದಾರೆ. ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್​ ಪೀಠದ ನ್ಯಾ. ಶ್ರೀಕೃಷ್ಣ ದೀಕ್ಷತ ಅವರು ದಂಪತಿಗೆ ಬುದ್ದಿವಾದ ಹೇಳಿ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಎಂದು ಸಲಹೆ ನೀಡಿದರು. ಮುಂದೇನಾಯ್ತು? ಈ ಸ್ಟೋರಿ ಓದಿ.

ವಿಚ್ಛೇದನ ಪ್ರಕರಣ: ಜಡ್ಜ್​ ಸಲಹೆಯಂತೆ ಕೊಪ್ಪಳ ಗವಿಮಠಕ್ಕೆ ಭೇಟಿ ನೀಡಿದ ದಂಪತಿ, ಮುಂದೇನಾಯ್ತು?
ಧಾರವಾಡ ಹೈಕೋರ್ಟ್​, ಗವಿಸಿದ್ದೇಶ್ವರ ಸ್ವಾಮೀಜಿ
Follow us on

ಕೊಪ್ಪಳ, ಸೆಪ್ಟೆಂಬರ್​ 22: ನೂರು ವರ್ಷ ಕೂಡಿ ಬಾಳ ಬೇಕಿದ್ದ ಜೋಡಿ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಗದಗ (Gadag) ಜಿಲ್ಲೆಯ ದಂಪತಿ ವಿಚ್ಛೇದನಕ್ಕಾಗಿ ಧಾರವಾಡ ಹೈಕೋರ್ಟ್ (Dharwad High Court)​ ಮೆಟ್ಟಿಲೇರಿದ್ದಾರೆ. ಪತ್ನಿ ಎಮ್​ಕಾಂ ಪದವಿಧರೆಯಾಗಿದ್ದು, ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ವರ್ಕ್​ ಫ್ರಾಂ ಹೋಮ್​ನಲ್ಲಿದ್ದಾರೆ. ಸೆಪ್ಟೆಂಬರ್​ 17 ರಂದು ದಂಪತಿಯ ವಿಚ್ಛೇದನ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್​ ಪೀಠದ ನ್ಯಾ. ಶ್ರೀಕೃಷ್ಣ ದೀಕ್ಷತ ಅವರು ದಂಪತಿಗೆ ಬುದ್ದಿವಾದ ಹೇಳಿದ್ದಾರೆ.

ದಂಪತಿಗಳ ಮಧ್ಯೆ ಇರುವ ಸಮಸ್ಯೆಗಳನ್ನು ಆಲಿಸಿದ ನ್ಯಾಯಾಧೀಶರು, ದಾಂಪತ್ಯದಲ್ಲಿ ಸಮಸ್ಯೆ ಬರುವುದು ಸಹಜ. ಗಂಡ-ಹೆಂಡತಿ ಜಗಳ ಸಾಮಾನ್ಯ. ಸಣ್ಣ-ಪುಟ್ಟ ವಿಚಾರಕ್ಕೆ ದೂರ ಆಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಸಮಸ್ಯೆ ಇದ್ದರೆ ಬಗೆ ಹರಿಸಿಕೊಳ್ಳಿ. ವಿಚ್ಛೇದನ ಅಂದರೆ ಅಂಗಡಿಯಿಂದ ವಸ್ತು ಖರೀದಿಸಿದಂತೆ ಅಲ್ಲ. ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಕಾನೂನಿಂದ ಜೀವನ ಸಾಧ್ಯವಾಗುವುದಿಲ್ಲ. ನಿಮ್ಮ ಸಮಸ್ಯೆಯ ಬಗ್ಗೆ ಯಾರಾದರು ಮಠಾಧೀಶರ ಬಗ್ಗೆ ಹೇಳಿಕೊಳ್ಳಿ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ‘ಸಂಜೆ 250 ಕೊಡು, ಇಲ್ಲಾಂದ್ರೆ ಶೆಡ್ಡಿಗ್ ಬಾ’, ಆಟೋ ಚಾಲಕರ ಸಮಸ್ಯೆಯನ್ನು ಎಳೆಎಳೆಯಾಗಿ ವಿವರಿಸಿದ ಕರ್ನಾಟಕ ಹೈಕೋರ್ಟ್​

ನ್ಯಾಯಾಧೀಶರ ಮಾತಿಗೆ, ಪತಿ ಗದಗನ ತೋಂಟದಾರ್ಯ ಮಠದ ಸ್ವಾಮೀಜಿ ಹತ್ರ ಹೋಗುತ್ತೇವೆ ಎಂದು ಹೇಳಿದ್ದಾನೆ. ಆಗ, ಪತಿಯ ಮಾತಿಗೆ ಒಪ್ಪದ ಪತ್ನಿ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ಹೋಗುತ್ತೇನೆ ಎಂದು ಹೇಳಿದ್ದಾಳೆ. ಈ ವೇಳೆ ನ್ಯಾಯಾಧೀಶರು ಒಳ್ಳೆದಾಯ್ತು. ಅವರು ಮಹಾನ್​ ವ್ಯಕ್ತಿ. ತುಂಬಾ ಎತ್ತರ ವ್ಯಕ್ತಿ, ಜ್ಞಾನವಂತರು. ಅವರ ಬಳಿ ಹೋಗಿ ಸಮಸ್ಯೆ ಬಗೆ ಹರಿಸಿಕೊಳ್ಳಿ ಎಂದಿದ್ದಾರೆ.

ಗವಿ ಮಠಕ್ಕೆ ಬಂದ ದಂಪತಿ ಮತ್ತು ಕುಟುಂಬಸ್ಥರು

ನ್ಯಾಯಾಧೀಶರ ಆದೇಶದಂತೆ ದಂಪತಿ ಒಟ್ಟಿಗೆ ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಹೋಗದೆ ಪ್ರತ್ಯೇಕವಾಗಿ ಹೋಗಿದ್ದಾರೆ. ಶನಿವಾರ ಮಹಿಳೆ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದರೇ, ಇಂದು (ಸೆ.22) ಆಕೆಯ ಗಂಡನ ಕುಟುಂಬಸ್ಥರು ಭೇಟಿ ನೀಡಿ ಗವಿಮಠದ ಅಭಿನವ ಗವಿಶ್ರೀಗಳ ಆಶಿರ್ವಾದ ಪಡೆದರು. ಗವಿಸಿದ್ದೇಶ್ವರ ಶ್ರೀಗಳು ಸುಮಾರು 10-20 ನಿಮಿಷ ಕುಟುಂಬದವರೊಂದಿಗೆ ಮಾತನಾಡಿದ್ದಾರೆ.

ಹೈಕೋರ್ಟ್ ನ್ಯಾಯಾಧೀಶರು ಹೇಳಿದ ಹಾಗೇ ಗವಿಮಠಕ್ಕೆ ಭೇಟಿ ನೀಡಿದ್ದೇವೆ. ಗವಿಮಠದ ಅಜ್ಜರ ಆಶೀರ್ವಾದ ಪಡೆದಿದ್ದೇವೆ. ಗವಿಶ್ರೀಗಳು ಕೂಡಿ ಒಂದಾಗಿ ಬಾಳುವಂತೆ ತಿಳಿ ಹೇಳಿದ್ದಾರೆ ಎಂದು ಕುಟುಂಬಸ್ಥರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:26 pm, Sun, 22 September 24