ಕೊಪ್ಪಳ: ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Janardhana Reddy) ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ತ್ಯ ತೋರಿಸೋಕೆ ರೆಡಿಯಾಗಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ(Kalyana Rajya Pragati Paksha) ಮೂಲಕ ತಾನು ಏನು ಎನ್ನೋದನ್ನ ತೋರಿಸುತ್ತೇನೆ ಎನ್ನೋ ಸವಾಲ್ ಹಾಕಿದ್ದಾರೆ. ನಿನ್ನೆ ತಮ್ಮ 56ನೇ ಹುಟ್ಟುಹಬ್ಬವನ್ನು ಅಭಿಮಾನಿಳೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟು ಹಬ್ಬದ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಒಂದು ಕಡೆ ಗಾಳಿಯಂತೆ ಮುನ್ನುಗ್ಗುತ್ತಿರುವ ಜನಾರ್ದನ ರೆಡ್ಡಿ ನೋಡಿ ಹಾಲಿ ಮತ್ತು ಮಾಜಿ ಶಾಸಕರಿಗೆ ನಡುಕ ಶುರುವಾಗಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ನಿನ್ನೆ ನಡೆದ ಪ್ರಚಾರ ಭಾಷಣದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪರೋಕ್ಷವಾಗಿ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೇರೆ ಬೇರೆ ಊರಿನಿಂದ ಎಂಎಲ್ಎ ಆಗಬೇಕು ಅಂತಾ ಬರ್ತಾರೆ. ಅವರ ಜೊತೆ ಯಾರು ಹೋಗಬೇಡಿ. ಅವರ ಜೊತೆ ಹೋದ್ರೆ, ಮೂರು ತಿಂಗಳು ಆದ ಮೇಲೆ ನಿಮ್ಮನ್ನು ಬಿಟ್ಟು ಹೋಗಿಬಿಡ್ತಾರೆ. ಅವರು ಊರು ಬಿಟ್ಟು ಹೋದ್ರೆ ನಿಮಗ್ಯಾರು ದಿಕ್ಕು. ಜನರು ಯಾವುದೇ ಕಾರಣಕ್ಕೂ ದಾರಿ ತಪ್ಪೋಕೆ ಹೋಗಬೇಡಿ. ಹಣ ಕೊಡ್ತಾರೆ ಅಂತಾ ಅವರ ಹಿಂದೆ ಹೋಗಬೇಡಿ. ಯಾರು ಸಹ ದುಡ್ಡು ಕೊಡೋದಿಲ್ಲ. ನಮಗೆ ಸ್ವಾಭಿಮಾನ ಮುಖ್ಯ, ಸ್ವಾಭಿಮಾನದಿಂದ ಬದುಕಿ ಎಂದು ಜನಾರ್ಧನ ರೆಡ್ಡಿ ಹೆಸರು ಹೇಳದೆ ಗುಡುಗಿದ್ದಾರೆ. ಜನಾರ್ದನ ರೆಡ್ಡಿಯಿಂದ ಕೆಲವರು ದುಡ್ಡು ತೆಗೆದುಕೊಂಡಿದ್ದಾರೆ. ಅವರ ಬಗ್ಗೆ ಹುಷಾರಾಗಿರಿ. ಅದಕ್ಕಾಗಿ ಗಂಗಾವತಿ ಮಗನಾದ ನನ್ನನ್ನು ಬೆಂಬಲಿಸಿ. ನಾನು ನಿಮ್ಮ ಜೊತೆ ಇರ್ತೇನೆ ಎಂದರು.
ಇದನ್ನೂ ಓದಿ: ಗಾಲಿ ಜನಾರ್ಧನ ರೆಡ್ಡಿ ಜನ್ಮದಿನ ಪ್ರಯುಕ್ತ ಬಳ್ಳಾರಿಯಲ್ಲಿ ಬೈಕ್ ಱಲಿ, ಚಾಲನೆ ನೀಡಿದ್ದು ರೆಡ್ಡಿ ಧರ್ಮಪತ್ನಿ ಅರುಣ ಲಕ್ಷ್ಮಿ
ಇನ್ನು ಒಂದು ಕಡೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ರೆಡ್ಡಿ ವಿರುದ್ಧ ಗುಡುಗಿದ್ರೆ ಮತ್ತೊಂದೆಡೆ ಹಾಲಿ ಶಾಸಕ ಕೂಡ ಜನಾರ್ದನ ರೆಡ್ಡಿಯನ್ನು ಬೆಂಬಲಿಸದಂತೆ ಮತದಾರರಿಗೆ ಮನವಿ ಮಾಡಿದ್ದಾರೆ. ಜನಾರ್ದನ ರೆಡ್ಡಿಗೆ ಮಾತಿನಲ್ಲೇ ಟಾಂಗ್ ಕೊಟ್ಟಿದ್ದಾರೆ. ಯಾರು ಜನರಿಗೆ ಸರಳವಾಗಿ ಸಿಗ್ತಾರೋ ಮತ ನೀಡಿ. ಯಾರು ಜನರಿಗೆ ಸಿಕ್ತಾರೋ, ಜನರ ಕರೆ ಸ್ವೀಕರಿಸುತ್ತಾರೋ, ಜನರ ಸಮಸ್ಯೆಗೆ ಸ್ಪಂದನೆ, ಸತತವಾಗಿ ಜನರ ಜೊತೆಗೆ ಇರುವವರಿಗೆ ಮತ ನೀಡಿ. ನನ್ನ ಅಭಿವೃದ್ಧಿ ಕಾರ್ಯ, ನನ್ನ ಸರಳತೆಗೆ ಬಿಜೆಪಿಗೆ ಮತ ನೀಡಿ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪರೋಕ್ಷವಾಗಿ ಮತದಾರರ ಬಳಿ ಮನವಿ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:27 am, Thu, 12 January 23