ಕ್ಷೀರಭಾಗ್ಯ: ಹಾಲಿನಿಂದ ವಂಚಿತರಾದ ಅಂಗನವಾಡಿ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರು, ಕಾರಣವೇನು? ಇಲ್ಲಿದೆ ಓದಿ

| Updated By: ವಿವೇಕ ಬಿರಾದಾರ

Updated on: Nov 25, 2023 | 12:38 PM

ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರ ವಾರದಲ್ಲಿ ಐದು ದಿನ ಮಕ್ಕಳಿಗೆ ಹಾಲನ್ನು ನೀಡುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯ ಮಕ್ಕಳಿಗೆ ಹಾಲು ಸಿಗುತ್ತುಲ್ಲ. ಹೀಗಾಗಿ ಯಾವ ಉದ್ದೇಶದಿಂದ ಸರ್ಕಾರ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿತ್ತೋ, ಆ ಯೋಜನೆಯ ಉದ್ದೇಶವೇ ಹಳ್ಳ ಹಿಡಿಯುತ್ತಿದೆ.

ಕ್ಷೀರಭಾಗ್ಯ: ಹಾಲಿನಿಂದ ವಂಚಿತರಾದ ಅಂಗನವಾಡಿ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರು, ಕಾರಣವೇನು? ಇಲ್ಲಿದೆ ಓದಿ
ಸಾಂದರ್ಭಿಕ ಚಿತ್ರ
Follow us on

ಕೊಪ್ಪಳ ನ.25: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಯಾಗಬೇಕು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಕ್ಯಾಲ್ಸಿಯಂ ಕೊರತೆ ಸೇರಿದಂತೆ ಪೌಷ್ಟಿಕಾಂಶಗಳು ಸಿಗಬೇಕು ಎಂಬುವರ ದೃಷ್ಟಿಯಿಂದ ಮುಖ್ಯಮಂತ್ರಿ ಅವರ ಸಿದ್ದರಾಮಯ್ಯ (Siddaramaiah) ಸರ್ಕಾರ 2013 ರಲ್ಲಿ ಕ್ಷೀರ ಭಾಗ್ಯ (Ksheera Bhagya) ಯೋಜನೆಯನ್ನು ಜಾರಿಗೊಳಿಸಿತ್ತು. ಕೆಲ ದಿನಗಳ ಹಿಂದಷ್ಟೇ ಸರ್ಕಾರ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿತ್ತು. ಆದರೆ ಕಳೆದ ಒಂದು ವರ್ಷದಿಂದ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಯ ಅಂಗನವಾಡಿ ಮಕ್ಕಳಿಗೆ, ಬಾಣಂತಿಯರು, ಗರ್ಭಿಣಿಯರಿಗೆ ಹಾಲು ಸಿಗುತ್ತಿಲ್ಲ. ಇದು ಅಚ್ಚರಿಯಾದರು ಸತ್ಯ.

ವರ್ಷದಿಂದ ಹಾಲು ಸಿಗದೆ ಮಕ್ಕಳ ಪರದಾಟ

ಕಳೆದ ಒಂದು ವರ್ಷದಿಂದ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯ ಮಕ್ಕಳಿಗೆ ಹಾಲು ಸಿಗುತ್ತುಲ್ಲ. ಹೀಗಾಗಿ ಯಾವ ಉದ್ದೇಶದಿಂದ ಸರ್ಕಾರ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿತ್ತೋ, ಆ ಯೋಜನೆಯ ಉದ್ದೇಶವೇ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯದಿಂದ ಹಳ್ಳ ಹಿಡಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೌದು ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರ ವಾರದಲ್ಲಿ ಐದು ದಿನ ಮಕ್ಕಳಿಗೆ ಹಾಲನ್ನು ನೀಡುತ್ತಿತ್ತು.

ಆರು ವರ್ಷದ ಮಕ್ಕಳಿಗೆ ಪ್ರತಿ ದಿನ 150 ಎಂಎಲ್ ಹಾಲನ್ನು ನೀಡಲಾಗುತ್ತಿತ್ತು. ಜೊತೆಗೆ ಮಾತೃವಂದನಾ ಯೋಜನೆಯಡಿ, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಕೂಡಾ ಪ್ರತಿ ತಿಂಗಳು ಅರ್ದ ಕಿಲೋ ಹಾಲಿನ ಪೌಡರ್​ ಮತ್ತು ಸಕ್ಕರೆಯನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಸಕ್ಕರೆ ಮಾತ್ರ ಬರುತ್ತಿದೆ. ಹಾಲಿನ ಪೌಡರ್ ಅಂಗನವಾಡಿಗಳಿಗೆ ಬರುತ್ತಿಲ್ಲ. ಹೀಗಾಗಿ ಅಂಗನವಾಡಿ ಮಕ್ಕಳು ಮತ್ತು ಬಾಣಂತಿಯರು, ಗರ್ಭಿಣಿಯರು ಹಾಲಿನಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿ ಸದ್ಯ 69,899 ಅಂಗನವಾಡಿಗಳಿವೆ. ಈ ಅಂಗನವಾಡಿಗಳಿಗೆ ಬರೋಬ್ಬರಿ 39,50,179 ಮಕ್ಕಳು ಬರುತ್ತಾರೆ. ಈ ಪೈಕಿ ಬಹುತೇಕ ಮಕ್ಕಳಿಗೆ ಕಳೆದ ಒಂದು ವರ್ಷದಿಂದ ಹಾಲು ಸಿಗುತ್ತಿಲ್ಲ.

ಅಪೌಷ್ಟಿಕತೆ ನಿವಾರಣೆಗೆ ಸಹಕಾರಿಯಾಗಿದ್ದ ಹಾಲು

ಕೊಪ್ಪಳ ಸೇರಿದಂತೆ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಬಾಣಂತಿಯರು ಮತ್ತು ಗರ್ಭಿಣಿಯರು ಕೂಡಾ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದ ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಕ್ಷೀರಭಾಗ್ಯ ಯೋಜನೆಯಿಂದ ಹೆಚ್ಚಿನ ಅನಕೂಲವಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಹಣ ಕೊಟ್ಟು ಹಾಲು ಖರೀದಿಸಿ ಕುಡಿಯಲು ಅಸಮರ್ಥರಾಗಿದ್ದರಿಂದ ಕ್ಷೀರಭಾಗ್ಯ ಯೋಜನೆಯಿಂದ ಹೆಚ್ಚಿನ ಜನರಿಗೆ ಲಾಭವಾಗಿತ್ತು. ಆದರೆ ಇವರಿಗೆ ಕಳೆದ ಒಂದು ವರ್ಷದಿಂದ ಹಾಲು ಸಿಗುತ್ತಿಲ್ಲ.

ಇದನ್ನೂ ಓದಿ: ‘ಕ್ಷೀರ ಭಾಗ್ಯ’ ಯೋಜನೆಗೂ ದರ ಏರಿಕೆಯ ಬಿಸಿ!, ಹೆಚ್ಚುವರಿ 50 ಕೋಟಿ ರೂ. ಹೊರೆ?

ಹಾಲಿನ ಪೌಡರ್ ಪೂರೈಕೆ ಕೊರತೆ

ಹೌದು ಈ ಮೊದಲು ಕೆಎಂಎಫ್​ನಿಂದ ಅಂಗನವಾಡಿಗಳಿಗೆ ಹಾಲಿನ ಪೌಡರ್ ಪೂರೈಕೆಯಾಗುತ್ತಿತ್ತು. ಅಂಗನವಾಡಿಗಳಲ್ಲಿ ಪೌಡರ್​ನ್ನು ಹಾಲು ಮಾಡಿ, ಮಕ್ಕಳಿಗೆ ನೀಡಲಾಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಅಂಗನವಾಡಿಗಳಿಗೆ ಪೌಡರ್ ಪೂರೈಕೆಯಾಗುತ್ತಿಲ್ಲ. ಈ ಮೊದಲು ಸರ್ಕಾರ ಕೆಎಂಎಫ್​ಗೆ ಸಾಕಷ್ಟು ಹಣ ಬಾಕಿ ಉಳಿಸಿಕೊಂಡಿತ್ತಂತೆ. ಹೀಗಾಗಿ ಕೆಎಂಎಫ್​ ಹಾಲಿನ ಪೌಡರ್ ಪೂರೈಕೆ ಬಂದ್ ಮಾಡಿತ್ತು. ಆದರೆ ಕಳೆದ ಕೆಲ ತಿಂಗಳ ಹಿಂದೆ ಇಲಾಖೆಗೆ ಅನುದಾನ ಬಂದಿದ್ದು, ಬಾಕಿ ಹಣವನ್ನು ಕೂಡಾ ಪಾವತಿಸಿದೆ. ಇದೀಗ ಮತ್ತೆ ಹಣ ನೀಡುತ್ತೇವೆ, ಹಾಲಿನ ಪೌಡರ್ ನೀಡಿ ಅಂತ ಇಲಾಖೆಯ ಅಧಿಕಾರಿಗಳು ಕೆಎಂಎಫ್​ಗೆ ಮನವಿ ಮಾಡಿರೂ ಕೂಡ ಒಕ್ಕೂಟ ಹಾಲಿನ ಪೌಡರ್ ಪೂರೈಕೆ ಮಾಡುತ್ತಿಲ್ಲ.

ಕೆಎಂಎಫ್​ ಹಾಲಿನ ಪೌಡರ್ ಉತ್ಪಾದನೆಗೆ ಹೆಚ್ಚು ಗಮನ ನೀಡದೇ ಇರುವುದು ಮತ್ತು ಈ ವರ್ಷ ಬರಗಾಲದಿಂದ ಹಾಲಿನ ಪ್ರಮಾಣ ಕಡಿಮೆಯಾಗಿರುವದರಿಂದ ಹಾಲಿನ ಪೌಡರ್ ಉತ್ಪಾದನೆ ಕಡಿಮೆಯಾಗಿದೆ. ಇದೇ ಕಾರಣದಿಂದಲೇ ಮಕ್ಕಳಿಗೆ ಹಾಲು ಸಿಗುತ್ತಿಲ್ಲ ಅಂತ ಹೇಳಲಾಗುತ್ತಿದೆ.
ಒಂದಡೆ ಅಂಗನವಾಡಿ ಮಕ್ಕಳಿಗೆ ಹಾಲಿನ ಪೌಡರ್ ಕೊರತೆ ನೆಪ ಹೇಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಲಿನ ಪೌಡರ್ ಪೂರೈಕೆ ಮಾಡುತ್ತಿಲ್ಲ. ಆದರೆ ಸರ್ಕಾರಿ ಶಾಲೆಗಳಿಗೆ ಮಾತ್ರ ಹಾಲಿನ ಪೌಡರ ನಿರಂತರವಾಗಿ ಪೂರೈಕೆಯಾಗುತ್ತಿದೆ. ಶಾಲಾ ಮಕ್ಕಳಿಗೆ ಸಿಗುತ್ತಿರುವ ಹಾಲಿನ ಪೌಡರ್, ಅಂಗನವಾಡಿ ಮಕ್ಕಳಿಗೆ ಯಾಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ.

ಪ್ರತಿನಿತ್ಯ ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಹಾಲು ಮತ್ತು ಹಾಲಿನ ಪುಡಿಯನ್ನು ಕೇಳುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಇಲಾಖೆಯಿಂದ ಅಂಗನವಾಡಿಗಳಿಗೆ ಹಾಲಿನ ಪೌಡರ್ ಪೂರೈಕೆಯಾಗುತ್ತಿಲ್ಲಾ. ಹಾಲಿನ ಪೌಡರ್ ಪೂರೈಕೆ ಮಾಡುವಂತೆ ಮೇಲಾಧಿಕಾರಿಗಳಿಗೆ ಮನವಿ ಕೂಡಾ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮಮ್ತಾಜ್ ಹೇಳಿದರು.

ಹಾಲಿನ ಪೌಡರ್ ಪೂರೈಕೆ ಮಾಡುವಂತೆ ಕೆಎಂಎಫ್​ಗೆ ಮನವಿ ಮಾಡಲಾಗಿದೆ. ಆದರೆ ಹಾಲಿನ ಪೌಡರ್ ಸಿಗುತ್ತಿಲ್ಲ. ಹೀಗಾಗಿ ಮಕ್ಕಳಿಗೆ ಹಾಲು ನೀಡಲು ತೊಂದರೆಯಾಗುತ್ತಿದೆ. ಈ ವಿಷಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕೂಡ ತಿಳಿಸಲಾಗಿದೆ. ಹಾಲಿನ ಪೌಡರ್ ವ್ಯವಸ್ಥೆಯಾದರೆ ಮಕ್ಕಳಿಗೆ ಮೊದಲಿನಿಂದ ಹಾಲು ನೀಡಲಾಗುವದು ಎಂದು ಕೊಪ್ಪಳ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ