ಹೆಸರು ಬೆಳೆಗೆ ಕೀಟದ ಕಾಟ; ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಕಂಗಾಲಾದ ರೈತರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 28, 2024 | 3:27 PM

ಕೊಪ್ಪಳ ಜಿಲ್ಲೆಯ ರೈತರು ಕಳೆದ ಬಾರಿ ಬರಗಾಲದಿಂದ ಸಂಕಷ್ಟ ಅನುಭವಿಸಿದ್ದರು. ಆದ್ರೆ, ಈ ಬಾರಿ ಮಳೆ ಚೆನ್ನಾಗಿ ಬಂದಿದ್ದು, ಬೆಳೆ ಕೂಡ ಚೆನ್ನಾಗಿ ಬಂದಿದೆ. ಆದರೂ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೌದು, ಮುಂಗಾರು ಮಳೆ ಚೆನ್ನಾಗಿ ಬಂದಿದ್ದರಿಂದ ರೈತರು ಹೆಸರು ಬಿತ್ತನೆ ಮಾಡಿದ್ದರು. ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನವೇ ಹೆಸರು, ರೋಗಕ್ಕೆ ಬಲಿಯಾಗುತ್ತಿದೆ. ಕಾಯಿಯಲ್ಲಿ ಕಾಳುಗಳ ಬದಲಾಗಿ ಕೀಟಗಳು ಕಾಣುತ್ತಿವೆ.

ಹೆಸರು ಬೆಳೆಗೆ ಕೀಟದ ಕಾಟ; ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಕಂಗಾಲಾದ ರೈತರು
ಹೆಸರು ಬೆಳೆಗೆ ಕೀಟದ ಕಾಟ
Follow us on

ಕೊಪ್ಪಳ, ಜು.28: ಜಿಲ್ಲೆಯ ಕುಕನೂರು(Kuknoor) ತಾಲೂಕಿನ ಇಟಗಿ, ತಳಕಲ್, ಮಸಬಹಂಚಿನಾಳ ಗ್ರಾಮದ ರೈತರು ಈ ಬಾರಿ ಕೂಡ ಕಂಗಾಲಾಗಿದ್ದಾರೆ. ಮುಂಗಾರು ಮಳೆ ಚೆನ್ನಾಗಿ ಆಗಿದ್ದು, ಇದರಿಂದ ಕೇವಲ ತೊಂಬತ್ತೇ ದಿನದಲ್ಲಿ ಬರುವ ಹೆಸರು ಬೆಳೆಯನ್ನು ಹೆಚ್ಚಿನ ರೈತರು ಜಿಲ್ಲೆಯಲ್ಲಿ ಬಿತ್ತನೆ ಮಾಡಿದ್ದರು. ಜಿಲ್ಲೆಯಲ್ಲಿ ಸರಿಸುಮಾರು ಹದಿನೆಂಟು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಹೆಸರು ಬೆಳೆ ಬೆಳೆಯಲಾಗಿದೆ. ಜೊತೆಗೆ ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಬೆಳೆ ಚೆನ್ನಾಗಿ ಬಂದಿತ್ತು. ಈ ಬಾರಿ ಆದರೂ ಉತ್ತಮ ಇಳುವರಿ ಬರುತ್ತದೆ ಎಂದು ರೈತರು ಖುಷಿ ಪಟ್ಟಿದ್ದರು.

ಹೆಸರು ಬೆಳೆಗೆ ಕೀಟದ ಕಾಟ

ಆದ್ರೆ, ಇದೀಗ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಕಾಳುಯಿದ್ದ ಹೆಸರು ಕಾಯಿಗಳಲ್ಲಿ ಇದೀಗ ಕಾಳುಗಳಿಗಿಂತ ಹೆಚ್ಚಾಗಿ ಕೀಟಗಳು ಕಾಣುತ್ತಿವೆ. ಇದು ರೈತರ ಆತಂಕವನ್ನು ಹೆಚ್ಚಿಸುತ್ತಿವೆ. ಹೆಸರು ಬೆಳೆಗೆ ಇದೀಗ ಕುಡಿ ಸಾಯುವ ನಂಜು ರೋಗದ ಜೊತೆಗೆ ಕೀಟಗಳ ಬಾದೆ ವಿಪರೀತವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ಸಾವಿರಾರು ರೂಪಾಯಿ ಆದಾಯ ತಂದು ಕೊಡುತ್ತಿದ್ದ ಹೆಸರು ಬೆಳೆ, ಕೀಟದಿಂದ ಹಾಳಾಗಿ ಹೋಗುತ್ತಿದೆ.

ಇದನ್ನೂ ಓದಿ:ಕೊಪ್ಪಳ: ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿತ, ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡುತ್ತಿರುವ ರೈತರು

ಹೆಸರು ಬೆಳೆಗೆ ಕುಡಿ ಸಾಯುವ ನಂಜು ರೋಗ ಒಂದೆಡೆ ಬಾದಿಸಿದ್ದರಿಂದ ಅನೇಕ ಕಡೆ ಹೆಸರು ಬೆಳೆ ಕಾಯಿಗಳೇ ಆಗಿಲ್ಲ. ಹೌದು, ಕಾಯಿಗಳಿಗೆ ಕೀಟಗಳ ಬಾದೆ ಹೆಚ್ಚಾಗಿದೆ. ಬಹುತೇಕ ಕಾಯಿಗಳನ್ನು ಕೀಟಗಳು ತಿಂದು ಹಾಕಿವೆ. ಇದರಿಂದ ಬಹುತೇಕ ಕಾಳುಗಳು ಹಾಳಾಗಿ ಹೋಗುತ್ತಿವೆ. ಕೀಟಗಳ ನಿಯಂತ್ರಣಕ್ಕೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡುತ್ತಿದ್ದಾರೆ. ಆದ್ರೆ, ಕ್ರಿಮಿನಾಶಕಗಳಿಗೆ ಕೂಡ ಕೀಟಗಳ ಬಾದೆ ಕಡಿಮೆಯಾಗುತ್ತಿಲ್ಲ. ಕೀಟಗಳ ನಿಯಂತ್ರಣಕ್ಕೆ ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡಿ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ