ಕೊಪ್ಪಳ, ಮೇ.29: ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಹಾಗೂ ಮಗು ಸಾವನ್ನಪ್ಪಿದ ಆರೋಪ ಕೊಪ್ಪಳ (Koppal)ದಲ್ಲಿ ಕೇಳಿಬಂದಿದೆ. ಈ ಹಿನ್ನಲೆ ನಗರದ ಗೋವನಕೊಪ್ಪದಲ್ಲಿರುವ ಖಾಸಗಿ ಆಸ್ಪತ್ರೆ ವೈದ್ಯನ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ(ಮೇ.28) ಹೆರಿಗೆಗೆಂದು ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಪ್ರತಿಭಾ ಹಿರೇಮಠ ಅವರು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಬಿಪಿ ಹೆಚ್ಚಾದ ಹಿನ್ನೆಲೆ ವೈದ್ಯರು ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳಿಸಿದ್ದರು. ಆದರೆ, ಜಿಲ್ಲಾ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಹೊಟ್ಟೆಯಲ್ಲಿ ಮಗು ಮೃತಪಟ್ಟಿತ್ತು. ಇಂದು ಜಿಲ್ಲಾಸ್ಪತ್ರೆಯಲ್ಲಿ ಪ್ರತಿಭಾ(25) ಕೊನೆಯುಸಿರೆಳೆದಿದ್ದಾರೆ.
ಡಾ.ಮಹೇಶ್ ವಿರುದ್ಧ ಪ್ರತಿಭಾ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಯವರು ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಚಿಕಿತ್ಸೆ ನೀಡದೇ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಆರೋಪಿಸಿ, ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಈ ಘಟನೆ ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡಗು: ಕುಶಾಲನಗರ ತಾಲೂಕಿನ ಕೊಡಗರಹಳ್ಳಿ ಗ್ರಾಮದ ಐಟಿಸಿ ಎಸ್ಟೇಟ್ನಲ್ಲಿ ವಿದ್ಯುತ್ ತಂತಿ ತಗುಲಿ 20 ವರ್ಷದ ಕಾಡಾನೆ ಮೃತಪಟ್ಟಿದೆ. ಕಾಡಾನೆ ಕಾಡಿನಿಂದ ಮೇವು ಅರಸಿ ಬಂದಿತ್ತು. ಈ ವೇಳೆ ಕಬ್ಬಿಣದ ವಿದ್ಯುತ್ ಕಂಬ ಅಳವಡಿಸಿದ್ದರಿಂದ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Wed, 29 May 24