ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿದ ಒಳಹರಿವು; ಯಾವುದೇ ಕ್ಷಣದಲ್ಲಾದರೂ ನದಿಗೆ ನೀರು ಬಿಡುಗಡೆ
ಆ ಡ್ಯಾಂ ತುಂಬಿದ್ರೆ ಮೂರು ರಾಜ್ಯದ ಹನ್ನೆರಡಕ್ಕೂ ಹೆಚ್ಚು ಜಿಲ್ಲೆಯ ಜನರು ಸಂಭ್ರಮಿಸುತ್ತಾರೆ. ಆದ್ರೆ, ಕಳೆದ ವರ್ಷ ಬರಗಾಲದಿಂದ ಡ್ಯಾಂ ಒಮ್ಮೆ ಕೂಡ ತುಂಬಿರಲಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೆ ತತ್ವಾರವಾಗಿತ್ತು. ಈ ಬಾರಿ ಜುಲೈ ತಿಂಗಳಲ್ಲಿಯೇ ಡ್ಯಾಂ ತುಂಬಲು ಸನ್ನಿಹತವಾಗಿದೆ. ಇನ್ನೊಂದೆಡೆ ನದಿಗೆ ಡ್ಯಾಂ ನಿಂದ ಯಾವಾಗ ಬೇಕಾದರೂ ನೀರು ಬಿಡೋ ಸಾಧ್ಯತೆಯಿದ್ದು, ಯಾವುದೇ ಕಾರಣಕ್ಕೂ ನದಿ ಸಮೀಪ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಕೊಪ್ಪಳ, ಜು.21: ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯ(Tungabhadra Dam), ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದು ಎನ್ನುವ ಕೀರ್ತಿಯನ್ನು ಪಡೆದುಕೊಂಡಿದೆ. ಈ ಡ್ಯಾಂನ ನೀರು, ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳು ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದ ಲಕ್ಷಾಂತರ ಜನರಿಗೆ ಆಧಾರವಾಗಿದೆ. ಆದ್ರೆ, ಈ ಡ್ಯಾಂ ಅವಲಂಬಿಸಿರುವುದು ರಾಜ್ಯದ ಮಲೆನಾಡಿನ ಮಳೆಯನ್ನೇ ಎನ್ನುವುದು ಅಚ್ಚರಿ. ಹೌದು, ಈ ಬಾರಿ ತುಂಗಭದ್ರಾ ಜಲಾಶಯ ಇರುವ ಭಾಗದಲ್ಲಿ ಕಡಿಮೆ ಮಳೆಯಾಗಿದೆ. ಆದ್ರೆ, ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ.
ಹೀಗಾಗಿ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಳೆದ ಒಂದು ವಾರದಿಂದ ಪ್ರತಿನಿತ್ಯ ಆರವತ್ತರಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇನ್ನು ತಿಂಗಳ ಹಿಂದಷ್ಟೇ ಕೇವಲ ನಾಲ್ಕು ಟಿಎಂಸಿ ಇದ್ದ ನೀರು, ಇಂದು ಬರೋಬ್ಬರಿ 74.41 ಟಿಎಂಸಿಗೆ ತಲುಪಿದೆ. ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮಾರ್ಥ್ಯ ಹೊಂದಿರುವ ಡ್ಯಾಂ, ಬಹುತೇಕ ಭರ್ತಿಯಾಗುವ ಹಂತಕ್ಕೆ ಬಂದಿದೆ. ಪ್ರತಿನಿತ್ಯ ಒಂಭತ್ತರಿಂದ ಹತ್ತು ಟಿಎಂಸಿ ನೀರು ಡ್ಯಾಂಗೆ ಹರಿದು ಬರ್ತಿದೆ. ಇದೇ ರೀತಿ ನೀರು ಬಂದ್ರೆ ಮೂರ್ನಾಲ್ಕು ದಿನಗಳಲ್ಲಿ ಡ್ಯಾಂ ತುಂಬಲಿದೆ.
ಇದನ್ನೂ ಓದಿ:ಜು.19 ರಿಂದ ಕಾಲುವೆಗಳಿಗೆ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ
ನದಿ ಸಮೀಪ ಹೋಗದಿರಲು ಸೂಚನೆ
ಇನ್ನು ಮಲೆನಾಡಿನಲ್ಲಿ ಬಾರಿ ಮಳೆಯಾಗುತ್ತಿರುವುದರಿಂದ ಮೂರ್ನಾಲ್ಕು ದಿನಗಳಲ್ಲಿ ಡ್ಯಾಂ ತುಂಬುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಡ್ಯಾಂ ನಿಂದ ಯಾವುದೇ ಸಮಯದಲ್ಲಿ ಕೂಡಾ ನದಿಗೆ ನೀರು ಬಿಡುವ ಸಾಧ್ಯತೆಯಿದ್ದು, ನದಿ ಸಮೀಪ ಜನರು ಹೋಗಬಾರದು, ಜಾನುವಾರುಗಳನ್ನು ಕೂಡಾ ಬಿಡಬಾರದು. ಆದಷ್ಟು ಕೂಡಾ ಡ್ಯಾಂ ಮತ್ತು ನದಿಯಿಂದ ದೂರ ಇರುವಂತೆ ಟಿಬಿ ಬೋರ್ಡ್ ಅಧಿಕಾರಿಗಳು ಮತ್ತು ಕೊಪ್ಪಳ ಜಿಲ್ಲಾಡಳಿತ ಜನರಿಗೆ ಎಚ್ಚರಿಕೆ ನೀಡಿದೆ. ಈಗಾಗಲೇ ಎಡದಂಡೆ ಕಾಲುವೆಗೆ ಡ್ಯಾಂನಿಂದ ನೀರು ಬಿಡಲಾಗುತ್ತಿದೆ. ಇನ್ನು ಬಲದಂಡೆ, ಹಾಗೂ ಎಡದಂಡೆ, ಬಲದಂಡೆ ಮೇಲ್ಪಟ್ಟ ಕಾಲುವೆಗಳಿಗೂ ಕೂಡ ನೀರು ಬಿಡುವ ಬಗ್ಗೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ.
ತಿಂಗಳ ಹಿಂದೆ ಡ್ಯಾಂ ಬರಿದಾಗಿತ್ತು. ಈ ಬಾರಿ ಕೂಡ ಡ್ಯಾಂ ತುಂಬುತ್ತದೋ, ಇಲ್ಲವೋ ಎನ್ನುವ ಆತಂಕದಲ್ಲಿ ಡ್ಯಾಂ ಕೆಳಭಾಗದ ಜನರು ಆತಂಕದಲ್ಲಿದ್ದರು. ಆದ್ರೆ, ಮಲೆನಾಡಿನ ಮಳೆಯಿಂದ ಜನರ ಆತಂಕವನ್ನು ದೂರ ಮಾಡಿದೆ. ಮೂರ್ನಾಲ್ಕು ದಿನಗಳಲ್ಲಿ ಡ್ಯಾಂ ತುಂಬುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಬಾರಿ ಜನರಿಗೆ ಕುಡಿಯುವ ನೀರು, ಕೃಷಿಗೆ ಅನುಕೂಲವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ