ಕೊಪ್ಪಳ: ವಿಶಿಷ್ಟ ಕಲಾಕೃತಿಗಳ ಮೂಲಕ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಪಾರಂಪರಿಕ ಕಿನ್ನಾಳ ಕಲೆ ಈಗ ಅಂಚೆ ಕಚೇರಿಯ ಲಕೋಟೆಗಳಲ್ಲಿ ಮುದ್ರಿತವಾಗಿದೆ. ಮುದ್ರಿತವಾದ ಲಕೋಟೆಯನ್ನು ಸಂಸದ ಸಂಗಣ್ಣ ಕರಡಿ ಶಾಸಕ ಪರಣ್ಣ ಮುನವಳ್ಳಿ ಅಂಚೆ ಇಲಾಖೆ ಸಿಬ್ಬಂದಿ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಕಿನ್ನಾಳ ಕಲೆ ತನ್ನ ಹಿರಿಮೆ ಗರಿಮೆಗಳನ್ನು ಮತ್ತಷ್ಟು ಪಸರಿಸಲಿದೆ.
ವಿಜಯನಗರ ಸಾಮ್ರಾಜ್ಯ ಕಾಲದ ಪಾರಂಪರಿಕ ಕಲೆಯಾಗಿರುವ ಕಿನ್ನಾಳ ಕಲೆ ಅತ್ಯಂತ ಪ್ರಸಿದ್ಧಿ ಪಡೆದಿಕೊಂಡಿರುವ ಕಲೆಯಾಗಿದೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಚಿತ್ರಗಾರ ಕುಟುಂಬಗಳು ಈ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿವೆ. 2013 ಜನವರಿ 26 ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕರ್ನಾಟಕದಿಂದ ಕಿನ್ನಾಳ ಕಲೆ ಸ್ತಬ್ಧ ಚಿತ್ರದ ಮೂಲಕ ಗಮನ ಸೆಳೆದಿತ್ತು.
ಗ್ರಾಮ ದೇವತೆಗಳ ಮೂರ್ತಿಗಳು, ಬಣ್ಣದ ಗೌರಿ, ಜಯವಿಜಯ, ಗೊಂಬೆಗಳು, ಹಣ್ಣಿನ ಬುಟ್ಟಿ, ವಾಲ್ಪ್ಲೇಟ್ಗಳು ಸೇರಿದಂತೆ ಮನಸೂರೆಗೊಳ್ಳುವ ಕಲಾಕೃತಿಗಳನ್ನು ಕಿನ್ನಾಳ ಕಲೆಯ ಕಲಾವಿದರು ತಯಾರಿಸುತ್ತಾರೆ. ವಿಶಿಷ್ಟ ಬಣ್ಣದ ಮೂಲಕ ಈ ಕಲಾಕೃತಿಗಳು ತಮ್ಮ ಹಿರಿಮೆ ಗರಿಮೆಯನ್ನು ಸಾರುತ್ತವೆ. ಇಂತಹ ಕಿನ್ನಾಳ ಕಲೆಯನ್ನು ಭಾರತ ಸರ್ಕಾರ ಅಂಚೆ ಇಲಾಖೆಯು ಮತ್ತಷ್ಟು ಪ್ರಚುರಪಡಿಸಲು ಮುಂದಾಗಿದೆ.
ದೇಶದ ವಿವಿಧ ಸುಮಾರು 250 ಭೌಗೋಳಿಕ ಪ್ರದೇಶಗಳ ವಿಶೇಷತೆಯನ್ನು ಅಂಚೆ ಲಕೋಟೆಗಳಲ್ಲಿ ಮುದ್ರಿಸಿ ಬಿಡುಗಡೆ ಮಾಡಲಿದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಕಿನ್ನಾಳ ಕಲೆಯೂ ಒಂದು. ಕಿನ್ನಾಳ ಕಲೆಯ ಸೌಂದರ್ಯ ಇನ್ಮುಂದೆ ಅಂಚೆ ಲಕೋಟೆಗಳ ಮೇಲೆ ರಾರಾಜಿಸಲಿದೆ. ಕಿನ್ನಾಳ ಕಲೆಯ ಮೂಲಕ ರಾರಾಜಿಸಲಿರುವ ಅಂಚೆ ಲಕೋಟೆಗಳು ಇಂದು ಕಿನ್ನಾಳದಲ್ಲಿಯೇ ಬಿಡುಗಡೆಯಾಗಲಿವೆ.
ಪಾರಂಪರಿಕ ಐತಿಹಾಸಿಕ ಕಿನ್ನಾಳ ಕಲೆಯು ಅಂಚೆ ಲಕೋಟೆಯ ಮೇಲೆ ಮುದ್ರಿಸಿ ಪ್ರಚುರಪಡಿಸಲು ಮುಂದಾಗಿರುವ ಸರ್ಕಾರ ಹಾಗೂ ಅಂಚೆ ಇಲಾಖೆಯ ಈ ಕಾರ್ಯಕ್ಕೆ ಕಿನ್ನಾಳ ಕಲೆಯ ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ. ವಿಶಿಷ್ಟ ಕಲೆಯಾಗಿರುವ ಕಿನ್ನಾಳ ಕಲೆಯ ಕಲಾಕೃತಿಗಳನ್ನು ಇನ್ನು ಹೆಚ್ಚು ಹೆಚ್ಚು ಪಸರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಿನ್ನಾಳ ಕಲೆಯ ಕಲಾವಿದರು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ವಿಶ್ವಪ್ರಸಿದ್ಧಿ ಪಡೆದುಕೊಂಡಿರುವ ಕಿನ್ನಾಳ ಕಲೆಯನ್ನು ಮತ್ತಷ್ಟು ಪಸರಿಸಲು ಅಂಚೆ ಲಕೋಟೆಗಳಲ್ಲಿ ಮುದ್ರಿಸುತ್ತಿರುವುದು ಉತ್ತಮ ವೇದಿಕೆ ಸಿಕ್ಕಂತಾಗಿದೆ.
ಕಿನ್ನಾಳ ಕಲೆಯು ಈಗಲೂ ಜೀವಂತಿಕೆ ಹೊಂದಿದ್ದು, ಇಲ್ಲಿನ ಕಲಾವಿದರ ಕಲೆಗಳು ಸಾಕಷ್ಟು ಜನರನ್ನು ಆಕರ್ಷಿಸುತ್ತಿವೆ. ಇತ್ತೀಚಿಗೆ ಕಾರ್ಯಕ್ರಮಗಳಲ್ಲಿ ಕಿನ್ನಾಳ ಚೌಕಿಗಳು ಕಾಣಿಕೆಯಾಗಿ ಸಲ್ಲಿಕೆಯಾಗುತ್ತಿವೆ. ದೇವರ ಮೂರ್ತಿಗಳು ಸಹ ತಯಾರಿಸುತ್ತಿದ್ದಾರೆ. ಹಳೆಯ ಮೂರ್ತಿಗಳಿಗೆ ಬಣ್ಣ ಹಚ್ಚಿ ಹೊಳಪು ಮೂಡಿಸುತ್ತಿವೆ, ಈಗ ಅಂಚೆ ಇಲಾಖೆಯು ಕಿನ್ನಾಳ ಕಲೆಗೆ ಮನ್ನಣೆ ನೀಡಿದ್ದು, ಸಾಂಪ್ರದಾಯಿಕ ಕಲೆಯ ಮುಂದುವರಿಸಿಕೊಂಡು ಹೋಗಲು ಸಹಕಾರಿಯಾಗಲಿದೆ ಎಂದು ಕಲಾವಿದರಾದ ಶ್ರೀನಿವಾಸ ಚಿತ್ರಗಾರ ಹೇಳಿದ್ದಾರೆ.
ಅಂಚೆ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಅಂಚೆ ಲಕೋಟೆ ಬಿಡುಗಡೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಂಪರ್ಕ ಇಲಾಖೆಯು ಸ್ಥಳೀಯ ಅಂಚೆ ಇಲಾಖೆಯ ಸಹಕಾರದಿಂದ ಕಿನ್ನಾಳ ಗೊಂಬೆಗಳ ಕಲೆಗೆ ರಾಷ್ಟ್ರ ಗೌರವ ಸಿಗುತ್ತಿರುವುದು ಹೆಮ್ಮೆಯ ವಿಷಯ ಎಂದು ಗದಗ ಅಂಚೆ ವಿಭಾಗದ ಸುಪರಿಟಿಡೆಂಟ್ ಚಿದಾನಂದಪ್ಪ ಹೇಳಿದ್ದಾರೆ.
ವರದಿ: ಶಿವಕುಮಾರ್ ಪತ್ತಾರ್
ಇದನ್ನೂ ಓದಿ:
120ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಕಾಪು ಲೈಟ್ ಹೌಸ್ಗೆ ಅಂಚೆ ಇಲಾಖೆಯಿಂದ ಗೌರವ
ಹಿಮ್ಸ್ಗೆ ಮತ್ತೊಂದು ಹಿರಿಮೆ; ಆಯುಷ್ಮಾನ್ನಲ್ಲಿ ಗುರಿ ಸಾಧನೆಯ ಗರಿಮೆ!