ಕೊಪ್ಪಳ, ನವೆಂಬರ್ 27: ಕೊಪ್ಪಳ ಜಿಲ್ಲಾ ಆಸ್ಪತ್ರೆ (Koppal District Hospital) ಇಡೀ ಜಿಲ್ಲೆಗೆ ಅತ್ಯಂತ ದೊಡ್ಡ ಆಸ್ಪತ್ರೆ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿದೆ. ಆದರೆ ಆ ಆಸ್ಪತ್ರೆಗೆ ಹೋಗಿ ದಾಖಲಾಗಲು ರೋಗಿಗಳು ಪರದಾಡಬೇಕಾಗಿದೆ. ನಡೆದುಕೊಂಡು ಹೋಗಲು ಆಗದೇ ಇರೋ ರೋಗಿಗಳು ವೈದ್ಯರ ಬಳಿ ಹೋಗಲು ವೀಲ್ ಚೇರ್, ಸ್ಟ್ರೆಚರ್ಗಾಗಿ (wheel chair or stretcher) ಗಂಟೆಗಟ್ಟಲೆ ಕಾಯಬೇಕಾಗಿದೆ. ವೀಲ್ ಚೇರ್ ಬೇಕಾದ್ರೆ ಕಾಯಬೇಕು. ಇಲ್ಲವೇ ನಾಲ್ಕೈದು ಜನ ಹೊತ್ತುಕೊಂಡು ಹೋಗಬೇಕಾಗಿದೆ. ಇನ್ನೊಂದಡೆ ಆಸ್ಪತ್ರೆ ಹೊರಗಡೆ ರೋಗಿಗಳು ನರಳಾಡುತ್ತಿದ್ದರೂ ಕೂಡಾ ಆಸ್ಪತ್ರೆಯ ಸಿಬ್ಬಂದಿ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಿನ ಜನರು, ಚಿಕಿತ್ಸೆಗಾಗಿ ಇದೇ ಆಸ್ಪತ್ರೆಗೆ ಬರ್ತಾರೆ. ಆದರೆ ತುರ್ತ ಚಿಕಿತ್ಸೆಗೆ ಬರೋರಿಗೆ ಈ ಆಸ್ಪತ್ರೆ ವರದಾನವಾಗೋ ಬದಲು ನರಕಯಾತನೆ ನೀಡುತ್ತಿದೆ. ಯಾಕಂದ್ರೆ ನೂರಾರು ಕಿಲೋ ಮೀಟರ ದೂರದಿಂದ, ಜನರು ರೋಗಿಗಳನ್ನು ಕರೆದಕೊಂಡು ಆಸ್ಪತ್ರೆಗೆ ಬಂದ್ರು ಕೂಡಾ, ಆಸ್ಪತ್ರೆಯ ಹೊರಗಡೆಯಿಂದ ವೈದ್ಯರ ಬಳಿ ಕರೆದುಕೊಂಡು ಹೋಗಲು ರೋಗಿಗಳ ಕುಟುಂಬದವರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅನೇಕರು ನಡೆದುಕೊಂಡು ಹೋಗ್ತಾರೆ. ವಯೋವೃದ್ದರಿಗೆ, ಅನೇಕ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನಡೆದುಕೊಂಡು ಹೋಗಲು ಆಗೋದಿಲ್ಲ. ಅವರಿಗಾಗಿಯೇ ವೀಲ್ ಚೇರ್ ಮತ್ತು ಸ್ಟ್ರೆಚರ್ ವ್ಯವಸ್ಥೆಯನ್ನು ಪ್ರತಿಯೊಂದು ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ. ಆದರೆ ನಡೆದುಕೊಂಡು ಹೋಗಲು ಆಗದೇ ಇರೋ ರೋಗಿಗಳು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ವೀಲ್ ಚೇರ್, ಸ್ಟ್ರೆಚರ್ಗಳಿಗಾಗಿ ಗಂಟೆಗಂಟೆಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಹೋಸಕೇರಾ ಗ್ರಾಮದಿಂದ ಮುದಕಪ್ಪ ಎಂಬವರು ಕೈ ಮತ್ತು ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಹೀಗಾಗಿ ಕುಟುಂಬದವರು ಟಂಟಂನಲ್ಲಿ ಮುದಕಪ್ಪ ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆಯೊಳಗೆ ಕರೆದುಕೊಂಡು ಹೋಗಲು ವೀಲ್ ಚೇರ್, ಸ್ಟ್ರೆಚರ್ಗಾಗಿ ಕುಟುಂಬದವರು ಸರಿಸುಮಾರು ಮುಕ್ಕಾಲು ಗಂಟೆ ಹುಡುಕಾಟ ನಡೆಸಿದ್ದಾರೆ. ಒಂದಡೆ ಮುದಕಪ್ಪಾ ಆಟೋದಲ್ಲಿ ನೋವಿನಿಂದ ನರಳುತ್ತಿದ್ದರೆ, ಅವರನ್ನು ದಾಖಲಿಸಲು ಕುಟುಂಬ ಪರದಾಡಿತು. ಒಂದು ಗಂಟೆ ನಂತರ ಕುಟುಂಬಕ್ಕೆ ವೀಲ್ ಚೇರ್ ಸಿಕ್ಕಿದ್ದು, ನಂತರ ರೋಗಿಯನ್ನು ಕುಟುಂಬದವರು ಚಿಕಿತ್ಸೆಗಾಗಿ ಆಸ್ಪತ್ರೆಯೊಳಗೆ ಕರೆದುಕೊಂಡು ಹೋದರು.
ಕೊಪ್ಪಳ ಜಿಲ್ಲಾ ಆಸ್ಪತ್ರೆ, ಕೊಪ್ಪಳ ಮೆಡಿಕಲ್ ಕಾಲೇಜು ಅಧೀನದಲ್ಲಿದೆ. ಈ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ರೋಗಿಗಳು ಬರುತ್ತಾರೆ. ಆದರೆ, ರೋಗಿಗಳಿಗೆ ವೀಲ್ ಚೇರ್, ಸ್ಟ್ರೇಚರ್ಗಳೇ ಸಿಗ್ತಿಲ್ಲ. ಹೀಗಾಗಿ ಕೆಲವರು ರೋಗಿಗಳನ್ನು ತಾವೇ ಹೊತ್ತುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲಿಸುತ್ತಿದ್ದಾರೆ. ಹೊತ್ತುಕೊಂಡು ಹೋಗಲಿಕ್ಕಾಗದೇ ಇದ್ದರೆ, ಗಂಟೆಗಟ್ಟಲೆ ಅನಿವಾರ್ಯವಾಗಿ ಕಾಯಬೇಕು. ಇಡೀ ಆಸ್ಪತ್ರೆ ಓಡಾಡಿದ್ರು ಕೂಡಾ ಒಮೊಮ್ಮೆ ಒಂದು ವೀಲ್ ಚೇರ್ ಕೂಡಾ ಸಿಗೋದಿಲ್ಲ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ಹೇಳಿದ್ರೆ, ವೀಲ್ ಚೇರ್ ಬರೋವರೆಗೆ ಕಾಯಿರಿ ಎಂದು ಹೇಳುತ್ತಾರೆ.
ಇದನ್ನೂ ಓದಿ: ಕೊಪ್ಪಳ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಭ್ರೂಣ ಪತ್ತೆ! ಡಿಹೆಚ್ಒ ವಿರುದ್ಧ ಸಚಿವ ತಂಗಡಗಿ ಗರಂ
ಮುಂಜಾನೆ ಹನ್ನೊಂದು ಗಂಟೆಗೆ ಜಿಲ್ಲಾ ಆಸ್ಪತ್ರೆಗೆ ಬಂದಿದ್ದೇವೆ. ವೀಲ್ ಚೇರ್ ಕೇಳಿದ್ರೆ ನಾಲ್ಕು ವೀಲ್ ಚೇರ್ ಇವೆ. ಬೇರೆ ರೋಗಿಗಳನ್ನು ಕೆರದುಕೊಂಡು ಹೋಗಿದ್ದಾರೆ. ಖಾಲಿಯಾಗೋವರಗೆ ಕಾಯಿರಿ ಅಂತ ಸಿಬ್ಬಂದಿ ಹೇಳ್ತಾರೆ. ಇಡೀ ಆಸ್ಪತ್ರೆ ಹುಡುಕಾಡಿದ್ರು ಕೂಡಾ ವೀಲ್ ಚೇರ್ ಸಿಗಲಿಲ್ಲಾ. ಮುಕ್ಕಾಲು ಗಂಟೆ ನಂತರ ವೀಲ್ ಚೇರ್ ಸಿಕ್ಕಿದೆ. ತುರ್ತ ಚಿಕಿತ್ಸೆ ಬೇಕಾದ್ರೆ ಆಸ್ರತ್ರೆಗೆ ದಾಖಲಾಗೋ ಮೊದಲೇ ರೋಗಿ ಸಾಯುತ್ತಾನೆ. ಜಿಲ್ಲಾ ಆಸ್ಪತ್ರೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಿದ್ದಾರೆ ಸೋಮವಾರ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಬಂದಿದ್ದ ಚನ್ನಬಸು ಅನ್ನೋರು.
ವೀಲ್ ಚೇರ್, ಸ್ಟ್ರೆಚರ್ ಸಮಸ್ಯೆಯಿತ್ತು. ಅದನ್ನು ಬಗೆಹರಿಸುವ ಕೆಲಸ ನಡೆಯುತ್ತಿದೆ. ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಮೂರು ಜಿಲ್ಲೆಯಿಂದ ಸಾಕಷ್ಟು ರೋಗಿಗಳು ಬರ್ತಾರೆ. ಹೀಗಾಗಿ ಒಮ್ಮೊಮ್ಮೆ ವೀಲ್ ಚೇರ್ ಸಮಸ್ಯೆ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಕೊಪ್ಪಳ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ವಿಜಯನಾಥ್ ಇಟಗಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:03 pm, Mon, 27 November 23