ಕೊಪ್ಪಳ, ಏಪ್ರಿಲ್ 24: ಗಂಗಾವತಿಯ ಶ್ರೀರಾಮನಗರದಲ್ಲಿ ಜೈ ಶ್ರೀರಾಮ್ (Jai Sri Ram) ಘೋಷಣೆ ಕೂಗಿದ ವ್ಯಕ್ತಿ ಮೇಲೆ ಸುಮಾರು 20 ಮಂದಿ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಗಂಗಾವತಿ ಪಟ್ಟಣದಲ್ಲಿ ಎಸ್ಪಿ ಯಶೋಧಾ ವಂಟಗೋಡಿ ಪ್ರತಿಕ್ರಿಯಿಸಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆಯಾಗಿದೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳುತ್ತಿದ್ದಾನೆ. ಆದರೆ, ಈ ಬಗ್ಗೆ ಇನ್ನೂ ದೂರು ದಾಖಲಾಗಿಲ್ಲ. ಅವರು ಏನು ದೂರು ಕೊಡುತ್ತಾರೆಯೋ ಆ ದೂರನ್ನು ಸ್ವೀಕರಿಸುತ್ತೇವೆ. ಘಟನೆ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಸದ್ಯದ ತನಿಖೆಯಲ್ಲಿ, ಜೈ ಶ್ರೀರಾಮ್ ಘೋಷಣೆ ಕೂಗಿದ್ದ ಕಾರಣಕ್ಕೇ ಹಲ್ಲೆ ನಡೆದಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿಯ ಹೇಳಿಕೆಯನ್ನು ನಾವು ಅಲ್ಲಗಳೆಯುತ್ತಿಲ್ಲ. ಬಾರ್ ಸಿಸಿಟಿವಿ ಪರಿಶೀಲನೆ ಮಾಡಿದ್ದೇವೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ನಂತರವೇ ಸತ್ಯಾಸತ್ಯತೆ ಗೊತ್ತಾಗಲಿದೆ. ಹಲ್ಲೆ ಮಾಡಿದವರು, ಹಲ್ಲೆಗೊಳಗಾದ ವ್ಯಕ್ತಿ ಪರಿಚಿತರೇ ಆಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎಸ್ಪಿ ನೀಡಿರುವ ಈ ಹೇಳಿಕೆ ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಘಟನೆ ಸಂಬಂಧ ಈವರೆಗೂ ದೂರು ದಾಖಲಾಗಿಲ್ಲ. ಆದಾಗ್ಯೂ ಘೋಷಣೆ ಕೂಗಿದ್ದಕ್ಕೇ ಹಲ್ಲೆ ನಡೆದಿದೆ ಎಂದು ಹೇಳಲಾಗದು ಎಂದು ಅವರು ಹೇಳಿದ್ದಾರೆ.
ಹಲ್ಲೆಗೊಳಗಾಗಿ ಗಾಯಗೊಂಡಿರುವ ಕುಮಾರ್ ರಾಠೋಡ್ಎಂಬವರನ್ನು ಸದ್ಯ ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಕೊಪ್ಪಳ: ಗಂಗಾವತಿಯ ಶ್ರೀರಾಮನಗರದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ವ್ಯಕ್ತಿ ಮೇಲೆ ಹಲ್ಲೆ
ಶ್ರೀರಾಮನಗರದ ಸನ್ ಶೈನ್ ಬಾರ್ನಲ್ಲಿ ಮಂಗಳವಾರ ರಾತ್ರಿ ಘಟನೆ ಸಂಭವಿಸಿದೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಕುಮಾರ್ ರಾಠೋಡ್ಗೆ ಮದ್ಯಪಾನದ ಚಟವಿದೆ. ಬಾರ್ನಲ್ಲಿ ಗ್ಲಾಸಿಗೆ ನೀರು ಸುರಿಯುವ ಸಂದರ್ಭ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ. ಹನುಮ ಜಯಂತಿ ಇರುವ ಕಾರಣ ಆತ ಘೋಷಣೆ ಕೂಗಿದ್ದಾನೆ. ಈ ವೇಳೆ ಅಲ್ಲಿದ್ದ ಮುಸ್ಲಿಂ ಯುವಕನೊಬ್ಬ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ವೇಳೆ ಅವರಿಬ್ಬರ ನಡುವೆ ಜಗಳವಾಗಿದೆ. ಕೆಲವು ನಿಮಿಷಗಳ ನಂತರ ಬಾರ್ನಿಂದ ಹೊರಬಂದಾಗ ಅವರ ಸಮುದಾಯದ 20ರಿಂದ 30 ಮಂದಿ ಅಲ್ಲಿಗೆ ಬಂದು ಕುಮಾರ್ ರಾಠೋಡ್ ಮೇಲೆ ಹಲ್ಲೆ ಮಾಡಿದ್ದಾರೆ. ಜತೆಗೆ ಆತನ ಬಂಜಾರ ಸಮುದಾಯದ ಕುರಿತಾಗಿ ಜಾತಿ ನಿಂದನೆಯನ್ನೂ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ರಾತ್ರಿಯೇ ಭೇಟಿ ನೀಡಿದ್ದ ಗಂಗಾವತಿ ಗ್ರಾಮೀಣ ಪೊಲೀಸರು ಪರೀಶಿಲನೆ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ