ಏಳು ತಿಂಗಳ ನಂತರ ತುಂಗಭದ್ರಾ ಡ್ಯಾಮ್​ಗೆ ಒಳ ಹರಿವು ಆರಂಭ; ಹೆಚ್ಚಿದ ರೈತರ ಸಂತಸ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 05, 2024 | 6:34 PM

ಆ ಡ್ಯಾಮ್ ತುಂಬಿದರೆ ಮೂರು ರಾಜ್ಯದ ಹತ್ತು ಜಿಲ್ಲೆಗಳ ಜನರ ಸಂತಸ ಹೆಚ್ಚಾಗುತ್ತದೆ. ಆದ್ರೆ, ಕಳೆದ ವರ್ಷ ರಾಜ್ಯದಲ್ಲಿ ಭೀಕರ ಬರಗಾಲದಿಂದ ಡ್ಯಾಮ್ ಒಮ್ಮೆ ಕೂಡ ತುಂಬಲಿಲ್ಲ. ಹೀಗಾಗಿ ಬೇಸಿಗೆ ಸಮಯದಲ್ಲಿ ಎರಡನೇ ಬೆಳೆಗೆ ನೀರು ಸಿಗದೆ ರೈತರು ಪರದಾಡಿದ್ದರು. ಆದ್ರೆ, ಕಳೆದ ಏಳು ತಿಂಗಳಿಂದ ಸ್ಥಗಿತವಾಗಿದ್ದ ಜಲಾಶಯದ ಒಳಹರಿವು ಇದೀಗ ಮತ್ತೆ ಆರಂಭವಾಗಿದೆ. ಇದು ರೈತರ ಸಂತಸವನ್ನು ಹೆಚ್ಚಿಸುತ್ತಿದೆ.

ಏಳು ತಿಂಗಳ ನಂತರ ತುಂಗಭದ್ರಾ ಡ್ಯಾಮ್​ಗೆ ಒಳ ಹರಿವು ಆರಂಭ; ಹೆಚ್ಚಿದ ರೈತರ ಸಂತಸ
ತುಂಗಭದ್ರಾ ಡ್ಯಾಮ್​ಗೆ ಒಳ ಹರಿವು ಆರಂಭ
Follow us on

ಕೊಪ್ಪಳ, ಜೂ.05: ತಾಲೂಕಿನ ಮುನಿರಾಬಾದ್(Munirabad)​ನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಜಲಾಶಯ (Tungabhadra Dam) ನಿರ್ಮಾಣ ಮಾಡಲಾಗಿದೆ. 105 ಟಿಎಂಸಿ ನೀರು ಸಂಗ್ರಹ ಸಾಮರ್ಥವಿರುವ ಈ ಡ್ಯಾಮ್​ನ ನೀರಿನ ಮೇಲೆಯೇ, ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ,  ವಿಜಯನಗರ ಜಿಲ್ಲೆಗಳ ಜನರು ನಿಂತಿದ್ದಾರೆ. ನೆರೆಯ ತೆಲೆಂಗಾಣ, ಆಂಧ್ರ ಪ್ರದೇಶ ರಾಜ್ಯದ ಕೆಲ ಜಿಲ್ಲೆಯ ಜನರು ಇದೇ ನೀರಿನ ಮೇಲೆಯೇ ಅವಲಂಭಿತರಾಗಿದ್ದಾರೆ. ವರ್ಷದಲ್ಲಿ ಎರಡು ಬೆಳೆಗಳಿಗೆ ನೀರು ಬಿಡಬೇಕು ಮತ್ತು ಕುಡಿಯುವ ನೀರಿಗೆ ಅನಕೂಲವಾಗಲಿ ಎನ್ನುವ ಉದ್ದೇಶದಿಂದ ಜಲಾಶಯ ನಿರ್ಮಾಣ ಮಾಡಲಾಗಿತ್ತು. ಆದ್ರೆ, ಕೆಲ ವರ್ಷಗಳಲ್ಲಿ ನೂರಾರು ಟಿಎಂಸಿ ನೀರು ಹರಿದು ವ್ಯರ್ಥವಾಗಿ ಹೋಗಿದ್ರೆ, ಕಳೆದ ವರ್ಷ ಮಾತ್ರ ಭೀಕರ ಬರಗಾಲದಿಂದ ಡ್ಯಾಮ್ ನರಳಿತ್ತು.

ಏಳು ತಿಂಗಳ ನಂತರ ತುಂಗಭದ್ರಾ ಡ್ಯಾಮ್​ಗೆ ಒಳ ಹರಿವು ಆರಂಭ

ಕಳೆದ ವರ್ಷ ಡ್ಯಾಮ್ ಒಮ್ಮೆ ಕೂಡ ತುಂಬಿರಲಿಲ್ಲ. ಇದು ರೈತರ ಸಂಕಷ್ಟವನ್ನು ಹೆಚ್ಚಿಸಿತ್ತು. ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲದೇ ಇದ್ದಿದ್ದರಿಂದ, ಎರಡನೇ ಬೆಳೆಗೆ ನೀರನ್ನು ಕೂಡ ಬಿಟ್ಟಿರಲಿಲ್ಲ. ಇದರಿಂದ ರೈತರು ದೊಡ್ಡ ಮಟ್ಟದ ಸಂಕಷ್ಟ ಅನುಭವಿಸಿದ್ದರು. ಕುಡಿಯುವ ನೀರಿಗೂ ಕೂಡ ಸಂಕಷ್ಟ ಉಂಟಾಗಿತ್ತು. ಇನ್ನು ಕಳೆದ ಏಳು ತಿಂಗಳಿಂದ ಡ್ಯಾಮ್​ಗೆ ನೀರಿನ ಒಳಹರಿವೇ ಇರಲಿಲ್ಲ. ಇರುವ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ಆದ್ರೆ, ಇದೀಗ ಡ್ಯಾಮ್​ಗೆ ಒಳ ಹರಿವು ಆರಂಭವಾಗಿದೆ.

ಇದನ್ನೂ ಓದಿ:ತುಂಗಭದ್ರಾ ಜಲಾಶಯ ಖಾಲಿ ಖಾಲಿ; ಕಳೆದ 7 ತಿಂಗಳಿಂದ ಡ್ಯಾಂಗೆ ಬಾರದ ಒಳಹರಿವು

ಕಳೆದ ನಾಲ್ಕು ದಿನಗಳಿಂದ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಆರಂಭವಾಗಿದೆ. ಪ್ರತಿನಿತ್ಯ ನಾಲ್ಕುನೂರರಿಂದ ಐನೂರು ಕ್ಯೂಸೆಕ್ ನೀರು ಡ್ಯಾಮ್​ಗೆ ಹರಿದು ಬರ್ತಿದೆ. ಇಂದು ಡ್ಯಾಮ್​ಗೆ 495 ಕ್ಯೂಸೆಕ್ ಒಳಹರಿವು ಇದೆ. ಇನ್ನು 3.34 ಟಿಎಂಸಿಗೆ ಕುಸಿದಿದ್ದ ನೀರಿನ ಸಾಮರ್ಥ್ಯ, ಇದೀಗ ಒಳಹರಿವು ಆರಂಭವಾದಾಗಿನಿಂದ 3.49 ಟಿಎಂಸಿ ಗೆ ಹೆಚ್ಚಿದೆ. ಶಿವಮೊಗ್ಗ ಸೇರಿದಂತೆ ತುಂಗಭದ್ರಾ ನದಿ ಉಗಮದ ಸ್ಥಳದಲ್ಲಿ ಹೆಚ್ಚಿನ ಮಳೆಯಾದರೆ ಡ್ಯಾಂಗೆ ನೀರು ಬರುತ್ತದೆ. ಆದ್ರೆ, ನದಿ ಪಾತ್ರದಲ್ಲಿಯೇ ಮಳೆ ಕಡಿಮೆಯಾದ್ರೆ ಜಲಾಶಯಕ್ಕೆ ನೀರು ಬರುವುದು ಕಷ್ಟ.

ಹೆಚ್ಚಿದ ರೈತರ ಸಂತಸ

ಡ್ಯಾಮ್​ಗೆ ನೀರು ಬರುತ್ತಿರುವುದು ಜನರ ಸಂತಸ ಹೆಚ್ಚಿಸುತ್ತಿದೆ. ಆದ್ರೆ, ನದಿ ಪಾತ್ರದಲ್ಲಿ ಉತ್ತಮ ಮಳೆಯಾದ್ರೆ ಮಾತ್ರ ಡ್ಯಾಮ್ ತುಂಬಲಿದೆ. ಕಳೆದ ವರ್ಷ ಡ್ಯಾಮ್ ತುಂಬದೇ ಇದ್ದಿದ್ದರಿಂದ ಈಗಾಗಲೇ ಸಂಕಷ್ಟ ಅನುಭವಿಸಿರುವ ಜನರು, ಈ ಬಾರಿಯಾದರೂ ಕೂಡ ಜಲಾಶಯ ತುಂಬಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದ್ರೆ, ಜಲಾಶಯ ತುಂಬುವುದು ವರುಣದೇವನ ಕೃಪೆ ಮೇಲೆ ಅವಲಂಭಿತವಾಗಿದ್ದು, ಜನರು ವರುಣದೇವನಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ