ಯಾರು ನೀವು? ಎಲ್ಲಿಂದ ಬಂದವರು? ಕೊಪ್ಪಳ ಪೊಲೀಸರ ಪ್ರಶ್ನೆಗೆ ಉತ್ತರಿಸದೇ ಬ್ಯಾಗ್​ನಲ್ಲಿದ್ದ 17 ಲಕ್ಷ 50 ಸಾವಿರ ಬಿಟ್ಟು ನಾಪತ್ತೆಯಾದ ಅಪರಿಚಿತರು!

| Updated By: guruganesh bhat

Updated on: Aug 05, 2021 | 10:01 PM

ಆರು ಜನರ ತಂಡ ಬಂದಿದ್ದು ದಾವಣಗೆರೆ ಜಿಲ್ಲೆಯಿಂದ ಈಗಾಗಲೇ ಆರು ಜನರ ಮೂಲವನ್ನು ಪೊಲೀಸರು‌ ಕೆದಕಿದ್ದು ದಾವಣಗೆರೆ ಜಿಲ್ಲೆಯವರೆಂದು ಗೊತ್ತಾಗಿದೆ. ಎಲ್ಲೋ ಕಳ್ಳತನ ಮಾಡಿದ ಹಣ ಸಾಗುವಾಗ ಕೊಪ್ಪಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ನಕಲಿ ಬಂಗಾರ ನೀಡಿ ಹಣ ತಂದಿರೋ ಮಾಹಿತಿಯೂ ಇದೆ.

ಯಾರು ನೀವು? ಎಲ್ಲಿಂದ ಬಂದವರು? ಕೊಪ್ಪಳ ಪೊಲೀಸರ ಪ್ರಶ್ನೆಗೆ ಉತ್ತರಿಸದೇ  ಬ್ಯಾಗ್​ನಲ್ಲಿದ್ದ 17 ಲಕ್ಷ 50 ಸಾವಿರ ಬಿಟ್ಟು ನಾಪತ್ತೆಯಾದ ಅಪರಿಚಿತರು!
ಕೊಪ್ಪಳದಲ್ಲಿ ಅಪರಿಚಿತರಿಗಾಗಿ ಪೊಲೀಸರಿಂದ ಶೋಧ
Follow us on

ಕೊಪ್ಪಳ: ಅಲ್ಲಿ ಜಮೀನಿನ ತುಂಬಾ ಶ್ವಾನದಳ ಓಡಾಟ. ಸುತ್ತ ಪೊಲೀಸರು..ಆ ಊರಿನ ತುಂಬಾ ಭಯದ ವಾತಾವರಣ. ಖುದ್ದು ಎಸ್ ಪಿ.ಡಿ.ವೈ.ಎಸ್.ಪಿ ಅಲ್ಲಿ ಬೀಡು ಬಿಟ್ಟಿದ್ದರು. ಪೊಲೀಸರೆಲ್ಲ ಜಮೀನಿನಲ್ಲಿ ಬೀಡು ಬಿಟ್ಟಿದ್ದಕ್ಕೆ ಕಾರಣ, ಒಂದು ಬ್ಯಾಗ್! ಅರೇ, ಪೊಲೀಸರಿಗೂ ಬ್ಯಾಗ್​ಗೂ ಏನೂ ಸಂಬಂಧ ಅಂತೀರಾ ಈ ವರದಿ ಓದಿ.

ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ, ಸರ್ಕಲ್​ಗಳಲ್ಲಿ ಪೊಲೀಸರು ಬೈಕ್ ತಪಾಸಣೆ ಮಾಡುತ್ತಾರೆ. ದೊಡ್ಡ ದೊಡ್ಡ ಊರು, ಗಡಿ ಭಾಗಗಳಲ್ಲಿ ಪೊಲೀಸರು ಬೈಕ್ ತಪಾಸಣೆ ಮಾಡೋದು ಮಾಮೂಲಿ. ಕೊಪ್ಪಳ ತಾಲೂಕಿನ ಅಳವಂಡಿ ಬಳಿ ಬೈಕ್ ತಪಾಸಣೆಗೆಂದು ಪೊಲೀಸರು  (Koppal Police)ನಿಂತಿದ್ದರು. ಸಾಮಾನ್ಯವಾಗಿ‌ ಎಲ್ಲರೂ ಬೈಕ್ ಡಾಕ್ಯುಮೆಂಟ್ ತೋರಿಸಿ ಹೋಗುತ್ತಿದ್ದರು. ಕೆಲವರು ಡಾಕ್ಯುಮೆಂಟ್ ಸರಿ ಇರದವರು ದಂಡ ಕಟ್ಟಿ ಹೋಗ್ತಿದ್ದರು. ಅಳವಂಡಿ ಗಡಿ ಭಾಗದಲ್ಲಿ ಪೊಲೀಸರು ಇಂದು ಯಥಾರೀತಿ ತಪಾಸಣೆ ಮಾಡುವ ವೇಳೆ ಪೊಲೀಸರಿಗೆ ಕೆಲವರ ಮೇಲೆ ಅನುಮಾನ‌ ಬಂದಿತ್ತು. ಏಕೆಂದರೆ ಅವರೆಲ್ಲ ಅಲ್ಲಿ ದಿನಾ ಓಡಾಡೋರಲ್ಲ. ಆದರೂ ಎರಡು ಬೈಕ್ ಪೊಲೀಸರ ತಪಾಸಣೆ ನಡುವೆಯೂ ಪಾಸ್ ಆಗಿದ್ದವು. ಇನ್ನೊಂದು ಬೈಕ್ ಅದರಲ್ಲಿದ್ದ ಇಬ್ಬರು ವಾಹನ ಸವಾರರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಮೊದಲು ಪೊಲೀಸರು ಡಾಕ್ಯುಮೆಂಟ್ ತೋರಿಸಿ ಎಂದು ಕೇಳಿದ್ರು, ಡಾಕ್ಯುಮೆಂಟ್ ಸರಿ ಇರದಾಗ 200 ದಂಡವನ್ನೂ ಕಟ್ಟಿದ್ದಾರೆ. ಕೊನೆಗೆ ಅವರಿಬ್ಬರ ಬಳಿ ಇದ್ದ ಬ್ಯಾಗ್ ನೋಡಿ ಪೊಲೀಸರಿಗೆ ಅನುಮಾನ ಬಂದಿದೆ. ಅದನ್ನು ಕೇಳಿದಾಗ ಬೈಕ್, ಹಾಗೂ ಬ್ಯಾಗ್ ಬಿಟ್ಟು ವಾಹನ ಸವಾರರು ಪರಾರಿಯಾಗಿದ್ದಾರೆ. ಅಷ್ಟಕ್ಕೂ ಬ್ಯಾಗ್ನಲ್ಲಿ ಏನಿತ್ತು, ಬೈಕ್​ನಲ್ಲಿ ಬಂದವರು ಎಲ್ಲಿಯವರು? ಹಣ ಎಲ್ಲಿಗೆ ಹೋಗ್ತಿತ್ತು? ಈ‌ ಕುರಿತ ಕುತೂಹಲಕರ ಸುದ್ದಿಯನ್ನು ಟಿವಿ9 ಡಿಜಿಟಲ್  ನಿಮ್ಮ ಮುಂದಿಡಲಿದೆ.

ಬ್ಯಾಗ್​ನಲ್ಲಿರುವುದು 17 ಲಕ್ಷ 50 ಸಾವಿರ!
ಅಳವಂಡಿ ಗಡಿ ಭಾಗದಲ್ಲಿ ಸಿಕ್ಕ ಬ್ಯಾಗ್​ನಲ್ಲಿ 17 ಲಕ್ಷ 50 ಸಾವಿರ ಪತ್ತೆಯಾಗಿದೆ. ಬೈಕ್ ತಪಾಸಣೆ ವೇಳೆ ಪೊಲೀಸರಿಗೆ ಸಿಕ್ಕ ಬ್ಯಾಗ್​ನಲ್ಲಿ 17 ಲಕ್ಷ 50 ಸಾವಿರ ಹಣ ಸಿಕ್ಕಿತ್ತು. ಆದರೆ ವಾಹನ ಸವಾರರು ನಾಪತ್ತೆಯಾಗಿದ್ದರು. ಇದಕ್ಕಾಗಿ ಇಡೀ ಕೊಪ್ಪಳ ಪೊಲೀಸ್ ತಂಡ ಇವತ್ತು ಅಳವಂಡಿ ಗಡಿ ಭಾಗದಲ್ಲಿ ಬೀಡು ಬಿಟ್ಟಿತ್ತು. ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ಮಾಡಿದಾಗ ಬೈಕ್ ಸವಾರರು, ಬೈಕ್, ಬ್ಯಾಗ್ ಬಿಟ್ಟು ಜಮೀನಿನಲ್ಲಿ ನಾಪತ್ತೆಯಾಗಿದ್ದರು. ಪರಾರಿಯಾದವರನ್ನು ಹುಡುಕಲು ಸ್ವತಃ ಕೊಪ್ಪಳ ಎಸ್.ಪಿ.ಟಿ ಶ್ರೀಧರ್ ಅವರೇ ಫೀಲ್ಡಿಗಿಳಿದಿದ್ದರು.

ಸತತ ನಾಲ್ಕು ಗಂಟೆ ಕಾರ್ಯಾಚರಣೆ
ಅಳವಂಡಿ ಜಮೀನಿನಲ್ಲಿ ಇಬ್ಬರು ವಾಹನ ಸವಾರರು‌ ಬ್ಯಾಗ್ ಬಿಟ್ಟು ನಾಪತ್ತೆಯಾಗುತ್ತಲೇ ಕೊಪ್ಪಳ ಎಸ್.ಪಿ.ಟಿ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಜಮೀನಿನಲ್ಲಿ ಶ್ವಾನ ದಳದ ತಂಡದ ಸಮೇತ ಹುಡುಕಾಡಿದ್ರು. ಸತತ ನಾಲ್ಕು ಗಂಟೆಗಳ ಕಾಲ ಪೊಲೀಸ್ ಟೀಮ್ ಸರ್ಚ್ ಮಾಡಿದರೂ ವಾಹನ ಸವಾರರು ಸಿಗಲೇ ಇಲ್ಲ. ಅಸಲಿಗೆ ಇಬ್ಬರು ವಾಹನ ಸವಾರರು ಇಲ್ಲಿ ನಾಪತ್ತೆಯಾಗಿದ್ದು ಒಂದು ಕಡೆಯಾದರೆ, ಒಟ್ಟು ಆರು ಜ‌ನ ಮೂರು ಬೈಕ್​ನಲ್ಲಿ ಹಣ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ನಾಲ್ಕು ಜನ‌ ಮೊದಲೇ ಗದಗ ಕಡೆ ತೆರಳಿದ್ದಾರೆ. ಇಬ್ಬರು ಪೊಲೀಸರ ಅನುಮಾನ ಕಂಡು ಪರಾರಿಯಾಗಿದ್ದಾರೆ. 17 ಲಕ್ಷ 50 ಸಾವಿರ ಹಣ, ಬೈಕ್ ಹಾಗೂ ಮೊಬೈಲ್ ಬಿಟ್ಟು ಹೋದ ಅನುಮಾನಿತರನ್ನು ಹುಡುಕಲು‌ ಪೊಲೀಸರು ಪ್ರತಿಯೊಂದು ಜಮೀನನ್ನೂ ತಿರುಗಾಡಿದ್ದಾರೆ. ಆದರೆ, ಪೊಲೀಸರಿಗೆ ಅವರು ಸಿಗಲೇ ಇಲ್ಲ.

ಆರು ಜನ ಬಂದಿದ್ದು ಎಲ್ಲಿಂದ?
ಆರು ಜನರ ತಂಡ ಬಂದಿದ್ದು ದಾವಣಗೆರೆ ಜಿಲ್ಲೆಯಿಂದ ಈಗಾಗಲೇ ಆರು ಜನರ ಮೂಲವನ್ನು ಪೊಲೀಸರು‌ ಕೆದಕಿದ್ದು ದಾವಣಗೆರೆ ಜಿಲ್ಲೆಯವರೆಂದು ಗೊತ್ತಾಗಿದೆ. ಎಲ್ಲೋ ಕಳ್ಳತನ ಮಾಡಿದ ಹಣ ಸಾಗುವಾಗ ಕೊಪ್ಪಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ನಕಲಿ ಬಂಗಾರ ನೀಡಿ ಹಣ ತಂದಿರೋ ಮಾಹಿತಿಯೂ ಇದೆ. ಆರು ಜನರ ತಂಡ ಅದ್ಯಾರಿಗೋ ವಂಚನೆ ಮಾಡಿ ಹಣ ಸಾಗಿಸುತ್ತಿದ್ದರು ಅನ್ನೋದು ಪೊಲೀಸರ ಮಾತು. ಈಗಾಗಲೇ ಕೊಪ್ಪಳ ಪೊಲೀಸರು ವಿಶೇಷ ತಂಡ ರಚನೆ ಮಾಡಿ ಆರು ಜನರ ಹುಡುಕಾಟಕ್ಕೆ ಇಳಿದಿದ್ದಾರೆ. ಎಲ್ಲಿಯ ದಾವಣಗೆರೆ ಎಲ್ಲಿಯ ಅಳವಂಡಿ? ಅವರು ಬಂದಿದ್ಯಾಕೆ ಎಂಬುದು ಪೊಲೀಸರ ತನಿಖೆಯ ನಂತರವೇ ಬಯಲಾಗಲಿದೆ. ಆದರೆ ಪ್ರಾಥಮಿಕ ಮಾಹಿತಿಗಳ ಪ್ರಕಾರ ಅದು‌ ಕಳ್ಳತನ ಮಾಡಿದ ಹಣವೇ ಎನ್ನಲಾಗಿದೆ. ಇನ್ನೊಂದು ಮಾಹಿತಿ ಪ್ರಕಾರ ಅಂದರ್ ಬಾಹರ್ ಆಡಲು ಹೊರಟವರು ಪೊಲೀಸರ ಕೈಗೆ ಸಿಕ್ಕ ತಕ್ಷಣ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಒಟ್ಟನಲ್ಲಿ ಅಳವಂಡಿ ಭಾಗದಲ್ಲಿ ಇಂದು ಪೊಲೀಸರ ತಲಾಶೆ ಕಂಡು ಜನ ಭಯಗೊಂಡಿದ್ದಂತೂ ಸತ್ಯ.

ಈ ಕುರಿತು ಟಿವಿ09 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯಿಸಿರುವ ಕೊಪ್ಪಳ ಎಸ್ಪಿ ಟಿ. ಶ್ರೀಧರ್, ‘ಪೊಲೀಸರು ವಾಹನ ತಪಾಸಣೆ ಮಾಡೋವಾಗ ಅನುಮಾನ ಬಂದು ವಿಚಾರಣೆ ಮಾಡುವ ವೇಳೆ ಇಬ್ಬರು ಬೈಕ್ ಹಾಗೂ ಬ್ಯಾಗ್ ಬಿಟ್ಟು‌ನಾಪತ್ತೆಯಾಗಿದ್ದಾರೆ. ನಮ್ಮ ಪೊಲೀಸರು ಶ್ವಾನದಳದ ತಂಡದೊಂದಿಗೆ ನಾಲ್ಕು ಗಂಟೆ ಹುಡಕಾಡಿದರೂ, ಬೈಕ್ ಸವಾರರು ಸಿಕ್ಕಿಲ್ಲ. ಸದ್ಯ ಬ್ಯಾಗ್ ನಲ್ಲಿ 17 ಲಕ್ಷ 50 ಸಾವಿರ ಹಣ,ಮೊಬೈಲ್ ಸಿಕ್ಕಿವೆ. ಬೈಕ್ ನಂಬರ್ ಮೂಲಕ ಅವರೆಲ್ಲ ದಾವಣಗೇರೆ ಮೂಲದವರು ಅನ್ನೋದು ಗೊತ್ತಾಗಿದೆ. ಹಣ ಹೇಗೆ ಬಂತು,ಎಲ್ಲಿಂದ ಬಂತು ಅನ್ನೋದು ತನಿಖೆಯ ನಂತರವೇ ಬಯಲಾಗಲಿದೆ’ ಎಂದಿದ್ದಾರೆ.

ವಿಶೇಷ ವರದಿ: ಶಿವಕುಮಾರ್ ಪತ್ತಾರ್

ಇದನ್ನೂ ಓದಿ: 

Nothing Is Impossible: ಯಾವುದೂ ಅಸಾಧ್ಯವಲ್ಲ; ಕೊಪ್ಪಳದ ಈ ಹುಡುಗ ಲಾಕ್​ಡೌನ್​ನಲ್ಲಿ ಕಾಲು, ಬಾಯಿಂದಲೂ ಚಿತ್ರ ಬಿಡಿಸುವುದು ಕಲಿತ! 

Arvind Bellad: ನಾಳೆ ಧಾರವಾಡ ಬಂದ್ ಇಲ್ಲ; ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ದೊರೆಯದ್ದಕ್ಕೆ ಬಂದ್ ಎಂದು ವೈರಲ್ ಆದದ್ದು ಸುಳ್ಳುಸುದ್ದಿ

(Koppal police searches for unknown people who ran away leaving 17 lakhs 50 thousand in bag without answering police question)

Published On - 9:21 pm, Thu, 5 August 21