ಕೊಪ್ಪಳ: ಹೋಮ್ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಹಿಗ್ಗಾ ಮುಗ್ಗಾ ಥಳಿತ: ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಮಾನವೀಯ ಕೃತ್ಯ
ನಿವೃತ್ತಿ ದಿನವೇ ಮೈಸೂರು ವಿವಿ ನೌಕರ ಕೊಲೆಯಾಗಿರುವಂತಹ ಘಟನೆ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ನಡೆದಿದೆ. ಕನಕಗಿರಿ ನಿವಾಸಿ ಕೃಷ್ಣೇಗೌಡ (60) ಮೃತ ದುರ್ದೈವಿ.
ಕೊಪ್ಪಳ: ಹೋಮ್ ವರ್ಕ್ (homework) ಮಾಡಿಲ್ಲ ಅನ್ನೋ ಕಾರಣಕ್ಕೆ ಮುಖ ಮೂತಿ ನೋಡದೆ ಬಾಲಕನನ್ನ ಶಿಕ್ಷಕ ಹಿಗ್ಗಾ ಮುಗ್ಗಾ ಥಳಿಸಿರುವಂತಹ ಅಮಾನವೀಯ ಕೃತ್ಯ ನಗರದ ಧನ್ವಂತರಿ ಕಾಲೋನಿಯಲ್ಲಿರೋ ಲೋಹಿತ್ ಟುಟೋರಿಯಲ್ಸ್ನಲ್ಲಿ ನಡೆದಿದೆ. ಶಿಕ್ಷಕ ನವೋದಯ, ಸೈನಿಕ್ ಶಾಲೆಯ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದು, 10 ವರ್ಷದ ಬಾಲಕ ಪ್ರಥಮ್ಗೆ ಶಿಕ್ಷಕ ಲೋಹಿತ್ ಮೈ ಮೇಲೆ ಬರೆ ಬರೋ ಹಾಗೆ ಥಳಿಸಿದ್ದಾನೆ. ಕಿವಿಯಲ್ಲಿ ರಕ್ತ ಬರೋ ಹಾಗೆ 10 ವರ್ಷದ ಪ್ರಥಮ್ನನ್ನು ಥಳಿಸಿದ್ದು, ಶಿಕ್ಷಕನ ಅಮಾನವೀಯ ವರ್ತನೆಗೆ ವಿದ್ಯಾರ್ಥಿ ಸಂಕಷ್ಟ ಅನುಭವಿಸುತ್ತಿದ್ದಾನೆ. ಪ್ರಥಮ್ ಮೈಮೇಲೆಲ್ಲಾ ಗಾಯಗಳಾಗಿದ್ದು, ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಶಿಕ್ಷಕನ ವರ್ತನೆಗೆ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿವೃತ್ತಿ ದಿನವೇ ಮೈಸೂರು ವಿವಿ ನೌಕರ ಕೊಲೆ
ಮೈಸೂರು: ನಿವೃತ್ತಿ ದಿನವೇ ಮೈಸೂರು ವಿವಿ ನೌಕರ ಕೊಲೆಯಾಗಿರುವಂತಹ ಘಟನೆ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ನಡೆದಿದೆ. ಕನಕಗಿರಿ ನಿವಾಸಿ ಕೃಷ್ಣೇಗೌಡ (60) ಮೃತ ದುರ್ದೈವಿ. ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದು, ಬೆಳಗ್ಗೆ ಭೂತಾಳೆ ಮೈದಾನದಲ್ಲಿ ಕೃಷ್ಣೇಗೌಡ ಶವ ಪತ್ತೆಯಾಗಿದೆ. ರಕ್ತದ ಮಡುವಿನಲ್ಲಿ ಮೃತದೇಹ ಸಿಕ್ಕಿದ್ದು, ಮಧ್ಯರಾತ್ರಿ ವೇಳೆ ಚಾಕು ಇರಿದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕೃಷ್ಣೇಗೌಡರನ್ನು ಖಾಸಗಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮನೆ ಬೀಗ ಮುರಿದು ಕಳ್ಳತನ
ಕಲಬುರಗಿ: ನಗರದ ಬಿಲಾಲಬಾದ್ ಕಾಲೋನಿಯಲ್ಲಿ ಮನೆ ಬೀಗ ಮುರಿದು ಕಳ್ಳತನವಾಗಿದ್ದು, 60 ಗ್ರಾಮ್ ಚಿನ್ನ, 20 ಗ್ರಾಮ್ ಬೆಳ್ಳಿ, 3 ಲಕ್ಷ ರೂಪಾಯಿ ನಗದು ದೋಚಿ ಕಳ್ಳ ಪರಾರಿಯಾಗಿರುವಂತಹ ಘಟನೆ ನಡೆದಿದೆ. ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮನೆ ಮುಂದಿನ ರಸ್ತೆಯಲ್ಲಿ ಇಬ್ಬರು ಕಳ್ಳರ ಚಲನವಲನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಓರ್ವ ಕಳ್ಳ ಮಹ್ಮದ್ ಇಸ್ಮಾಯಿಲ್ ಮನೆ ಕಾಂಪೌಂಡ್ ಹಾರೋ ದೃಶ್ಯ ಸೆರೆಯಾಗಿದ್ದು, ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಭೇಟಿ ನೀಡಿ ಪರಿಶೀಲನೆ ಮಾಡಿದರು. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಲಗಿದಾಗ ಬಡಿಗೆಯಿಂದ ಹೊಡೆದು ಇಬ್ಬರ ಕೊಲೆ
ಗದಗ: ಮಲಗಿದಲ್ಲೇ ಇಬ್ಬರ ಭೀಕರ ಕೊಲೆ ನಡೆದಿರುವಂತಹ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೆರಳ್ಳಿ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ ಮಾಚೇನಹಳ್ಳಿ (28) ಫಕೀರೇಶ ಮಾಚೇನಹಳ್ಳಿ (17) ಕೊಲೆಯಾದವರು. 40 ವರ್ಷದ ಮಂಜುನಾಥ್ ದೇಸಳ್ಳಿ ಎಂಬಾತನಿಂದ ನಸುಕಿನ 4.30 ರ ವೇಳೆಯಲ್ಲಿ ಮನೆಯಲ್ಲಿ ಮೇಲೆ ಮಲಗಿದಾಗ ಬಡಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ ಭೇಟಿ ಪರಿಶೀಲನೆ ಮಾಡಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಚಿಕನ್ ಲೆಗ್ ಪೀಸ್ನಲ್ಲಿ ಹುಳು
ಕೋಲಾರ: ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಖ್ರಾ ಹೋಟೆಲ್ನಲ್ಲಿ ಚಿಕನ್ ಲೆಗ್ ಪೀಸ್ನಲ್ಲಿ ಹುಳು ಪತ್ತೆಯಾಗಿರುವಂತಹ ಘಟನೆ ನಡೆದಿದೆ. ಹೋಟೆಲ್ ಮಾಲೀಕರನ್ನ ಗ್ರಾಹಕ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು, ಸ್ಥಳಕ್ಕೆ ನಗರಸಭೆ ಆಹಾರ ನಿರೀಕ್ಷಕರು ಭೇಟಿ ನೀಡಿದ್ದು, ಹೋಟೆಲ್ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ಈಜು ಬಾರದೇ ಮುಳುಗಿ ಸಾವು
ಯಾದಗಿರಿ: ಮೈಲಾಪುರದಲ್ಲಿ ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ಈಜು ಬಾರದೇ ಮುಳುಗಿ ತೆಲಂಗಾಣದ ನಾರಾಯಣಪೇಟ ನಿವಾಸಿ ಶಿವರಾಜ್(40) ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕುಟುಂಬ ಸಮೇತ ಮೈಲಾಪುರದ ಮೈಲಾರಲಿಂಗೇಶ್ವರ ದರ್ಶನಕ್ಕೆ ಶಿವರಾಜ್ ಬಂದಿದ್ದಾಗ ಘಟನೆ ನಡೆದಿದೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಬೀಗ ಒಡೆದು ಚಿನ್ನ, ನಗದು ಕಳ್ಳತನ
ಬೆಂಗಳೂರು: ನಗರದಲ್ಲಿ ಮನೆ ಬೀಗ ಒಡೆದು ಚಿನ್ನ, ನಗದು ಕಳ್ಳತನ ಮಾಡಿರುವಂತಹ ಘಟನೆ ಯಶವಂತಪುರದ ಮತ್ತಿಕೆರೆಯಲ್ಲಿ ನಡೆದಿದೆ. ಕನಗ್ ರತಿನಾಮ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ ಚಿನ್ನಾಭರಣ, ₹14 ಲಕ್ಷ ನಗದು ಕಳ್ಳತನವಾಗಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.