ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲೇ ವಾರದಲ್ಲಿ ಎರಡೆರೆಡು ಬಾಲ್ಯ ವಿವಾಹ

ಕೊಪ್ಪಳ ಜಿಲ್ಲೆಯಲ್ಲಿ ಒಂದು ವಾರದಲ್ಲಿ ಎರಡು ಬಾಲ್ಯ ವಿವಾಹಗಳು ನಡೆದಿವೆ. ಒಂದು ಬಾಲ್ಯ ವಿವಾಹದಲ್ಲಿ ಕಾಂಗ್ರೆಸ್ ಶಾಸಕರು ಭಾಗಿಯಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯ ಸಂಬಂಧಿಯೂ ಬಾಲ್ಯ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲೇ ವಾರದಲ್ಲಿ ಎರಡೆರೆಡು ಬಾಲ್ಯ ವಿವಾಹ
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Apr 28, 2025 | 9:37 AM

ಕೊಪ್ಪಳ, ಏಪ್ರಿಲ್​ 28: ಕರ್ನಾಟಕದಲ್ಲಿ 2007ರಲ್ಲೇ ಸರ್ಕಾರ ಬಾಲ್ಯ ವಿವಾಹ (Child Marriage) ನಿಷೇಧ ಕಾಯ್ದೆಯನ್ನ ಜಾರಿ ಮಾಡಿದೆ. ಈ ಕಾಯ್ದೆ ಜಾರಿಯಾಗಿ 18 ವರ್ಷ ಕಳೆದರೂ ಬಾಲ್ಯ ವಿವಾಹ ಮಾತ್ರ ನಿಂತಿಲ್ಲ. ಆಗಾಗ ಬಾಲ್ಯ ವಿವಾಹಗಳ ಬಗ್ಗೆ ವರದಿಗಳಾಗುತ್ತಿವೆ. ಹೀಗಿರುವಾಗಲೇ ಕೇವಲ ಒಂದು ವಾರದಲ್ಲಿ ಅದೊಬ್ಬರು ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಎರಡೆರಡು ಬಾಲ್ಯವಿವಾಹಗಳಾಗಿವೆ. ಅಷ್ಟೇ ಅಲ್ಲದೆ ಅದರಲ್ಲಿ ಒಂದು ಬಾಲ್ಯ ವಿವಾಹಕ್ಕೆ ಕಾಂಗ್ರೆಸ್​ (congress) ಶಾಸಕರು ಭಾಗಿಯಾಗಿದ್ದಾರೆ. ಅದೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯ ಸಂಬಂಧಿಕರೇ ಬಾಲ್ಯ ವಿವಾಹ ಮಾಡಿಕೊಂಡಿದ್ದು, ಬಾಲ್ಯ ವಿವಾಹ ಕಾಯ್ದೆಗೆ ಎಳ್ಳು ನೀರು ಬಿಡಲಾಗಿದೆ.

ಒಂದು ವಾರ ಅಂತರದಲ್ಲಿ ಎರಡೆರಡು ಬಾಲ್ಯ ವಿವಾಹ 

ಬಡತನ ಅಥವಾ ಸಂದಿಗ್ಧ ಪರಿಸ್ಥಿತಿಯಲ್ಲಿ ಅದೆಷ್ಟೋ ತಂದೆ-ತಾಯಿ ತಮ್ಮ ಅಪ್ರಾಪ್ತ ಮಕ್ಕಳ ಮದವೆ ಮಾಡುತ್ತಿದ್ದಾರೆ. ರಾಜ್ಯದ ನಾನಾ ಭಾಗದಲ್ಲಿ ಒಂದಲ್ಲಾ ಒಂದು ಕಡೆ ಬಾಲ್ಯ ವಿವಾಹದ ಕೇಸ್​ಗಳು ವರದಿಯಾಗುತ್ತಿವೆ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿದ ಜಿಲ್ಲೆಯೆಂದು ಹಣೆಪಟ್ಟಿ ಕಟ್ಟಿಕೊಂಡ ಕೊಪ್ಪಳ ಜಿಲ್ಲೆ ಬಾಲ್ಯ ವಿವಾಹದಲ್ಲಿ ತುಸು ಮುಂದಿದೆ. ಏಕೆಂದರೆ ಕಳೆದ ಒಂದು ವಾರದ ಅವಧಿಯಲ್ಲಿ ಎರಡು ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬಂದಿವೆ.

ಇದನ್ನೂ ಓದಿ: ಕೊಪ್ಪಳ: ಕನ್ನಡ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ಕಲೆಕ್ಟರ್​ನಿಂದ ಹಲ್ಲೆ, ಮೊಬೈಲ್ ಕಿತ್ತುಕೊಂಡು ದಬ್ಬಾಳಿಕೆ

ಇದನ್ನೂ ಓದಿ
ಇಂದು ಬೆಂಗಳೂರು ಸೇರಿ ಕರ್ನಾಟಕದ 22ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ
ಬೆಂಗಳೂರು: ನಡು ರಸ್ತೆಯಲ್ಲಿ ಕಾಲೇಜು ಪ್ರಾಧ್ಯಾಪಕನ ಮೇಲೆ ಹಲ್ಲೆ, ಮೂವರ ಬಂಧನ
ಕನ್ನಡ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ಕಲೆಕ್ಟರ್​ನಿಂದ ಹಲ್ಲೆ
ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ಧೀಕರಣ: ಮೂವರ ವಿರುದ್ಧ FIR

ಎರಡು ಬಾಲ್ಯ ವಿವಾಹ ಪ್ರಕರಣಗಳು ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಪ್ರತಿನಿಧಿಸುವ ಕನಕಗಿರಿ ಕ್ಷೇತ್ರದಲ್ಲಿ. ಹೌದು! ಕಳೆದ ಏ. 21 ರಂದು ಕನಕಗಿರಿ ತಾಲೂಕಿನ ಶಿರವಾರದಲ್ಲಿ ಬಾಲ್ಯ ವಿವಾಹ ನಡೆದರೆ, ಅದು ಏ. 25 ರಂದು ಕೇಸ್ ದಾಖಲಾಗತ್ತೆ. ಏಕೆಂದರೆ ಆ ಮದುವೆಗೆ ಕಂಪ್ಲಿ ಶಾಸಕ ಗಣೇಶ್ ಬಂದಿರುತ್ತಾರೆ. ಜನ ಪ್ರತಿನಿಧಿಯಾಗಿ ಬಾಲ್ಯ ವಿವಾಹ ತಪ್ಪು ಅನ್ನೋದು ಗೊತ್ತಿದರೂ ಶಾಸಕರು ಮದುವೆಗೆ ಹಾಜರಾಗಿ ಪೋಸ್ ಕೊಟ್ಟಿದ್ದರು.

ಇನ್ನು ಇದು ಬಾಲ್ಯ ವಿವಾಹ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆ ಹಿರೇಖೇಡ ಗ್ರಾಮ ಪಂಚಾಯಿತಿ ಅಧಿಕಾರಿ ಏ. 25 ರಂದು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ದೂರು ನೀಡಿದ್ದಾರೆ. ಮದುವೆಯಾದ ಶ್ಯಾಮಣ್ಣ ಬಂಕಾಪೂರ, ಇವರ ಸಂಬಂಧಿಗಳಾದ ಪಕ್ಕೀರಪ್ಪ ಬಂಕಾಪೂರ, ದೇವಮ್ಮ ಎಂಬುವರ ವಿರುದ್ದ ದೂರು ದಾಖಲಾಗಿದೆ. ದೂರು ದಾಖಲಿಸದಂತೆ ಶಾಸಕರು ಒತ್ತಡ ಹಾಕಿದ ಹಿನ್ನಲೆ ಐದು ದಿನದ ಬಳಿಕ ಮೂವರ ಮೇಲೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಏಪ್ರಿಲ್​ 25 ರಂದು ಇಲ್ಲಿ ಮೂರು ಜನರ ವಿರುದ್ದ ಕೇಸ್ ದಾಖಲಾಗುತ್ತಿದೆ. ಆದರೆ ಅದರ ಮರುದಿನವೇ ಶಿವರಾಜ್ ತಂಗಡಗಿ ಕ್ಷೇತ್ರದಲ್ಲಿ ಮತ್ತೊಂದು ಬಾಲ್ಯ ವಿವಾಹವಾಗಿದೆ. ನಿನ್ನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಮತ್ತೊಂದು ಮದುವೆಯಾಗಿದೆ. ಕಾನೂನು, ಕಾಯ್ದೆ ಯಾವುದೇ ಭಯವಿಲ್ಲದೆ ಹುಲಿ ಹೈದರ್ ಗ್ರಾಮದಲ್ಲಿ ಬಾಲ್ಯ ವಿವಾಹ ನಡೆದಿದೆ.

17 ವರ್ಷ 9 ತಿಂಗಳ ಬಾಲಕಿಗೆ ನಿನ್ನೆ ತಾಳಿ‌ ಕಟ್ಟಲಾಗಿದೆ. ಇಲ್ಲಿ ಮದುವೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಂಬಂಧಿ. ಸರ್ಕಾರದ ಆದೇಶ, ಕಾನೂನು ಪಾಲಿಸಬೇಕಾದವರೇ ಇಲ್ಲಿ ಬಾಲ್ಯ ವಿವಾಹ ಮಾಡಿಕೊಂಡಿರೋದು ನಿಜಕ್ಕೂ ದುರಂತ. ಮದುವೆ ನಡೆದು 30 ಗಂಟೆ ಕಳೆದರೂ‌ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ.

ಸಾರ್ವಜನಿಕರು ಆಕ್ರೋಶ 

ಬಾಲ್ಯ ವಿವಾಹ ಕಾಯ್ದೆ ಪ್ರಕಾರ ಮದುವೆಯಾದರೆ, ಮದುವೆಗೆ ಪ್ರೋತ್ಸಾಹ ನೀಡಿದರೆ, ಮದುವೆ ಮಾಡಿಸಿದವರಿಗೆ ಎರಡು ವರ್ಷ ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿಬಹುದು. ಇಷ್ಟೆಲ್ಲಾ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಅಪ್ರಾಪ್ತ ಬಾಲಕಿಯರ ಕೊರಳಿಗೆ ತಾಳಿ ಕಟ್ಟೋದು ಕಾಮನ್ ಆಗಿ ಬಿಟ್ಟದೆ. ಒಂದು ವಾರದ ಅವಧಿಯಲ್ಲಿ ಸಚಿವರ ಕ್ಷೇತ್ರದಲ್ಲಿ ನಡೆದ ಎರಡು ಬಾಲ್ಯ ವಿವಾಹ ಪ್ರಕರಣಗಳು ಸಹಜವಾಗಿ ಕೊಪ್ಪಳ ನಾಗರಿಕರನ್ನು ಕೆರಳಿಸಿದೆ.

ಇದನ್ನೂ ಓದಿ: ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ಧೀಕರಣ: ಮೂವರ ವಿರುದ್ಧ FIR

ಮಾತು ಮಾತಿಗೆ ಮೋದಿ ವಿರುದ್ದ ಕಿಡಿಕಾರುವ ತಂಗಡಗಿ ಸಾಹೇಬರು, ಮೊದಲು ತಮ್ಮ ಜಿಲ್ಲೆಯಲ್ಲಿ ಏನಾಗ್ತಿದೆ ಅನ್ನೋದನ್ನ ತಿಳಿದುಕೊಳ್ಳೋ ಅವಶ್ಯಕತೆ ಇದೆ. ಎರಡು ಬಾಲ್ಯ ವಿವಾಹಗಳಲ್ಲಿ ಸರ್ಕಾರಕ್ಕೆ  ಸಂಬಂಧಿಸಿದವರೇ ಭಾಗಿಯಾಗಿರೋದು ನಿಜಕ್ಕೂ ದುರ್ದೈವದ ಸಂಗತಿ. ಇದಲ್ಲದೆ ಜಿಲ್ಲೆಯಲ್ಲಿ 2025 ರಲ್ಲಿ 11 ಬಾಲ್ಯವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಸಹಾಯವಾಣಿಗೆ 227 ಕರೆ ಬಂದಿದ್ದು, ಅದರಲ್ಲಿ 167 ಕರೆಗಳು ಬಾಲ್ಯ ವಿವಾಹದ್ದಾಗಿದ್ದವು. ಇಷ್ಟಾದರೂ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಕಡಿಮೆಯಾಗಿದೆ ಎನ್ನುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:21 am, Mon, 28 April 25