Maha Shivaratri 2022: ಶಿವರಾತ್ರಿ ಉಪವಾಸಕ್ಕೆ ಕೊಪ್ಪಳದಲ್ಲಿ ಹಣ್ಣಿನ ಮೇಳ! ರೈತರಿಗೂ ಸಂಭ್ರಮ, ಶಿವ ಭಕ್ತರಿಗೂ ಆನಂದ!
Koppal Fruits fair: ಶಿವರಾತ್ರಿ ಹಬ್ಬ ಅಂದ್ರೆ ಶಿವನ ಭಕ್ತರು ಬೆಳಗ್ಗೆಯಿಂದ ಉಪವಾಸವಿದ್ದು, ಸಂಜೆ ಹಣ್ಣುಗಳನ್ನು ತಿನ್ನುವ ಮೂಲಕ ಉಪವಾಸ ಅಂತ್ಯ ಮಾಡುತ್ತಾರೆ. ಹೀಗೆ ಶಿವರಾತ್ರಿ ಹಬ್ಬದಲ್ಲಿ ಹಣ್ಣುಗಳಿಗೆ ಭಾರೀ ಪ್ರಾಮುಖ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಕರ್ನಾಟಕ ತೋಟಗಾರಿಕೆ ಇಲಾಖೆಯು ಹಣ್ಣುಗಳ ಮೇಳ ಹಮ್ಮಿಕೊಂಡಿದೆ.
ಶಿವರಾತ್ರಿ ಹಬ್ಬ ಅಂದ್ರೆ ಶಿವನ ಭಕ್ತರು (Lord Shiva Devotees) ಬೆಳಿಗ್ಗೆಯಿಂದ ಉಪವಾಸವಿದ್ದು, ಸಂಜೆ ಹಣ್ಣುಗಳನ್ನು ತಿನ್ನುವ ಮೂಲಕ ಉಪವಾಸ ಅಂತ್ಯಗೊಳಿಸುತ್ತಾರೆ. ಹೀಗೆ ಶಿವರಾತ್ರಿ ಹಬ್ಬದಲ್ಲಿ ಹಣ್ಣುಗಳಿಗೆ ಭಾರೀ ಪ್ರಾಮುಖ್ಯತೆ ಇದೆ. ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ (Maha Shivaratri 2022) ಕೊಪ್ಪಳದಲ್ಲಿ ಕರ್ನಾಟಕ ತೋಟಗಾರಿಕೆ ಇಲಾಖೆಯು ಹಣ್ಣುಗಳ ಮೇಳ ಹಮ್ಮಿಕೊಂಡಿದೆ. ಅಷ್ಟಕ್ಕೂ ಈ ಹಣ್ಣಿನ ಮೇಳೆ ಎಲ್ಲಿ ಅಂತೀರಾ ಈ ಸ್ಟೋರಿ ಓದಿ. ಒಂದೆಡೆ ವಿವಿಧ ಬಗೆಯ ಕಲ್ಲಂಗಡಿ, ದ್ರಾಕ್ಷಿ,ಕರಬೂಜ ಹಣ್ಣುಗಳನ್ನು ಪ್ರದರ್ಶನಕ್ಕೆ ಇಟ್ಟಿರುವ ದೃಶ್ಯ. ಇನ್ನೊಂದು ಕಡೆ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ರೈತರು. ಇವೆಲ್ಲ ದೃಶ್ಯಗಳು ಕಂಡುಬರುವುದು ಕೊಪ್ಪಳ ಜಿಲ್ಲೆಯಲ್ಲಿ (Koppal Fruits fair).
ಅಂದಹಾಗೆ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಹಣ್ಣಿನ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ವಿಶೇಷವಾಗಿ ಶಿವರಾತ್ರಿ ಹಬ್ಬದ ಸಮಯದಲ್ಲಿ ಉಪಯೋಗಿಸುವ ಕಲ್ಲಂಗಡಿ, ದ್ರಾಕ್ಷಿ, ಕರಬೂಜ ಹಣ್ಣುಗಳ ಮೇಳವನ್ನು ಆಯೋಜಿಸಿದೆ.
ಈ ಮುಂಚೆ ತೋಟಗಾರಿಕೆ ಇಲಾಖೆ ಕೇವಲ ದ್ರಾಕ್ಷಿ ಮೇಳ ಮಾತ್ರ ಆಯೋಜಿಸಿತ್ತು. ಆದ್ರೆ ಇದೇ ಮೊದಲ ಬಾರಿಗೆ ದ್ರಾಕ್ಷಿ ಜೊತೆಗೆ ಕಲ್ಲಂಗಡಿ ಹಾಗೂ ಕರಬೂಜ ಹಣ್ಣುಗಳ ಮೇಳವನ್ನು ಸಹ ಆಯೋಜಿಸಿದೆ. ನಾಲ್ಕು ದಿನಗಳ ಕಾಲ ಹಣ್ಣಿನ ಮೇಳ ನಡೆಯುತ್ತಿದ್ದು, ಮೇಳದಲ್ಲಿ ವಿವಿಧ ಬಗೆಯ ಹಣ್ಣುಗಳು ಜೊತೆಗೆ, ಅದರ ಉತ್ಪನ್ನಗಳೂ ಸಹ ಸಿಗುತ್ತಿವೆ. ದ್ರಾಕ್ಷಿಯಿಂದ ತಯಾರಿಸಿದ ವೈನ್ ಹಾಗೂ ಶುದ್ದ ಜೇನುತುಪ್ಪ ಮಾರಾಟಕ್ಕೆ ಇಡಲಾಗಿದೆ. ನಾಲ್ಕು ದಿನಗಳ ಅವಧಿಯಲ್ಲಿ ಸುಮಾರು 40 ಲಕ್ಷ ವಹಿವಾಟು ಆಗಲಿದೆ ಅಂತಾರೆ ಕೃಷ್ಣ ಉಕ್ಕುಂದ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ.
ಇನ್ನು ಹಣ್ಣಿನ ಮೇಳದಲ್ಲಿ ಜಿಲ್ಲೆಯಾದ್ಯಂತ ಹತ್ತಾರು ರೈತರು ಪಾಲ್ಗೊಂಡಿದ್ದಾರೆ. ಇವರೆಲ್ಲ ತಮ್ಮ ತೋಟದಲ್ಲಿ ಬೆಳೆದ ಹಣ್ಣುಗಳನ್ನು ತಂದು ಇಲ್ಲಿಗೆ ಮಾರಾಟ ಮಾಡ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಅರಿಷಿನ ಬಣ್ಣದ ಕಲ್ಲಂಗಡಿ ಹಣ್ಣು ಎಲ್ಲರನ್ನೂ ಆಕರ್ಷಿಸುತ್ತಿದೆ. ಶಿವರಾತ್ರಿ ಹಬ್ಬ ಇರುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣಿನ ಮೇಳಕ್ಕೆ ಆಗಮಿಸುತ್ತಿದ್ದು, ಖರೀದಿ ಭರಾಟೆ ಜೋರಾಗಿದೆ.
ಒಟ್ನಲ್ಲಿ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲ ಹಣ್ಣುಗಳು ಒಂದೇ ಸೂರಿನಡಿ ಸಿಗುತ್ತಿರುವುದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲ ಕಡಿಮೆ ಹಾಗೂ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಕೊಳ್ಳಲು ಹಣ್ಣಿನ ಮೇಳಕ್ಕೆ ಜನಸಾಗರವೇ ಹರಿದು ಬರ್ತಿದೆ. (ಶಿವಕುಮಾರ್ ಪತ್ತರ್ ಟಿವಿ9 ಕೊಪ್ಪಳ)
ಕಲ್ಪತರು ನಾಡಿನಲ್ಲಿ ಸಿದ್ಧಗಂಗಾ ಮಠದ ಜಾತ್ರೆ ಸಂಭ್ರಮ ತುಮಕೂರು: ದಸರಾ ಎಂದರೆ ಮೈಸೂರಿಗೆ ಹೇಗೆ ಒಂದು ಭೂಷಣವೂ ಹಾಗೇ ಕಲ್ಪತರು ನಾಡಿಗೆ ಸಿದ್ಧಗಂಗಾ ಮಠದಲ್ಲಿ ನಡೆಯುವ ಜಾತ್ರೆ ಫೇಮಸ್. ಅದರಲ್ಲೂ ಮಠದ ಪ್ರಸಾದ ಇನ್ನೂ ವಿಶೇಷ. ಈ ಬಾರಿ ಜಾತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗ್ತಿದೆ. ತುಮಕೂರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಕ್ಕಳಲ್ಲಿ ಅದೇನೋ ಹೊಸ ಸಡಗರ. ಪ್ರಸಾದ ಸೇವಿಸಿ ಧನ್ಯರಾದ ಭಕ್ತರು.
ಹೌದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜಾತ್ರೋತ್ಸವ ನಡೆದಿದೆ. ಕೊರೊನಾ ಹಿನ್ನೆಲೆ ಕಳೆಗುಂದಿದ್ದ ಜಾತ್ರೆಯನ್ನು ಈ ವರ್ಷ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಶಿವರಾತ್ರಿ ಅಂಗವಾಗಿ ಪ್ರತಿ ಬಾರಿಯಂತೆ ಈ ಬಾರಿ ತಂಬಿಟ್ಟು ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಅಂದ್ರೆ ಈ ಬಾರಿ ಕಡ್ಲೆ, ಶೇಂಗಾ, ಅಕ್ಕಿ, ಎಳ್ಳು, ಕೊಬ್ಬರಿ ಮತ್ತು ಏಲಕ್ಕಿಯಂತಹ ತರಹೇವಾರಿಯ 34 ಸಾವಿರ ತಂಬಿಟ್ಟು ತಯಾರಿಸಲಾಗಿದೆ.
ಫೆಬ್ರವರಿ 23 ರಿಂದ ಮಾರ್ಚ್ 4ರ ವರೆಗೂ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಮಾರ್ಚ್ 1 ರಂದು ನಡೆಯಲಿರುವ ಶಿವರಾತ್ರಿ ಮಹೋತ್ಸವಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ 10 ದಿನಗಳಿಂದಲೂ ಮಠದ ಅಡುಗೆ ಭಟ್ಟರು, ಶ್ರೀ ಮಠದಲ್ಲಿನ ಮಕ್ಕಳು ಹಾಗೂ ಸಿಬ್ಬಂದಿ ಸೇರಿ ಇಷ್ಟು ಬೃಹತ್ ಪ್ರಮಾಣದಲ್ಲಿ ತಂಬಿಟ್ಟು ತಯಾರಿಸಿದ್ದಾರೆ. ಈಗಾಗಲೇ ದನಗಳ ಜಾತ್ರೋತ್ಸವ ಹಾಗೂ ಕೃಷಿ ವಸ್ತು ಪ್ರದರ್ಶನ ನಡೆದಿದೆ. ಶಿವರಾತ್ರಿ ಮಾರನೇ ದಿನ ಅಂದ್ರೆ ಬುಧವಾರ ರಥೋತ್ಸವ ನಡೆಯಲಿದ್ದು ಭಾರಿ ಜನ ಆಗಮಿಸುವ ನಿರೀಕ್ಷೆ ಇದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ಮೆರಗು ತಂದಿದ್ದಾರೆ.
Published On - 9:24 am, Mon, 28 February 22