ಪತಿಯ ಅನುಮಾನ ರೋಗಕ್ಕೆ ಹಾರಿ ಹೋಯ್ತು ಪತ್ನಿ ಪ್ರಾಣ..!
ಅನುಮಾನಂ ಪೆದ್ದರೋಗಂ ಅಂತಾರೆ. ಆದ್ರೆ ಅಲ್ಲೋರ್ವ ವ್ಯಕ್ತಿಗೆ ಪತ್ನಿಯ ಪ್ರತಿಯೊಂದು ನಡೆಯ ಬಗ್ಗೆ ಅನುಮಾನದ ರೋಗ ಹೊಕ್ಕಿತ್ತು. ಜೊತೆಗೆ ವಿಪರೀತ ಕುಡಿತದ ಚಟ ಕೂಡಾ ಇತ್ತು. ಹೀಗಾಗಿ ಸಂಸಾರ ಸಸಾರವಾಗೋ ಬದಲು ಸಂಕಷ್ಟದ ಸಾಗರವಾಗಿತ್ತು. ಆದ್ರು ಗಂಡನ ಕಿರುಕುಳ, ಹಿಂಸೆಯನ್ನು ತಾಳಿಕೊಂಡು ಸಂಸಾರ ಸಾಗಿಸುತ್ತಿದ್ದ ಗೃಹಣಿ ಕಳೆದ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಹೆತ್ತವರು ಕೊಲೆ ಆರೋಪ ಮಾಡುತ್ತಿದ್ದಾರೆ.
ಕೊಪ್ಪಳ, (ಜನವರಿ 05): ಆಕೆ ಮುದ್ದು ಮುಖದ ತಾವರೆಯಂತಿದ್ದಳು. ಮನೆಯಲ್ಲಿ ಚೆನ್ನಾಗಿ ಸಾಕಿದ್ದ ಹೆತ್ತವರು,ಗಿಣಿಯಂತೆ ಇದ್ದ ಮಗಳನ್ನು ಮದುವೆ ಮಾಡಿ, ಆಕೆಯ ಸಂಸಾರದ ಬಾಳು ಆನಂದಸಾಗರವಾಗಲಿ ಅಂತ ಹರಿಸಿದ್ದರು. ಮದುವೆಯಾದ ಒಂದೇ ವರ್ಷಕ್ಕೆ ಮುದ್ದಾದ ಹೆಣ್ಣು ಮಗು ಕೂಡಾ ಹುಟ್ಟಿತ್ತು. ಮದುವೆಯಾದ ಮಗಳು ಚೆನ್ನಾಗಿರಲಿ ಅಂತ ಹೆತ್ತವರು ಸಾಕಷ್ಟು ವರದಕ್ಷಿಣೆ ನೀಡಿದ್ದರು. ಅಳಿಯ ಕೇಳಿದಾಗ ಮತ್ತೆ ಹಣ ಕೂಡಾ ನೀಡಿದ್ದರು. ಆದ್ರೆ ಇಂತಹ ಮುದ್ದಾದ ಮಗಳು, ಬಾರದ ಲೋಕಕ್ಕೆ ಹೋಗಿದ್ದ ಸುದ್ದಿ ಕೇಳಿ ಹೆತ್ತವರಿಗೆ ಬರಸಿಡಿಲು ಬಡಿದಂತಾಗಿದ್ದು ಹೆತ್ತವರ ಆಕ್ರಂಧನ ಮುಗಿಲು ಮುಟ್ಟಿದೆ.
ಕೊಪ್ಪಳದಲ್ಲಿ ಹೆತ್ತವರ ಆಕ್ರೋಶ, ಆಕ್ರಂಧನಕ್ಕೆ ಕಾರಣ,ತಮ್ಮ ಮಗಳು ಬಾರದ ಲೋಕಕ್ಕೆ ಹೋಗಿದ್ದು. ಕೊಪ್ಪಳ ನಗರದ ಭಾಗ್ಯ ನಗರದಲ್ಲಿರುವ ಜನತಾ ಕಾಲೋನಿಯ ನಿವಾಸಿಯಾಗಿದ್ದ ರೇಣುಕಾ ಸಂಗಟಿ ಅನ್ನೋ ಇಪ್ಪತ್ತೈದು ವರ್ಷದ ಮಹಿಳೆ ಇಂದು ನಸುಕಿನ ಜಾವದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ರೇಣುಕಾಳ ಪತಿ, ರೇಣುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಹೇಳಿದ್ರೆ, ಇತ್ತ ಹೆತ್ತವರು ಮಾತ್ರ ಮಗಳ ಶವ ನೋಡಿ, ಇದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಅಂತ ಆರೋಪಿಸುತ್ತಿದ್ದಾರೆ. ರೇಣುಕಾಳ ಪತಿ ಅನೀಲ್ ಸಂಗಟಿ ಮತ್ತು ಆತನ ಕುಟುಂಬದವರು ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಕಟ್ಟುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ಪ್ರಿಯಕರನ ಜೊತೆಗಿದ್ದಾಗಲೇ ವಿವಾಹಿತ ಪ್ರಿಯತಮೆ ಅನುಮಾನಾಸ್ಪದ ಸಾವು!
ಪತ್ನಿ ಮೇಲೆ ಪತಿಗೆ ಅನುಮಾನದ ರೋಗ
ಇನ್ನು ಮೂಲತ ಗದಗ ಜಿಲ್ಲೆಯ ತಿಮ್ಮಲಾಪುರ ಗ್ರಾಮದ ನಿವಾಸಿಯಾಗಿದ್ದ ರೇಣುಕಾಳನ್ನು, ಬಾಗ್ಯನಗರದ ಅನೀಲ್ ಸಂಗಟಿಗೆ ಕೊಟ್ಟು ನಾಲ್ಕು ವರ್ಷದ ಹಿಂದೆ ಮದುವೆ ಮಾಡಿದ್ದರು. ಮದುವೆ ಸಂದರ್ಭದಲ್ಲಿ ಒಂದುವರೆ ಲಕ್ಷ ಹಣ, ಇಪ್ಪತ್ತು ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದ್ರೆ ಮದುವೆಯಾದ ಕೆಲವೇ ದಿನಗಳಲ್ಲಿ ಅನೀಲ್ ತನ್ನ ನಿಜಬಣ್ಣವನ್ನು ತೋರಿಸಿದ್ದ. ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಅನೀಲ್, ಕುಡಿತದ ಚಟವಿಟ್ಟುಕೊಂಡಿದ್ದ. ಪ್ರತಿನಿತ್ಯ ಕುಡಿದು ಮನೆಗೆ ಬರ್ತಿದ್ದ ಅನೀಲ್, ಪ್ರತಿನಿತ್ಯ ರೇಣುಕಾಳಿಗೆ, ಮಾನಸಿಕ, ದೈಹಿಕ ಹಿಂದೆ ನೀಡುತ್ತಿದ್ದನಂತೆ. ಆದ್ರು ಕೂಡಾ ರೇಣುಕಾ, ಸಂಸಾರ ಹಾಳಾಗಬಾರದು ಅಂತ ಸುಮ್ಮನಿದ್ದಳಂತೆ.
ಇನ್ನು ಅನೀಲ್, ಅನುಮಾನದ ರೋಗ ಬೆಳಸಿಕೊಂಡಿದ್ದನಂತೆ. ಯಾರಾದ್ರು ಜೊತೆ ಮಾತನಾಡಿದ್ರೆ ಅವರ ಜೊತೆ ರೇಣುಕಾಳಿಗೆ ಸಂಬಂಧ ಕಟ್ಟುತ್ತಿದ್ದನಂತೆ. ಪತಿಯ ನಡೆಯಿಂದ ರೇಣುಕಾ ಸಾಕಷ್ಟು ರೋಸಿ ಹೋಗಿದ್ದಳಂತೆ. ಪತಿ ಪತ್ನಿ ನಡುವೆ ಪ್ರತಿನಿತ್ಯ ಜಗಳವಾಗುತ್ತಿತ್ತಂತೆ. ಹೀಗಾಗಿ ರೇಣುಕಾ, ಕೆಲ ತವರು ಮನೆಗೆ ಹೋಗಿದ್ದಳಂತೆ. ಆದ್ರೆ ಮೂರು ತಿಂಗಳ ಹಿಂದಷ್ಟೇ ಅನೀಲ್ ಮತ್ತು ಹೆತ್ತವರು ರಾಜೀ ಪಂಚಾಯತಿ ನಡೆಸಿ, ರೇಣುಕಾಳನ್ನು ಮತ್ತೆ ಕರೆದುಕೊಂಡು ಬಂದಿದ್ದರಂತೆ. ಇನ್ನು ನಿನ್ನೆ ರಾತ್ರಿಯಷ್ಟೇ ರೇಣುಕಾ, ಹೆತ್ತವರ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಳಂತೆ. ಆದ್ರೆ ರಾತ್ರಿ ಮನೆಯಲ್ಲಿ ಏನು ನಡೆಯಿತೋ ಗೊತ್ತಿಲ್ಲಾ, ನಸುಕಿನ ಜಾವ ನಾಲ್ಕು ಗಂಟೆಗೆ ರೇಣುಕಾಳ ಹೆತ್ತವರಿಗೆ ಕರೆ ಮಾಡಿದ್ದ ಅನೀಲ್, ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ವಿಷಯ ಹೇಳಿದ್ದನಂತೆ. ಮಾಹಿತಿ ತಿಳಿದು ಮನೆಗೆ ಆಗಮಿಸಿದಾಗ, ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲಿ ಶವವಿತ್ತು. ಅನೀಲ್ ಮತ್ತು ಆತನ ಕುಟುಂಬದವರು ರೇಣುಕಾಳ ಮೇಲೆ ಹಲ್ಲೆ ಮಾಡಿ, ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಪತಿಯನ್ನು ವಶಕ್ಕೆ ಪಡೆದ ಪೊಲೀಸರು
ರೇಣುಕಾ ಸಾವಿಗೆ ಸಂಬಂಧಿಸಿದಂತೆ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ರೇಣುಕಾಳ ಪತಿ ಅನೀಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ನಂತರವೇ ಕೊಲೆಯಾ, ಆತ್ಮಹತ್ಯೆಯಾ ಅನ್ನೋದು ಗೊತ್ತಾಗಲಿದೆ. ಆದ್ರೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕಿದ್ದ ಪಾಪಿ ಪತಿ, ಅನುಮಾನ ಮತ್ತು ಕುಡಿತದ ಚಟದಿಂದ ಪತ್ನಿಯ ಸಾವಿಗೆ ಕಾರಣವಾಗಿದ್ದಾನೆ. ಅಪ್ಪ ಅಮ್ಮನ ಜಗಳಕ್ಕೆ ಮೂರು ವರ್ಷದ ಬಾಲಕಿ, ತಾಯಿಯಿಲ್ಲದೇ ತಬ್ಬಲಿಯಾಗುವಂತಾಗಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ