ಮ್ಯಾಟ್ರಿಮೋನಿಯಲ್ಲಿ ಯುವತಿಯರಿಗೆ ಗಾಳಹಾಕಿ ವಂಚನೆ: ಕರ್ನಾಟಕದ ಅನೇಕ ಯುವತಿಯರ ವಂಚಿಸಿದ ಕಿಲಾಡಿ ಕೊನೆಗೂ ಅಂದರ್

ಕೊಪ್ಪಳದಲ್ಲಿ ಮ್ಯಾಟ್ರಿಮೋನಿ ಆ್ಯಪ್ ಮೂಲಕ ಯುವತಿಯರನ್ನು ವಂಚಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಇಬಿ ಅಧಿಕಾರಿ ಎಂದು ಸುಳ್ಳು ಹೇಳಿ, ಹಣ ಪಡೆದು ಮೋಸ ಮಾಡುತ್ತಿದ್ದ. ಮದುವೆಯಾಗುವ ನೆಪದಲ್ಲಿ ಹಲವು ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಪಡೆದ ಆತನ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಮ್ಯಾಟ್ರಿಮೋನಿಯಲ್ಲಿ ಯುವತಿಯರಿಗೆ ಗಾಳಹಾಕಿ ವಂಚನೆ: ಕರ್ನಾಟಕದ ಅನೇಕ ಯುವತಿಯರ ವಂಚಿಸಿದ ಕಿಲಾಡಿ ಕೊನೆಗೂ ಅಂದರ್
ಮ್ಯಾಟ್ರಿಮೋನಿಯಲ್ಲಿ ಯುವತಿಯರಿಗೆ ಗಾಳಹಾಕಿ ವಂಚನೆ: ಕರ್ನಾಟಕದ ಅನೇಕರ ವಂಚಿಸಿದ ಕಿಲಾಡಿ ಕೊನೆಗೂ ಅಂದರ್
Updated By: ಗಂಗಾಧರ​ ಬ. ಸಾಬೋಜಿ

Updated on: Feb 13, 2025 | 10:53 PM

ಕೊಪ್ಪಳ, ಫೆಬ್ರವರಿ 13: ನೀವೇನಾದರೂ ಮ್ಯಾಟ್ರಿಮೋನಿ ಆ್ಯಪ್​ನಲ್ಲಿ (Matrimony app) ಹುಡುಗನನ್ನು ಹುಡುಕುತ್ತಿದ್ದೀರಾ? ಹಾಗಾದರೆ ಈ ಸ್ಟೋರಿಯನ್ನು ನೀವು ತಪ್ಪದೇ ಓದಿ. ಯಾಕಂದ್ರೆ ಇಲ್ಲೋರ್ವ ಕಿಲಾಡಿ, ಮ್ಯಾಟ್ರಿಮೋನಿಯಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ, ಯುವತಿಯರ ನಂಬರ್ ಪಡೆಯುತ್ತಿದ್ದ. ನಂತರ ಅವರಿಗೆ ಕೆಲಸ ಕೊಡಿಸುತ್ತೇನೆ, ಮದುವೆಯಾಗ್ತೇನೆ ಅಂತ ಹೇಳಿ ಸಾವಿರಾರು ರೂಪಾಯಿ ಪಡೆದು ವಂಚನೆ ಮಾಡುತ್ತಿದ್ದ. ಇನ್ನೊಂದೆಡೆ ಓರ್ವ ಮಹಿಳೆಗೆ ಮದುವೆಯಾಗಿ ಆಕೆಗೆ ಅರ್ಧದಾರಿಯಲ್ಲೇ ಬಿಟ್ಟಿದ್ದಾನೆ. ರಾಜ್ಯದ ಅನೇಕ ಮಹಿಳೆಯರಿಗೆ ಮದುವೆ, ಕೆಲಸದ ಆಸೆ ತೋರಿಸಿ ಹಣ ಪಡೆಯುವುದನ್ನೇ ದಂಧೆ ಮಾಡಿಕೊಂಡಿದ್ದ ಕಿಲಾಡಿಯನ್ನು ಕೊಪ್ಪಳ ಪೊಲೀಸರು ಜೈಲಿಗಟ್ಟಿದ್ದಾರೆ.

ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಯುವತಿಯರಿಗೆ ವಂಚನೆ

ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ನಿವಾಸಿಯಾಗಿರುವ ಜೈಭೀಮ್ ಪಡಕೋಟಿ ಇದೀಗ ಕಂಬಿಹಿಂದೆ ಹೋಗಿದ್ದಾನೆ. ಈ ಜೈಭೀಮ್, ಮಾಡಬಾರದ ಕೆಲಸಗಳನ್ನೆಲ್ಲಾ ಮಾಡಿದ್ದಾನೆ. ಈತನ ಮನೆಹಾಳು ಕೆಲಸ ಕೇಳಿದರೆ ನೀವು ಕೂಡ ಛೀ ಥೂ ಅಂತೀರಾ. ಯಾಕಂದರೆ ಈತ ಹಣಕ್ಕಾಗಿ ಅನೇಕ ಮಹಿಳೆಯರ ಜೀವನವನ್ನೇ ಹಾಳು ಮಾಡಿದ್ದಾನೆ. ಎಸ್​ಎಸ್​ಎಲ್​ಸಿ ಓದಿರುವ ಈತ ದುಡಿದು ತಿನ್ನೋಕೆ ಯಾವುದೇ ಕೆಲಸ ಮಾಡಲ್ಲ. ಆದರೆ ಮಾಡುತ್ತಿರುವುದು ಮನೆಹಾಳು ಕೆಲಸ.

ಇದನ್ನೂ ಓದಿ: ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ಅಯೋಧ್ಯೆಗೆ ತೆರಳುತ್ತಿದ್ದ ಕೊಪ್ಪಳದ ಯುವಕ ದುರಂತ ಸಾವು

ಅನೇಕ ಮ್ಯಾಟ್ರಿಮೋನಿ ಆ್ಯಪ್​ಗಳಲ್ಲಿ ತನ್ನ ಪ್ರೊಫೈಲ್​ನ್ನು ಕ್ರಿಯೇಟ್ ಮಾಡಿ, ಅಲ್ಲಿ ತನ್ನ ಸುಂದರ ಭಾವಚಿತ್ರವನ್ನು ಹಾಕುತ್ತಿದ್ದ. ಜೊತೆಗೆ ತಾನು ಕೆಇಬಿಯಲ್ಲಿ ಕ್ಲಾಸ್ ಒನ್ ಆಫೀಸರ್ ಇದ್ದೇನೆ ಅಂತ ಮಾಹಿತಿ ಹಾಕುತ್ತಿದ್ದ. ನಂತರ ಆ್ಯಪ್​ಗಳಲ್ಲಿ ಅನೇಕ ಯುವತಿಯರ ಪ್ರೊಫೈಲ್​ಗಳನ್ನು ಚೆಕ್ ಮಾಡಿ, ಅವರ ನಂಬರ್ ಪಡೆಯುತ್ತಿದ್ದ. ಬಳಿಕ ಅವರ ಜೊತೆ ಚಾಟ್ ಮಾಡುತ್ತಿದ್ದ ಜೈಭೀಮ್, ಅವರಿಗೆ ಬಣ್ಣ ಬಣ್ಣದ ಮಾತುಗಳನ್ನು ಹೇಳಿ ನಂಬಿಸುತ್ತಿದ್ದ. ಇದೇ ರೀತಿ ಕೊಪ್ಪಳ ತಾಲೂಕಿನ ಹಳ್ಳಿಯೊಂದರ ಯುವತಿಯನ್ನ ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು, ನಂತರ ಅವರ ಕುಟುಂಬದ ಬೆನ್ನುಬಿದ್ದು 2021 ರಲ್ಲಿ ಮದುವೆಯಾಗಿದ್ದ. ಆದರೆ ಮದುವೆಯಾಗಿ ಕೆಲವೇ ದಿನಕ್ಕೆ ಪತ್ನಿಗೆ ಕಿರುಕುಳ ಕೊಡಲು ಆರಂಭಿಸಿದ್ದ. ಹೀಗಾಗಿ ಮಹಿಳೆ ತವರು ಮನೆಗೆ ಬಂದಿದ್ದು, ತನ್ನ ಮಗು ಮತ್ತು ತಾಯಿ ಜೊತೆ ವಾಸ ಮಾಡುತ್ತಿದ್ದಾಳೆ.

ಮದುವೆಯಾದ ನಂತರ ಮಹಿಳೆಗೆ ಗೊತ್ತಾಗಿದೆ, ಜೈ ಭೀಮ್ ಸಾಧಾರಣ ವ್ಯಕ್ತಿಯಲ್ಲ, ಬದಲಾಗಿ ಅನೇಕರಿಗೆ ವಂಚಿಸುವುದೇ ಇತನ ಕಾಯಕ ಅಂತ. ಹೀಗಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ 2023 ರಲ್ಲಿ ಜೈಭೀಮ್ ವಿರುದ್ದ ದೂರು ನೀಡಿದ್ದಳು. ಆದರೆ ನಾನ್ ಬೇಲಬಲ್ ವಾರೆಂಟ್ ಇದ್ದರೂ ಕೂಡ ಪೊಲೀಸರಿಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕಿಲಾಡಿಯನ್ನು ಕೊಪ್ಪಳ ಮಹಿಳಾ ಠಾಣೆ ಪೊಲೀಸರು ಬಂಧಿಸಿ ಇದೀಗ ಜೈಲಿಗಟ್ಟಿದ್ದಾರೆ.

ನನ್ನ ತಂದೆ ಮೃತಪಟ್ಟ ಐದೇ ದಿನಕ್ಕೆ ತನ್ನ ನಂಬರ್ ಪಡೆದು ಕರೆ ಮಾಡಿದ್ದ ಜೈಭೀಮ್, ನಂತರ ನಮ್ಮ ವಿಳಾಸ ಪಡೆದು, ಮನೆಗೆ ಬಂದಿದ್ದ. ನಾನು ಕೆಇಬಿಯಲ್ಲಿ ದೊಡ್ಡ ಅಧಿಕಾರಿ ಇದ್ದೇನೆ. ನನಗೆ ಹೆಣ್ಣು ಕೊಡಲ್ವಾ ಅಂತ ಹೆತ್ತವರಿಗೆ ನಂಬಿಸಿದ್ದ. ಹತ್ತಾರು ಸುಳ್ಳು ಹೇಳಿ, ಹೆದರಿಸಿ ಯುವತಿಯನ್ನು ಮದುವೆಯಾಗಿದ್ದನಂತೆ. ಇದಾದ ಮೇಲೆ ತನ್ನ ತಮ್ಮನಿಗೆ ನೌಕರಿ ಕೊಡಿಸೋದಾಗಿ ಹೇಳಿ ಎರಡು ಲಕ್ಷ ರೂ, ಬೇರೆ ಕಾರಣ ಹೇಳಿ ಐವತ್ತು ಸಾವಿರ ರೂ. ಹಣ ಪಡೆದಿದ್ದ. ಕೆಲ ತಿಂಗಳ ಕಾಲ ಗಂಡನ ಮನೆಯಲ್ಲಿದ್ದ ಮಹಿಳೆಗೆ ಟಾರ್ಚರ್ ಕೊಡಲು ಆರಂಭಿಸಿದ್ದ. ಹೀಗಾಗಿ ಗರ್ಭಿಣಿಯಾಗಿದ್ದ ಮಹಿಳೆ ತವರು ಮನೆಗೆ ಬಂದಿದ್ದಳು. ಆತನ ಅನೇಕ ಕೆಟ್ಟ ಕೆಲಸಗಳನ್ನು ತಿಳಿದ ಮಹಿಳೆ, ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ನೀಡಿದ್ದಳು. ಈ ಪ್ರಕರಣದ ಬೆನ್ನು ಹತ್ತಿದ್ದಾಗ, ಆರೋಪಿಯ ಅಸಲಿ ಮುಖ ಬಯಲಾಗಿದೆ. ಜೈ ಭೀಮ್ ಅತ್ಯಂತ ಕೆಟ್ಟವ್ಯಕ್ತಿಯಾಗಿದ್ದು, ಆತನಿಂದ ಯಾವುದೇ ಯುವತಿಯರು ಮೋಸ ಹೋಗಬಾರದು. ತನಗೆ ನ್ಯಾಯ ಬೇಕು ಅಂತಿದ್ದಾರೆ ವಂಚನೆಗೊಳಗಾದ ಕೊಪ್ಪಳದ ಮಹಿಳೆ.

ಜೈಭೀಮ್ ವಿರುದ್ದ ರಾಜ್ಯದ 9 ಠಾಣೆಯಲ್ಲಿ 11 ಪ್ರಕರಣಗಳು

ಜೈಭೀಮ್ ನನ್ನು ಬಂಧಿಸಿದ ನಂತರ, ಆತನ ಮೇಲೆ ರಾಜ್ಯದ 9 ಪೊಲೀಸ್ ಠಾಣೆಗಳಲ್ಲಿ ಹನ್ನೊಂದು ಪ್ರಕರಣಗಳು ಇರುವುದು ಗೊತ್ತಾಗಿದೆ. ಕೊಲೆ ಪ್ರಕರಣದ ಆರೋಪಿ ಕೂಡ ಆಗಿರೋ ಜೈ ಭೀಮ್ ಮೇಲೆ ಮಹಿಳೆಯರಿಗೆ ಮದುವೆಯಾಗೋದಾಗಿ ಹೇಳಿ ವಂಚಿಸಿರೋದು, ಕೆಲಸ ಕೊಡಿಸೋದಾಗಿ ಹೇಳಿ ವಂಚಿಸಿರೋ ಪ್ರಕರಣಗಳಿವೆ.

ಇದನ್ನೂ ಓದಿ: ಸ್ಟೀಲ್ ಪ್ಯಾಕ್ಟರಿಯಲ್ಲಿ ಕಾರ್ಬನ್ ಮೋನಾಕ್ಸೈಡ್ ಲೀಕ್: ಓರ್ವ ಕಾರ್ಮಿಕ ಸಾವು, 9 ಜನ ಅಸ್ವಸ್ಥ

ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಯ ಯುವತಿಯರಿಗೆ, ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡಿದ್ದ ಜೈಭೀಮ್, ನಂತರ ಅನೇಕರಿಗೆ ತಾನು ಸ್ವಲ್ಪ ತೊಂದರೆಯಲ್ಲಿದ್ದೇನೆ ಅಂತ ಹೇಳಿ ಹಣ ಪಡೆದುಕೊಂಡಿದ್ದರೆ, ಇನ್ನು ಅನೇಕರಿಗೆ ನಾನು ಕೆಇಬಿಯಲ್ಲಿ ಪ್ರಮುಖ ಅಧಿಕಾರಿಯಾಗಿದ್ದೇನೆ. ನಿಮಗೆ ಕೆಲಸ ಕೊಡಿಸ್ತೇನೆ ಅಂತ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ. ವಂಚನೆಗೊಳಗಾದ ಅನೇಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರೆ, ಇನ್ನು ಅನೇಕರು ಮರ್ಯಾದೆಗೆ ಅಂಜಿ ದೂರು ನೀಡಿಲ್ಲ.

ವಂಚಿಸಿದ ಹಣದಲ್ಲಿ ಮೋಜು ಮಸ್ತಿ 

ಇನ್ನು ಯುವತಿಯರಿಗೆ, ಅವರ ಕುಟುಂಬದವರಿಗೆ ವಂಚನೆ ಮಾಡುತ್ತಿದ್ದ ಜೈಭೀಮ್, ಹಣವನ್ನು ಗೋವಾದ ಕ್ಯಾಸಿನೋ ಹೋಗಿ ಮೋಜು ಮಸ್ತಿ ಮಾಡುತ್ತಿದ್ದ. ಜೀವನಕ್ಕೆ ಯಾವುದೇ ಕೆಲಸ ಮಾಡದೇ ಇದ್ದರು, ಪ್ರತಿನಿತ್ಯ ವಂಚಿಸೋದನ್ನೇ ಕಾಯಕ ಮಾಡಿಕೊಂಡಿದ್ದ ಜೈಭೀಮ್ ರಾಯಲ್ ಲೈಫ್ ಲೀಡ್ ಮಾಡುತ್ತಿದ್ದನಂತೆ. ಅನೇಕರಿಗೆ ಮದುವೆಯಾಗಲು ಹುಡುಗಿ ಸಿಗದ ಕಾಲದಲ್ಲಿ, ಈ ಜೈಭೀಮ್ ಅನೇಕ ಯುವತಿಯರಿಗೆ, ವಂಚಿಸಿರೋದು ಅಚ್ಚರಿಯಾದರು ಕೂಡ ಸತ್ಯ. ಇಂತಹ ಖತರ್ನಾಕ ಕಿಲಾಡಿಗೆ ತಕ್ಕ ಶಿಕ್ಷೆಯಾಗುವಂತೆ ಪೊಲೀಸರು ನೋಡಿಕೊಳ್ಳಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:29 pm, Thu, 13 February 25