ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ಅಯೋಧ್ಯೆಗೆ ತೆರಳುತ್ತಿದ್ದ ಕೊಪ್ಪಳದ ಯುವಕ ದುರಂತ ಸಾವು
ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮೊನ್ನೆ ಕಾಲ್ತುಳಿತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 30 ಜನರು ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದರು. ಇನ್ನು ಈ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ವರು ಹಾಗೂ ಚಿತ್ರದುರ್ಗದ ನಾಗಸಾಧು ಸಾವನ್ನಪ್ಪಿದ್ದರು. ಇದೀಗ ಮಹಾಕುಂಭ ಕಣ್ತುಂಬಿಕೊಂಡು ಪ್ರಯಾಗರಾಜ್ನಿಂದ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುತ್ತಿದ್ದ ಕೊಪ್ಪಳ ಜಿಲ್ಲೆಯ ಯುವಕ ದುರಂತ ಸಾವನ್ನಪ್ಪಿದ್ದಾನೆ.

ಕೊಪ್ಪಳ, (ಫೆಬ್ರವರಿ 04): ಪ್ರಯಾಗರಾಜ್ನ ಮಹಾಕುಂಭಮೇಳಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ಜನರು ಹೋಗಿದ್ದಾರೆ. ಅದರಂತೆ ಕೊಪ್ಪಳ ಜಿಲ್ಲೆಯ ಯುವಕನೋರ್ವ ಸಹ ಕುಂಭಮೇಳಕ್ಕೆ ತೆರಳಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾನೆ. ಬಳಿಕ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುತ್ತಿದ್ದ ವೇಳೆ ದುರಂತ ಸಾವು ಕಂಡಿದ್ದಾನೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸಿದ್ದಾಪುರ ನಿವಾಸಿ ಪ್ರವೀಣ್ ಹೊಸಮನಿ(27) ಮೃತ ದುರ್ವೈವಿ. ಅಯೋಧ್ಯೆಗೆ ತೆರಳುತ್ತಿದ್ದ ಪ್ರವೀಣ್ ಗೋರಖ್ಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ.
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸಿದ್ದಾಪುರ ನಿವಾಸಿಯಾಗಿರುವ 28 ವರ್ಷದ ಪ್ರವೀಣ್ ಹೊಸಮನಿ ಎನ್ನುವ ಯುವಕ ಕಳೆದ 15 ದಿನದ ಹಿಂದೆಯೇ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳಿದ್ದ. 144 ವರ್ಷಕ್ಕೊಮ್ಮೆ ನಡೆಯುವ ಈ ಮಹಾಕುಂಭಮೇಳದಲ್ಲಿ ಭಾಗವಹಿಸಿ ಎಲ್ಲವನ್ನೂ ಕಣ್ತುಂಬಿಕೊಂಡಿದ್ದ. ಅಲ್ಲದೇ ತ್ರಿವೇಣಿ ಸಂಗಮದಲ್ಲೂ ಸಹ ಪುಣ್ಯ ಸ್ನಾನ ಮಾಡಿದ್ದ. ಬಳಿಕ ರಾಮನ ದರ್ಶನ ಪಡೆಯಲೆಂದು ಪ್ರಯಾಗ್ರಾಜ್ನಿಂದ ಅಯೋಧ್ಯೆಗೆ ಹೊರಟ್ಟಿದ್ದಾನೆ. ಆದ್ರೆ, ದುರದೃಷ್ಟವಶಾತ್ ರಾಮನ ಜನ್ಮಸ್ಥಳಕ್ಕೆ ಕಾಲಿಡುವ ಮುನ್ನವೇ ಮಾರ್ಗ ಮಧ್ಯೆ ಗೋರಖ್ಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ತಗುಲಿ ಪ್ರವೀಣ್ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಪ್ರಯಾಗ್ರಾಜ್ನಿಂದ ಬೆಳಗಾವಿಗೆ ವಾಪಸ್ಸಾಗುತ್ತಿದ್ದ ವ್ಯಕ್ತಿ ರೈಲಿನಲ್ಲೇ ಸಾವು
ಇನ್ನು ಈ ಸಾವಿನ ಬಗ್ಗೆ ಸ್ಥಳೀಯ ಪೊಲೀಸರು ಪ್ರವೀಣ್ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಪ್ರವೀಣ್ ಮೃತದೇಹವನ್ನು ಗೋರಖ್ಪುರದಿಂದ ಕೊಪ್ಪಳಕ್ಕೆ ತರಲು ವ್ಯವಸ್ಥೆ ಮಾಡಿದ್ದಾರೆ. ಆದ್ರೆ, ರೈಲ್ವೆ ಸ್ಟೇಷನ್ನಲ್ಲಿ ಅದು ಹೇಗೆ ವಿದ್ಯುತ್ ತಗುಲಿತು? ಹೇಗೆ ಮೃತಪಟ್ಟಿದ್ದಾನೆ ಎನ್ನುವುದು ಮಾತ್ರ ಇನ್ನೂ ತಿಳಿದುಬಂದಿಲ್ಲ.
ಪ್ರಯಾಗ್ರಾಜ್ನ ಮಹಾಕುಂಭಮೇಳದ ತ್ರಿವೇಣಿ ಸಂಗಮದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ವರು ಮೃತಟ್ಟಿದ್ದರೆ, ಹಲವರು ಗಾಯಗೊಂಡಿದ್ದರು. ಬೆಳಗಾವಿ ಮೂಲದ ಜ್ಯೋತಿ ಹತ್ತರವಾಠ, ಪುತ್ರಿ ಮೇಘಾ, ಅರುಣ್ ಹಾಗೂ ಮಹಾದೇವಿ ಅನ್ನೋ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಅಲ್ಲದೇ ಚಿತ್ರದುರ್ಗದ ಬಂಜಾರ ಗುರು ಪೀಠದಲ್ಲಿ ನೆಲೆಸಿದ್ದ ರಾಜನಾಥ್ ಮಹಾರಾಜ್(49) ಎನ್ನುವ ನಾಗಸಾಧು ಮೃತಪಟ್ಟಿದ್ದರು.
ಇನ್ನು ಬೆಳಗಾವಿ ಮೂಲದ ವ್ಯಕ್ತಿಯೋರ್ವ ಮಹಾಕುಂಭಮೇಳವನ್ನು ಕಣ್ತುಂಬಿಕೊಂಡು ಸಂತೋಷವಾಗಿ ವಾಪಸ್ ಮನೆಗೆ ಬರುವ ವೇಳೆ ಮಾರ್ಗಮಧ್ಯೆಯೇ ರೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:22 pm, Tue, 4 February 25