ಪ್ರಯಾಗ್ರಾಜ್ನಿಂದ ಬೆಳಗಾವಿಗೆ ವಾಪಸ್ಸಾಗುತ್ತಿದ್ದ ವ್ಯಕ್ತಿ ರೈಲಿನಲ್ಲೇ ಸಾವು
ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ದಿನವೇ ಪುಣ್ಯಸ್ನಾನಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಸಾವನ್ನಪ್ಪಿದ್ದರು. ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿದಲ್ಲಿ ಬೆಳಗಾವಿಯ ನಾಲ್ವರು ದಾರುಣ ಸಾವು ಕಂಡಿದ್ದರು. ಈ ಮಧ್ಯೆ ಪ್ರಯಾಗ್ರಾಜ್ನಿಂದ ಬೆಳಗಾವಿಗೆ ವಾಪಸ್ಸಾಗುತ್ತಿದ್ದ ಮತ್ತೊರ್ವ ವ್ಯಕ್ತಿ ರೈಲಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಳಗಾವಿ, ಜನವರಿ 30: ಪ್ರಯಾಗ್‌ರಾಜ್‌ನಲ್ಲಿ ಮೌನಿ ಅಮಾವಾಸ್ಯೆಯ ಮಹಾ ಕುಂಭಮೇಳದಲ್ಲಿ (Mahakumbh) ಭೀಕರ ಕಾಲ್ತುಳಿತ ಉಂಟಾಗಿತ್ತು. ಈ ದುರಂತದಲ್ಲಿ ನಾಲ್ವರು ಕನ್ನಡಿಗರು ಸಾವನ್ನಪ್ಪಿದ್ದಾರೆ. ಈ ಮಧ್ಯೆ ಪ್ರಯಾಗರಾಜ್ದಿಂದ ಮರಳಿ ಬೆಳಗಾವಿಗೆ ವಾಪಸಾಗುತ್ತಿದ್ದ ಓರ್ವ ವ್ಯಕ್ತಿಗೆ ಹೃದಯಾಘಾತವಾಗಿ ರೈಲಿನಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ರವಿ ಜಟಾರ(61) ಮೃತ ವ್ಯಕ್ತಿ.
ಮೃತ ರವಿ ಜಟಾರ(61) ಬೆಳಗಾವಿಯ ದೇಶಪಾಂಡೆ ಗಲ್ಲಿ ನಿವಾಸಿ. ಪ್ರಯಾಗ್ರಾಜ್ದಿಂದ ಬೆಳಗಾವಿಗೆ ರೈಲಿನಲ್ಲಿ ಬರುವಾಗ ಪುಣೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕುಂಭಮೇಳದಲ್ಲಿ ಕಾಲ್ತುಳಿತ: ತಾಯಿ-ಮಗಳು ಸೇರಿದಂತೆ ಬೆಳಗಾವಿಯ ನಾಲ್ವರು ದುರಂತ ಸಾವು
ಬೆಳಗಾವಿ ನಗರದಿಂದ ನೂರಕ್ಕೂ ಅಧಿಕ ಜನರ ತಂಡ ಕುಂಭಮೇಳಕ್ಕೆ ಹೋಗಿದ್ದರು. ಐತಿಹಾಸಿಕ ಪುಣ್ಯ ಸ್ನಾನಕ್ಕೆ ಹೋದವರು ದೇವರ ಪಾದ ಸೇರಿದ್ದರೆ, ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬೆಳಗಾವಿಯ ವಡವಾಗಿಯ ನಿವಾಸಿಗಳಾದ ತಾಯಿ ಜ್ಯೋತಿ ಹತ್ತರವಾಠ, ಮಗಳು ಮೇಘನಾ ಹತ್ತರವಾಠ, ಶೆಟ್ಟಿಗಲ್ಲಿಯ ನಿವಾಸಿ ಅರುಣ್ ಕೋಪಾರ್ಡೆ ಮತ್ತು ಶಿವಾಜಿ ನಗರದ ನಿವಾಸಿ ಮಾಧುರಿ ಊರ್ಫ ಮಹಾದೇವಿ ಬಾವನೂರು ಮೃತರು.
ಜಿಲ್ಲಾಡಳಿತ ಮೃತರ ಶವ ತರುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ಮಾಡಿದೆ. ಕರ್ನಾಟಕ ಭವನದಿಂದ ದೆಹಲಿ ಏರ್ಪೋರ್ಟ್ಗೆ ಇಂದು ಎರಡು ಮೃತದೇಹಗಳು ಬಂದಿವೆ. ದೆಹಲಿಯಿಂದ ಬೆಳಗಾವಿಗೆ ನೇರವಾಗಿ ಮಹಾದೇವಿ ಬಾವನೂರ, ಅರುಣ್ ಕೋಪರ್ಡೆ ಮೃತದೇಹ ಏರ್ಪೋರ್ಟ್ಗೆ ರವಾನಿಸಲಾಗಿದೆ.
ಇನ್ನೇರಡು ಮೃತದೇಹ ಪ್ಯಾಕಿಂಗ್ ಆಗದ ಮತ್ತು ಬೆಳಗಾವಿಗೆ ಬರುವ ವಿಮಾನ ಮಿಸ್ ಆದ ಕಾರಣಕ್ಕೆ ದೆಹಲಿಯಿಂದ ವಿಮಾನದಲ್ಲಿ ಗೋವಾಕ್ಕೆ ತಂದು, ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಳಗಾವಿಗೆ ತರಲು ಪ್ಲ್ಯಾನ್ ಮಾಡಲಾಗಿದ್ದು, ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ ಶವ ಬರುವುದರಲ್ಲಿ ವಿಳಂಬವಾಗಲಿದೆ. ಗೋವಾಕ್ಕೆ ಬಂದು ಬಳಿಕ ಬೆಳಗಾವಿಗೆ ಬರಲು ರಾತ್ರಿ 12ಗಂಟೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕುಂಭಮೇಳ ಕಾಲ್ತುಳಿತ: ಬೆಳಗಾವಿಯ ದಂಪತಿಗೆ ಗಾಯ, ಕರ್ನಾಟಕದ ಕೆಲವರು ಗಾಯಗೊಂಡಿರುವ ಶಂಕೆ
ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಶುರುವಾಗಿ 16 ದಿನಗಳು ಯಾವುದೇ ಅಡ್ಡಿ ಆತಂಕವಿಲ್ಲದೇ ನಿರಾತಂಕವಾಗಿ ಪುಣ್ಯ ಸ್ನಾನ ನೆರವೇರಿತ್ತು. ನಿತ್ಯವೂ ಕೋಟ್ಯಂತರ ಭಕ್ತರು ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಶಾಹಿ ಸ್ನಾನ ಮಾಡುತ್ತಿದ್ದರು. ಆದರೆ ನಿನ್ನೆ ಮೌನಿ ಅಮಾವಾಸ್ಯೆ ಅಂಗವಾಗಿ ನಡೆದ ಮಾಘ ಸ್ನಾನಕ್ಕೆ 8 ಕೋಟಿಗೂ ಹೆಚ್ಚು ಜನ ಧಾವಿಸಿ ಬಂದಿದ್ದರು. ಇದೇ ಜನಜಂಗುಳಿಯಲ್ಲಿ ಸಂಗಮದಲ್ಲಿ ಸ್ನಾನ ಮಾಡಲು ನೂಕು ನುಗ್ಗಲು ಉಂಟಾಗಿತ್ತು. ಈ ವೇಳೆ ಬ್ಯಾರಿಕೇಡ್ ಮೇಲೆ ಬಿದ್ದ ಭಕ್ತರಿಂದ ಕಾಲ್ತುಳಿತ ಸಂಭವಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.