ಕೊಪ್ಪಳದಲ್ಲಿ ಭಾವೈಕ್ಯತೆ ಸಂದೇಶ: ಪುರಾತನ ಆಂಜನೇಯ ವಿಗ್ರಹಕ್ಕೆ ಮುಸ್ಲಿಂ ವ್ಯಕ್ತಿ ಭಕ್ತಿಯಿಂದ ಪೂಜೆ
ಮುಸ್ಲಿಂ ವ್ಯಕ್ತಿಯೊಬ್ಬರು ಆಂಜನೇಯನಿಗೆ ಅಭಿಷೇಕ ಮಾಡಿ ಭಾವೈಕ್ಯತೆ ಮೆರೆದಿದ್ದಾರೆ. ತಮ್ಮ ಜಮೀನಿನಲ್ಲಿ ಆಂಜನೇಯ ವಿಗ್ರಹವಿಟ್ಟು ಪೂಜೆ ಮಾಡಿದ್ದಾರೆ.
ಕೊಪ್ಪಳ: ರಾಜ್ಯದಲ್ಲಿ ಧರ್ಮ ದಂಗಲ್ ಮಧ್ಯೆಯೇ ಹಿರೇಗೊಣ್ಣಾಗರ ಗ್ರಾಮದ ಮುಸ್ಲಿಂ ವ್ಯಕ್ತಿಯೊಬ್ಬರು ಆಂಜನೇಯನಿಗೆ ಅಭಿಷೇಕ ಮಾಡಿ ಭಾವೈಕ್ಯತೆ ಮೆರೆದಿದ್ದಾರೆ. ತಮ್ಮ ಜಮೀನಿನಲ್ಲಿ ಆಂಜನೇಯ ವಿಗ್ರಹವಿಟ್ಟು ಪೂಜೆ ಮಾಡಿದ್ದಾರೆ. ಮುಸ್ಲೀಂ ವ್ಯಕ್ತಿ ಆಂಜನೇಯನ ಭಕ್ತನಾಗಿರುವುದುನ್ನು ಕಂಡು ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಗೊಣ್ಣಾಗರ ಗ್ರಾಮದ ಅಮೀನ್ ಸಾಬ್ ಎಂಬಾತನೇ ಭಾವೈಕತೆ ಸಂದೇಶ ಸಾರಿದ ವ್ಯಕ್ತಿ. ಅಮೀನ್ ಸಾಬ್ ತನ್ನ ಜಮೀನಿನಲ್ಲಿ ಆಂಜನೇಯ ವಿಗ್ರಹವಿಟ್ಟು ಅಭೀಷಕ ಮಾಡಿದ್ದಾರೆ. ಈ ಅಭೀಷಕದಲ್ಲಿ ಕೇವಲ ಆತ ಅಲ್ಲದೇ ಗ್ರಾಮದ ಹಿಂದೂ ಜನ ಕೂಡಾ ಭಾಗವಹಿಸಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಅಮಿನ್ ಸಾಬ್ ಜಮೀನಿನಲ್ಲಿ ಅವರ ಮುತ್ತಾತನ ಕಾಲದಿಂದಲೂ ಈ ಆಂಜನೇಯ ವಿಗ್ರಹವಿತ್ತಂತೆ. ಅಲ್ಲದೇ ಅಮಿನ್ ಸಾಬ್ ಕುಟುಂಬಸ್ಥರು ತಮ್ಮ ಜಮೀನಿನಲ್ಲಿಯೇ ವಾಯುಪುತ್ರನಿಗೆ ಕಟ್ಟೆ ಕಟ್ಟಿ ಪ್ರತಿ ವರ್ಷ ಸರಳವಾಗಿ ಪೂಜೆ ಸಲ್ಲಿಸುತ್ತಿದ್ದಾರಂತೆ. ಆದ್ರೆ ಇತ್ತೀಚಿನ ಕೆಲ ವರ್ಷಗಳಿಂದ ಅಮಿನ್ ಸಾಬ್ ಕುಟುಂಬಸ್ಥರು ಆಂಜನೇಯನಿಗೆ ಪೂಜೆ ಸಲ್ಲಿಸೋದನ್ನ ನಿಲ್ಲಿಸಿದ್ದರಂತೆ. ಹೀಗಾಗೇ ಕ್ರಮೇಣ ಅಮಿನಸಾಬ್ ಕುಟುಂಬಕ್ಕೆ ಸಾಕಷ್ಟು ತೊಂದರೆಗಳು ಎದುರಾದವಂತೆ. ಹಿರಿಯರು ಹಾಗೂ ಕೆಲ ಗುರುಗಳ ಸಲಹೆಯೆಂತೆ ಮತ್ತೆ ಆಂಜನೇಯನ ವಿಗ್ರಹಕ್ಕೆ ಪೂಜೆ ಸಲ್ಲಿಸುವುದಕ್ಕೆ ಶುರು ಮಾಡಿದ್ದಾರಂತೆ.
ಹೀಗೆಯೇ ಕ್ರಮೇಣ ಅಮಿನ್ ಸಾಬ್ ಕುಟುಂಬಕ್ಕೆ ಎದುರಾಗಿದ್ದ ಸಂಕಷ್ಟಗಳು ಒಂದೊಂದಾಗಿಯೇ ದೂರವಾಗಿವೆ ಎಂದು ಅಮಿನ್ ಸಾಬ್ ಟಿವಿ9 ಜೊತೆ ಮಾತನಾಡುತ್ತ ತಿಳಿಸಿದ್ದಾರೆ. ಹೀಗಾಗಿ ಸಧ್ಯ ಪ್ರತಿ ಅಮವಾಸ್ಯೆಗೂ ಆಂಜನೇಯನಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಗೆ ಗ್ರಾಮದ ಹಿಂದೂಗಳನ್ನ ಕರೆಯಿಸುತ್ತಾರೆ. ಅವರಿಂದಲೇ ಪೂಜೆ ನೆರವೆರಿಸೋದ್ರ ಮೂಲಕ ಭಾವಕೈತೆಯ ಸಂದೇಶ ಸಾರುತ್ತಿದ್ದಾರೆ. ಇನ್ನು ಮೊನ್ನೆ ನಡೆದ ಕಾರ್ತಿಕ ಮಾಸದ ಕೊನೆಯ ದಿನವೂ ಅದ್ದೂರಿಯಾಗಿ ದೀಪೋತ್ಸವ ನಡೆದಿದೆ. ಅಲ್ಲದೆ ಇಲ್ಲಿಗೆ ಪ್ರತಿನಿತ್ಯ ಸ್ವಗ್ರಾಮವಲ್ಲದೇ ಅಕ್ಕಪಕ್ಕದ ಗ್ರಾಮದ ಜನ ಕೂಡ ಬರುತ್ತಿದ್ದಾರೆ. ಹೀಗಾಗೇ ಇಲ್ಲೊಂದು ಪುಟ್ಟ ಶೆಡ್ ನಿರ್ಮಿಸುವ ಉದ್ದೇಶವಿದೆ ಎಂದು ಅಮಿನ್ ಸಾಬ್ ಹೇಳಿದ್ರು.
ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಕೊಪ್ಪಳ
ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ