ಕೊಪ್ಪಳ, ಡಿ.16: ಒಂದು ಸಣ್ಣ ಮುಳ್ಳು(thorn) ಚುಚ್ಚಿದರೂ ಕೂಡ ಜೀವ ಹೋದಂತೆ ಆಗುತ್ತದೆ. ಆದ್ರೆ, ಕೊಪ್ಪಳ(Koppal) ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ನಡೆಯುವ ಜಾತ್ರೆ ವಿಶಿಷ್ಟ ಆಚರಣೆಯಿಂದ ಗಮನಸಳೆಯುತ್ತಿದೆ. ಈ ಗ್ರಾಮದ ಜನರು ತಮ್ಮ ಭಕ್ತಿಯನ್ನು ತೋರಿಸುವುದೇ ವಿಶಿಷ್ಟವಾಗಿದೆ. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಲೇಬಗಿರಿ ಗ್ರಾಮದಲ್ಲಿ ಮಾರುತೇಶ್ವರ ಕಾರ್ತಿಕ ಮಾಸದ ಅಂಗವಾಗಿ ಅದ್ದೂರಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಲೇಬಗೇರಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನ ಬರುತ್ತಾರೆ. ಮುಂಜಾನೆಯಿಂದ ಮಾರುತೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ಭಕ್ತಿಯಿಂದ ನಮಸ್ಕಾರ ಮಾಡುತ್ತಾರೆ. ಸಂಜೆಯಾಗುತ್ತಿದ್ದಂತೆ ಗ್ರಾಮದಲ್ಲಿ ಮೂರು ಕಡೆ ಮುಳ್ಳಿನ ರಾಶಿಯನ್ನು ಹಾಕಿ, ಆ ಮುಳ್ಳಿನ ರಾಶಿ ಮೇಲೆ ನೂರಾರು ಜನ ಬೀಳುತ್ತಾರೆ.
ಇನ್ನು ಮುಂಜಾನೆ ಗ್ರಾಮದ ಹೊರವಲಯಕ್ಕೆ ಬಾರಿಗಾಲಲ್ಲಿ ನಡೆದುಕೊಂಡು ಹೋಗುವ ಜನರು, ಯಾವುದೇ ಅಸ್ತ್ರಗಳನ್ನು ಬಳಸದೆ ಕೇವಲ ಕಲ್ಲಿನಿಂದ ಮುಳ್ಳಿನ ಗಿಡಗಳನ್ನು ಕತ್ತರಿಸಿ ಗ್ರಾಮಕ್ಕೆ ತಗೆದುಕೊಂಡು ಬರುತ್ತಾರೆ. ಹೀಗೆ ಬಂದವರು ಗ್ರಾಮದಲ್ಲಿ ರಾಶಿ ಹಾಕುತ್ತಾರೆ. ಇದೇ ರಾಶಿ ಮೇಲೆ ನೂರಾರು ಜನ ಬಿದ್ದು ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಾರೆ. ಇನ್ನು ಒಂದು ಸಣ್ಣ ಮುಳ್ಳು ಚುಚ್ಚಿದರೂ ಕೂಡ ಜೀವ ಹೋದಂತಾಗುತ್ತದೆ. ಆದ್ರೆ, ಲೇಬಗೇರಿ ಗ್ರಾಮದಲ್ಲಿ ಇಂದು ಮುಳ್ಳಿನ ರಾಶಿ ಮೇಲೆ ಬಿದ್ದು ಒದ್ದಾಡಿದರು ಕೂಡ ಏನು ಆಗೋದಿಲ್ಲವಂತೆ.
ಬರಿ ಮೈಯಲ್ಲಿ ಬಿದ್ದರು ಕೂಡ ಮುಳ್ಳು ನಡೋದಿಲ್ಲವಂತೆ. ಕೆಲವರಿಗೆ ಮುಳ್ಳು ನಟ್ಟರು ಕೂಡ ಇಂದು ರಾತ್ರಿ ಸಮಯದಲ್ಲಿ ಕಂಬಳಿ ಹೊದ್ದು ಮಲಗಿದರೆ ಸಾಕು, ಮೈಮೇಲೆ ನಟ್ಟಿರುವ ಮುಳ್ಳುಗಳು ತಾವಾಗೇ ಹೊರ ಬರುತ್ತವೆ. ಈ ಕುರಿತು ‘ಮುಳ್ಳುಗಳ ಮೇಲೆ ಬಿದ್ದರು ಕೂಡ ನಮಗೆ ತಮಗೇನು ಆಗೋದಿಲ್ಲ, ಹೂವಿನ ರಾಶಿ ಮೇಲೆ ಬಿದ್ದಂತಾಗುತ್ತೆ ಎನ್ನುತ್ತಾರೆ ಜನರು. ಇನ್ನು ಇಂತಹದೊಂದು ವಿಶಿಷ್ಟ ಆಚರಣೆ ಈ ಗ್ರಾಮದಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆಯಂತೆ. ಯಾವ ವರ್ಷ ಕೂಡ ಮುಳ್ಳಿನ ರಾಶಿ ಮೇಲೆ ಬಿದ್ದು ಒದ್ದಾಡಿದ್ರು, ಯಾರಿಗೂ ಸಣ್ಣ ಆಪತ್ತು ಆಗಿಲ್ಲ. ಮಾರುತೇಶ್ವರನ ಆಶಿರ್ವಾದದಿಂದ ಎಲ್ಲರೂ ಆರೋಗ್ಯವಾಗಿ ಇರ್ತಾರೆ ಎಂದು ಗ್ರಾಮದ ಜನ ಹೇಳುತ್ತಾರೆ.
ಇನ್ನು ಈ ಜಾತ್ರೆಗೆ ಗ್ರಾಮದ ಎಲ್ಲಾ ಜನ, ಜಾತಿ ಮತವೆನ್ನದೇ, ಧರ್ಮಗಳೆನ್ನದೇ ಎಲ್ಲರು ಭಾಗಿಯಾಗುತ್ತಾರೆ. ಭಕ್ತಿಯಿಂದ ಮಾರುತಿಗೆ ಪೂಜಿಸುತ್ತಾರೆ. ನಾನು ಪ್ರತಿವರ್ಷ ಮುಳ್ಳಿನ ರಾಶಿಯಲ್ಲಿ ಬೀಳುತ್ತೇನೆ. ಇಂದು ಕೂಡಾ ಮೂರು ಕಡೆ ಮುಳ್ಳಿನ ರಾಶಿಯಲ್ಲಿ ಬಿದ್ದಿದ್ದೇನೆ. ನನಗೆ ಯಾವುದೇ ಮುಳ್ಳು ನಟ್ಟಿಲ್ಲಾ. ನಟ್ಟರು ಕೂಡಾ ಯಾವುದೇ ನೋವು ಆಗಲ್ಲ. ನಮಗೆಲ್ಲಾ ಮುಳ್ಳಿನ ರಾಶಿ ಮೇಲೆ ಬಿದ್ದಾಗ ಹೂವಿನ ರಾಶಿ ಮೇಲೆ ಬಿದ್ದಂತ ಅನುಭವವಾಗುತ್ತೆ. ಇದೆಲ್ಲಾ ಮಾರುತೇಶ್ವರನ ಕೃಪೆ ಎಂದು ಗ್ರಾಮದ ಮಂಜುನಾಥ ಎಂಬುವವರು ಹೇಳಿದ್ದಾರೆ.
ಇನ್ನು ಇಂತಹದೊಂದು ಆಚರಣೆ ಯಾಕೆ ನಡೆದುಕೊಂಡು ಬಂದಿದೆ ಎಂದು ಯಾರಿಗೂ ಗೊತ್ತಿಲ್ಲ. ನಮ್ಮ ಪೂರ್ವಿಕರು ಆಚರಣೆ ಮಾಡುತ್ತಾ ಬಂದಿದ್ದಾರೆ. ನಾವು ಆಚರಣೆ ಮಾಡಿಕೊಂಡು ಹೋಗ್ತೇವೆ. ಆದ್ರೆ, ಇಂದು ಮಾತ್ರ ಮುಳ್ಳುಗಳು ನಮಗೆ ಹೂವಿದ್ದಂತೆ ಎಂದು ಲೇಬಗೇರಿ ಗ್ರಾಮದ ಜನರು ಹೇಳುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Sat, 16 December 23