ಕೊಪ್ಪಳ, ಏಪ್ರಿಲ್ 24: ಬೆಂಗಳೂರಿನಲ್ಲಿ ರಾಮ ನವಮಿ ದಿನ ಜೈ ಶ್ರೀರಾಮ್ (Jai Sri Ram) ಘೋಷಣೆ ಕೂಗಿದವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿಯಲ್ಲಿ (Gangavati) ಕೂಡ ಅಂಥದ್ದೇ ಘಟನೆ ವರದಿಯಾಗಿದೆ. ಗಂಗಾವತಿಯ ಶ್ರೀರಾಮನಗರದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ವ್ಯಕ್ತಿ ಮೇಲೆ ಸುಮಾರು 20 ಮಂದಿ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಶ್ರೀರಾಮನಗರದ ಸನ್ ಶೈನ್ ಬಾರ್ನಲ್ಲಿ ಮಂಗಳವಾರ ರಾತ್ರಿ ಘಟನೆ ಸಂಭವಿಸಿದೆ. ಮದ್ಯ ಸೇವನೆಯ ವೇಳೆ ಶ್ರೀರಾಮ ನಗರದ ಕುಮಾರ್ ರಾಠೋಡ್ ಎಂಬಾತ ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಅದೇ ವೇಳೆ ಮುಸ್ಲಿಂ ಯವಕರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಗಾಯಾಳು ಕುಮಾರ್ ರಾಠೋಡ್ರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.
ಇದನ್ನೂ ಓದಿ: ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ: ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿಗಳು
ಜೈ ಶ್ರೀರಾಮ್ ಘೋಷಣೆ ಕೂಗಿದ ವ್ಯಕ್ತಿ ಮೇಲೆ ಹಲ್ಲೆ ವಿಚಾರವಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕುಮಾರ್ ರಾಠೋಡ್ಗೆ ಮದ್ಯಪಾನದ ಚಟವಿದೆ. ಬಾರ್ನಲ್ಲಿ ಗ್ಲಾಸಿಗೆ ನೀರು ಸುರಿಯುವ ಸಂದರ್ಭ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ. ಹನುಮ ಜಯಂತಿ ಇರುವ ಕಾರಣ ಆತ ಘೋಷಣೆ ಕೂಗಿದ್ದಾನೆ. ಈ ವೇಳೆ ಅಲ್ಲಿದ್ದ ಮುಸ್ಲಿಂ ಯುವಕನೊಬ್ಬ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ವೇಳೆ ಅವರಿಬ್ಬರ ನಡುವೆ ಜಗಳವಾಗಿದೆ. ಕೆಲವು ನಿಮಿಷಗಳ ನಂತರ ಬಾರ್ನಿಂದ ಹೊರಬಂದಾಗ ಅವರ ಸಮುದಾಯದ 20ರಿಂದ 30 ಮಂದಿ ಅಲ್ಲಿಗೆ ಬಂದು ಕುಮಾರ್ ರಾಠೋಡ್ ಮೇಲೆ ಹಲ್ಲೆ ಮಾಡಿದ್ದಾರೆ. ಜತೆಗೆ ಆತನ ಬಂಜಾರ ಸಮುದಾಯದ ಕುರಿತಾಗಿ ಜಾತಿ ನಿಂದನೆಯನ್ನೂ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಂತರ ಸ್ಥಳೀಯರು ಜಗಳ ನಿಲ್ಲಿಸಿ ಕುಮಾರ್ ರಾಠೋಡ್ನನ್ನು ಮನೆಗೆ ತಲುಪಿಸಿದರು. ಆದರೆ, ನಂತರ ಆತನಿಗೆ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು ಎಂದೂ ಸ್ಥಳೀಯರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 am, Wed, 24 April 24