ಕೊಪ್ಪಳ (ಮಾರ್ಚ್, 14): ಈ ಕೊಪ್ಪಳ(Koppal) ಹಾಲಿ ಸಂಸದ ಕರಡಿ ಸಂಗಣ್ಣ (Karadi Sanganna) ಅವರಿಗೆ ಈ ಬಾರಿ ಲೋಕಸಭಾ ಬಿಜೆಪಿ(Loksabha Ticket)) ಟಿಕೆಟ್ ಕೈತಪ್ಪಿದ್ದು, ಅವರ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಇದೇ ಸಿಟ್ಟಿನಲ್ಲಿ ಬಿಜೆಪಿ ಕಚೇರಿಗೇ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದಾರೆ. ಅಭ್ಯರ್ಥಿ ಡಾ. ಕೆ. ಬಸವರಾಜ (BJP Candidate Dr. K Basavaraja) ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಮಾಧ್ಯಮಗೋಷ್ಠಿ ನಡೆಯುತ್ತಿದ್ದಾಗಲೇ ಸಂಗಣ್ಣ ಅಭಿಮಾನಗಳು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕಚೇರಿಯ ಕಿಟಕಿ ಗಾಜುಗಳು ಪೀಸ್ ಪೀಸ್ ಆಗಿವೆ. ಅಲ್ಲದೇ ಭಾರತ ಮಾತೆಯ ಫೋಟೊವನ್ನೂ ಸಹ ಪುಡಿಗಟ್ಟಿದ್ದಾರೆ.
ಈ ನಡುವೆ, ನೂತನ ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಭೇಟಿಯಾಗಲು ಮನೆಗೆ ಬಂದಾಗಲೂ ಬೆಂಬಲಿಗರ ಆಕ್ರೋಶ ಜೋರಾಗಿತ್ತು. ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಜೊತೆಗೆ ಆಗಮಿಸಿದಾಗ ಅವರನ್ನು ತಡೆದ ಸಂಗಣ್ಣ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಯಾರನ್ನು ಕೇಳಿ ಟಿಕೆಟ್ ಪಡೆದಿದ್ದೀರಿ. ಮಾನ ಮರ್ಯಾದೆ ಇದ್ದರೆ ಇಲ್ಲಿಗೆ ಬರಬಾರದಿತ್ತು ಎಂದು ಬೈದಾಡಿದ್ದಾರೆ. ಅಲ್ಲದೇ ಬಿಜೆಪಿ, ವಿಜಯೇಂದ್ರ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ್ದು, ನೀವು ಸೋಲುತ್ತಿರಿ ಎಂದು ಡಾ. ಕೆ. ಬಸವರಾಜ್ ಅವರಿಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸಂಗಣ್ಣನ್ನ ಹಿಂದಿಕ್ಕಿ ಕೊಪ್ಪಳ ಟಿಕೆಟ್ ಗಿಟ್ಟಿಸಿಕೊಂಡ ಡಾ ಬಸವರಾಜ ಯಾರು? ಟಿಕೆಟ್ ಸಿಕ್ಕಿದ್ದೇಗೆ?
ಸಂಸದ ಕರಡಿ ಸಂಗಣ್ಣ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲಿಯೇ ಅವರ ಬೆಂಬಲಿಗರು ಜಿಲ್ಲಾ ಬಿಜೆಪಿ ಕಚೇರಿಗೆ ಹೋಗಿ ದಾಂಧಲೆ ನಡೆಸಿದ್ದಾರೆ. ನಂತರ, ಕರಡಿ ಸಂಗಣ್ಣ ಅವರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಕೂಡ ಆಗಮಿಸಿದ್ದಾರೆ. ಈ ವೇಳೆ ಸಂಸದ ಸಂಗಣ್ಣ ಬೆಂಬಲಿಗನೊಬ್ಬ ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಗರಂ ಆದ ಎಂಎಲ್‌ಸಿ ಹೇಮಲತಾ ನಾಯಕ್ ಅವರು, ನೀನ್ಯಾವನೋ ನನ್ನ ಕೇಳುವುದಕ್ಕೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಳಿಕ ಎದುರಿನ ವ್ಯಕ್ತಿ ನಾನು ಕಾರ್ಯಕರ್ತ ಹೀಗಾಗಿ ಕೇಳಿದ್ದೇನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಹೇಮಲತಾ ನಾಯಕ್ ನಾನು ಕೂಡ ಕಾರ್ಯಕರ್ತಳಾಗಿಯೇ ಕೆಲಸ ಮಾಡಿದವಳು. ನಾನು ಕೂಡ ಬಿಜೆಪಿ ಕಾರ್ಯಕರ್ತೆಯಾಗಿಯೇ ಇಲ್ಲಿಗೆ ಬಂದಿದ್ದೇನೆ. ಹೆಚ್ಚಿಗೆ ಮಾತನಾಡಿದರೆ ಬೂಟು ತಗೊಂಡು ಹೊಡೆಯುತ್ತೇನೆ.. ನನ್ನ ಮಗನೇ… ಎಂದು ಬೈದಿದ್ದಾರೆ. ಈ ವೇಳೆ ಪೊಲೀಸರು ಬಂದು ಕಾರ್ಯಕರ್ತನನ್ನು ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಮನೆಯಿಂದ ಹೊರಗೆ ಕಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.