ಕೊಪ್ಪಳ, ಜನವರಿ 27: ಗವಿಮಠದ ಆವರಣದಲ್ಲಿ ಗವಿಸಿದ್ದೇಶ್ವರ (Gavisiddeshwara Mutt) ಜಾತ್ರೆಗೆ ಧ್ವಜಾರೋಹಣ ಮೂಲಕ ಸುತ್ತೂರುಶ್ರೀಗಳಿಂದ ಚಾಲನೆ ನೀಡಲಾಗಿದೆ. ಪಲ್ಲಕ್ಕಿಯಲ್ಲಿ ಗವಿಸಿದ್ದೇಶ್ವರ ಮೂರ್ತಿ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಗಿದೆ. ಮೈದಾನ, ಬೆಟ್ಟ, ಕಟ್ಟಡ ಎಲ್ಲಿ ನೋಡಿದರಲ್ಲಿ ನಿಂತು ಸಾವಿರಾರು ಜನರು ರಥೋತ್ಸವವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ಕೊಪ್ಪಳದ ಹನ್ನೊಂದನೆ ಪೀಠಾಧಿಪತಿಯಾಗಿರುವ ಗವಿಸಿದ್ದೇಶ್ವರ ಸ್ವಾಮೀಜಿ ಸ್ಮರಣಾರ್ಥವಾಗಿ ಪ್ರತಿವರ್ಷ ಗವಿಸಿದ್ದೇಶ್ವರರ ಜಾತ್ರೆ ವೈಭವಯುತವಾಗಿ ಚಾಲನೆ ಸಿಕ್ಕಿದೆ. ಈ ವರ್ಷ ಕೂಡ ಜಾತ್ರೆ ಅದ್ದೂರಿಯಾಗಿ ಆರಂಭವಾಗಿದ್ದು, ಮುಂಜಾನೆಯಿಂದಲೇ ಮಠಕ್ಕೆ ಸಾವಿರಾರು ಭಕ್ತರ ದಂಡು ಹರಿದು ಬಂದಿದೆ.
ಗವಿಸಿದ್ದೇಶ್ವರ ಜಾತ್ರೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಭಾಗಿಯಾಗಿದ್ದಾರೆ. ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸುತ್ತೂರುಶ್ರೀ, ಗವಿಸಿದ್ದೇಶ್ವರರ ಈ ಭಾಗದ ಕಾಮಧೇನು ಆಗಿದ್ದಾರೆ. ರಥೋತ್ಸವಕ್ಕೆ ಚಾಲನೆ ನೀಡುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಗವಿಸಿದ್ದೇಶ್ವರ ರಥೋತ್ಸವದಲ್ಲಿ ಅಭಿನವ ಗವಿಸಿದ್ದೇಶ್ವರಶ್ರೀ ಹೇಳಿಕೆ ನೀಡಿದ್ದು, ಅಜ್ಜನ ಜಾತ್ರೆಗೆ ಬನ್ನಿ ಅನ್ನೋ ಮಾತಿಗೆ ಲಕ್ಷಾಂತರ ಜನ ಬಂದಿದ್ದಾರೆ. ಭಕ್ತರು ಶಾಂತಿಯುತವಾಗಿ ಮನೆ ಮುಟ್ಟಿದರೆ ಅದೇ ನಮಗೆ ಶಾಂತಿ. ಭಕ್ತರ ಹೃದಯದಲ್ಲಿ ಗವಿಸಿದ್ದೇಶ್ವರ ಇದ್ದಾನೆ ಎಂದು ಹೇಳಿದ್ದಾರೆ.
ಜಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿ ಡಿಸಿಎಂ ಡಿ.ಕೆ.ಶಿವಕುಮಾರ್, ಭಕ್ತ ಮತ್ತು ಭಗವಂತನ ಸ್ಥಳ ಈ ಗವಿಮಠ ದೇವಾಲಯ. ನಿಮ್ಮ ಆಶೀರ್ವಾದ ಕೇಳಲು ಈ ದೇವಾಲಯಕ್ಕೆ ಬಂದಿದ್ದೇನೆ. ಗವಿಮಠ ಸ್ವಾಮೀಜಿ ದರ್ಶನ ಪಡೆದಿದ್ದು ನನ್ನ ಸೌಭಾಗ್ಯ. ಜಾತ್ರೆಗೆ ಬಂದಿದ್ದರಿಂದ ನಿಮ್ಮನ್ನು ನೋಡುವ ಭಾಗ್ಯ ಸಿಕ್ಕಿದೆ. ಗವಿಮಠ ಜಾತ್ರೆಯಲ್ಲಿ ಭಾಗಿಯಾಗಿದ್ದಕ್ಕೆ ನಾವು, ನೀವು ಧನ್ಯರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಭಕ್ತರಿಗೆ ಭೂರಿ ಭೋಜನ -ದಾಸೋಹಕ್ಕೆ ಲಕ್ಷ ಲಕ್ಷ ಹೋಳಿಗೆ, ರೊಟ್ಟಿ ನೀಡಿದ ಭಕ್ತರು
ರಾಜ್ಯದ ಅನೇಕ ಮಠಗಳು ಬೇರೆ ಬೇರೆ ವಿಚಾರ, ಕೆಲಸಗಳಿಂದ ಸುದ್ದಿಯಾಗುತ್ತಿದ್ದರೆ, ಕೊಪ್ಪಳದ ಗವಿಮಠ ಮಾತ್ರ ಪ್ರತಿವರ್ಷ ಹೊಸ ಹೊಸ ಚಿಂತನೆ, ವಿಶಿಷ್ಟವಾಗಿ ನಡೆಸುವ ಜಾತ್ರೆಯ ಮೂಲಕ ಸುದ್ದಿಯಾಗುತ್ತಿದೆ. ಇಂದು ಆರಂಭವಾಗಿರುವ ಜಾತ್ರೆ ಒಂದು ತಿಂಗಳ ಕಾಲ ನಿರಂತರವಾಗಿ ನಡೆಯುತ್ತದೆ. ಜಾತ್ರೆಯಲ್ಲಿ ಕೇವಲ ರಥೋತ್ಸವ, ದೇವರ ದರ್ಶನ ಮಾತ್ರವಲ್ಲದೆ, ಬದುಕಿಗೆ ಮಾರ್ಗದರ್ಶನ ನೀಡಬಲ್ಲ ಅನೇಕ ಕಾರ್ಯಕ್ರಮಗಳನ್ನು ಮಠದಿಂದ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.