Koppala News: ಕಲುಷಿತ ನೀರು ಸೇವಿಸಿ ಮೂವರ ಸಾವು ಪ್ರಕರಣ; ಪಿಡಿಓ ಅಮಾನತು
15 ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜಕಲ್ ಹಾಗೂ ಬಸರಿಹಾಳ ಗ್ರಾಮ ಪಂಚಾಯತಿ ಪಿಡಿಒಗಳನ್ನ ಅಮಾನತು ಮಾಡಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಆಯುಕ್ತೆ ಆದೇಶ ಮಾಡಿದ್ದಾರೆ.
ಕೊಪ್ಪಳ: 15 ದಿನಗಳ ಹಿಂದೆ ಕಲುಷಿತ ನೀರು(Contaminated Water) ಸೇವಿಸಿ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜಕಲ್ ಹಾಗೂ ಬಸರಿಹಾಳ ಗ್ರಾಮ ಪಂಚಾಯತಿ ಪಿಡಿಓ(PDO)ಗಳನ್ನ ಅಮಾನತು ಮಾಡಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕಾ ಮೇರಿ ಆದೇಶ ಮಾಡಿದ್ದಾರೆ. ಹೌದು ಈ ವಿಚಾರಣೆಯನ್ನ ಕಾಯ್ದಿರಿಸಿ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮ ಪಂಚಾಯತಿ ಪಿಡಿಒ ರವೀಂದ್ರ ಕುಲಕರ್ಣಿ, ಬಿಜಕಲ್ ಗ್ರಾಮ ಪಂಚಾಯತಿ ಪಿಡಿಒ ನಾಗೇಶ್ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇದರಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಲೋಪ ಎಸಗಿದ್ದಾಗಿ ಉಲ್ಲೇಖಿಸಲಾಗಿದೆ.
ಘಟನೆ ವಿವರ
ಕಳೆದ ಕೆಲ ದಿನಗಳ ಹಿಂದೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರಿಗೆ ವಾಂತಿ ಬೇಧಿಯಾಗಿದ್ದು, ಒಂದೂವರೆ ವರ್ಷದ ಮಗು ತಾವರಗೇರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿತ್ತು. ಹಾಗೂ ಹೊನ್ನಮ್ಮ ಎಂಬ ವೃದ್ದೆ ಸಾವನ್ನಪ್ಪಿದ್ರು. ಆಗ ಕೊಪ್ಪಳ ಡಿಹೆಚ್ಓ ವೃದ್ಧೆಗೆ ಬೇರೆ ಕಾಯಿಲೆಗಳಿದ್ದವು ಎಂದು ತಿಳಿಸಿದ್ದರು. ಇದಾದ ಬಳಿಕ ಜಿಲ್ಲೆಯಲ್ಲಿ ನಿರ್ಮಲಾ ಈರಪ್ಪ ಬೆಳಗಲ್ ಎಂಬ 10 ವರ್ಷದ ಮತ್ತೊರ್ವ ಬಾಲಕಿ ಕಲುಷಿತ ನೀರಿಗೆ ಬಲಿಯಾಗಿದ್ದಳು.
ಇದನ್ನೂ ಓದಿ:ಕಾಮಗಾರಿ ನಡೆಸದೇ 118 ಕೋಟಿ ರೂ. ನಕಲಿ ಬಿಲ್ ಸೃಷ್ಟಿ: 11 ಅಧಿಕಾರಿಗಳು ಅಮಾನತು
ಇದಾದ ಬಳಿಕ ಕಲುಷಿತ ನೀರು ಸೇವನೆಯಿಂದಲೇ ವಾಂತಿ ಬೇಧಿ ಉಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದರು. ಬಸರಿಹಾಳ ಗ್ರಾಮದ ಘಟನೆ ಬಳಿಕ ಕೊಪ್ಪಳ ಜಿಲ್ಲಾ ಪಂಚಾಯತ ಸಿಇಓ ರಾಹುಲ್ ರತ್ನಂ ಪಾಂಡೆ, ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸಿದ್ದರು. ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಮಟ್ಟದ ಆರೋಗ್ಯ ಇಲಾಖೆ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳಿಂದ ವರದಿ ಕೇಳಿದ್ದರು. ಬಸರಿಹಾಳ ಗ್ರಾಮದಲ್ಲಿನ ನೀರನ್ನ ಲ್ಯಾಬ್ಗೆ ಕಳಿಸಿ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ನಂತರ ಗ್ರಾಮಕ್ಕೆ ಭೇಟಿ ನೀಡಿ ಬಸರಿಹಾಳ ಗ್ರಾಮದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಬಳಿಕ ಜಿಲ್ಲೆಯಾದ್ಯಂತ ಎಲ್ಲಾ ಕಡೆಗಳಲ್ಲಿಯೂ ಆರೋಗ್ಯ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಸಿಇಓ ರಾಹುಲ್ ತಿಳಿಸಿದ್ದರು ಎನ್ನಲಾಗಿದೆ. ಇದೀಗ ಇಬ್ಬರು ಪಿಡಿಓಗಳು ಅಮಾನತು ಆಗಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ