ಕೊಪ್ಪಳ, (ಆಗಸ್ಟ್ 21): ತುಂಗಭದ್ರಾ ಜಲಾಶಯ. ಇದು ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಸೇರಿದಂತೆ ನೆರೆಯ ಆಂದ್ರಪ್ರದೇಶ, ತೆಲಂಗಾಣದ ಲಕ್ಷಾಂತರ ಜನರಿಗೆ ಜೀವನಾಡಿಯಾಗಿದೆ. ತುಂಗಭದ್ರಾ ಜಲಾಶಯದ ನೀರನ್ನೇ ನಂಬಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಅನೇಕ ಗ್ರಾಮಗಳು, ನಗರಗಳಿಗೆ ತುಂಗಭದ್ರಾ ಜಲಾಶಯದಿಂದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಅನೇಕ ಪ್ಯಾಕ್ಟರಿಗಳು ಕೂಡಾ ಜಲಾಶಯದ ನೀರನ್ನು ನಂಬಿಕೊಂಡಿವೆ. ಆದ್ರೆ ಇಂತಹ ಜಲಾಶಯದ ವಯಸ್ಸು ಇನ್ನು ಕೇವಲ ಮೂವತ್ತು ವರ್ಷ ಮಾತ್ರನಾ? ಮೂವತ್ತು ವರ್ಷವಾದ ಮೇಲೆ ಮುಂದೇನು ಎನ್ನುವ ದೊಡ್ಡ ಪ್ರಶ್ನೆ ಮತ್ತು ಆತಂಕ ಇದೀಗ ಜಲಾಶಯದ ಕೆಳ ಬಾಗದ ಜನರನ್ನು ಕಾಡಲು ಆರಂಭಿಸಿದೆ.
ಇಂತಹದೊಂದು ಆತಂಕಕ್ಕೆ ಕಾರಣವಾಗಿದ್ದು ಡ್ಯಾಂ ಮತ್ತು ಕ್ರಸ್ಟಗೇಟ್ ತಜ್ಞ ಕನ್ನಯ್ಯನಾಯ್ಡು ಹೇಳಿರುವ ಅದೊಂದು ಹೇಳಿಕೆ. ಒಂದು ಕಾಂಕ್ರಿಟ್ ನಿಂದ ಕಟ್ಟಿರುವ ಡ್ಯಾಂ ಆಯುಸ್ಸು ಕೇವಲ ಎಪ್ಪತ್ತೈದು ವರ್ಷ. ಇನ್ನು ತುಂಗಭದ್ರಾ ಜಲಾಶಯವನ್ನು ಕಲ್ಲಿನಿಂದ ಕಟ್ಟಿರುವುದರಿಂದ ಇದರ ಆಯಸ್ಸು 100 ವರ್ಷ ಇದೆ. ನೂರು ವರ್ಷವಾದ ಮೇಲೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನು ತುಂಗಭದ್ರಾ ಜಲಾಶಯದ ನಿರ್ಮಾಣ ಕಾರ್ಯ 1949 ರಲ್ಲಿ ಆರಂಭವಾಗಿತ್ತು. 1954 ರಲ್ಲಿ ಡ್ಯಾಂ ಲೋಕಾರ್ಪಣೆಗೊಂಡಿದೆ. ಅಂದ್ರೆ ತುಂಗಭದ್ರಾ ಜಲಾಶಯ ನಿರ್ಮಾಣವಾಗಿ ಈಗ ಬರೋಬ್ಬರಿ 70 ವರ್ಷವಾಗಿದೆ. ಅದರ ಆಯಸ್ಸುನ್ನು ನೋಡಿದಾಗ, ಡ್ಯಾಂ ಗೆ ಇರುವುದು ಇನ್ನು ಕೇವಲ ಮೂವತ್ತು ವರ್ಷ ಆಯಸ್ಸು ಮಾತ್ರ. ಇದೇ ವಿಚಾರವನ್ನು ಇಟ್ಟುಕೊಂಡು ಕನ್ನಯ್ಯನಾಯ್ಡು ಕೂಡಾ ಇನ್ನು ಮೂವತ್ತು ವರ್ಷದ ನಂತರ ಡ್ಯಾಂ ಅನ್ನು ನಿಷ್ಕ್ರೀಯಗೊಳಿಸಿ ಹೊಸದನ್ನು ನಿರ್ಮಾಣ ಮಾಡಬೇಕಾಗುತ್ತದೆ. ಈ ಬಗ್ಗೆ ಮೂರು ಸರ್ಕಾರಗಳು ನಿರ್ಧಾರ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಬಂದ ಸ್ಥಿತಿ ಬಸವಸಾಗರ ಡ್ಯಾಂಗೂ ಬರುತ್ತಾ? ಅಸಲಿ ಸತ್ಯ ಬಿಚ್ಚಿಟ್ಟ ನೀರಾವರಿ ತಜ್ಞ
ಇನ್ನು ಒಂದು ಜಲಾಶಯದ ಕ್ರಸ್ಟಗೇಟ್ ಗಳನ್ನು ಪ್ರತಿ ನಲವತ್ತರಿಂದ ನಲವತ್ತೈದು ವರ್ಷಕ್ಕೆ ಬದಲಾವಣೆ ಮಾಡಬೇಕು. ಆದ್ರೆ ತುಂಗಭದ್ರಾ ಜಲಾಶಯದ ಕ್ರಸ್ಟಗೇಟ್ ಗಳನ್ನು ಎಪ್ಪತ್ತು ವರ್ಷದಿಂದ ಬದಲಾವಣೆ ಮಾಡಿಲ್ಲ. ಈ ರೀತಿಯ ನಿರ್ಲಕ್ಷ್ಯದಿಂದಲೇ ಆಗಸ್ಟ್ 10 ರಂದು ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಅಪಾರ ಪ್ರಮಾಣದ ನೀರು ವ್ಯರ್ಥವಾಯ್ತು. ಇದೀಗ ಡ್ಯಾಂಗೆ ಕೂಡಾ ವಯಸ್ಸು ಆಗುತ್ತಿರುವುದರಿಂದ ಈಗಿನಿಂದಲೇ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಗಳು ಮುಂದಾಗಬೇಕಿದೆ. ಈಗಾಗಲೇ ಜಲಾಶಯದಲ್ಲಿ ಅಲ್ಲಲ್ಲಿ ಬಿರಕುಗಳು ಬಿಟ್ಟಿವೆ. ಅನೇಕ ಕಡೆ ಸರಿಯಾಗಿ ದುರಸ್ಥಿಯನ್ನು ಕೂಡಾ ಸಿಬ್ಬಂದಿ ಮಾಡಿಲ್ಲ.
ಡ್ಯಾಂ ಸುರಕ್ಷತೆಗಾಗಿ ಟಿಬಿ ಡ್ಯಾಂ ಬೋರ್ಡ್ ನಿಂದ ಸರಿಯಾದ ಕ್ರಮಗಳನ್ನು ಕೂಡಾ ಅನುಸರಿಸಿಲ್ಲ. ಡ್ಯಾಂ ಸುರಕ್ಷತೆ ಕಮಿಟಿ ಕೂಡಾ, ಡ್ಯಾಂ ಸುರಕ್ಷಿತವಾಗಿದೆ ಎಂದು ವರದಿ ನೀಡಿ ಕೈತೊಳೆದುಕೊಂಡಿದೆ. ಆದ್ರೆ ಇದೀಗ ಡ್ಯಾಂ ವಯಸ್ಸು ಆಗುತ್ತಿರುವುದರಿಂದ ಅನೇಕ ಸಮಸ್ಯೆಗಳು ಮೇಲಿಂದ ಮೇಲೆ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುವದರಿಂದ ದೊಡ್ಡ ಮಟ್ಟದ ಅನಾಹುತವಾಗುವ ಮುನ್ನವೇ ಡ್ಯಾಂ ಸುರಕ್ಷಿತೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಈಗಾಗಲೇ ಡ್ಯಾಂ ಸುರಕ್ಷಿತೆಗಾಗಿ ತಜ್ಞರ ತಂಡವನ್ನು ರಚಿಸಲಾಗುತ್ತಿದೆ. ಇನ್ನು ಜಲಾಶಯದ ಸುರಕ್ಷಿತೆಗಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ, ಅವೆಲ್ಲವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸದ್ಯ ಡ್ಯಾಂ ಮೇಲೆ ಅಧಿಕಾರ ಹೊಂದಿರುವ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸರ್ಕಾರಗಳು ಡ್ಯಾಂ ಬಗ್ಗೆ ಇನ್ನಷ್ಟು ಗಮನಹರಿಸಬೇಕಿದೆ. ಡ್ಯಾಂ ನ ಆಯಸ್ಸು ಮುಗಿದ ಮೇಲೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಯಾವ ಕ್ರಮಗಳನ್ನು ಕೈಗೊಂಡರೆ, ರೈತರು, ಜನರಿಗೆ ತೊಂದರೆಯಾಗದಂತೆ ನೀರು ಪೂರೈಕೆ ಮಾಡಬೇಕು ಅನ್ನೋದರ ಬಗ್ಗೆ ಚಿಂತಿಸಿ, ಕ್ರಮ ಕೈಗೊಳ್ಳಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ