ಮಳೆ ಕೊರತೆಯಿಂದ ಬತ್ತಿದ ತುಂಗಭದ್ರಾ ನದಿ: ನೀರಿಲ್ಲದೆ ಸಾವಿರಾರು ಮೀನುಗಳು ಸಾವು

Koppal News: ಮಳೆ ಕೊರತೆಯಿಂದ ತುಂಗಭದ್ರಾ ನದಿ ಬತ್ತಿ ಹೋಗಿದ್ದು, ಕೊಪ್ಪಳ ಜಿಲ್ಲೆಯ ನಂದಿಹಳ್ಳಿ ಹಾಗೂ ಕಕ್ಕರಗೋಳ ಬಳಿ ಆಮ್ಲಜನಕದ ಕೊರತೆಯಿಂದ ಸಾವಿರಾರು ಮೀನುಗಳು ಸಾವನ್ನಪ್ಪಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ ಕನಿಷ್ಠ ಪ್ರಮಾಣದ ನೀರಿನ ಹರಿವು ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಪರಿಸರ ಹೋರಾಟಗಾರರು ಆರೋಪಿಸಿದ್ದಾರೆ.

ಮಳೆ ಕೊರತೆಯಿಂದ ಬತ್ತಿದ ತುಂಗಭದ್ರಾ ನದಿ: ನೀರಿಲ್ಲದೆ ಸಾವಿರಾರು ಮೀನುಗಳು ಸಾವು
ನೀರಿಲ್ಲದೆ ಸಾವಿರಾರು ಮೀನುಗಳು ಸಾವು

Updated on: Jul 20, 2026 | 12:29 PM

ಮುಖ್ಯಾಂಶಗಳು

  • ನೀರಿಲ್ಲದೆ ತುಂಗಭದ್ರಾ ನದಿ ಸಂಪೂರ್ಣ ಭಣ ಭಣ
  • ತುಂಗಭದ್ರಾ ಡ್ಯಾಂನಿಂದಲೂ ನದಿಗೆ ಹರಿಯದ ನೀರು
  • ಮೀನುಗಳ ಸಾವು, ಸಾಂಕ್ರಾಮಿಕ ರೋಗದ ಆತಂಕ

ಕೊಪ್ಪಳ, ಜುಲೈ 20: ಸಮರ್ಪಕ ಮಳೆಯ ಕೊರತೆಯಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗಿದ್ದು, ಕೊಪ್ಪಳ ಜಿಲ್ಲೆಯ ಕೆಲ ಭಾಗಗಳಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಕಾರಟಗಿ ತಾಲೂಕಿನ ಸಿದ್ದಾಪುರ ಹೋಬಳಿಯ ಕಕ್ಕರಗೋಳ ಹಾಗೂ ನಂದಿಹಳ್ಳಿ ಗ್ರಾಮಗಳ ಸಮೀಪ ತುಂಗಭದ್ರಾ ನದಿಯ ಪಾತ್ರ ಬಹುತೇಕ ಒಣಗಿದ್ದು, ಅಲ್ಲಲ್ಲಿ ಕೆಸರುಮಯ ಹಾಗೂ ನಿಂತ ನೀರಿನ ಗುಂಡಿಗಳು ಮಾತ್ರ ಉಳಿದಿವೆ. ಪರಿಣಾಮ ನದಿಯ ದಡದಲ್ಲಿ ಸತ್ತ ಮೀನುಗಳು ಮತ್ತು ಒಣಗಿದ ಪಾಚಿಗಳು ಕಾಣಿಸಿಕೊಂಡಿವೆ.

ಸಾಂಕ್ರಾಮಿಕ ರೋಗದ ಆತಂಕ

ನೀರಿನ ಮಟ್ಟ ತೀವ್ರವಾಗಿ ಕುಸಿದ ಪರಿಣಾಮ ಉಳಿದಿರುವ ಕಲುಷಿತ ನೀರಿನ ಗುಂಡಿಗಳಲ್ಲಿ ಮೀನುಗಳು ಬದುಕುಳಿಯಲು ಪರದಾಡುತ್ತಿವೆ. ಹೆಚ್ಚಿದ ತಾಪಮಾನ ಹಾಗೂ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದ ಕಾರಣ ಮೀನುಗಳು ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ಪರಿಸರವಾದಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದ ಮೀನುಗಳಿಂದ ದುರ್ವಾಸನೆ ವ್ಯಾಪಿಸಿದ್ದು, ಸಮೀಪದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕಾಗೆಗಳು ಹಾಗೂ ಇತರ ಪಕ್ಷಿಗಳು ಸತ್ತ ಮೀನುಗಳನ್ನು ತಿನ್ನಲು ನದಿಯತ್ತ ಆಗಮಿಸುತ್ತಿದ್ದು, ಪರಿಸರ ವ್ಯವಸ್ಥೆಗೆ ಉಂಟಾಗಿರುವ ಹಾನಿಯನ್ನು ಇದು ಬಿಂಬಿಸುತ್ತಿದೆ.

ಇದನ್ನೂ ಓದಿ: 4 ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಡ್ಯಾಂ ಖಾಲಿ ಖಾಲಿ, ರೈತರ ಬೆಳೆಗಳಿಗಿಲ್ಲ ನೀರು!

ಜಲಾಶಯದಿಂದ ನದಿಗೆ ನೀರು ಹರಿಸುವಂತೆ ಆಗ್ರಹ

ತುಂಗಭದ್ರಾ ಜಲಾಶಯದಿಂದ ನದಿಗೆ ಕನಿಷ್ಠ ಪ್ರಮಾಣದ ನೀರಿನ ಹರಿವು ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಪರಿಸರ ಹೋರಾಟಗಾರರು ಆರೋಪಿಸಿದ್ದಾರೆ. ಕೂಡಲೇ ಜಲಾಶಯದಿಂದ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ‘ಸೇವ್ ತುಂಗಭದ್ರಾ’ ಅಭಿಯಾನದ ಸ್ಥಳೀಯ ಸಂಚಾಲಕ ವಿಷ್ಣುತೀರ್ಥ ಜೋಶಿ ಮಾತನಾಡಿ, ಮುಂಗಾರು ಅವಧಿಯಲ್ಲಿಯೂ ನದಿಯಲ್ಲಿ ಕನಿಷ್ಠ ನೀರಿನ ಹರಿವು ಇರುವಂತೆ ತುಂಗಭದ್ರಾ ಜಲಾಶಯದಿಂದ ತಕ್ಷಣವೇ ನೀರು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:24 pm, Mon, 20 July 26

Follow Us