ಕೊಪ್ಪಳದಲ್ಲಿ ರೇಷನ್ ಅಕ್ಕಿಗೆ ಕನ್ನ; ಖಡಕ್ ವಾರ್ನಿಂಗ್ ಕೊಟ್ಟ ಆಹಾರ ಇಲಾಖೆ

ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಹಲವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಅದೇ ರೀತಿ ಕೊಪ್ಪಳದಲ್ಲಿ ರೇಷನ್ ಅಂಗಡಿಯ ಪಕ್ಕದಲ್ಲಿಯೇ ಮಹಿಳೆಯೊಬ್ಬಳು ಫಲಾನುಭವಿಗಳಿಂದ ಅಕ್ಕಿ ಖರೀದಿಸಿದ್ದಾಳೆ. ಈ ಸಂದರ್ಭದಲ್ಲಿ ಟಿವಿ9 ಕ್ಯಾಮೆರಾ ನೋಡಿ ಪರಾರಿಯಾಗಿದ್ದಾಳೆ. ಇದೇ ರೀತಿ ಘಟನೆಗಳು ಹಿಂದೆಯೂ ನಡೆದಿದ್ದು, ಆಹಾರ ಇಲಾಖೆ ಕಾರ್ಡ್​ ರದ್ದು ಮಾಡುವಂತೆ ಎಚ್ಚರಿಕೆ ನೀಡಿದೆ.

ಕೊಪ್ಪಳದಲ್ಲಿ ರೇಷನ್ ಅಕ್ಕಿಗೆ ಕನ್ನ; ಖಡಕ್ ವಾರ್ನಿಂಗ್ ಕೊಟ್ಟ ಆಹಾರ ಇಲಾಖೆ
ಕೊಪ್ಪಳ ರೇಷನ್ ಅಂಗಡಿಯ ಪಕ್ಕದಲ್ಲಿಯೇ ಅಕ್ಕಿಗೆ ಕನ್ನ

Updated on: Sep 25, 2025 | 12:12 PM

ಕೊಪ್ಪಳ, ಸೆಪ್ಟೆಂಬರ್ 25: ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆ ಈ ಹಿಂದೆ ಹಲವಾರು ಬಾರಿ ದುರ್ಬಳಕೆಯಾಗಿದೆ. ರೇಷನ್ ಅಕ್ಕಿಯನ್ನು ಪಾಲಿಷ್ ಮಾಡಿ ಮಾರಾಟ ಮಾಡುವುದು, ಇತರೆ ರಾಜ್ಯಗಳಿಗೆ ಸಾಗಾಟ ಮಾಡುವುದು ಸೇರಿದಂತೆ ಹಲವಾರು ಅಕ್ರಮ ದಂಧೆಗಳು ಈ ಹಿಂದೆಯೂ ನಡೆದಿವೆ. ಅದರಂತೆಯೇ ಈಗ ಕೊಪ್ಪಳದಲ್ಲಿ ರೇಷನ್ ಅಂಗಡಿಯ ಪಕ್ಕವೇ ಅನ್ನಭಾಗ್ಯದಿಂದ ದೊರೆತ ಅಕ್ಕಿಯ ಮಾರಾಟ ಮತ್ತು ಖರೀದಿ ನಡೆಯುತ್ತಿದೆ. ಈ ರೀತಿ ಜನರಿಂದ ರೇಷನ್ ಅಕ್ಕಿಯನ್ನು ಖರೀದಿಸುತ್ತಿದ್ದ ವೇಳೆ ಮಹಿಳೆಯೊಬ್ಬಳು ಟಿವಿ9 ಕ್ಯಾಮೆರಾ ಕಂಡು ಪರಾರಿಯಾಗಿದ್ದಾಳೆ. ತದನಂತರ ಸ್ಥಳಕ್ಕೆ ಭೇಟಿ ನೀಡಿದ ಆಹಾರ ಇಲಾಖೆಯ ಅಧಿಕಾರಿಗಳು ಇನ್ನೊಮ್ಮೆ ಈ ದಂಧೆ ಕಂಡುಬಂದಲ್ಲಿ ರೇಷನ್ ಕಾರ್ಡ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಡೆದಿದ್ದೇನು?

ಕೊಪ್ಪಳದ ಕುರುಬರ ಓಣಿಯಲ್ಲಿ ಮಹಿಳೆಯೊಬ್ಬಳು ರೇಷನ್ ಅಂಗಡಿಯ ಪಕ್ಕದಲ್ಲೇ  ಅನ್ನಭಾಗ್ಯ ಯೋಜನೆಯ ಫಲಾನಭವಿಗಳಿಂದ ಅಕ್ಕಿಯನ್ನು ಖರೀದಿ ಮಾಡುತ್ತಿದ್ದಳು. ಹಲವಾರು ಫಲಾನುಭವಿಗಳು ಆಕೆಗೆ ರೇಷನ್ ಅಕ್ಕಿಯನ್ನು ಮಾರುತ್ತಿದ್ದರು. ಟಿವಿ9 ಕ್ಯಾಮೆರಾ ಕಂಡ ತಕ್ಷಣ ತಾನು ಖರೀದಿಸಿದ್ದ ಅಕ್ಕಿಯನ್ನು ಅಲ್ಲಿಯೇ ಬಿಟ್ಟು ತೂಕದ ಯಂತ್ರವನ್ನು ಎತ್ತಿಕೊಂಡು ಅಲ್ಲಿಂದ ಓಡಿಹೋಗಿದ್ದಾಳೆ.  ಈಕೆಯೊಂದಿಗೆ ಇನ್ನೂ ಹಲವು ದಂಧೆಕೋರರು ರಾತ್ರಿಯ ಸಮಯದಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಖರೀದಿ ಮಾಡುತ್ತಿದ್ದರು. ರೇಷನ್ ಅಕ್ಕಿ ಕೊಡುವುದು ಊಟ ಮಾಡುವುದಕ್ಕೇ ಹೊರತು ಮಾರಾಟ ಮಾಡುವುದಕ್ಕಲ್ಲ ಎಂದು ರೇಷನ್ ಅಂಗಡಿ ಮಾಲೀಕ ಹಾಲಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೇಷನ್ ಅಂಗಡಿ ಕೂಗಳತೆ ದೂರದಲ್ಲಿ ಈ ದಂಧೆ ನಡೆಯುತ್ತಿದ್ದರೂ ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಇದನ್ನೂ ಓದಿ ಅನ್ನಭಾಗ್ಯ ಅಕ್ಕಿ ಮಹಾರಾಷ್ಟ್ರಕ್ಕೆ ಅಕ್ರಮ ಸಾಗಾಟ: ವಿಜಯಪುರದಲ್ಲಿ 40 ಟನ್ ಅಕ್ಕಿ ಜಪ್ತಿ

ಆಹಾರ ಇಲಾಖೆ ಅಧಿಕಾರಿಗಳಿಂದ ಎಚ್ಚರಿಕೆ

ರೇಷನ್ ಅಂಗಡಿ ಪಕ್ಕವೇ ಅನ್ನಭಾಗ್ಯ ಅಕ್ಕಿ ಖರೀದಿ ಹಿನ್ನಲೆ ರೇಷನ್ ಅಂಗಡಿಗೆ ಭೇಟಿ ನೀಡಿದ ಅಹಾರ ಇಲಾಖೆ ಅಧಿಕಾರಿಗಳು ಯಾರೂ ಅಕ್ಕಿ ಮಾರಾಟ ಮಾಡದಂತೆ ಮನವಿ ಮಾಡಿದ್ದಾರೆ. ಕುರುಬರ ಓಣಿಯಲ್ಲಿ ರೇಷನ್ ಅಕ್ಕಿ ಖರೀದಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿ ಸ್ಥಳಕ್ಕೆ ಬರುವಷ್ಟರಲ್ಲಿ ದಂಧೆಕೋರರು ಓಡಿಹೋಗಿದ್ದಾರೆ ಎಂದು ಆಹಾರ ಇಲಾಖೆಯ ಅಧಿಕಾರಿ AD ದೇವರಾಜ್ ಹೇಳಿದರು. ಇನ್ನು ಮುಂದೆ ಅಕಸ್ಮಾತ್ ಅಕ್ಕಿ ಮಾರಾಟ ಮಾಡಿದಲ್ಲಿ ರೇಷನ್ ಕಾರ್ಡ್ ರದ್ದು ಮಾಡಲಾಗುವುದು ಎಂದು ಫಲಾನುಭವಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:02 pm, Thu, 25 September 25