ಬೆಂಗಳೂರು, ಜೂನ್ 29: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರವಾಗಿ ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಕ್ರಮಕ್ಕೆ ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹೆಚ್ಚುವರಿ ಡಿಸಿಎಂ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಒಂದು ವೇಳೆ ಮಾತನಾಡಿದರೆ ಅಂಥವರಿಗೆ ನೋಟಿಸ್ ನೀಡಲಾಗುವುದು. ಬಾಯಿಗೆ ಬೀಗ ಹಾಕೊಂಡು ತೆಪ್ಪಗೆ ಇರಿ ಎಂದು ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವ ಡಿಸಿಎಂ ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ. ಯಾರ ಶಿಫಾರಸು ಸಹ ಅವಶ್ಯಕತೆ ಇಲ್ಲ. ನಾನು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಶಾಸಕರು ಕೂಡ ಮಾತನಾಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಮಾತನಾಡಿದರೆ, ಎಐಸಿಸಿ ಹಾಗೂ ನಾನು ವಿಧಿಯಿಲ್ಲದೇ ನೊಟೀಸ್ ನೀಡಬೇಕಾಗುತ್ತದೆ. ಪಕ್ಷದ ಶಿಸ್ತು ಕಾಪಾಡಲು ಅನಿವಾರ್ಯವಾಗಿ ನೋಟಿಸ್ ನೀಡುತ್ತೇವೆ ಎಂದು ಹೇಳಿದ್ದಾರೆ.
ಪಕ್ಷ ಕಟ್ಟಲು ಬಹಳ ಕಷ್ಟಪಟ್ಟಿದ್ದೇವೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೇ ಗೊತ್ತು. ಪಕ್ಷದ ಹಿತದೃಷ್ಟಿಯಿಂದ ಬಾಯಿಗೆ ಬೀಗ ಹಾಕಿಕೊಂಡಿದ್ದರೆ ಒಳ್ಳೆಯದು. ಯಾವ ಸ್ವಾಮೀಜಿಗಳೂ ಮಾತಾಡಿಲ್ಲ. ಎಲ್ಲರಿಗೂ ಕೈ ಮುಗಿಯುತ್ತೇನೆ. ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಬೇಡಿ. ಸ್ವಾಮೀಜಿ ನನ್ನ ಮೇಲಿನ ಅಭಿಮಾನದಿಂದ ಮಾತಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕೆಂಬ ಆಗ್ರಹಗಳು ಕರ್ನಾಟಕ ಕಾಂಗ್ರೆಸ್ನಲ್ಲಿ ಹೆಚ್ಚಾದ ಬೆನ್ನಲ್ಲೇ ಡಿಕೆ ಶಿವಕುಮಾರ್ ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಸಚಿವರು, ಶಾಸಕರು ಮತ್ತು ಪಕ್ಷದ ಅನೇಕ ನಾಯಕರು ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇದರಿಂದ ಪಕ್ಷದ, ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. ಹೀಗಾಗಿ ಇದೀಗ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಖುದ್ದು ಆ ಬಗ್ಗೆ ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಯೋಗ್ಯತೆ ಇಲ್ಲವೆಂದಾದರೆ ಚುನಾವಣೆಗೆ ಹೋಗುವುದು ವಾಸಿ: ಕೆಎನ್ ರಾಜಣ್ಣ ವಿರುದ್ಧ ಡಿಕೆ ಸುರೇಶ್ ಆಕ್ರೋಶ
ಡಿಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕೆಂದು ಸಿದ್ದರಾಮಯ್ಯನವರನ್ನು ಒಕ್ಕಲಿಗ ಸ್ವಾಮೀಜಿ ಆಗ್ರಹಿಸಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮತ್ತೊಂದೆಡೆ, ಆಡಳಿತ ಪಕ್ಷದ ಸಚಿವರು ಮತ್ತು ಶಾಸಕರು ಹೇಳಿಕೆಗಳನ್ನು ಪ್ರತಿಪಕ್ಷ ಬಿಜೆಪಿ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿತ್ತು. ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಿಂಬಿಸಲು ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ