AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮದಲ್ಲಿ ಕೆಪಿಎಸ್​​ಸಿಯೇ ಕಿಂಗ್​​!: ಇಲ್ಲಿವೆ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿರುವ ಹಗರಣಗಳ ಡಿಟೇಲ್ಸ್​​

ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ಇತ್ತೀಚಿನದ್ದೇನಲ್ಲ. ಈ ಹಿಂದೆಯೂ ಸಾಲು ಸಾಲು ಅಕ್ರಮಗಳು ನಡೆದಿವೆ. ನೇಮಕಾತಿ ಪ್ರಕ್ರಿಯೆ ಕೋರ್ಟ್​​ ಕಟಕಟೆಯನ್ನೂ ಹತ್ತಿವೆ. ಕರ್ನಾಟಕದ ಕೆಪಿಎಸ್‌ಸಿ ಹಾಗೂ ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 1998ರಂದ ಹಿಡಿದು 2026ರವರೆಗೆ ನಡೆದಿರುವ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮgಳ ಮಾಹಿತಿ ಇಲ್ಲಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮದಲ್ಲಿ ಕೆಪಿಎಸ್​​ಸಿಯೇ ಕಿಂಗ್​​!: ಇಲ್ಲಿವೆ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿರುವ ಹಗರಣಗಳ ಡಿಟೇಲ್ಸ್​​
ಕೆಪಿಎಸ್​​ಸಿ ಮತ್ತು ಕೆಇಎ ಕಚೇರಿ
ಪ್ರಸನ್ನ ಹೆಗಡೆ
| Edited By: |

Updated on: Nov 16, 2026 | 3:03 PM

Share

ಕೆಪಿಎಸ್​​ಸಿ ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ಅಕ್ರಮ, ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯಲ್ಲಿ ಗೋಲ್ಮಾಲ್​​ನಂತಹ ಒಂದಲ್ಲ ಒಂದು ಪ್ರಕರಣಗಳು ಕಳೆದ ಕೆಲ ವರ್ಷಗಳಿಂದ ಕರ್ನಾಟಕದಲ್ಲಿ ಸದ್ದು ಮಾಡುತ್ತಲೇ ಬಂದಿವೆ. ಅಷ್ಟಕ್ಕೂ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ಇತ್ತೀಚಿನದ್ದೇನಲ್ಲ. ಸ್ವಾತಂತ್ರ್ಯಾ ನಂತರ ಕರ್ನಾಟಕದಲ್ಲಿ ಇಂತಹ ಸಾಲು ಸಾಲು ಪ್ರಕರಣಗಳು ನಡೆದಿವೆ. ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮಗಳ ಜಾರಿಯ ಹೊರತಾಗಿಯೂ ಗೋಲ್​​ಮಾಲ್​​ಗಳು ಮುಂದುವರಿಯುತ್ತಲೇ ಇವೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಇತ್ತೀಚಿನ ಪ್ರಮುಖ ಹಗರಣಗಳು

1998ರ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ಸ್ ಅಂಕಗಳ ಅಕ್ರಮ

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಗೆಜೆಟೆಡ್ ಪ್ರೊಬೇಷನರ್ಸ್ (Group A & B) ಪರೀಕ್ಷೆಯ ಮೌಲ್ಯಮಾಪನದಲ್ಲಿ ವ್ಯಾಪಕ ಅಕ್ರಮ ಮತ್ತು ಸ್ವಜನಪಕ್ಷಪಾತ ನಡೆದಿರುವುದು ಆಂತರಿಕ ತನಿಖೆಯಿಂದ ಬಹಿರಂಗವಾಗಿತ್ತು. ಮುಖ್ಯ ಪರೀಕ್ಷಕರು ಮತ್ತು ಕೆಪಿಎಸ್‌ಸಿ ಕಾರ್ಯದರ್ಶಿ ಶಾಮೀಲಾಗಿ ಕೆಲವು ಅಭ್ಯರ್ಥಿಗಳಿಗೆ ಅಕ್ರಮವಾಗಿ ಅಂಕಗಳನ್ನು ಹೆಚ್ಚಿಸಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ, ಹೈಕೋರ್ಟ್ ಮಾಡರೇಷನ್ ನಿಯಮಗಳನ್ನು ಕಾನೂನುಬಾಹಿರ ಎಂದು ಘೋಷಿಸಿ ಮರು-ಮಾಡರೇಷನ್‌ಗೆ ಆದೇಶಿಸಿತ್ತು.

ಇದನ್ನೂ ಓದಿ: ಪರೀಕ್ಷಾ ಅಕ್ರಮಕ್ಕೆ ಲೈಫ್ ಟೈಮ್ ಶಿಕ್ಷೆ: ಇನ್ನುಂದೆ ಅಕ್ರಮಕೋರರಿಗೆ ಸರ್ಕಾರಿ ನೌಕರಿ ಬಾಗಿಲು ಬಂದ್!

2011ರ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ಸ್ ಹಗರಣ

362 ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ಮತ್ತು ಅಂಕಗಳ ತಿದ್ದುಪಡಿ ನಡೆದಿತ್ತು. ಸಿಐಡಿ (CID) ತನಿಖೆಯ ವೇಳೆ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದು ಸಂದರ್ಶನದಲ್ಲಿ ತಾರತಮ್ಯ ಎಸಗಿರುವುದು ಸಾಬೀತಾಗಿತ್ತು. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಸೇರಿದಂತೆ ಆರು ಅಧಿಕಾರಿಗಳ ವಿರುದ್ಧ ಸಿಐಡಿ ದೋಷಾರೋಪಣೆ ಪಟ್ಟಿ ಸಲ್ಲಿಸಿತು. ನಂತರ ರಾಜ್ಯ ಸರ್ಕಾರ ಈ ಇಡೀ ನೇಮಕಾತಿ ಪಟ್ಟಿಯನ್ನೇ ರದ್ದುಗೊಳಿಸಿದ ಪ್ರಸಂಗ ನಡೆದಿತ್ತು. ಸರ್ಕಾರದ ರದ್ದತಿ ಆದೇಶವನ್ನು ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಮೊರೆ ಹೋಗಿದ್ದರು. 2016ರಲ್ಲಿ KAT ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. KAT ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ 2018ರಲ್ಲಿ, KAT ಆದೇಶವನ್ನು ರದ್ದುಗೊಳಿಸಿತ್ತು.

ನ್ಯಾಯಾಲಯಗಳು ನೇಮಕಾತಿಯನ್ನು ರದ್ದುಗೊಳಿಸಿದ್ದರೂ, ಮಾನವೀಯತೆಯ ಆಧಾರದ ಮೇಲೆ ಶಾಸನಸಭೆಯಲ್ಲಿ ‘ಕರ್ನಾಟಕ ನಾಗರಿಕ ಸೇವೆಗಳು ಕಾಯ್ದೆ 2022’ ಅನ್ನು ಅಂಗೀಕರಿಸಿ, ಈ362 ಅಧಿಕಾರಿಗಳ ನೇಮಕಾತಿಯನ್ನು ಕಾನೂನುಬದ್ಧಗೊಳಿಸಿ ಸರ್ಕಾರ ಆದೇಶಿಸಿತ್ತು. ನ್ಯಾಯಾಲಯದ ತೀರ್ಪುಗಳನ್ನು ಮೂಲೆಗೆ ತಳ್ಳಿ ಸರ್ಕಾರ ಜಾರಿಗೆ ತಂದಿದ್ದ 2022ರ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ವಿಶೇಷ ಮೇಲ್ಮನವಿ ಸಂಬಂಧ ಅಕ್ಟೋಬರ್ 29, 2026ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್​​ ನ್ಯಾಯಾಲಯಗಳು ಭ್ರಷ್ಟಾಚಾರದ ಕಾರಣಕ್ಕೆ ರದ್ದುಗೊಳಿಸಿದ ಪ್ರಕ್ರಿಯೆಯನ್ನು ಶಾಸಕಾಂಗವು ಕಾಯ್ದೆಯ ಮೂಲಕ ಮತ್ತೆ ಜಾರಿಗೆ ತರಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರದ 2022ರ ವ್ಯಾಲಿಡೇಷನ್ ಕಾಯ್ದೆಯು ಸಂಪೂರ್ಣ ಅಸಂವಿಧಾನಿಕ ಎಂದಿತ್ತು.

2021ರ ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ

ಕೆಪಿಎಸ್‌ಸಿ ನಡೆಸಬೇಕಾಗಿದ್ದ ಪ್ರಥಮ ದರ್ಜೆ ಸಹಾಯಕರ (FDA) ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಪರೀಕ್ಷೆ ನಡೆಯುವ ಹಿಂದಿನ ದಿನವೇ ಸೋರಿಕೆಯಾಗಿತ್ತು. ಸಿಸಿಬಿ ಪೊಲೀಸರು ದಾಳಿ ನಡೆಸಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಕಿಡಿಗೇಡಿಗಳನ್ನು ಬಂಧಿಸಿದರು. ಇದರಿಂದಾಗಿ ಜನೆವರಿ 24, 2021ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿತ್ತು.

2021ರ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ನೇಮಕಾತಿ ಹಗರಣ

545 ಪಿಎಸ್‌ಐ ಹುದ್ದೆಗಳ ಭರ್ತಿಗಾಗಿ ಅಕ್ಟೋಬರ್ 3, 2021ರಂದು ನಡೆದ ಲಿಖಿತ ಪರೀಕ್ಷೆಯಲ್ಲಿ ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ನೇಮಕಾತಿ ಅಕ್ರಮ ನಡೆದಿತ್ತು. ಕಲಬುರಗಿಯ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ (OMR) ಶೀಟ್‌ಗಳನ್ನು ತಿದ್ದಲಾಗಿತ್ತು ಮತ್ತು ಬ್ಲೂಟೂತ್ ಸಾಧನಗಳನ್ನು ಬಳಸಿ ನಕಲು ಮಾಡಲಾಗಿತ್ತು. ಸಿಐಡಿ ತನಿಖೆಯಿಂದ ಇದರಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ (ADGP) ಅಮೃತ್ ಪೌಲ್ ಸೇರಿದಂತೆ 110ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು. ನಂತರ ಈ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ಮಾಡಬೇಕಾದ ಸ್ಥಿತಿ ಬಂದಿತ್ತು.

2022ರ ಕೆಪಿಟಿಸಿಎಲ್ ಎಇ/ಜೆಇ ಪರೀಕ್ಷೆ ಅಕ್ರಮ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಪರೀಕ್ಷೆಯಲ್ಲಿ ಗಂಭೀರ ಸ್ವರೂಪದ ಅಕ್ರಮ ನಡೆದಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಸ್ಮಾರ್ಟ್‌ವಾಚ್ ಮತ್ತು ಮೈಕ್ರೋ ಬ್ಲೂಟೂತ್ ಸಾಧನಗಳನ್ನು ಬಳಸಿ ಪ್ರಶ್ನೆಗಳನ್ನು ಹೊರಗಿರುವವರಿಗೆ ತಿಳಿಸಿ, ಉತ್ತರಗಳನ್ನು ಪಡೆದುಕೊಂಡಿದ್ದರು.

2026ರ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣ

400 ಪಶುವೈದ್ಯಾಧಿಕಾರಿ (Veterinary Officers) ಹುದ್ದೆಗಳ ನೇಮಕಾತಿಯಲ್ಲಿ ನಡೆದ ಪತ್ರಿಕೆ ಸೋರಿಕೆ ಮತ್ತು ಲಂಚದ ಹಗರಣ ಇತ್ತೀಚಿನ ದೊಡ್ಡ ಭ್ರಷ್ಟಾಚಾರ ಪ್ರಕರಣವಾಗಿದೆ. ಜನವರಿ 2026ರಲ್ಲಿ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಅಭ್ಯರ್ಥಿಗಳಿಗೆ ಮೊದಲೇ ನೀಡಿ ಕಂಠಪಾಠ ಮಾಡಿಸಲಾಗಿತ್ತು. ಪ್ರತಿ ಹುದ್ದೆಗೆ 40ರಿಂದ 50 ಲಕ್ಷ ರೂ. ಲಂಚ ಪಡೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಸೇರಿದಂತೆ ಪ್ರಮುಖರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ಈ ಹಗರಣದ ತನಿಖೆಗಾಗಿ ಹೈಕೋರ್ಟ್ ನಿರ್ದೇಶನದಂತೆ ಪ್ರಸ್ತುತ ವಿಶೇಷ ತನಿಖಾ ತಂಡ (SIT) ಕಾರ್ಯನಿರ್ವಹಿಸುತ್ತಿದೆ.

ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ವಿವಾದ

ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದಾತ ಗ್ರಾಮ ಲೆಕ್ಕಾಧಿಕಾರಿ ಎಕ್ಸಾಂನಲ್ಲಿ 151 ಮಾರ್ಕ್ಸ್​​ ಪಡೆದು ರಾಜ್ಯಕ್ಕೆ ಟಾಪರ್​​ ಆಗಿರುವ ಬಗ್ಗೆ ತನಿಖೆ ನಡೆಸುವಂತೆ ಅಕ್ಟೋಬರ್​​ 2026ರಲ್ಲಿ ಸೋಶಿಯಲ್​​ ಮೀಡಿಯಾದಲ್ಲಿ ಆಗ್ರಹ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ವೇಳೆ ಪರೀಕ್ಷೆಯಲ್ಲಿ ರಾಜ್ಯಕ್ಕೇ ಟಾಪರ್ ಆಗಿದ್ದ ಹಾವೇರಿಯ ಶಂಕರ್ ಬನ್ನೂರನ ಕಳ್ಳಾಟ ಬಯಲಾಗಿತ್ತು. ಶಿಗ್ಗಾಂವಿ ಪರೀಕ್ಷಾ ಕೇಂದ್ರದ ಕೊಠಡಿಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದ ಶಂಕರ್, ಗೂಗಲ್ ಲೆನ್ಸ್ ಆ್ಯಪ್ ಮೂಲಕ ಪ್ರಶ್ನೆ ಪ್ರಶ್ನೆ ಪತ್ರಿಕೆ ಸ್ಕ್ಯಾನ್ ಮಾಡಿ ಉತ್ತರ ಬರೆದಿದ್ದ ಎಂಬುದು ಗೊತ್ತಾಗಿತ್ತು.

ನೇಮಕಾತಿ ಅಕ್ರಮದಲ್ಲಿ ಕೆಪಿಎಸ್​​ಸಿಯದ್ದೇ ಸಿಂಹಪಾಲು!

KEAಗೆ ಹೋಲಿಸಿದರೆ KPSCಯಲ್ಲಿ ನಡೆದಿರುವ ನೇಮಕಾತಿ ಹಗರಣಗಳು ಅತ್ಯಂತ ಗಂಭೀರ ಹಾಗೂ ಬೃಹತ್ ಪ್ರಮಾಣದ್ದಾಗಿವೆ. KEA ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಹೊರಗಿನ ಕೆಲವು ದಲ್ಲಾಳಿಗಳು ಮತ್ತು ಪರೀಕ್ಷಾರ್ಥಿಗಳು ಭಾಗಿಯಾಗಿರುವ ಅಕ್ರಮಗಳು ಹೆಚ್ಚಾಗಿ ಕಂಡುಬಂದಿದ್ದರೆ, KPSCಯಲ್ಲಿ ಆಯೋಗದ ಉನ್ನತ ಮಟ್ಟದ ಪ್ರಾಧಿಕಾರವೇ ನೇರವಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ದೊಡ್ಡ ಆತಂಕ ಸೃಷ್ಟಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ ಕೈಗೊಂಡ ಕ್ರಮಗಳು

ಕರ್ನಾಟಕದಲ್ಲಿ ಕೆಪಿಎಸ್‌ಸಿ (KPSC), ಕೆಇಎ (KEA) ಸೇರಿದಂತೆ ವಿವಿಧ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ಮತ್ತು ಪರೀಕ್ಷಾ ಪ್ರಾಧಿಕಾರಗಳು ಹಲವು ಕಠಿಣ ಮತ್ತು ಮಹತ್ವದ ಕ್ರಮಗಳನ್ನು ಕೈಗೊಂಡಿವೆ. ಕರ್ನಾಟಕ ಸಾರ್ವಜನಿಕ ಪರೀಕ್ಷಾ ಕಾಯ್ದೆ, 2023ರ ಅಡಿ ಅಕ್ರಮ ಎಸಗುವ ಅಭ್ಯರ್ಥಿಗಳಿಗೆ 5ರಿಂದ 12 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ನಿಂದ 10 ಕೋಟಿ ರೂ.ವರೆಗೆ ಭಾರಿ ದಂಡ ವಿಧಿಸಲು ಅವಕಾಶವಿದೆ. ಅಲ್ಲದೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ‘ಜಾಮೀನು ರಹಿತ’ ಅಪರಾಧ ಎಂದು ಪರಿಗಣಿಸಲಾಗುತ್ತದೆ. ತಪ್ಪು ಎಸಗಿದ ಸಂಸ್ಥೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳನ್ನು ಮುಂದಿನ 2 ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಪರೀಕ್ಷೆ ಬರೆಯದಂತೆ ನಿಷೇಧಿಸಲೂ (Debar) ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.

ಪರೀಕ್ಷಾ ಕೇಂದ್ರಗಳು ಹಾಗೂ ಸೂಕ್ಷ್ಮ ಕೊಠಡಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಜಿಲ್ಲಾ ಮಟ್ಟದಲ್ಲಿ ‘ವೆಬ್‌ಕಾಸ್ಟಿಂಗ್’ ಮೂಲಕ ನೇರ ನಿಗಾ ಇಡುವ ವ್ಯವಸ್ಥೆ ಮಾಡಲಾಗಿದೆ.ಬ್ಲೂಟೂತ್ ಸೇರಿದಂತೆ ಇಲೆಕ್ಟ್ರಾನಿಕ್ ಸಾಧನಗಳ ದುರ್ಬಳಕೆ ತಡೆಯಲು ಬಯೋಮೆಟ್ರಿಕ್ ಪರಿಶೀಲನೆ, ಕ್ಯೂಆರ್ ಕೋಡ್ (QR Code) ಮತ್ತು ಬಾರ್‌ಕೋಡ್ ಆಧಾರಿತ ಟ್ರ್ಯಾಕಿಂಗ್ ಹಾಗೂ ಜಿಪಿಎಸ್ (GPS) ತಂತ್ರಜ್ಞಾನ ಬಳಕೆಗೆ ನಿಯಮ ರೂಪಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಜೆಡಿಎಸ್‌-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
ಜೆಡಿಎಸ್‌-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
'ನಿಖಿಲ್​​ಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?': ಪ್ರಿಯಾಂಕ್​​
'ನಿಖಿಲ್​​ಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?': ಪ್ರಿಯಾಂಕ್​​
'ಸಿಎಂ ಸೇರಿ ತನ್ನ ಫೋನ್​​ ಕೂಡ ಕದ್ದಾಲಿಕೆ ಆಗುತ್ತವೆ': ಪ್ರಿಯಾಂಕ್​​ ಖರ್ಗೆ
'ಸಿಎಂ ಸೇರಿ ತನ್ನ ಫೋನ್​​ ಕೂಡ ಕದ್ದಾಲಿಕೆ ಆಗುತ್ತವೆ': ಪ್ರಿಯಾಂಕ್​​ ಖರ್ಗೆ
ಮುಂದಿನ ಸಿನಿಮಾ ಬಗ್ಗೆ ಅಪ್​​ಡೇಟ್ ಕೊಟ್ಟ ರಮಿಕಾ ಶಿವು
ಮುಂದಿನ ಸಿನಿಮಾ ಬಗ್ಗೆ ಅಪ್​​ಡೇಟ್ ಕೊಟ್ಟ ರಮಿಕಾ ಶಿವು
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟ
ಭದ್ರಾ ಡ್ಯಾಂನಿಂದ 10 ದಿನ 1500 ಕ್ಯೂಸೆಕ್ ನೀರು ಬಿಡುಗಡೆ
ಭದ್ರಾ ಡ್ಯಾಂನಿಂದ 10 ದಿನ 1500 ಕ್ಯೂಸೆಕ್ ನೀರು ಬಿಡುಗಡೆ
ಮಹಾರಾಣಿ ಪಟ್ಟಕ್ಕೆ ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಸ್ಪರ್ಧೆ
ಮಹಾರಾಣಿ ಪಟ್ಟಕ್ಕೆ ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಸ್ಪರ್ಧೆ
ಕುಮಾರಕೃಪಾ ಗೆಸ್ಟ್ ಹೌಸ್ ಹೆಸರು ಚೇಂಜ್: ಇನ್ನು ಇದುವೇ ಸಿಎಂ ಅಧಿಕೃತ ನಿವಾಸ
ಕುಮಾರಕೃಪಾ ಗೆಸ್ಟ್ ಹೌಸ್ ಹೆಸರು ಚೇಂಜ್: ಇನ್ನು ಇದುವೇ ಸಿಎಂ ಅಧಿಕೃತ ನಿವಾಸ
ಕಾರ್ತಿಕ ಸೋಮವಾರದ ವಿಶೇಷ ಫಲ
ಕಾರ್ತಿಕ ಸೋಮವಾರದ ವಿಶೇಷ ಫಲ