ಪರೀಕ್ಷಾ ಅಕ್ರಮಕ್ಕೆ ಲೈಫ್ ಟೈಮ್ ಶಿಕ್ಷೆ: ಇನ್ನುಂದೆ ಅಕ್ರಮಕೋರರಿಗೆ ಸರ್ಕಾರಿ ನೌಕರಿ ಬಾಗಿಲು ಬಂದ್!
ಸರ್ಕಾರಿ ನೌಕರಿಗಾಗಿ ಅಭ್ಯರ್ಥಿಗಳು ಅಡ್ಡದಾರಿ ಹಿಡಿಯುತ್ತಿರುವುದು ಹೆಚ್ಚಾಗಿದೆ. ಹೀಗಾಗಿ ಸರ್ಕಾರಿ ಉದ್ಯೋಗ ಪಡೆಯಲು ಅಡ್ಡದಾರಿ ಹಿಡಿಯುವವರಿಗೆ ಕೆಇಎ ಈಗ ಬಿಸಿ ಮುಟ್ಟಿಸಿದೆ. ಪರೀಕ್ಷೆಯಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದರೆ ಕೇವಲ ಆ ಪರೀಕ್ಷೆಯಿಂದಷ್ಟೇ ಅಲ್ಲ, ಭವಿಷ್ಯದಲ್ಲಿ ನಡೆಯುವ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೂ ಶಾಶ್ವತ ನಿಷೇಧ ಹೇರಲು ಮುಂದಾಗಿದೆ. ಅಷ್ಟಕ್ಕೂ ಕೆಇಎ ಕೈಗೊಂಡಿರೋ ಈ ಕಠಿಣ ಕ್ರಮಗಳೇನು ಎನ್ನುವ ಕಂಪ್ಲೀಟ್ ಡೀಟೇಲ್ಸ್.

ಬೆಂಗಳೂರು, ನವೆಂಬರ್ 05): ಸರ್ಕಾರಿ ಕೆಲಸ ಬೇಕು. ಆದ್ರೆ, ಪರೀಕ್ಷೆಯಲ್ಲಿ ಪಾಸಾಗುವ ನಂಬಿಕೆ ಇಲ್ಲ, ಹಾಗೇ ಓದೋಕೆ ತಾಳ್ಮೆ ಇಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಪಾಸ್ ಆಗಲು ಅಡ್ಡದಾರಿ ಹಿಡಿಯೋ ಪ್ಲಾನ್ ಮಾಡುವ ಅಕ್ರಮಕೋರರಿಗೆ ಕೆಇಎ ಈಗ ಶಾಕ್ ಕೊಟ್ಟಿದೆ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿ ಸಿಕ್ಕಿಬಿದ್ರೆ ಜೀವನಪೂರ್ತಿ ಸರ್ಕಾರಿ ಉದ್ಯೋಗದ ಬಾಗಿಲು ಬಂದ್ ಆಗಲಿದೆ. ಹೌದು….ಕೆಇಎ ನಡೆಸುವ ಯಾವುದೇ ಪರೀಕ್ಷೆ ಬರೆಯಲು ಇನ್ಮುಂದೆ ಅವಕಾಶವೇ ಇಲ್ಲ. ಅಷ್ಟೇ ಅಲ್ಲ, ಕೆಇಎ ವ್ಯಾಪ್ತಿಯಿಂದ ಹೊರತಾದ ಕೆಪಿಎಸ್ ಸಿ ಶಿಕ್ಷಣ ಇಲಾಖೆ ನಡೆಸುವ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೂ ಈ ನಿಷೇಧ ಅನ್ವಯವಾಗಲಿದೆ. ಮೊನ್ನೇ ಅಷ್ಟೇ ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದ ಹಾವೇರಿ ಮೂಲದ ಶಂಕರ್ ಬನ್ನೂರುಗೂ ಈಗ ಲೈಫ್ ಟೈಮ್ ಬ್ಯಾನ್ ಬಿಸಿ ತಟ್ಟಿದೆ.
ಇನ್ಮುಂದೆ ಕೆಇಎ ನಡೆಸುವ ಪರೀಕ್ಷೆಗಳಿಂದ ಶಾಶ್ವತ ನಿರ್ಬಂಧ
ಗ್ರಾಮ ಲೆಕ್ಕಾಧಿರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದ ಶಂಕರ್ ಬನ್ನೂರು, ಮ ಜೈಲರ್ ಹುದ್ದೆಯ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾನೆ. ಆದ್ರೆ, ವಿಎ ಪರೀಕ್ಷಾ ಅಕ್ರಮದ ಆರೋಪದಲ್ಲಿ ಸಿಲುಕಿರುವ ಹಿನ್ನೆಲೆ ಎಲ್ಲ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಂದಲೇ ಅನರ್ಹಗೊಳಿಸುವ ಕ್ರಮಕ್ಕೆ ಕೆಇಎ ಮುಂದಾಗಿದೆ. ಇನ್ಮುಂದೆ ಕೆಇಎ ನಡೆಸುವ ಪರೀಕ್ಷೆಗಳಲ್ಲಿ ಭಾಗವಹಿಸಲು ಶಾಶ್ವತ ನಿರ್ಬಂಧಿಸಲಾಗಿದೆ.
ಇದನ್ನೂ ನೋಡಿ: ನೇಮಕಾತಿ ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ!
ಕೆಪಿಎಸ್‌ಸಿ ಹಾಗೂ ಪೊಲೀಸ್ ನೇಮಕಾತಿ ಮಂಡಳಿಗೂ ಅಕ್ರಮಕೋರರ ಮಾಹಿತಿಯನ್ನು ರವಾನಿಸಲು ಕೆಇಎ ನಿರ್ಧರಿಸಿದೆ. 2021ರ ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿಗಳಿಗೂ ಇದೇ ರೀತಿಯ ನಿರ್ಬಂಧ ವಿಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ಅಕ್ರಮದ ಆರೋಪ ಎದುರಿಸುತ್ತಿರುವ ಕೆಲವರ ಹಾಲ್‌ಟಿಕೆಟ್‌ಗಳನ್ನೂ ತಡೆಹಿಡಿಯಲಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ ಬಗ್ಗೆ ಹಲವು ಅನುಮಾನ
ಇನ್ನು ಪರೀಕ್ಷಾ ಅಕ್ರಮ ತಡೆಯಲು ಕೆಇಎ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಬರೋಬ್ಬರಿ 180 ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳು ಈಗ ತನಿಖೆಯ ಅಂಗಳದಲ್ಲಿವೆ. ಪರೀಕ್ಷೆ ಬರೆದರೂ ಒಎಂಆರ್ ಶೀಟ್‌ನಲ್ಲಿ 180 ಅಭ್ಯರ್ಥಿಗಳು ಉತ್ತರ ಗೊತ್ತಿಲ್ಲದೆ ಇದ್ರೆ ಐದನೇ ಎಂಟ್ರಿ E ಕಡ್ಡಾಯವಾಗಿ ಮಾಡಬೇಕು. ಆದ್ರೆ ಸಾಕಷ್ಟು ಅಭ್ಯರ್ಥಿಗಳು ಮಾಡಿಲ್ಲ. ಉತ್ತರಗಳನ್ನೇ ಭರ್ತಿ ಮಾಡದೆ ಖಾಲಿ ಬಿಟ್ಟ ಅಭ್ಯರ್ಥಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಇದರ ಹಿಂದೆ ಮಧ್ಯವರ್ತಿಗಳ ಕೈವಾಡವಿದೆಯಾ ಎಂಬ ಅನುಮಾನ ಮೂಡಿದೆ.
ನೀವು ಒಎಂಆರ್ ಶೀಟ್ ತುಂಬಬೇಡಿ. ನಾನು ಮ್ಯಾನೇಜ್ ಮಾಡುತ್ತೇನೆ ಎಂದು ಅಭ್ಯರ್ಥಿಗಳಿಗೆ ಆಮಿಷವೊಡ್ಡಿರುವ ಆರೋಪವು ಇರಬಹುದು. ಹೀಗಾಗಿ ಒಎಂಆರ್ ಖಾಲಿ ಬಿಟ್ಟ ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸಲು ಕೆಇಎ ಮುಂದಾಗಿದೆ. ಪರೀಕ್ಷಾ ಅಕ್ರಮಕ್ಕೆ ಹೊಸ ಹೊಸ ದಾರಿಗಳನ್ನು ಹುಡುಕುವವರಿಗೆ ಕಡಿವಾಣ ಹಾಕಲು ಮತ್ತಷ್ಟು ಕಠಿಣ ಮುಂಜಾಗ್ರತಾ ಕ್ರಮಗಳಿಗೂ ಸಿದ್ಧತೆ ನಡೆಸಿದೆ. ಇಷ್ಟೆಲ್ಲಾ ಅಕ್ರಮಗಳ ಹಿನ್ನೆಲೆಯಲ್ಲಿ ಪರೀಕ್ಷಾ ವ್ಯವಸ್ಥೆಯನ್ನೇ ಮತ್ತಷ್ಟು ಬಿಗಿಗೊಳಿಸಲು ಕೆಇಎ ಮುಂದಾಗಿದೆ.
ಒಟ್ಟಿನಲ್ಲಿ ಸರ್ಕಾರಿ ಉದ್ಯೋಗದ ಹೆಸರಿನಲ್ಲಿ ಅಡ್ಡದಾರಿ ಹಿಡಿಯುವವರಿಗೆ ಕೆಇಎ ಶಾಶ್ವತ ಬ್ರೇಕ್ ಹಾಕಲು ಮುಂದಾಗಿದೆ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ್ರೆ ಒಂದು ಪರೀಕ್ಷೆಯ ಅವಕಾಶ ಮಾತ್ರವಲ್ಲ, ಇಡೀ ಸರ್ಕಾರಿ ಉದ್ಯೋಗದ ಕನಸೇ ಕಮರಿ ಹೋಗುವ ಸಾಧ್ಯತೆ ಇದೆ. ಪರೀಕ್ಷಾ ಪಾವಿತ್ರ್ಯ ಕಾಪಾಡಲು ಕೆಇಎ ಕೈಗೊಂಡಿರುವ ಈ ಕಠಿಣ ಕ್ರಮಗಳು ಅಕ್ರಮಕೋರರಿಗೆ ಎಚ್ಚರಿಕೆಯ ಗಂಟೆಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.




