ಬೆಳಗಾವಿ: ರಾಜ್ಯದಲ್ಲಿ ಉಪಚುನಾವಣೆ ಸನ್ನಿಹಿತವಾಗಿದ್ದು ಎಲ್ಲಾ ಪಕ್ಷಗಳೂ ಭರ್ಜರಿ ಸಿದ್ಧತೆ ಮಾಡಿಕೊಂಡಿವೆ. ಜೊತೆಗೆ, ರಾಜಕೀಯ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳ ಸರಣಿಯೂ ಜೋರಾಗಿ ಸಾಗುತ್ತಿದೆ. ಇದರ ಭಾಗವೆಂಬಂತೆ ಬೆಳಗಾವಿಯಲ್ಲಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಗುಡುಗಿದ್ದಾರೆ. ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ಕಾಂಗ್ರೆಸ್ ನಾಯಕರು ಖಾಲಿ ಕೊಡ ಎಂದು ವ್ಯಂಗ್ಯ ಮಾಡಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯವನ್ನು ಒಡೆದಿದ್ದು ಸಿದ್ದರಾಮಯ್ಯ, ಗೋಹತ್ಯೆ ಮಾಡುತ್ತಿರೋರಿಗೆ ಬೆಂಬಲ ಕೊಟ್ಟೋರು ಸಿದ್ದರಾಮಯ್ಯ, ಹಿಂದೂ ಮುಸ್ಲಿಂ ಸಮುದಾಯದವರನ್ನು ದೂರ ದೂರ ಮಾಡಿದ್ದು ಕೂಡ ಸಿದ್ದರಾಮಯ್ಯ ಎಂದು ಆರೋಪಿಸಿದ್ದಾರೆ, ಜೊತೆಗೆ ಗೋರಕ್ಷಣೆ ಮಾಡುತ್ತಾರೆಂಬ ಕಾರಣಕ್ಕೆ ಯುವಕರ ಕಗ್ಗೊಲೆಯನ್ನೂ ಮಾಡಲಾಯ್ತು ಎನ್ನುವ ಮೂಲಕ ಹಳೆಯ ಘಟನೆಗಳನ್ನು ಉಪಚುನಾವಣೆ ಹೊತ್ತಲ್ಲಿ ತಿರುವಿ ಹಾಕಿದ್ದಾರೆ.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಖಾಲಿ ಕೊಡ ಆಗಿದ್ದಾರೆ. ಖಾಲಿ ಕೊಡವನ್ನು ಮೊದಲು ಜನ ನಂಬಿದ್ರು, ಆದ್ರೆ ಅವರು ಜನರಿಗೆ ದ್ರೋಹ ಮಾಡಿದ್ರು. ಈಗ ಇದೇ ಕಾಂಗ್ರೆಸ್ ಪಕ್ಷ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದೆ. ಮಂಗಳಾ ಅಂಗಡಿ ಸಂಸತ್‌ಗೆ ಹೋಗಿ ಏನು ಮಾಡ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಏಕೆ ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್ ಮಹಿಳೆ ಅಲ್ಲವೇನು? ಅವರು ಕೆಲಸ ಮಾಡಿ ತೋರಿಸಿಲ್ವಾ? ಹೀಗೆಲ್ಲಾ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಹೀಗಾಗಿ ಮಹಿಳೆಯರನ್ನು ಅಪಮಾನ ಮಾಡಿದ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕಾರ ಮಾಡಬೇಕು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಕಾಲಿಟ್ಟ ಕಡೆಯೆಲ್ಲಾ ಕಾಂಗ್ರೆಸ್ ಸೋತಿದೆ ಎಂದಿರುವ ಅವರು ರಾಹುಲ್ ಬೆಳಗಾವಿಗೆ ಬಂದರೆ ಸಿಂಹವೋ, ನರಿಯೋ, ಕುರಿಯೋ ಆಮೇಲೆ ಗೊತ್ತಾಗುತ್ತೆ ಎಂದು ವ್ಯಂಗ್ಯವಾಡಿದ್ದು, ಉಪಚುನಾವಣೆ ಫಲಿತಾಂಶ ಬಳಿಕ ಬಿಜೆಪಿ ಸರ್ಕಾರ ಕುಸಿಯುತ್ತದೆ ಎಂಬ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿಕೆಗೆ ಪ್ರತಿಕ್ರಿಯಿಸಿ ರಣದೀಪ್‌ಸಿಂಗ್ ಸುರ್ಜೇವಾಲಗೆ ಕರ್ನಾಟಕವೇ ಮರೆತು ಹೋಗಿದೆ. ಸುರ್ಜೇವಾಲರಂತ ಭಟ್ಟಂಗಿಗಳು ರಾಹುಲ್ ಗಾಂಧಿನ ಹೊಗಳಿ ಹಾಳು ಮಾಡಿದ್ರು ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:
ಈಶ್ವರಪ್ಪ ಮನೆಯಲ್ಲಿ 2 ನೋಟ್ ಎಣಿಸೋ ಮೆಷಿನ್ ಸಿಕ್ಕಿತ್ತು, ಅದ್ನ ಆತ ಒಪ್ಕೊಂಡಿದ್ದ: ಸಿದ್ದರಾಮಯ್ಯ
(KS Eshwarappa slams Siddaramaiah and says he is the reason behind division of society)