ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಡಿಸಿ ಕಚೆರಿ ಮುಂದೆ ತಟ್ಟೆ ಲೋಟ ಬಡಿದು ಪ್ರತಿಭಟನೆ
ಮಾರ್ಚ್ ತಿಂಗಳ ಸಂಬಳ ಹಾಗೂ 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಪ್ರಾರಂಭ ಮಾಡಿರುವ ಮುಷ್ಕರ ಸದ್ಯ ಪ್ರತಿಭಟನೆ ರೂಪ ಪಡೆದಿದೆ. ನಾಳೆ ಯುಗಾದಿ ಹಬ್ಬ ಹಿನ್ನೆಲೆ ಸಂಬಳ ತಡೆ ಹಿಡಿದಿರುವ ಕ್ರಮವನ್ನು ವಿರೋಧಿಸಿ, ನೌಕರರ ಕುಟುಂಬದಿಂದ ತಟ್ಟೆ ಲೋಟ ಬಡಿದು ಪ್ರತಿಭಟನೆ ನಡೆಸಲಾಗುತ್ತಿದೆ.
ಬೆಂಗಳೂರು: ಮಾರ್ಚ್ ತಿಂಗಳ ಸಾರಿಗೆ ನೌಕರರ ಸಂಬಳ ತಡೆಹಿಡಿದಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಡಿಸಿ ಕಚೇರಿ ಹಾಗೂ ತಾಲೂಕು ಕಚೇರಿಗಳ ಬಳಿ ದೈಹಿಕ ಅಂತರ ಪಾಲಿಸಿ ತಟ್ಟೆ, ಲೋಟ ಬಡಿದು ಸಾರಿಗೆ ನೌಕರರು ಧರಣಿ ನಡೆಸುತ್ತಿದ್ದಾರೆ. 11 ಗಂಟೆಗೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ರಾಜ್ಯಾದ್ಯಂತ ಆರಂಭವಾಗಿದೆ.
ಮಾರ್ಚ್ ತಿಂಗಳ ಸಂಬಳ ಹಾಗೂ 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಪ್ರಾರಂಭ ಮಾಡಿರುವ ಮುಷ್ಕರ ಸದ್ಯ ಪ್ರತಿಭಟನೆ ರೂಪ ಪಡೆದಿದೆ. ನಾಳೆ ಯುಗಾದಿ ಹಬ್ಬ ಹಿನ್ನೆಲೆ ಸಂಬಳ ತಡೆ ಹಿಡಿದಿರುವ ಕ್ರಮವನ್ನು ವಿರೋಧಿಸಿ, ನೌಕರರ ಕುಟುಂಬದಿಂದ ತಟ್ಟೆ ಲೋಟ ಬಡಿದು ಪ್ರತಿಭಟನೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ 11 ಗಂಟೆಗೆ ರಾಜ್ಯಾದ್ಯಂತ ಪ್ರತಿಭಟನೆ ಆರಂಭವಾಗಲಿದೆ. ಕೊರೊನಾ ರೂಲ್ಸ್ ಇರುವುದರಿಂದ ಕುಟುಂಬಸ್ಥರು ಗುಂಪು ಸೇರುವುದಿಲ್ಲ ರಸ್ತೆಗಳಲ್ಲಿ ಸಾಲಿನಲ್ಲಿ ನಿಂತು ತಟ್ಟೆ – ಲೋಟ ಚಳುವಳಿ ಮಾಡುತ್ತೇವೆ. ಜಿಲ್ಲಾಧಿಕಾರಿಗಳ ಕಚೇರಿ, ಮೆಜೆಸ್ಟಿಕ್, ಕೆ. ಆರ್.ಸರ್ಕಲ್ ಪ್ರಮುಖ ವೃತ್ತಗಳಲ್ಲಿ ಸಾರಿಗೆ ನೌಕರರ ಕುಟುಂಬಸ್ಥರು ಸೇರಲಿದ್ದಾರೆ. ಡಿಪೋಗಳಲ್ಲಿ ಕೂಡ ಪ್ರತಿಭಟನೆ ನಡೆಯುತ್ತದೆ. ಸರ್ಕಾರ ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಸರ್ಕಾರ ಇವತ್ತು ಒಂದು ನಿರ್ಧಾರ ತೆಗೆದುಕೊಳ್ಳಲಿಲ್ಲವಾದರೆ ಮುಷ್ಕರವನ್ನ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಡಿಸಿ ಕಚೇರಿ ಮುಂದೆ ಪೊಲೀಸ್ ಭದ್ರತೆ ಡಿಸಿ ಕಚೇರಿ ಬಳಿ ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಜಿ.ರಸ್ತೆಯ ಡಿಸಿ ಕಚೇರಿಗೆ ತಲುಪುವ 5 ಕಡೆ ಹಲಸೂರು ಗೇಟ್ ಎಸಿಪಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ. ಡಿಸಿ ಕಚೇರಿಗೆ ಸದ್ಯಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಿದ್ದು, ಡಿಸಿ ಕಚೇರಿ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಒಟ್ಟಾರೆ 5 KSRP ತುಕಡಿ, ಐವರು ಇನ್ಸ್ಪೆಕ್ಟರ್ ಸೇರಿದಂತೆ ಡಿಸಿ ಕಚೇರಿ ಭದ್ರತೆಗೆ 300 ಪೊಲೀಸರ ನಿಯೋಜನೆ ಮಾಡಲಾಗಿದೆ.
ಪೊಲೀಸರು ಡಿಸಿ ಕಚೇರಿಗೆ ಬರುವ ಪ್ರತಿಯೊಬ್ಬರ ಬ್ಯಾಗ್ ಚೆಕ್ ಮಾಡಿ ಕಳುಹಿಸುತ್ತಿದ್ದು, ಯಾರ ಬ್ಯಾಗ್ ನಲ್ಲಾದರು ತಟ್ಟೆ ಲೋಟ ಇದೆಯಾ ಎಂದು ತಪಾಸಣೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಒಬ್ಬ ಸಾರಿಗೆ ಸಿಬ್ಬಂದಿಯೂ ಕೂಡ ಡಿಸಿ ಕಚೇರಿ ತಲುಪದಂತೆ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.
ಸಾರಿಗೆ ನೌಕರರು ತಟ್ಟೆ ಲೋಟ ಪ್ರತಿಭಟನೆಯನ್ನು ತಡೆಯಲು ಮುಂದಾದ ಪೊಲೀಸರು ಪ್ರತಿಭಟನೆನಿರತ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಹಿಳೆ ಪೊಲೀಸರ ಕಾಲಿಗೆ ಬಿದ್ದು, ನಮ್ಮನ್ನ ವಶಕ್ಕೆ ಪಡೆಯಬೇಡಿ. ನಮಗೆ ಸಂಬಳ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಇನ್ನು ಮಕ್ಕಳ ಸಮೇತ ಪ್ರತಿಭಟನೆಗೆ ಬಂದಿದ್ದ ಸಾರಿಗೆ ನೌಕರರ ಪತ್ನಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಬಾಗಲಕೋಟೆ, ಚಿಕ್ಕಮಗಳೂರು, ನೆಲಮಂಗಲ, ಮೈಸೂರು, ಬೆಳಗಾವಿ, ಯಾದಗಿರಿ, ಹುಬ್ಬಳ್ಳಿ, ಹಾವೇರಿ, ಶಿವಮೊಗ್ಗ ಸೇರಿ ರಾಜ್ಯದ ನಾನಾಕಡೆಗಳಲ್ಲಿ ಸಾರಿಗೆ ನೌಕರರು ಮತ್ತು ಕುಟುಂಬಸ್ಥರು ತಟ್ಟೆ ಲೋಟ ಬಡಿದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರಿ ಬಸ್ ಮೇಲೆ ಕಲ್ಲು ತೂರಿದ್ದ ಇಬ್ಬರೂ ನೌಕರರು ಪೊಲೀಸ್ ವಶ ಸರ್ಕಾರಿ ಬಸ್ ಮೇಲೆ ಕಲ್ಲು ತೂರಿದ್ದ ಸಾರಿಗೆ ನೌಕರರಿಬ್ಬರನ್ನು ಬಿಳಿಕೆರೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲ್ಲು ತೂರಾಟದಿಂದ ಬಸ್ ಹಿಂಬದಿಯ ಗಾಜು ಒಡೆದು ಹೋಗಿತ್ತು. ಇನ್ನು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಗೋಪಾಲಸ್ವಾಮಿ ಎಂಬುವವರ ತಲೆಗೆ ಪೆಟ್ಟು ಬಿದ್ದಿತ್ತು. ಈ ಸಂಬಂಧ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಬಳಿ ಬಸ್ಗೆ ಕಲ್ಲು ತೂರಿದ್ದ ಸಂತೋಷ್ ಭಜಂತ್ರಿ ಹಾಗೂ ಕೃಷ್ಣಮೂರ್ತಿ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಸಾರಿಗೆ ನೌಕರರನ್ನು ಎದುರು ಹಾಕಿಕೊಂಡವರು ಈವರೆಗೂ ಉಳಿದಿಲ್ಲ: ಐಎನ್ಟಿಯುಸಿ ಪ್ರಧಾನ ಕಾರ್ಯದರ್ಶಿ ಬೋರ್ ಶೆಟ್ಟಿ
ಸಾರಿಗೆ ನೌಕರರ ಮುಷ್ಕರ ನಿಲ್ಲಿಸದಿದ್ದರೆ ‘ಅಂತರ್ ನಿಗಮ ವರ್ಗಾವಣೆ’ ಪರಿಗಣಿಸದಿರಲು ತೀರ್ಮಾನ!
(Karnataka Bus strike KSRTC Employees unique protest in front of DC Office Across Karnataka State )
Published On - 12:36 pm, Mon, 12 April 21