ಕೆರೆಗಳ ಕುರಿತಾದ ದೂರು ಅರ್ಜಿ ಸ್ವೀಕರಿಸಿ, ತಕ್ಷಣ ಕುಂದುಕೊರತೆ ಪರಿಶೀಲಿಸಿ: ವಿಜಯಪುರ ಜಿಲ್ಲಾಧಿಕಾರಿ ಸುನೀಲ ಕುಮಾರ್ ಸೂಚನೆ
ರಾಜ್ಯ ಮಟ್ಟದ ಅಪೇಕ್ಸ್ ಸಮಿತಿ ಸಭೆಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲಿನ ಕೆರೆಗಳ ಸಂರಕ್ಷಣೆ ಅಭಿವೃದ್ಧಿ ಹಾಗೂ ನಿರ್ವಹಣೆಯ ಬಗ್ಗೆ ನಿಗಾ ವಹಿಸಬೇಕಿದೆ. ಕೆರೆಗಳಲ್ಲಿ ಕಂಡು ಬರುವ ಒತ್ತುವರಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ಇದ್ದಲ್ಲಿ ಗುರುತಿಸಬೇಕು.

ವಿಜಯಪುರ: ಕೆರೆಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾಗುವ ಅರ್ಜಿ, ದೂರುಗಳನ್ನು ಕೂಡಲೇ ಸ್ವೀಕರಿಸಿ ಕುಂದುಕೊರತೆಗಳತ್ತ ಗಮನ ಹರಿಸಬೇಕು. ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿನ ರಿಟ್ ಅರ್ಜಿ ಸಂಖ್ಯೆ 817/2008 ರ ಅಂತಿಮ ಆದೇಶ ದಿನಾಂಕ ಏಪ್ರಿಲ್ 11 ರ ಅನ್ವಯ ರಾಜ್ಯದ ಎಲ್ಲಾ ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನಗೊಳಿಸುವ ಅಂಶಗಳನ್ನು ಪಾಲಿಸಬೇಕು. ಅಲ್ಲದೇ, ಅವುಗಳ ಅನುಷ್ಠಾನ ಪ್ರಕ್ರಿಯೆಗಳ ಪ್ರಗತಿಯ ಮೇಲುಸ್ತುವಾರಿಯನ್ನು ನೋಡಿಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಸೂಚಿಸಿದ್ದಾರೆ.
ಜಿಲ್ಲಾ ಮಟ್ಟದ ಸಮಿತಿ ಸಮಯಾನುಸಾರ ಕೆರೆಗಳ ಸುಪರ್ದಿ ಹೊಂದಿರುವಂತಹ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಪ್ರಯುಕ್ತ ಅಪೆಕ್ಸ್ ಸಮಿತಿಯನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲು ಆದೇಶಿಸಲಾಗಿದೆ. ಮಾನ್ಯ ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರದ ಆದೇಶ ಸಂಖ್ಯೆ :ನಇ 148:ಎಂ ಎನ್ ಜೆ : 2013 ಬೆಂಗಳೂರು ದಿನಾಂಕ: 18-09-2013 ರಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ಹಾಗೂ ಸರ್ಕಾರದ ಆದೇಶದ ಸಂಖ್ಯೆ : ಕಂಇ :365:ಎಲ್ ಜಿ ಪಿ : 2013 ಬೆಂಗಳೂರು ದಿನಾಂಕ : 09-12-2013 ರಂತೆ ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ, ಕರ್ನಾಟಕ ಸರ್ಕಾರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಅಪೇಕ್ಸ್ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲಾಗಿದೆ.
ಕ್ರಮ ಜರುಗಿಸಲು ಸಮಿತಿಗೆ ಆಧಿಕಾರ ರಾಜ್ಯ ಮಟ್ಟದ ಅಪೆಕ್ಸ್ ಸಮಿತಿ ಸಭೆಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲಿನ ಕೆರೆಗಳ ಸಂರಕ್ಷಣೆ ಅಭಿವೃದ್ಧಿ ಹಾಗೂ ನಿರ್ವಹಣೆಯ ಬಗ್ಗೆ ನಿಗಾ ವಹಿಸಬೇಕಿದೆ. ಕೆರೆಗಳಲ್ಲಿ ಕಂಡು ಬರುವ ಒತ್ತುವರಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ಇದ್ದಲ್ಲಿ ಗುರುತಿಸಬೇಕು. ಕೆರೆಗಳನ್ನು ನಿಯಮಾನುಸಾರ ತೆರವುಗೊಳಿಸುವ ಪ್ರಕ್ರಿಯೆಯನ್ನು ಆಯಾ ಕೆರೆಗಳ ಉಸ್ತುವಾರಿ ಹೊಂದಿರುವ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ಕ್ರಮ ಜರುಗಿಸಲಾಗುತ್ತದೆ. ಅಲ್ಲದೇ ಕೆರೆಗಳ ಬಗ್ಗೆ ಸ್ವೀಕೃತಿಯಾಗುವ ದೂರು ಅರ್ಜಿಗಳನ್ನು ಹಾಗೂ ಕುಂದು ಕೊರತೆಗಳನ್ನು ಜಿಲ್ಲಾ ಮಟ್ಟದ ಅಪೆಕ್ಸ್ ಸಮಿತಿಯಲ್ಲಿ ಪರಿಶೀಲಿಸಿ ನಿಯಮಾನುಸಾರ ಇವುಗಳನ್ನು ಇತ್ಯರ್ಥಪಡಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಹೇಳಿದ್ದಾರೆ.
ಸಮಿತಿಯಲ್ಲಿ ಇರುವವರು ಯಾರು ? ರಾಜ್ಯ ಮಟ್ಟದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದವರು ಅಪೆಕ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಜಯಪುರ ಇವರು ಜಿಲ್ಲಾ ಮಟ್ಟದ ಅಪೆಕ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಇವರ ಸುಪರ್ಧಿಯಲ್ಲಿ ಅಪೇಕ್ಸ್ ಸಮಿತಿ ಕಾರ್ಯ ನಿರ್ವಹಣೆ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್
ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ದೂರು ಯಾರಿಗೆ ನೀಡಬಹುದು ? ಜಿಲ್ಲೆಯ ಯಾವುದೇ ಕೆರೆಗಳಲ್ಲಿ ಅಥವಾ ಜಲಮೂಲಗಳಲ್ಲಿ ಒತ್ತುವರಿಗಳು, ಘನತ್ಯಾಜ್ಯ ವಸ್ತುಗಳನ್ನು ಸುರಿಯುವುದು ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಅವುಗಳ ಬಗ್ಗೆ ಅಗತ್ಯ ಮಾಹಿತಿ ಇತ್ಯಾದಿಗಳೊಂದಿಗೆ ಲಿಖಿತ ದೂರು ಅರ್ಜಿಗಳನ್ನು ಸಲ್ಲಿಸಬಹುದು.
ಪ್ರಕರಣಕ್ಕೆ ಸಂಬಂಧಿದಂತೆ ಮುಂದಿನ ಕ್ರಮಕ್ಕಾಗಿ ಜಿಲ್ಲಾ ಮಟ್ಟದ ಅಪೆಕ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಮಟ್ಟದ ಅಪೆಕ್ಸ್ ಸಮಿತಿ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಜಯಪುರ ಈ ವಿಳಾಸಕ್ಕೆ ಅಂಚೆ ಅಥವಾ ಇಮೇಲ್ keresamrakshane.vjp@gmail.com ಮೂಲಕ ಸಲ್ಲಿಸಬಹುದಾಗಿದೆ. ಈ ಮೂಲಕ ಜಲ ಮೂಲಗಳನ್ನು ರಕ್ಷಿಸಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಸಾರಿಗೆ ಸಿಬ್ಬಂದಿಗಳ ಬಂದ್ ಬಿಸಿ: ವಿಜಯಪುರ ಕೂಲಿ ಕೆಲಸಗಾರರಿಗೆ ಸಂಕಷ್ಟ
( Receive complaint about lakes and check the problem says vijayapura DC P Sunil kumar)