ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು ರಸ್ತೆಗಿಳಿಯೋದು ಅನುಮಾನ: ಇಂದು ಸಿಎಂ ಸಭೆ ಬಳಿಕ ಅಂತಿಮ ನಿರ್ಧಾರ

ಬೆಂಗಳೂರಿನಲ್ಲಿ ಮಂಗಳವಾರ ಬಿಎಂಟಿಸಿ ಬಸ್‌ಗಳು ರಸ್ತೆಗೆ ಇಳಿಯುವುದಿಲ್ವಾ? ಕರ್ನಾಟಕದಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಸ್ತಬ್ಧವಾಗಲಿದೆಯಾ? ಪ್ರಯಾಣಿಕರಿಗೆ, ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳಲು ಸಾರಿಗೆ ಬಸ್ಸನ್ನೇ ನಂಬಿಕೊಂಡವರಿಗೆ, ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ನಾಳೆ ಬಸ್‌ ಬಂದ್ ಬಿಸಿ ತಟ್ಟಲಿದೆಯಾ? ಇಂತಹ ಪ್ರಶ್ನೆಗಳು ಇದೀಗ ಸಾಮಾನ್ಯ ಜನರಲ್ಲಿ ಮೂಡಿವೆ.

ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು ರಸ್ತೆಗಿಳಿಯೋದು ಅನುಮಾನ: ಇಂದು ಸಿಎಂ ಸಭೆ ಬಳಿಕ ಅಂತಿಮ ನಿರ್ಧಾರ
ಕೆಎಸ್‌ಆರ್‌ಟಿಸಿ ಬಸ್‌
Edited By:

Updated on: Aug 04, 2025 | 7:02 AM

ಬೆಂಗಳೂರು, ಆಗಸ್ಟ್ 4: ವೇತನ ಪರಿಷ್ಕರಣೆ, 20 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಬಿಎಂಟಿಸಿ (BMTC), ಕೆಎಸ್​ಆರ್​ಟಿಸಿ (KSRTC) ನೌಕರರು ಪಟ್ಟು ಹಿಡಿದಿದ್ದಾರೆ. ಸರ್ಕಾರಕ್ಕೆ ಗಡುವಿನ ಮೇಲೆ ಗಡುವು ಕೊಟ್ಟರೂ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಆಗಸ್ಟ್ 5 ರಿಂದ ಬಸ್‌ ಸಂಚಾರ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದೇ ವಿಚಾರವಾಗಿ ಬೆಂಗಳೂರಿನ ಗಾಂಧಿನಗರದ ಎಐಟಿಯುಸಿ ಕಚೇರಿಯಲ್ಲಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ಭಾನುವಾರ ಸಭೆ ನಡೆಸಿದ್ದಾರೆ. ಸಭೆಯಲ್ಲಿ, ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ 6 ಸಂಘಟನೆಗಳು ಭಾಗಿಯಾಗಿದ್ದವು.

ಮುಷ್ಕರ ಇಲ್ಲ, ಆದರೆ ಬಸ್ ಸಂಚಾರ ಸ್ಥಗಿತ!

ಸಭೆ ಬಳಿಕ ಮಾತನಾಡಿದ ಅನಂತ್ ಸುಬ್ಬರಾವ್, ನಾಳೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರುತ್ತಿರುವುದರಿಂದ ಸಾರಿಗೆ ನೌಕರರು ಮುಷ್ಕರ ಮಾಡುತ್ತಿಲ್ಲ. ಬದಲಿಗೆ ಬಸ್​ ಸಂಚಾರ ಸ್ಥಗಿತಗೊಳಿಸಿ ಎಲ್ಲ 1.15 ಲಕ್ಷ ಸಿಬ್ಬಂದಿ ಮನೆಯಲ್ಲಿರುತ್ತಾರೆ ಎಂದಿದ್ದಾರೆ.

ಕೂಡಲೇ ಸರ್ಕಾರ 38 ತಿಂಗಳ ಅರಿಯರ್ಸ್​ ಕೊಡಬೇಕು. ಶಕ್ತಿ ಯೋಜನೆಯನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ. ಆದರೆ ಸಾರಿಗೆ ಸಿಬ್ಬಂದಿಗೆ ಸಿದ್ದರಾಮಯ್ಯ ಸರ್ಕಾರ ವಿಶ್ವಾಸ ದ್ರೋಹ ಮಾಡಿದೆ ಎಂದು ಅನಂತ್ ಸುಬ್ಬರಾವ್ ಕಿಡಿಕಾರಿದರು.

ಸಾರಿಗೆ ನೌಕರರ ಮನವೊಲಿಕೆ ಯತ್ನ: ಇಂದು ಸಿಎಂ ಸಿದ್ದರಾಮಯ್ಯ ಸಭೆ

ಸಾರಿಗೆ ನೌಕರರ ಯೋಜನೆ ಸರ್ಕಾರಕ್ಕೆ ಆತಂಕ ತಂದಿಟ್ಟಿದೆ. ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿಂದು ಸಾರಿಗೆ ನಿಗಮಗಳ ನೌಕರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ಕರೆದಿದ್ದಾರೆ. ಮಧ್ಯಾಹ್ನ 11:45ಕ್ಕೆ ಗಂಟೆಯ ಸುಮಾರಿಗೆ ಕೆಎಸ್​ಆರ್​ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಹಾಗೂ 12:15ಕ್ಕೆ ಕೆಎಸ್​ಆರ್​ಟಿಸಿ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಜತೆ ಸಭೆ ನಡೆಯಲಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಉಪಸ್ಥಿತರಿರಲಿದ್ದು, ಮುಷ್ಕರ ಕೈಬಿಡುವಂತೆ ಸಂಧಾನಕ್ಕೆ ಪ್ರಯತ್ನ ನಡೆಸಲಿದ್ದಾರೆ.

ಈ ಬಗ್ಗೆಯೂ ಪ್ರತಿಕ್ರಿಯಿಸಿರುವ ಅನಂತ್ ಸುಬ್ಬರಾವ್, ಕೊನೆಗಳಿಗೆಯಲ್ಲಿ ಸಿಎಂ ಸಭೆ ಕರೆದಿದ್ದಾರೆ. ಎಸ್ಮಾ ಜಾರಿ ಮಾಡುತ್ತೇವೆ. ಸಂಬಳ ನಿಲ್ಲಿಸುತ್ತೇವೆ ಎಂಬುದು ಸರಿಯಲ್ಲ. ಸಭೆಯಲ್ಲಿ ಸಿಎಂ ಹಳೆ ಹಾಡನ್ನೇ ಹಾಡಿದರೆ ನಾವು ಕೇಳಲ್ಲ ಎಂದಿದ್ದಾರೆ. ಸರ್ಕಾರ 38 ತಿಂಗಳ ಅರಿಯರ್ಸ್ ಬಿಡುಗಡೆ ಮಾಡಬೇಕು. ಈ ಬಾರಿ ಶೇ 25 ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಸಿಐಟಿಯು ರಾಜ್ಯ ಪ್ರಧಾನಕಾರ್ಯದರ್ಶಿ ಮಂಜುನಾಥ್ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ, ಮಂಗಳವಾರದಿಂದ BMTC, KSRTC ನೌಕರರ ಮುಷ್ಕರ ಎಚ್ಚರಿಕೆ ಹಿನ್ನೆಲೆ, ಮುನ್ನೆಚ್ಚರಿಕೆಯಿಂದ ಸರ್ಕಾರ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅಧಿಕಾರಿಗಳು ಖಾಸಗಿ ಬಸ್, ಆಟೋ ಚಾಲಕರ ಜತೆ RTO, KSRTC ಅಧಿಕಾರಿಗಳ ಸಭೆ ಸಭೆ ನಡೆಸಿದ್ದು, ಸರ್ಕಾರಿ ಬಸ್ ಸ್ತಬ್ಧವಾದರೆ ಖಾಸಗಿ ವಾಹನ ಬಳಕೆಗೆ ಸಿದ್ಧತೆ ನಡೆಸಲಾಗಿದೆ.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರಕ್ಕೆ ಟಕ್ಕರ್ ಕೊಡಲು ಮುಂದಾದ ರಾಜ್ಯ ಸರ್ಕಾರ!

ಇನ್ನು ಚಿಕ್ಕಬಳ್ಳಾಪುರದಲ್ಲೂ ಖಾಸಗಿ ಬಸ್, ಮಿನಿ ಬಸ್, ಮ್ಯಾಕ್ಸಿಕ್ಯಾಬ್, ಆಟೋಗಳ ಮೂಲಕ ಸೇವೆ ಒದಗಿಸಲು ಜಿಲ್ಲಾಡಳಿತ ಪ್ಲ್ಯಾನ್ ಮಾಡ್ಕೊಂಡಿದೆ. ಮತ್ತೊಂದೆಡೆ ದಾವಣಗೆರೆ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆಗಾಗಿ ತುರ್ತು ಸಹಾಯವಾಣಿ 1077 ಸಂಖ್ಯೆ ಬಿಡುಗಡೆ ಮಾಡಿದೆ. ಒಟ್ಟಾರೆ ಇವತ್ತು ಸಿಎಂ ಕರೆದಿರುವ ಸಂಧಾನ ಸಭೆ ಯಶಸ್ವಿ ಆಗದಿದ್ದರೆ, ಪ್ರಯಾಣಿಕರಿಗೆ ಬಸ್‌ ಬಂದ್ ಬಿಸಿ ತಟ್ಟುವುದು ಖಚಿತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ