ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಾರಿಗೆ ನೌಕರರು ಇಂದು (ಏಪ್ರಿಲ್ 7) ಮುಷ್ಕರ ನಡೆಸಿದ್ದಾರೆ. ಇದರಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಸರ್ಕಾರಿ ಬಸ್ಗಳು ಕಾರ್ಯನಿರ್ವಹಿಸಿಲ್ಲ. ಸಾರಿಗೆ ವಾಹನಗಳ ಮುಷ್ಕರದಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ನಷ್ಟವಾಗಿದೆ ಎಂಬ ಲೆಕ್ಕಾಚಾರವನ್ನು ಕೆಎಸ್ಆರ್ಟಿಸಿ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಸಾರಿಗೆ ಸಿಬ್ಬಂದಿ ಮುಷ್ಕರದಿಂದ ಇಂದು ಒಟ್ಟು 17 ಕೋಟಿ ನಷ್ಟ ಉಂಟಾಗಿದೆ. ಅಂದರೆ, ಸಾರಿಗೆ ಸಂಸ್ಥೆಯ ಒಟ್ಟು 4 ನಿಗಮಗಳಿಂದ 17 ಕೋಟಿ ನಷ್ಟ ಸಂಭವಿಸಿದೆ. ಅದರಲ್ಲಿ ಕೆಎಸ್ಆರ್ಟಿಸಿಗೆ ಇಂದು 7 ಕೋಟಿ ರೂಪಾಯಿ ನಷ್ಟ ಉಂಟಾಗಿದ್ದರೆ, ಬಿಎಂಟಿಸಿಗೆ 3 ಕೋಟಿ ರೂಪಾಯಿ ನಷ್ಟವಾಗಿದೆ. ವಾಯವ್ಯ ಸಾರಿಗೆ ಸಂಸ್ಥೆಗೆ 3.5 ಕೋಟಿ ರೂಪಾಯಿ ನಷ್ಟವಾಗಿದ್ದು, ಈಶಾನ್ಯ ಸಾರಿಗೆ ಸಂಸ್ಥೆಗೆ ಕೂಡ 3.5 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ಬಗ್ಗೆ, ಕೆಎಸ್ಆರ್ಟಿಸಿ ಅಧಿಕಾರಿಗಳಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ.
ಸಾರಿಗೆ ಸಿಬ್ಬಂದಿ ಮುಷ್ಕರದ ನಡುವೆಯೂ ಬೆಂಗಳೂರು ನಗರದಲ್ಲಿ ಕೆಲ ಬಸ್ಗಳು ಸಂಚಾರ ನಡೆಸಿವೆ. ಬೆಂಗಳೂರಿನಲ್ಲಿ ಇಂದು 145 ಬಿಎಂಟಿಸಿ ಬಸ್ಗಳು ಸಂಚಾರ ಮಾಡಿವೆ. ಅಲ್ಲದೆ, ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ 1124 ಖಾಸಗಿ ಬಸ್ಗಳು, 2 ಸಾವಿರ ಮ್ಯಾಕ್ಸಿ ಕ್ಯಾಬ್ ಬಳಕೆ ಮಾಡಲಾಗಿದೆ. ಈ ಬಗ್ಗೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ.
ಎಷ್ಟು ಬಸ್ಗಳು ಸಂಚಾರ ನಡೆಸಿವೆ?
ರಾಜ್ಯಾದ್ಯಂತ ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಹಿನ್ನೆಲೆ, ಕೆಎಸ್ಆರ್ಟಿಸಿ ಇಂದಿನ ಬಸ್ ಸಂಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅದರಂತೆ, ರಾತ್ರಿ ಪಾಳಿಯಲ್ಲಿ ಒಟ್ಟು 264 ಬಸ್ ಕಾರ್ಯಾಚರಣೆಯಾಗಿದೆ. KSRTC ವ್ಯಾಪ್ತಿಯಲ್ಲಿ 3,152 ಖಾಸಗಿ ವಾಹನ ಸಂಚಾರ ಮಾಡಿವೆ. ವಾಯವ್ಯ ಸಾರಿಗೆ ವ್ಯಾಪ್ತಿಯಲ್ಲಿ 1,645 ಖಾಸಗಿ ವಾಹನ ಸಂಚಾರ ಮಾಡಿವೆ. ಈಶಾನ್ಯ ಸಾರಿಗೆ ವ್ಯಾಪ್ತಿ 3,234 ಖಾಸಗಿ ವಾಹನ ಸಂಚರಿಸಿವೆ.
ಬೆಂಗಳೂರಿನಿಂದ ಹೊರ ರಾಜ್ಯಗಳಿಗೆ ಬಸ್ ಸಂಚಾರ ವಿವರ ಈ ರೀತಿ ಇದೆ. ತಮಿಳುನಾಡಿಗೆ 300, ಆಂಧ್ರಪ್ರದೇಶಕ್ಕೆ 125, ಕೇರಳ 25, ತೆಲಂಗಾಣಕ್ಕೆ 20 ಬಸ್ಗಳು ಕಾರ್ಯಾಚರಣೆ ನಡೆಸಿವೆ. ಅಲ್ಲದೆ, ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲುತೂರಾಟ ಹಿನ್ನೆಲೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ 1 ದೂರು ದಾಖಲಾದ ಘಟನೆಯೂ ನಡೆದಿದೆ. ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಿಂದ ಈ ಮಾಹಿತಿ ಬಿಡುಗಡೆ ಮಾಡಲಾಗಿದೆ.
ಮೆಟ್ರೋ ರೈಲು ಹೆಚ್ಚುವರಿ ಟ್ರಿಪ್
6ನೇ ವೇತನ ಆಯೋಗ ಜಾರಿಗಾಗಿ ಸಾರಿಗೆ ಸಿಬ್ಬಂದಿ ಮುಷ್ಕರ ಮಾಡಿರುವ ಕಾರಣ ಬಸ್ಗಳು ಇಂದು ಎಂದಿನಂತೆ ಸಂಚಾರ ನಡೆಸಿಲ್ಲ. ಹೀಗಾಗಿ ಬಹುತೇಕರು ಮೆಟ್ರೋ ರೈಲು ಅವಲಂಬಿಸಬೇಕಾಗಿ ಬರಬಹುದು ಎಂದು ಮೆಟ್ರೋ ರೈಲು ಟ್ರಿಪ್ಗಳನ್ನು ಹೆಚ್ಚುವರಿಯಾಗಿ ನಡೆಸಲಾಗಿದೆ. ನಮ್ಮ ಮೆಟ್ರೋ ರೈಲಿನಲ್ಲಿ ಸಂಚರಿಸಿದ ಪ್ರಯಾಣಿಕರ ಮಾಹಿತಿ ಹೀಗಿದೆ.
ಹಸಿರು, ನೇರಳೆ ಮಾರ್ಗದಲ್ಲಿ 289 ಟ್ರಿಪ್ ಮೆಟ್ರೋ ಸಂಚಾರ ಮಾಡಿದೆ. ಬೇರೆ ದಿನಗಳಲ್ಲಿ 247 ಟ್ರಿಪ್ ಸಂಚರಿಸುತ್ತಿದ್ದ ಮೆಟ್ರೋ ರೈಲು, ಇಂದು ಒಟ್ಟು 289 ಟ್ರಿಪ್ ಸಂಚಾರ ನಡೆಸಿದೆ. ಮೆಟ್ರೋದಲ್ಲಿ ಇಂದು ಅಂದಾಜು 1,27,876 ಜನರ ಸಂಚಾರ ಮಾಡಿದ್ದಾರೆ. ಈ ಬಗ್ಗೆ, ಬಿಎಂಆರ್ಸಿಎಲ್ನಿಂದ ಮಾಧ್ಯಮ ಪ್ರಕಟಣೆ ನೀಡಿದೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ: ಪರ್ಯಾಯ ವ್ಯವಸ್ಥೆ ಮಾಡಲಾಗಿದೆ, ಆತಂಕ ಬೇಡವೆಂದ ಸಾರಿಗೆ ಸಚಿವ ಲಕ್ಷ್ಮಣ ಸವದಿ
ಇದನ್ನೂ ಓದಿ: ಪ್ರಯಾಣಿಕರು ನೌಕರರ ಕೊರಳಪಟ್ಟಿ ಹಿಡಿದು ಒದೀಬೇಕು: ಬಿಜೆಪಿ ಶಾಸಕ ಬಿ.ಸಿ. ನಾಗೇಶ್ ಮಾತಾಡಿರುವ ಆಡಿಯೋ ವೈರಲ್
(KSRTC BMTC Bus Transport Workers Strike Karnataka Govt faces huge loss details here)
Published On - 10:32 pm, Wed, 7 April 21