ವಿಜಯೋತ್ಸವಕ್ಕೆ ಮತ್ತೆ ಬರ್ತೀನಿ: ಬೆಳಗಾವಿಯಲ್ಲಿ ಗೆಲುವಿನ ಆತ್ಮವಿಶ್ವಾಸ ಪ್ರದರ್ಶಿಸಿದ ಸಿಎಂ ಯಡಿಯೂರಪ್ಪ

Belgaum Lok Sabha by-election: ಮಂಗಳಾ ಅವರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್​ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದುಕೊಂಡಿದ್ದೆ. ಆದರೆ ಕಾಂಗ್ರೆಸ್ ಪಕ್ಷದವರು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ಟೀಕಿಸಿದದರು.

ವಿಜಯೋತ್ಸವಕ್ಕೆ ಮತ್ತೆ ಬರ್ತೀನಿ: ಬೆಳಗಾವಿಯಲ್ಲಿ ಗೆಲುವಿನ ಆತ್ಮವಿಶ್ವಾಸ ಪ್ರದರ್ಶಿಸಿದ ಸಿಎಂ ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 07, 2021 | 9:56 PM

ಬೆಳಗಾವಿ: ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಚುನಾವಣಾ ಪ್ರಚಾರ ನಡೆಸಿದರು. ಮಂಗಳಾ ಅವರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್​ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದುಕೊಂಡಿದ್ದೆ. ಆದರೆ ಕಾಂಗ್ರೆಸ್ ಪಕ್ಷದವರು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ಟೀಕಿಸಿದ ಯಡಿಯೂರಪ್ಪ, ತಾವು ಮುಖ್ಯಮಂತ್ರಿಯಾದ ನಂತರ ಜಾರಿ ಮಾಡಿದ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಬಿಜೆಪಿ ಸರ್ಕಾರ ಮಹಿಳಾ ಅಭಿವೃದ್ಧಿಗೆ ಆದ್ಯತೆ ನೀಡುತ್ತಿವೆ. ಬಜೆಟ್​ನಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇನೆ. ಮಹಿಳೆಯರು ಯಾವುದೇ ಉದ್ಯೋಗ ಮಾಡಲು ಮುಂದಾದರೆ ಹಣಕಾಸಿನ‌ ನೆರವು ಕೊಡಲು ಸಿದ್ಧ ಎಂದು ಘೋಷಿಸಿದರು.

ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ‌ ಕೊಡಿಸಲು ಕಾರ್ಯಕ್ರಮ ರೂಪಿಸುತ್ತಿದ್ದೇನೆ ಎಂದ ಯಡಿಯೂರಪ್ಪ, ಚುನಾವಣೆ ಮುಗಿದ ಬಳಿಕ ವಿಜಯೋತ್ಸವ ಆಚರಣೆಗೆ ಮತ್ತೆ ಬೆಳಗಾವಿಗೆ ಬರುತ್ತೇನೆ. ನಾನು ಮುಖ್ಯಮಂತ್ರಿ ಆಗಿಯೇ ಮತ್ತೆ ಬಾಗೇವಾಡಿಗೆ ಬರುತ್ತೇನೆ. ನಾಲ್ಕೈದು ಲಕ್ಷ ಜನರನ್ನು ಸೇರಿಸಿ ವಿಜಯೋತ್ಸವ ಆಚರಿಸೋಣ ಎಂದು ಪ್ರಚಾರ ಸಭೆಯಲ್ಲಿ ಯಡಿಯೂರಪ್ಪ ಗೆಲುವಿನ ಭರವಸೆ ವ್ಯಕ್ತಪಡಿಸಿದರು.

ದುರುದ್ದೇಶದ ಮುಷ್ಕರ ಸಾರಿಗೆ ಇಲಾಖೆಯಲ್ಲಿ ದುರುದ್ದೇಶದಿಂದ ಗೊಂದಲ ಸೃಷ್ಟಿ ಮಾಡಲೆಂದೇ ಈಗ ಮುಷ್ಕರಕ್ಕೆ ಕುಮ್ಮಕ್ಕು ನೀಡಲಾಗಿದೆ. ಸಾರಿಗೆ ಸಿಬ್ಬಂದಿ ನಮ್ಮ ಮುಂದೆ ಇರಿಸಿದ್ದ 9 ಬೇಡಿಕೆಗಳ ಪೈಕಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆದರೂ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಮುಷ್ಕರ ಮಾಡಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಮುಷ್ಕರದ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಗೆದ್ದರೂ ಅನುಮಾನ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಗ್ರರನ್ನು ಸೈನಿಕರು ಹೊಡೆದು ಹಾಕಿದ್ರೆ ಸಾಕ್ಷಿ ಕೇಳುತ್ತಾರೆ. ಬಿಜೆಪಿ ಗೆದ್ದರೆ ಇವಿಎಂ ಮೇಲೆ ಅನುಮಾನ ಪಡ್ತಾರೆ ಎಂದು ವಿರೋಧ ಪಕ್ಷಗಳನ್ನು ಟೀಕಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾನ ಏಪ್ರಿಲ್ 17ರಂದು ನಡೆಯಲಿದೆ. ಮೇ 2ರಂದು ಮತಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್​ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಈಗಾಗಲೇ ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ.

(Belgaum By-Election BS Yediyurappa canvas for bjp candidate Mangala Angadi)