ತಪ್ಪಿತಸ್ಥರ ವಿರುದ್ಧ ಮಾತ್ರ ಕ್ರಮ; ವದಂತಿಗಳಿಗೆ ತೆರೆ ಎಳೆದ ನಾಲ್ಕು ಸಾರಿಗೆ ನಿಗಮಗಳು

ತಪ್ಪು ಮಾಡಿದವರ ಹೊರತಾಗಿ ಬೇರೆ ಯಾವ ಸಿಬ್ಬಂದಿ ಮೇಲೆಯೂ ಕ್ರಮಕೈಗೊಂಡಿಲ್ಲ. 4 ದಿನಗಳ ವೇತನ ಪಾವತಿ ಕಡಿತದ ಬಗ್ಗೆಯೂ ಈತನಕ ಯಾವುದೇ ಕ್ರಮತೆಗೆದುಕೊಂಡಿಲ್ಲ ಎಂದು ನಿಗಮಗಳು ಸ್ಪಷ್ಟಪಡಿಸಿವೆ.

ತಪ್ಪಿತಸ್ಥರ ವಿರುದ್ಧ ಮಾತ್ರ ಕ್ರಮ; ವದಂತಿಗಳಿಗೆ ತೆರೆ ಎಳೆದ ನಾಲ್ಕು ಸಾರಿಗೆ ನಿಗಮಗಳು
ಸಾಂದರ್ಭಿಕ ಚಿತ್ರ
Edited By:

Updated on: Dec 18, 2020 | 6:53 PM

ಬೆಂಗಳೂರು: ಮುಷ್ಕರದ ವೇಳೆ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ಮಾಡಿದವರು, ಬಸ್ಸುಗಳನ್ನು ಜಖಂಗೊಳಿಸಿದವರು ಹಾಗೂ ಯಾರ ಮೇಲೆ FIR ದಾಖಲಾಗಿದೆಯೋ ಅಂತಹ ಸಿಬ್ಬಂದಿ ಮೇಲೆ‌ ಮಾತ್ರ ನಿಯಮಾನುಸಾರ ಕ್ರಮಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಸ್ಪಷ್ಟನೆ ನೀಡಿವೆ.

ತಪ್ಪು ಮಾಡಿದವರ ಹೊರತಾಗಿ ಬೇರೆ ಯಾವ ಸಿಬ್ಬಂದಿ ಮೇಲೆಯೂ ಕ್ರಮಕೈಗೊಂಡಿಲ್ಲ. 4 ದಿನಗಳ ವೇತನ ಪಾವತಿ ಕಡಿತದ ಬಗ್ಗೆಯೂ ಈತನಕ ಯಾವುದೇ ಕ್ರಮತೆಗೆದುಕೊಂಡಿಲ್ಲ. ಮಂಡಳಿ ಅಥವಾ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ ನಂತರವಷ್ಟೇ ಕ್ರಮತೆಗೆದುಕೊಳ್ಳಲಾಗುವುದು ಎಂದು ತಿಳಿಸುವ ಮೂಲಕ KSRTC, BMTC, NEKRTC, NWKRTC ನಿಗಮಗಳು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿವೆ.

ಕೆಎಸ್ಆರ್​ಟಿಸಿ ವ್ಯಾಪ್ತಿಯಲ್ಲಿ ಒಟ್ಟು 13 ಸಿಬ್ಬಂದಿ ಮೇಲೆ ಮಾತ್ರ ಕ್ರಮ ಜರುಗಿಸಲಾಗಿದೆ. 200 ನೌಕರರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಎಂಟಿಸಿ ವ್ಯಾಪ್ತಿಯಲ್ಲಿ ಮುಷ್ಕರದ ಸಮಯದಲ್ಲಿ ಕಾರ್ಯನಿರತ ಸಿಬ್ಬಂದಿ ಮೇಲೆ ಹಲ್ಲೆಮಾಡಿರುವ ಒಟ್ಟು ಮೂವರು ನೌಕರರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಬೀದರ್ ವಿಭಾಗದ ಐವರು, ಕೊಪ್ಪಳ ವಿಭಾಗದ ಇಬ್ಬರು, ಬಳ್ಳಾರಿ ವಿಭಾಗದ ಒಬ್ಬರು ಹಾಗೂ ವಿಜಯಪುರ ವಿಭಾಗದ ಒಬ್ಬ ಸಿಬ್ಬಂದಿ ಸೇರಿ ಒಟ್ಟು ಒಂಬತ್ತು ಮಂದಿಯ ಮೇಲೆ ಕ್ರಮ ಕೈಗೊಳ್ಳಲಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಮುಷ್ಕರದಲ್ಲಿ ನಿರತರಾದ ಯಾವುದೇ ಸಿಬ್ಬಂದಿಯ ಮೇಲೆಯೂ ಈವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಷ್ಕರದ ಬಿಸಿ ಆರುತ್ತಿದ್ದಂತೆ.. ಸಾರಿಗೆ ನೌಕರರು ಅಮಾನತು: ನೌಕರರು ಫುಲ್ ಗರಂ, ಮತ್ತೆ ಹೋರಾಟದ ಎಚ್ಚರಿಕೆ